ADVERTISEMENT

ಕ್ಯಾಮೆರಾ ಬಳಸುವ ಮುನ್ನ...

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 19:45 IST
Last Updated 20 ಮಾರ್ಚ್ 2019, 19:45 IST
Using camera 
Using camera    

ಪ್ರವಾಸ ಹೋಗುವುದೆಂದರೆ, ಸುತ್ತಾಟದ ಜತೆಗೆ, ಅಲ್ಲಿನ ಅವಿಸ್ಮರಣೀಯ ನೆನಪುಗಳನ್ನು ಜೊತೆಯಲ್ಲಿ ಕಟ್ಟಿಕೊಂಡು ಬರುವುದು. ಆ ನೆನಪುಗಳನ್ನು ಮೆಲುಕು ಹಾಕುವಾಗ, ಪ್ರವಾಸಿ ತಾಣಗಳಲ್ಲಿ ಕಳೆದ ಗಳಿಗೆಗಳ ಛಾಯಾಚಿತ್ರಗಳು ಇರಲೇಬೇಕು. ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕ್ಯಾಮೆರಾಗಳಿರುತ್ತವೆ. ಕೆಲವರು ಚಿಕ್ಕ ಚಿಕ್ಕ ಡಿಜಿಟಲ್ ಕ್ಯಾಮೆರಾಗಳನ್ನು ಒಯ್ಯುತ್ತಾರೆ. ಹೀಗಾಗಿ ಬಹುತೇಕರು ತಮ್ಮ ಪ್ರವಾಸದ ಕ್ಷಣಗಳನ್ನು ದಾಖಲಿಸಿಕೊಂಡು ಬರುತ್ತಾರೆ.

ಆದರೆ, ಪ್ರವಾಸದ ವೇಳೆಯಲ್ಲಿ ಕ್ಯಾಮೆರಾ ಬಳಸುವುದರ ಬಗ್ಗೆ ಒಂದಷ್ಟು ಮಾಹಿತಿ ಇರಬೇಕು. ಯಾವ ಜಾಗದಲ್ಲಿ ಎಂಥ ಕ್ಯಾಮೆರಾ ಬಳಸಬೇಕು ಎಂಬುದನ್ನು ತಿಳಿದಿರಬೇಕು. ಈ ಬಗ್ಗೆ ಒಂದಿಷ್ಟು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪ್ರಯಾಣಕ್ಕೆ ತಕ್ಕ ಕ್ಯಾಮೆರಾ

ADVERTISEMENT

ಸಾಮಾನ್ಯವಾಗಿ ಪ್ರವಾಸ ಹೋಗುವಾಗ ಆದಷ್ಟು ಕಡಿಮೆ ಲಗೇಜ್ ಕೊಂಡೊಯ್ಯಲು ಎಲ್ಲರೂ ಸಲಹೆ ನೀಡುತ್ತಾರೆ. ಅದೇ ಸಲಹೆ ಕ್ಯಾಮೆರಾಕ್ಕೂ ಅನ್ವಯಿಸುತ್ತದೆ. ಈಗಿನ ಕಾಲದಲ್ಲಿ ‘ಕಾಂಪಾಕ್ಟ್ ಕ್ಯಾಮೆರಾ’ ಕೂಡ ಉತ್ತಮ ಫಲಿತಾಂಶವನ್ನು ಕೊಡುತ್ತಿವೆ. ಹಾಗಾಗಿ ಬಹಳ ಚಿಕ್ಕದೆನಿಸುವ ‘ಪಾಯಿಂಟ್ & ಶೂಟ್’ ಕ್ಯಾಮೆರಾ ಕೂಡ ಪ್ರವಾಸಿ ಕ್ಷಣಗಳನ್ನು ದಾಖಲಿಸಿಕೊಳ್ಳಲು ಧಾರಾಳ ಸಾಕು.

ಸ್ಮಾರ್ಟ್‌ಫೋನ್‌ಗಳೂ ಉತ್ತಮ ಚಿತ್ರಗಳನ್ನು ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಅವುಗಳು ಗುಣಮಟ್ಟದಲ್ಲಿ ಸಾಮಾನ್ಯ ‘ಪಾಯಿಂಟ್ & ಶೂಟ್’ ಡಿಜಿಟಲ್ ಕ್ಯಾಮೆರಾಗಳಿಗಿಂತಲೂ ಉತ್ತಮ ಚಿತ್ರಗಳನ್ನು ನೀಡುತ್ತಿವೆ. ಸ್ವಲ್ಪ ಭಾರಿಯೆನಿಸುವ ಡಿಎಸ್‍ಎಲ್‍ಆರ್ ಕ್ಯಾಮೆರಾಗಳು ಗುಣಮಟ್ಟದಲ್ಲಿ ಉತ್ತಮ ಚಿತ್ರಗಳನ್ನು ಕೊಡುತ್ತವೆ. ಆದರೂ ಕೊಂಡೊಯ್ಯಲು ಪ್ರತ್ಯೇಕ ವ್ಯವಸ್ಥೆ ಬೇಕಾಗುತ್ತದೆ. ಸೀರಿಯಸ್ ಫೋಟೊಗ್ರಾಫರ್‌ಗಳು ಮಾತ್ರ ಪ್ರವಾಸಗಳಲ್ಲಿ ಈ ಕ್ಯಾಮೆರಾಗಳನ್ನು ಬಳಸುತ್ತಾರೆ.

ಪ್ರವಾಸ ಹೋಗುವಾಗ ನಾವು ಅಲ್ಲಿನ ಪರಿಸರ, ಭೂದೃಶ್ಯಗಳು, ಜನಜೀವನದಂತಹ ಸನ್ನಿವೇಶಗಳನ್ನು ದಾಖಲಿಸುತ್ತೇವೆ. ಇಂಥ ದೃಶ್ಯಗಳನ್ನು ಸೆರೆಹಿಡಿಯಲು ಸ್ವಲ್ಪ ‘ವೈಡ್ ಆಂಗಲ್’ ಇರುವ ಕಾಂಪಾಕ್ಟ್ ಕ್ಯಾಮೆರಾಗಳಾದರೆ ಉತ್ತಮ. ಈಗ ಇಂಥ ಕ್ಯಾಮೆರಾಗಳಲ್ಲೂ ವೈಡ್ ಆಂಗಲ್‍ನಿಂದ ಸ್ವಲ್ಪ ಟೆಲಿಫೋಟೊ ತನಕದ ‘ಝೂಮ್’ ಸಾಧ್ಯವಾಗುತ್ತದೆ. ಹಾಗಾಗಿ ಅಂತಹ ಕ್ಯಾಮೆರಾಗಳನ್ನೇ ಕೊಂಡುಕೊಳ್ಳುವುದು ಒಳ್ಳೆಯದು.

ಕೆಲವೊಂದು ಕಂಪನಿಗಳ ಕ್ಯಾಮೆರಾಗಳಲ್ಲಿ ಬ್ಯಾಟರಿ ಬೇಗನೆ ಮುಗಿದುಹೋಗುತ್ತವೆ. ಇದರಿಂದ ಪ್ರವಾಸಕ್ಕೆ ಹೋದ ಸಂದರ್ಭಗಳಲ್ಲಿ ಬಹಳ ಕಷ್ಟವಾಗಬಹುದು.

ಬೇಕಾದ ಕಡೆ ಚಿತ್ರಗಳನ್ನು ಸೆರೆಹಿಡಿಯಲು ಬ್ಯಾಟರಿ ಇಲ್ಲವೆಂದರೆ? ಅದಕ್ಕಾಗಿ ನಿಕಾನ್, ಕ್ಯಾನನ್, ಫ್ಯೂಜಿ ಮುಂತಾದ ‘ಬ್ರಾಂಡೆಡ್’ ಕ್ಯಾಮೆರಾಗಳನ್ನೇ ಖರೀದಿಸಿ. ಇವುಗಳಲ್ಲೂ ಡೂಪ್ಲಿಕೇಟ್‍ಗಳಿಗೇನೂ ಕೊರತೆಯಿಲ್ಲ. ಎಚ್ಚರದಿಂದ ಖರೀದಿಸಬೇಕು.

ಕೆಲವೊಂದು ಸಲ ಡಿಎಸ್‍ಎಲ್‍ಆರ್ ಕ್ಯಾಮೆರಾಗಳಲ್ಲಿ ಚಿತ್ರ ತೆಗೆಯುತ್ತಿರುವಾಗ ಆಕ್ಷೇಪ ಕೇಳಿ ಬರುತ್ತದೆ. ಚಿಕ್ಕ ಕ್ಯಾಮೆರಾಗಳಿಗಾದರೆ ಈ ರೀತಿಯ ಆಕ್ಷೇಪ ಅಷ್ಟಾಗಿ ಕಾಣಿಸುವುದಿಲ್ಲ.

ಅಂಥ ಕಡೆ ನಮಗೆ ಚಿಕ್ಕ ಕ್ಯಾಮೆರಾ ಸಹಾಯಕ್ಕೆ ಬರುತ್ತದೆ. ಪರಿಚಯವಿಲ್ಲದ ಊರಿನಲ್ಲಿ ಕೆಲವೊಂದು ಕಡೆ ಬಹಳ ಜನ ಸೇರಿರುವಲ್ಲಿ ನಮಗೆ ಡಿಎಸ್‍ಎಲ್‍ಆರ್ ಕ್ಯಾಮೆರಾ ಹೊರತೆಗೆಯಲೂ ಮುಜುಗರವಾಗುತ್ತದೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ‘ಮಿರರ್‌ಲೆಸ್‌’ ಕ್ಯಾಮೆರಾಗಳಲ್ಲಿ ಬಾಗಿಸಬಲ್ಲ ಎಲ್‍ಸಿಡಿ ಪರದೆಯಿರುವ ಕಾರಣ ಸಾಮಾನ್ಯ ಕೋನಕ್ಕಿಂತ ಕೆಳಗಿನ ಮಟ್ಟದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಇದು ಪ್ರವಾಸಿಗರಿಗೆ ಅನುಕೂಲವೇ ಸರಿ.

ಎಚ್ಚರದಿಂದ ಕ್ಯಾಮೆರಾ ಬಳಸಿ

ಅಪರಿಚಿತವಾದ ಸ್ಥಳಗಳಿಗೆ ಭೇಟಿ ನೀಡುವಾಗ ಸ್ವಲ್ಪ ಎಚ್ಚರವಹಿಸಿ. ಅಂಥ ಕಡೆ ಕ್ಯಾಮೆರಾವನ್ನು ಪ್ರದರ್ಶಿಸುತ್ತ ಸಾಗಬೇಡಿ. ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಗುಂಪಾಗಿಯೇ ಸಾಗುವುದು ಒಳ್ಳೆಯದು. ನಿಮ್ಮಲ್ಲಿರುವ ಕ್ಯಾಮೆರಾ ದುಬಾರಿ ಆದಷ್ಟೂ ಕಳ್ಳತನವಾಗುವ ರಿಸ್ಕ್ ಹೆಚ್ಚು. ಆದ್ದರಿಂದ ಫೋಟೊ ತೆಗೆದಾದ ಕೂಡಲೇ ಕ್ಯಾಮೆರಾವನ್ನು ಬ್ಯಾಗ್‍ನೊಳಗೆ ಇರಿಸಿಬಿಡಿ.

ಕ್ಯಾಮೆರಾ ಬ್ಯಾಗ್ ಆರಿಸಿಕೊಳ್ಳುವಾಗಲೇ ಎಚ್ಚರವಹಿಸಿ. ‘ಒಳಗೆ ಕ್ಯಾಮೆರಾ ಇದೆ’ ಎಂಬಂತೆ ಜಾಹೀರುಪಡಿಸುವಂತಹ ಬ್ಯಾಗ್ ಖರೀದಿಸದಿದ್ದರೇ ಒಳಿತು. ಕೆಲವೊಂದು ಬ್ಯಾಗ್‍ಗಳಲ್ಲಿ ಕ್ಯಾಮೆರಾ ಬ್ರಾಂಡ್‍ಗಳನ್ನು ದೊಡ್ಡದಾಗಿ ಹಾಕಿರುತ್ತಾರೆ. ಅಂತಹ ಬ್ಯಾಗ್‍ಗಳು ಪ್ರವಾಸದ ಮಟ್ಟಿಗೆ ಅಸುರಕ್ಷಿತವೇ ಸರಿ. ಸಹ ಪ್ರವಾಸಿಗರಲ್ಲಿ ಮಾತನಾಡುವಾಗಲೂ ಇದೇ ವಿಷಯದ ಬಗ್ಗೆ ಎಚ್ಚರ ವಹಿಸಿ. ಸಾರ್ವಜನಿಕ ಸ್ಥಳಗಳಲ್ಲಿ, ಹೋಟೆಲ್‍ಗಳಲ್ಲಿ ಮಾತನಾಡುವಾಗ ಎಲ್ಲೂ ‘ಕ್ಯಾಮೆರಾ ಬ್ಯಾಗ್’ ಎಂಬುದಾಗಿ ಪದಪ್ರಯೋಗ ಮಾಡಬೇಡಿ. ಇದಕ್ಕಾಗಿ ನೀವು ಮತ್ತು ನಿಮ್ಮ ಸಹಯಾತ್ರಿಕರು ಮಾತ್ರ ಅರ್ಥ ಮಾಡಿಕೊಳ್ಳುವಂತಹ ಬೇರೆಯದೇ ಪದಗಳನ್ನು ಸೃಷ್ಟಿ ಮಾಡಿಕೊಂಡರೆ ಒಳ್ಳೆಯದು.

ನಿಮ್ಮ ಕ್ಯಾಮೆರಾಗಳ (ಸ್ಮಾರ್ಟ್‌ಫೋನ್‌/ಮೊಬೈಲ್) ‘ಸೀರಿಯಲ್ ನಂಬರ್’ಗಳನ್ನು ಎಲ್ಲಾದರೂ ಒಂದೆರಡು ಕಡೆ ಬರೆದಿಟ್ಟುಕೊಳ್ಳಿ. ಒಂದುವೇಳೆ ಕ್ಯಾಮೆರಾ/ಸ್ಮಾರ್ಟ್‌ಫೋನ್ ಕಳುವಾದ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಲು ಇವು ಸಹಾಯಕವಾಗಬಹುದು. ಮೊಬೈಲ್ ಆದರೆ ‘ಐಎಂಇಐ’ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.