16ನೇ ಶತಮಾನದಲ್ಲಿ ಮರದಿಂದಲೇ ನಿರ್ಮಾಣಗೊಂಡ ಈತನ ಮನೆ ಕೂಡ ಇಲ್ಲಿನ ಪ್ರಮುಖ ಆಕರ್ಷಣೆ..
ಜನಪ್ರಿಯ ಇಂಗ್ಲಿಷ್ ನಾಟಕಕಾರ ಶೇಕ್ಸ್‌ಪಿಯರ್‌ನ ಜನ್ಮಸ್ಥಳ ಇಂಗ್ಲೆಂಡ್‌ನ ವಾರ್‌ಶೈರ್‌ನಲ್ಲಿರುವ ಸ್ಟ್ರಾಟ್‌ಫರ್ಡ್ ಅಪಾನ್. ಈಗ ಪ್ರಮುಖ ಪ್ರವಾಸಿ ತಾಣವಾಗಿರುವ ಈ ಊರಲ್ಲಿ ಶೇಕ್ಸ್‌ಪಿಯರ್‌ನ ಸ್ಮಾರಕವಿದೆ. ಜೊತೆಗೆ 16ನೇ ಶತಮಾನದಲ್ಲಿ ಮರದಿಂದಲೇ ನಿರ್ಮಾಣಗೊಂಡ ಈತನ ಮನೆ ಕೂಡ ಇಲ್ಲಿನ ಪ್ರಮುಖ ಆಕರ್ಷಣೆ..
****
ಈತನ ನಾಟಕಗಳಲ್ಲಿ ಇಲ್ಲದ ಪಾತ್ರಗಳು ಇಲ್ಲವೇ ಇಲ್ಲ ಎನ್ನಬಹುದು. ಪಾತ್ರಗಳೋ ವೈವಿಧ್ಯಮಯ. ಪುನರಾವರ್ತನೆ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ತಾನೇ ಒಂದು ಜಗತ್ತನ್ನು ಸೃಷ್ಟಿಸಿದ. ಒಂದೊಂದು ನಾಟಕವೂ ತನ್ನದೇ ಆದ ಜಗತ್ತು. ಅದರ ಪಾತ್ರಗಳೋ ಅನನ್ಯ. ವಾಸ್ತವತೆಗೆ ಒತ್ತುಕೊಟ್ಟ ಕಾರಣಕ್ಕೋ, ಜೀವನದಲ್ಲಿ ಕಾಣಬಹುದಾದ ಬಹುತೇಕ ಪಾತ್ರಗಳನ್ನು ರಂಗದ ಮೇಲೆ ಜೀವಂತವಾಗಿರಿಸಿ, ನೈಜವಾದ ಮತ್ತೊಂದು ಜಗತ್ತನ್ನು ಸೃಷ್ಟಿ ಮಾಡಿದ್ದಕ್ಕೋ ಈತನ ನಾಟಕಗಳ ಕುರಿತು ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಬಹುಶಃ ಮುಂದೆಯೂ ನಡೆಯುತ್ತಲೇ ಇರುತ್ತದೆ. ಅವನೇ ವಿಶ್ವಮಾನ್ಯ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್.
ತಂದೆ ಜಾನ್ ಶೇಕ್ಸ್‌ಪಿಯರ್ ವಾರ್‌ವಿಕ್‌ಶೈರ್‌ನಲ್ಲಿ ಕೈಗವಸು ತಯಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದನು. ಇವನಿಗೆ ಮೇಯರ್ ಆಗುವ ಅವಕಾಶ ಬಂದಿದ್ದಕ್ಕೆ ಮಗ ಗ್ರಾಮರ್ ಸ್ಕೂಲಿಗೆ ಹೋಗುವ ಸಂದರ್ಭ ಒದಗಿತು.
ಶೇಕ್ಸ್‌ಪಿಯರ್‌ನ ಜನ್ಮಸ್ಥಳ ಇಂಗ್ಲೆಂಡ್ ಬಳಿಯ ವಾರ್‌ಶೈರ್‌ನ ಸ್ಟ್ರಾಟ್‌ಫರ್ಡ್ ಅಪಾನ್ ಏವನ್‌ನ ಹೆನ್ಲೀ ಬೀದಿಯಲ್ಲಿದೆ. ಅವನು ತನ್ನ ಬಾಲ್ಯ ಕಳೆದದ್ದೂ ಅಲ್ಲಿಯೇ. ಆತ ಹುಟ್ಟಿದ ಮನೆ
ಹದಿನಾರನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಭಾಗಶಃ ಮರದಲ್ಲಿಯೇ ಕಟ್ಟಿದ ಆ ಮನೆಯನ್ನು ಈಗ ನವೀಕರಿಸಲಾಗಿದೆ. ಅದು ಈಗ ಮ್ಯೂಸಿಯಂ ಆಗಿದೆ. ಸಾರ್ವಜನಿಕರಿಗೆ ಪ್ರವೇಶವಿರುವುದರಿಂದ ಜಾಗತಿಕ ಮಟ್ಟದ ಜನಪ್ರಿಯ ತಾಣವಾಗಿದೆ. ಆ ಸಾಲಿನಲ್ಲಿ ಮೊದಲು ಕಾಣುವುದು ಶೇಕ್ಸ್‌ಪಿಯರ್‌ನ ಪತ್ನಿ ಆ್ಯನ್ ಹಾತ್‌ವೇಳ ಸರಳವಾದ ಮನೆ. ಲಂಡನ್‌ನಿಂದ ಬಸ್‌ನಲ್ಲಿ ಹೊರಟರೆ, ದೂರದಿಂದ ಆ ಸ್ಥಳ ಕಾಣುತ್ತಿದ್ದಂತೆ, ಓಡಿ ಹೋಗಿ ಆ ಸ್ಥಳ ತಲುಪುವ ಕಾತರ ಉಂಟಾಗುತ್ತದೆ. ಸಾಹಿತ್ಯ ಪ್ರೇಮಿಗಳಿಗೆ, ರಂಗಾಸಕ್ತರಿಗೆ, ಮೈಪುಳಕಗೊಳಿಸುವ ಸ್ಥಳ ಅದು.
ಈಗಿನ ಕಟ್ಟಡ ಬಹಳ ಸರಳವಾದುದು ಎಂಬ ಭಾವನೆ ಮೂಡುತ್ತದೆ. ಆದರೆ, ಶೇಕ್ಸ್‌ಪಿಯರ್‌ನ ಕಾಲಕ್ಕೆ ಈ ಕಟ್ಟಡ ಬಹಳ ಬೆಲೆಯುಳ್ಳದ್ದಾಗಿರಬೇಕು. ಪ್ರವೇಶದ್ವಾರದ ನಂತರ ಕಾಣುವುದೇ ಅವನು ಹುಟ್ಟಿದ ಕೊಠಡಿ. ಪಕ್ಕದಲ್ಲೇ ಶೇಕ್ಸ್‌ಪಿಯರ್ ಕೇಂದ್ರವಿದೆ. ಈ ಕೇಂದ್ರದಿಂದಲೇ ಶೇಕ್ಸ್‌ಪಿಯರ್ ಜನ್ಮಸ್ಥಳ ಟ್ರಸ್ಟ್ ಕಾರ್ಯ ನಿರ್ವಹಿಸುತ್ತದೆ.
ಈ ಟ್ರಸ್ಟ್ ಇಡೀ ಜನ್ಮಸ್ಥಳ ಸ್ಮಾರಕವನ್ನು ನಿರ್ವಹಿಸುತ್ತಾ ಅದರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ. ಶೇಕ್ಸ್‌ಪಿಯರ್ ಬಳಸುತ್ತಿದ್ದ ಗರಿ ತರಹದ ಲೇಖನಿ ಹಾಗೂ ಇತರ ವಸ್ತುಗಳನ್ನು, ಅವನ ಕಾಲದ ನಾಣ್ಯಗಳು, ಅವನ ಕೈ ಬರಹದ ಕೃತಿಗಳು, ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಶೇಕ್ಸ್‌ಪಿಯರ್ ಎಂದರೆ, ತಕ್ಷಣ ನೆನಪಾಗುವುದು ಅವನ ನಾಟಕಗಳ ಪ್ರಸಿದ್ಧ ಸಾಲುಗಳು. ಆಯ್ದ ಸಾಲುಗಳನ್ನು ಅಲ್ಲಿ ಒಂದೆಡೆ ಕೆತ್ತಲಾಗಿದೆ.
ಈ ಕಟ್ಟಡದ ಪಕ್ಕದಲ್ಲಿ ಶೇಕ್ಸ್‌ಪಿಯರ್ ನಾಟಕ ಸಭಾಂಗಣವಿದೆ. ಆಗಾಗ್ಗೆ, ಇವನ ನಾಟಕಗಳ ರಂಗ ಪ್ರದರ್ಶನ ಏರ್ಪಡಿಸಲಾಗುತ್ತದೆ. ಈ ಪ್ರದರ್ಶನ ವೀಕ್ಷಣೆಗೆ ಮುಂಗಡ ಬುಕ್ಕಿಂಗ್ ಮಾಡಿ ರಂಗಾಸಕ್ತರು ಅಧಿಕ ಸಂಖ್ಯೆಯಲ್ಲಿ ಸೇರುತ್ತಾರೆ.
ಮತ್ತೊಂದೆಡೆ, ಶೇಕ್ಸ್‌ಪಿಯರ್‌ನ ನಾಟಕ ಕೃತಿಗಳು ಮಾರಾಟಕ್ಕೆ ಲಭ್ಯ ಇವೆ. ಇವುಗಳನ್ನೆಲ್ಲಾ ಕುತೂಹಲದಿಂದ ವೀಕ್ಷಿಸಿ, ಹೊರ ಬಂದರೆ ರಸ್ತೆ ಮಧ್ಯದಲ್ಲಿ ನಿಲ್ಲಿರುವ ಅವನ ಬೃಹತ್ತಾದ ಪುತ್ಥಳಿ ಗಮನ ಸೆಳೆಯುತ್ತದೆ.
ಒಂದು ಸಣ್ಣ ಪಟ್ಟಣದಂತೆಯೇ ನಿರ್ಮಾಣವಾಗಿರುವ, ಏವನ್ ನದಿಯ ಸೇತುವೆ ಮೇಲೆ ಹರಡಿರುವ ಸ್ಟ್ರಾಟ್‌ಫರ್ಡ್ ಅಪಾನ್ ಏವನ್, ಜಗತ್ತಿನ ಅತಿ ದೊಡ್ಡ ನಾಟಕಕಾರನ ನೆನಪಿಗೆ ಸ್ಥಾಪನೆ ಮಾಡಿರುವ, ಅತಿ ವಿಶಿಷ್ಟ, ವಿನೂತನವಾದ ಸ್ಮಾರಕವೆನ್ನಬಹುದು.
ಇಲ್ಲಿಯ ಎಲ್ಲವನ್ನೂ, ಆ ಮಹಾನ್ ನಾಟಕಕಾರನ ಜನ್ಮ ದಿನಾಚರಣೆ ಸಂದರ್ಭಕ್ಕೆ ಸರಿಯಾಗಿ, ಹೊಸರೂಪ ನೀಡಲಾಗಿದೆ ಎಂದು ಶೇಕ್ಸ್‌ಪಿಯರ್ ಜನ್ಮಸ್ಥಳ ಟ್ರಸ್ಟ್ ತಿಳಿಸಿದೆ.
ಈ ವಿಶಿಷ್ಟವಾದ ಸ್ಮಾರಕವನ್ನು ನೋಡಿ ಹೊರ ಬರುತ್ತಿದ್ದಂತೆ ನಮ್ಮ ದೇಶ, ರಾಜ್ಯದಲ್ಲಿ ಆಗಿ ಹೋಗಿರುವ ಕವಿ, ಕಲಾವಿದರನ್ನು ನೆನಪಿಸಿಕೊಳ್ಳಲು ನಾವೇನು ಮಾಡಿದ್ದೇವೆ ಎನ್ನುವ ಪ್ರಶ್ನೆ ಕಾಡುತ್ತಿತ್ತು. ⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.