ADVERTISEMENT

ಎಡಕಲ್ಲು ಗುಡ್ಡದ ಮೇಲೆ

ಹೇಮಾ ವೆಂಕಟ್
Published 17 ಏಪ್ರಿಲ್ 2019, 19:30 IST
Last Updated 17 ಏಪ್ರಿಲ್ 2019, 19:30 IST
ಎಡಕಲ್ಲು ಗುಡ್ಡದ ನೋಟ
ಎಡಕಲ್ಲು ಗುಡ್ಡದ ನೋಟ   

‘ಎಡಕಲ್ಲು ಗುಡ್ಡ’ ಹೆಸರು ಕೇಳಿದ ಕೂಡಲೇ ಕಿವಿ ನೆಟ್ಟಗಾಗುತ್ತದೆ. ‘ಸಂತೋಷ... ಆಹಾ.. ಆಹಾ.. ಸಂಗೀತಾ...ಓಹೋ....ಓಹೋ.. ಎಂದುವೇಗವಾಗಿ ಉರುಳುವ ಬೈಕಿನ ಚಕ್ರದಷ್ಟೇ ಜೋಷ್‌ನಲ್ಲಿ ರಸಮಯ ಸಂಗೀತ ಹಾಡುತ್ತಾ ಸಾಗುವ ಯುವ ಜೋಡಿ ನಂಜುಂಡ ಮತ್ತು ಮಾಧವಿ (ಚಂದ್ರಶೇಖರ್‌, ಜಯಂತಿ) ನೆನಪಾಗುತ್ತಾರೆ. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ ಕೇರಳದ ವಯನಾಡಿನ ಎಡಕಲ್ಲು ಗುಡ್ಡದ ಪ್ರಕೃತಿ ಸೌಂದರ್ಯವನ್ನು ಕಟ್ಟಿಕೊಟ್ಟಿತ್ತು.

ಅದರ ಜೊತೆಗೆ, ಜಯಂತಿ ಕಾಲಾಡಿಸಿದ ಆ ಕೊಳದಲ್ಲಿ ತಾವೂ ಕಾಲಾಡಿಸಿ ಸುಖಿಸಬೇಕು ಎಂಬ ಮೋಹಕ ಆಸೆಯನ್ನು ಯುವ ಮನಸ್ಸುಗಳಲ್ಲಿ ಮೂಡಿಸಿತ್ತು. 1973ರಲ್ಲಿ ತೆರೆಕಂಡ ಕನ್ನಡ ಸಿನಿಮಾದಿಂದಾಗಿ ಕೇರಳದ ಎಡಕಲ್ಲು ಗುಡ್ಡ ಪ್ರಸಿದ್ದ ಪ್ರವಾಸಿತಾಣವಾಗಿದ್ದು ಅಷ್ಟೇ ನಿಜ.

ಡಿಸೆಂಬರ್‌ ತಿಂಗಳ ಆ ದಿನ ನಾವು ಗುಡ್ಡ ಹತ್ತಲು ಆರಂಭಿಸಿದಾಗ ಬೆಳಿಗ್ಗೆ 10 ಗಂಟೆಯಾಗಿತ್ತು. ಅಷ್ಟರಲ್ಲಾಗಲೇ ಬೆಟ್ಟ ಏರಿ ಇಳಿದು ಬರುತ್ತಿದ್ದ ಜೋಡಿಗಳನ್ನು ನೋಡಿದರೆ ನಮ್ಮ ಉತ್ಸಾಹ ಒಂದೇ ಸಮನೇ ಏರಿತ್ತು. ಹತ್ತಿರತ್ತಿರ ಎಪ್ಪತ್ತು ವರ್ಷ ವಯೋಮಾನದ ದೇಶವಿದೇಶ ಹಿರಿಜೀವಗಳಮುಖದಲ್ಲಿದ್ದ ಬೆಟ್ಟ ಹತ್ತಿದ ಸಾರ್ಥಕ ಭಾವ ನಮ್ಮ ಕಾಲುಗಳಿಗೆ ಮತ್ತಷ್ಟು ಶಕ್ತಿ ತುಂಬಿತ್ತು.

ADVERTISEMENT

ವಯನಾಡು ಕೇರಳದ ಅಷ್ಟೂ ಪ್ರಾಕೃತಿಕ ಅಚ್ಚರಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ. ಅಲ್ಲಿನ ಪಶ್ಚಿಮಘಟ್ಟ ಸಾಲಿನಲ್ಲಿರುವ ಎಡಕಲ್ಲು ಗುಡ್ಡಕ್ಕೆ ಸಾಗುವ ದಾರಿಯುದ್ದಕ್ಕೂ ಅಚ್ಚರಿಗಳೇ ಎದುರುಗೊಳ್ಳುತ್ತವೆ. ಗುಡ್ಡದ ಬುಡದವರೆಗೂ ರಸ್ತೆ ಇದ್ದರೂ ಅಲ್ಲಿಗೆ ವಾಹನ ಪ್ರವೇಶವಿಲ್ಲ. ಅಲ್ಲಲ್ಲಿ ಚಿಕ್ಕ ಪುಟ್ಟ ಜ್ಯೂಸ್‌, ಹಣ್ಣಿನ ಅಂಗಡಿಗಳು ಸಿಗುತ್ತವೆ. ಮೊದಲು ಸ್ವಲ್ಪ ಹಿರಿದಾದ ರಸ್ತೆಯಲ್ಲಿ ಕಾಡಿನಲ್ಲಿ ಸಾಗಬೇಕು. ನಂತರ ರಸ್ತೆ ಕಿರಿದಾಗುತ್ತಾ ಏರುಮುಖವಾಗಿ ಸಾಗುತ್ತದೆ. ಇನ್ನೂ ಮುಂದೆ ಹೋದ ನಂತರ ಕಲ್ಲಿನ ಮೆಟ್ಟಿಲುಗಳನ್ನು ಹತ್ತಬೇಕು. ಅದಾದ ನಂತರ ಸುಸಜ್ಜಿತ ಸ್ಟೀಲಿನ ಮೆಟ್ಟಿಲುಗಳಿವೆ. ಅವುಗಳನ್ನು ಏರಿ ಗುಡ್ಡದ ತುದಿ ತಲುಪಿದರೆ ಅಲ್ಲಿ ಸಿಗುವುದು ಎಡಕಲ್ಲು ಗುಹೆ. ಸುಮಾರು ಒಂದೂವರೆ ಕಿಲೋಮೀಟರ್‌ ದೂರ, 45 ನಿಮಿಷದ ನಡಿಗೆ.

ಎಡಕಲ್ಲು ಗುಡ್ಡ ಇರುವುದು ಸಮುದ್ರ ಮಟ್ಟಕ್ಕಿಂತ1,200 ಮೀಟರ್‌ಎತ್ತರದಲ್ಲಿರುವ ಅಂಬುಕುಟ್ಟಿ ಮಲೆಯಲ್ಲಿ. ವ್ಯಾಪಾರ ಸಂಬಂಧ ಮಲಬಾರ್‌ ಬಂದರಿನಿಂದ ಮೈಸೂರಿಗೆ ಗುಡ್ಡಗಳ ನಡುವೆ ಸಂಪರ್ಕಿಸುವ ಮಾರ್ಗವಿದು. ಡಿಸೆಂಬರ್‌ನಿಂದ ಮೇ ತಿಂಗಳ ನಡುವೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ. ಮಳೆಗಾಲದಲ್ಲಿ ಬೆಟ್ಟವೇರುವುದು ಅಪಾಯಕಾರಿ. ಬೆಟ್ಟದಿಂದ ಬಂಡೆಗಳು ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಮುಂಜಾನೆ ಬೇಗನೇ ಟ್ರೆಕ್ಕಿಂಗ್‌ ಶುರು ಮಾಡಬಹುದು.

ಗುಡ್ಡದ ಮೇಲೆ ಪ್ರಕೃತಿಯೇ ಕಟ್ಟಿದ ಎರಡು ಕಲ್ಲುಗಳ ನಡುವಿನ ಕೊರಕಲು ಜಾಗವನ್ನೇ ಗುಹೆ ಎನ್ನಲಾಗುತ್ತದೆ. ಗುಹೆಯ ಪ್ರವೇಶ ದ್ವಾರದ ಒಳ ಹೊಕ್ಕರೆ ಒಂದು ಸಣ್ಣ ಕೋಣೆಯಂತಿದೆ. ಅದನ್ನು ದಾಟಿ ಸ್ಟೀಲಿನ ಮೆಟ್ಟಿಲುಗಳ ಮೂಲಕ ಹೋದಾಗ 96ಅಡಿ ಉದ್ದ, 22ಅಡಿ ಅಗಲ ಹಾಗೂ 30 ಅಡಿ ಆಳದ ಮುಖ್ಯ ಗುಹೆ ಸಿಗುತ್ತದೆ. ಕಲ್ಲಿನ ಕಿಂಡಿಯಿಂದ ಬೀಳುವ ಬೆಳಕು ಗುಹೆಯ ಅಂದವನ್ನು ಹೆಚ್ಚಿಸುತ್ತದೆ.

ಗುಹೆ ಪತ್ತೆ ಹಚ್ಚಿದ್ದು ಪೊಲೀಸ್‌ ಅಧಿಕಾರಿ

1895ರಲ್ಲಿ ಮಲಬಾರಿನ ಪೊಲೀಸ್‌ ಅಧಿಕಾರಿ ಫ್ರೆಡ್‌ ಫೌಸೆಟ್‌ ಈ ಗುಹೆಯನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದ್ದರು. ವಯನಾಡಿನಲ್ಲಿ ಆತ ಬೇಟೆಯಾಡಲು ಬಂದಿದ್ದಾಗ ಕಾಫಿ ತೋಟವೊಂದರಲ್ಲಿ ನವಶಿಲಾಯುಗದ ಕೊಡಲಿ ಪತ್ತೆಯಾಗಿತ್ತು. ಇದರಿಂದ ಪ್ರೇರಿತನಾಗಿ ಇನ್ನಷ್ಟು ಸ್ಥಳಗಳ ತಪಾಸಣೆಗೆ ಮುಂದಾಗಿ ಸ್ಥಳೀಯರಿಂದ ಮಾಹಿತಿ ಪಡೆಯುತ್ತಾನೆ. ಗುಹೆ ಇರುವ ಬಗ್ಗೆ ಮಾಹಿತಿ ಪಡೆದ ಆತ ಅಂಬುಕುಟ್ಟಿ ಮಲೆಯಲ್ಲಿ ಹುಡುಕಾಟ ನಡೆಸಿದಾಗ ಎಡಕಲ್ಲು ಗುಡ್ಡದ ಗುಹೆ ಸಿಗುತ್ತದೆ. ನಂತರ ಪುರಾತತ್ವ ತಜ್ಞರ ಗಮನ ಸೆಳೆಯುತ್ತದೆ.

ಈ ಗುಹೆಗಳ ಗೋಡೆಗಳ ಮೇಲೆ ಮನುಷ್ಯ, ಪ್ರಾಣಿಗಳ ಚಿತ್ರಗಳನ್ನು ಕಾಣಬಹುದು.ಇದು ಮಧ್ಯಪ್ರಾಚೀನ ನವಶಿಲಾಯುಗದ ನಾಗರಿಕತೆಯ ಕುರುಹು. 7000 ವರ್ಷದಷ್ಟು ಹಳೆಯದು ಎಂದು ಗುರುತಿಸಲಾದ ಕಲ್ಲಿನ ಬರಹಗಳು ಸಿಂಧೂನದಿ ನಾಗರಿಕತೆಗೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ.

ಶುಚಿತ್ವಕ್ಕೆ ಮಾದರಿ

ಕೇರಳದ ಪ್ರವಾಸಿ ತಾಣಗಳಲ್ಲಿ ಶುಚಿತ್ವದ ಅನೇಕ ಮಾದರಿಗಳು ಸಿಗುತ್ತವೆ. ಎಡಕಲ್ಲು ಗುಡ್ಡ ಏರುವಾಗ ಮರ, ಕಲ್ಲಿನ ಮೇಲೆಯುವಕರು ತಮ್ಮ ಹೆಸರುಗಳನ್ನು ಕೆತ್ತುವ ಸಾಮಾನ್ಯ ಚಾಳಿ ತೋರಿದರೆ, ಅಲ್ಲೇ ಇರುವ ಸಿಬ್ಬಂದಿ ತಕ್ಷಣ ಬಾಟಲಿಯಲ್ಲಿ ನೀರು ತಂದು ಸುರಿದು ಬಟ್ಟೆಯಲ್ಲಿ ಒರೆಸಿ ಶುಚಿ ಮಾಡುತ್ತಾರೆ. ಕಾಡಿನ ಮೆಟ್ಟಿಲಾದರೂ ಕಸ ಗುಡಿಸುವ ಸಿಬ್ಬಂದಿ ಅಲ್ಲಲ್ಲಿ ಇರುತ್ತಾರೆ. ಪ್ಲಾಸ್ಟಿಕ್‌, ಕಸ ಎಸೆದರೆ ತಕ್ಷಣ ತೆರವುಗೊಳಿಸುತ್ತಾರೆ.

ಇನ್ನೇಕೆ ತಡ, ಈ ಸುಡು ಬೇಸಿಗೆಯ ನಿಮ್ಮ ಪ್ರವಾಸ ಎಡಕಲ್ಲು ಗುಡ್ಡದ ಕಡೆಗೇ ಇರಲಿ. ವಯನಾಡಿನಲ್ಲಿ ನೀವು ನೋಡಬಹುದಾದ ರಮ್ಯತಾಣಗಳು ಬಹಳಷ್ಟು ಇವೆ. ಬೇಸಿಗೆ ಯಲ್ಲೂ ಕಣ್ಣು ತಂಪಾಗಿಸುವ ಸರೋವರ, ಜಲಪಾತಗಳ ತಡಿಯಲ್ಲಿ ವಿಹರಿಸಬಹುದು.

ಚಿತ್ರಗಳು: ಲೇಖಕರವು

***

ಹೋಗುವುದು ಹೇಗೆ?

ಮೈಸೂರಿನಿಂದ ವಯನಾಡಿಗೆ ನಾಲ್ಕು ಗಂಟೆಗಳ ಬಸ್‌ ಪ್ರಯಾಣ. ಸುಲ್ತಾನ್‌ ಬತ್ತೇರಿಯಿಂದ ಅಂಬಾಲವಾಯಲ್‌ಗೆ ಖಾಸಗಿ ಬಸ್‌ಗಳು ಜತೆಗೆ ಸಾಕಷ್ಟು ರಿಕ್ಷಾಗಳು ಸಿಗುತ್ತವೆ.

ವಯನಾಡಿನ ಅಂಬಾಲವಾಯಲ್‌ ತಲುಪಿದರೆ ಅಲ್ಲಿಂದ ಎಡಕಲ್ಲು ಗುಡ್ಡಕ್ಕೆ 5 ಕಿಲೋಮೀಟರ್‌ ಪ್ರಯಾಣ.

***

ಸುತ್ತಮುತ್ತ ಏನೇನು ನೋಡಬಹುದು?

ವಯನಾಡಿಗೆ ಪ್ರವಾಸ ಹೋದ ಮೇಲೆ ಅಲ್ಲಿನ ಸೂಜಿಪಾರ ಜಲಪಾತ ನೋಡಲೇ ಬೇಕಿರುವ ತಾಣ.ಸೆಂಟಿನೆಲ್ ರಾಕ್ ವಾಟರ್ ಫಾಲ್ಸ್ ಎಂದೂ ಕರೆಯಲಾಗುತ್ತದೆ. ವೆಲ್ಲರಿಮಾಲಾದಲ್ಲಿರುವ ಈ ಜಲಪಾತ ಮೂರು ಹಂತಗಳಲ್ಲಿದೆ. ನಿತ್ಯ ಹರಿದ್ವರ್ಣಕಾಡಿನಿಂದ ಆವೃತವಾದ ಪ್ರದೇಶದಲ್ಲಿದೆ. ಹಾದಿಯಲ್ಲಿ ನಡೆದು ಜಲಪಾತದ ಬುಡಕ್ಕೆ ಇಳಿದು ನೀರಾಟವಾಡುವ ಸುಂದರ ತಾಣವಿದು. ಡಿಸೆಂಬರ್‌ವರೆಗೂ ನೀರಿನ ಹರಿವು ಚೆನ್ನಾಗಿರುತ್ತದೆ. ಮಳೆ ನಿಂತ ಕೂಡಲೇ ಇಲ್ಲಿಗೆ ಹೋದರೆ ಜಲಪಾತದ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಮೇಪಾಡಿದಿಂದ ಸೂಜಿಪಾರ ಜಲಪಾತ ತಲುಪಲು 15-20 ನಿಮಿಷದ ಪ್ರಯಾಣ. ಈ ನಡುವೆ ಅನೇಕಟೀ ತೋಟಗಳು ಸಿಗುತ್ತವೆ. ಸೂಜಿಪಾರ ಜಲಪಾತವು 200 ಮೀಟರ್ (656 ಅಡಿ) ಎತ್ತರದಿಂದ ದುಮುಕುತ್ತದೆ. ನಂತರ ಚುಲಿಕ ನದಿಗೆ ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.