ನಮ್ಮದೇ ನಾಡಿನ ಗದಗ ಜಿಲ್ಲೆಯ ಕಪ್ಪತಗುಡ್ಡ ಜೀವವೈವಿಧ್ಯತೆಯ ತಾಣವಾಗಿದೆ. ಇದು ಅಮೂಲ್ಯ ಗಿಡಮೂಲಿಕೆಗಳು, ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಿದೆ. ಈ ಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೂ ಇಲ್ಲಿಯ ಜನರು ಅಭಿಮಾನದಿಂದ ಕರೆಯುತ್ತಾರೆ. ಇಲ್ಲಿಗೆ ಸಂಶೋಧಕರು, ಚಾರಣ ಪ್ರಿಯರು, ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಡುತ್ತಾರೆ.
ಗದಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕಪ್ಪತಗುಡ್ಡದ ವೈಯ್ಯಾರ ಪ್ರಕೃತಿಯ ಹಚ್ಚಹಸಿರ ಸೊಬಗಿನ ಸೆಳೆತದ ನಡುವೆ ಇನ್ನೇನು ಆಗಸಕ್ಕೆ ತಾಗಿಬಿಡುತ್ತೆ ಎನ್ನುವಂತಿದೆ. ಬಯಲು ಸೀಮೆಯ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಕಪ್ಪತಗುಡ್ಡದ ಮೇಲೆ ಬೀಸುವ ತಂಗಾಳಿ, ಚದುರುವ ಮೋಡಗಳು ಸೂಜಿಗಲ್ಲಿನಂತಹ ಸೆಳೆತ ಹೊಂದಿವೆ. ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿರುವ ಕಪ್ಪತಗುಡ್ಡ, ಶುದ್ಧಗಾಳಿಗೆ ಹೆಸರಾಗಿದೆ. ವಿಹಾರ ಮತ್ತು ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದಂತಿದೆ ಈ ಗುಡ್ಡ. ಮಳೆಗಾಲದಲ್ಲಿ ಇದರ ಚೆಂದಕ್ಕೆ ಮನಸೋಲದ ಮನಸ್ಸುಗಳೇ ಇಲ್ಲ!
ಹೆಚ್ಚು ಜನರಿಗೆ ಪರಿಚಯವಿಲ್ಲದ, ಓಡಾಡಲು ಬಹುತೇಕರು ಅಂಜುವಂತಹ ಕಪ್ಪತಗುಡ್ಡ ಇಡೀ ದಿನದ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಗುಡ್ಡದ ನಿರ್ಜನ ಅಂಗಳದಲ್ಲಿ ಮಕ್ಕಳಂತೆ ನಾಲ್ಕು ದಿಕ್ಕಿಗೂ ಎಷ್ಟೆಲ್ಲ ಓಡಾಡಿದೆವು ಎಂದರೆ, ಹೆಚ್ಚು ಕಡಿಮೆ ಕಪ್ಪತಗುಡ್ಡದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ! ಅಲ್ಲಿ ಸಿಗುವ ‘ಕಲ್ಲು ಮಾವು’ ಸಸ್ಯದ ಎಲೆಯ ಸಾರಿನ ರುಚಿಯನ್ನು ಉಂಡವರ ಬಾಯಲ್ಲೇ ಕೇಳಬೇಕು. ಎತ್ತರದ ಕಲ್ಲಿನ ಪಡಕಿಗೇ ಒತ್ತಿಕೊಂಡೇ ಬೆಳೆವ ಈ ಸಸ್ಯದಂತಹ ನೂರಾರು ಅಪರೂಪದ ಅಡುಗೆಗೆ ಬಳಸಬಹುದಾದ ಸಸ್ಯರಾಶಿಯ ಮಡಿಲು ನಮ್ಮ ಕಪ್ಪತಗಿರಿ ಸಾಲು. ‘ಬ್ರಹ್ಮಕಾಂತಿ’, ‘ತುರುಬು ಚಂದಿರ’, ‘ವಿಷ್ಣು ಕಾಂತಿ’, ‘ಗೋರೆ ಹುಲ್ಲು’ ಇಂತಹ ವಿಶಿಷ್ಟ ಸಸ್ಯಗಳನ್ನು ಅರಸಿ ಕಪ್ಪತಗುಡ್ಡಕ್ಕೆ ಪ್ರತಿ ವರ್ಷ ನೂರಾರು ಸಾಧು, ಸಂತರು ಬರುತ್ತಲೇ ಇರುತ್ತಾರೆ.
ಮಳೆಗಾಲವಷ್ಟೇ ಅಲ್ಲದೇ, ಬೇಸಿಗೆಯಲ್ಲೂ ಅಮೂಲ್ಯ ಗಿಡಮೂಲಿಕೆ ಅರಸಿ ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆ ಏನಲ್ಲ. ಪ್ರತೀ ಮಳೆಗಾಲದ ಮೊದಲ ಮಳೆಯ ನಂತರ ಗುಡ್ಡದ ಕೆಂಪು ಮಣ್ಣಿನಡಿ ಗಪ್ಪನೆ ಕೂತ ಗಡ್ಡೆಗಳೆಲ್ಲ ಚಿಗುರೊಡೆಯುತ್ತವೆ. ‘ಸವಳಕ್ಕ’, ‘ಮಧುನಾಶಿನಿ’ ಎಂಬ ಬಳ್ಳಿ ಮತ್ತದರ ಗಡ್ಡೆ ಬಲು ಅಪರೂಪದ್ದು. ಇಂತಹ ಅಸಂಖ್ಯ ಸಸ್ಯಪ್ರಭೇದ ಇಲ್ಲಿವೆ.
ಕೆಂಪು ಮಣ್ಣಿನ ಹುಡಿಯ ಕಪ್ಪತಗುಡ್ಡದ ಪ್ರತೀ ಸರವಿಗೂ ಒಂದೊಂದು ಐತಿಹ್ಯವಿದೆ. ಇಲ್ಲಿನ ಗುಹೆಗಳ ಒಳಗೆ ಕಲ್ಲು ಸಂದಿಗಳಿಗೆ ಅಂಟಿಕೊಂಡು ಸಿಗುವ ‘ಕಲ್ಲು ಧೂಪ’ ಹೆಚ್ಚು ಚಿಕಿತ್ಸಕ ಗುಣವುಳ್ಳದ್ದು. ಗುಡ್ಡದ ಒಡಲಲಿ ಆರೇಳು ಕಿಲೋಮೀಟರ್ ನಡೆಯುತ್ತಾ ‘ಮಂಜಿನ ದೋಣಿ’ ತಲುಪಿದರೆ ಅದೊಂದು ಐತಿಹ್ಯದ ಸ್ಥಳ. ಎಷ್ಟೋ ಸಾಧು ಸಂತರು ಕೇವಲ ಜಪ, ಅನುಷ್ಠಾನಕ್ಕಾಗಿ ಬರುವ ಆಲದಮರದ ಬಿಳಲಿನಿಂದ ಇಳಿದು ಅದರಿಂದಲೇ ಮೇಲೆ ಬರುವ ಏಕೈಕ ದಾರಿಯಿರುವ ಮಹತ್ವದ ಸ್ಥಳ ಅದು. ಹೆಚ್ಚಿನ ಪ್ರವಾಸಿಗರಿಗೆ ಅಲ್ಲಿಯವರೆಗೆ ಓಡಾಡಲು ನಾಲ್ಕು ಗುಂಡಿಗೆ ಬೇಕು ಎನ್ನುವಂತಹ ದಾರಿ ಅದು.
ಕಪ್ಪತಗುಡ್ಡದ ನಾಲ್ಕು ಮೂಲೆಗೂ ಗೋಲಗೇರಿ ಮಠ, ನಂದಿವೇರಿ ಮಠ, ಹಳೇ ಮಠ... ಹೀಗೆ ಹಲವು ಮಠಗಳಿವೆ. ಒಂದು ಕಾಲದಲ್ಲಿ ಪಶು ಸಂಗೋಪನೆಗೆ ನಂದಿವೇರಿ ಮಠ ರಾಜ್ಯದಲ್ಲೇ ಹೆಸರುವಾಸಿಯಾಗಿತ್ತು. ತೋಂಟದ ಸಿದ್ಧಲಿಂಗೇಶ್ವರ ಶ್ರೀಗಳು ಇರುವ ತನಕ ಕಪ್ಪತಗುಡ್ಡದ ಬಗೆಗೆ ವಿಶೇಷ ಕಾಳಜಿವಹಿಸಿದ್ದರು. ಅಗತ್ಯ ಬಿದ್ದಾಗ ಅವರು ಕಪ್ಪತಗಿರಿ ಉಳಿಸಿಕೊಳ್ಳಲು ಬೀದಿಗಿಳಿದದ್ದು ಉಂಟು. ಪ್ರತೀ ವರ್ಷ ಬೆಂಕಿಗೆ ಸಿಕ್ಕು ಸಾವಿರಾರು ಹೆಕ್ಟೆರ್ ಸುಟ್ಟರೂ ಅದೇ ವರ್ಷದ ಮಳೆಗಾಲಕ್ಕೆ ಕಪ್ಪತಗುಡ್ಡ ಕಡು ಹಸಿರ ಬಣ್ಣವನ್ನೇ ಮೈಗೆಲ್ಲ ಬಳೆದುಕೊಂಡಂತೆ ಚಿಗುರೊಡೆಯುತ್ತದೆ. ಪಡಿಯಲಿ ಚೂರು ಹೊತ್ತು ಕೂತು ಕಪ್ಪತ ಮಲ್ಲೇಶ್ವರ ಮಠದಲ್ಲಿ ಚಾರಣ. ಈ ವರ್ಷವು ಮೋಡಗಳನ್ನು ಹಿಡಿದೆಳೆದು ಕೆಳಗೆ ಕೆಡವಿದಂತೆ ಆಗೀಗ ಮೋಡ-ಗುಡ್ಡದ ಗುದಮುರಗಿ ಇಡೀ ದಿನ ನಡೆದೇ ಇತ್ತು.
ನಮ್ಮ ಕಪ್ಪತಗುಡ್ಡವನ್ನು ಈಗ ಉಳಿಸಿಕೊಳ್ಳುವುದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಬಿಸಾಡುವ ಬಹುತೇಕ ನಗರ ಪ್ರದೇಶದ ಜನರಿಂದ ಉಳಿಸಿಬೇಕಿರುವುದು ಸದ್ಯದ ಅಗತ್ಯ. ಅರಣ್ಯ ಇಲಾಖೆ ಈ ಬಗೆಗೆ ಮುತುವರ್ಜಿ ವಹಿಸಿದರೆ ಈಗಾಗಲೇ ಸಾಕಷ್ಟು ವೃದ್ಧಿಯಾಗಿರುವ ಗುಡ್ಡದ ಪ್ರಾಣಿ ಸಂಕುಲ ಸಹ ಕಪ್ಪತಗುಡ್ಡದ ಪ್ರತಿ ಮೂಲೆಯಿಂದ ಹೆಚ್ಚೆಚ್ಚು ಕೇಕೆ ಹಾಕಬಹುದು. ಕಪ್ಪತಗುಡ್ಡದ ಮಡಿಲಲಿ ಹೆಚ್ಚಿದ ವನ್ಯಜೀವಿಗಳ ಸಂತತಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡದಲ್ಲಿ ವನ್ಯಜೀವಿಗಳ ಸಂಖ್ಯೆ ವೃದ್ಧಿಸಿರುವುದು, ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಅತಿ ಅಪರೂಪದ ಪ್ರಾಣಿಗಳಾದ ಚಿಂಕಾರ ಹಾಗೂ ರೆಸ್ಟಿ ಸ್ಪಾಟೆಡ್ ಬೆಕ್ಕುಗಳು ಇಲ್ಲಿ ಕಂಡು ಬಂದಿವೆ. ಕಪ್ಪತಗುಡ್ಡ ವನ್ಯಜೀವಿಧಾಮವು ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ ಸುಮಾರು 65 ಕಿಲೋಮೀಟರ್ ಉದ್ದಕ್ಕೆ ಚಾಚಿಕೊಂಡಿದೆ. ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ ನಂತರ ಇಲ್ಲಿ ಸಸ್ಯ ಹಾಗೂ ವನ್ಯಜೀವಿಗಳ ಸಂತತಿ ನಿಧಾನವಾಗಿ ವೃದ್ಧಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಕಪ್ಪತಗುಡ್ಡದಲ್ಲಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ನೆಲೆ ಕಂಡುಹಿಡಿಯಲು ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಡೆಹರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ, ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ಘಟಕದ ಸಿಬ್ಬಂದಿ ನೆರವಿನಿಂದ ಮೇ 7ರಿಂದ ಜುಲೈ 15ರವರೆಗೆ ಕಪ್ಪತಗುಡ್ಡ ವನ್ಯಜೀವಿಧಾಮದಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲಾಗಿದೆ. ಇದರಿಂದ ನಮಗೆ ಅಚ್ಚರಿಯ ಫಲಿತಾಂಶ ಲಭಿಸಿದ್ದು, ಕಪ್ಪತಗುಡ್ಡದಲ್ಲಿ ಎಷ್ಟೆಲ್ಲಾ ವೈವಿಧ್ಯದ ಪ್ರಾಣಿಗಳಿವೆ ಎಂಬುದು ಆಶ್ಚರ್ಯ ತರಿಸಿದೆ’ ಎಂದು ಡಿಸಿಎಫ್ ದೀಪಿಕಾ ಬಾಜಪೇಯಿ ತಿಳಿಸಿದ್ದಾರೆ.
‘ಸೈನ್ ಸರ್ವೆ ವಿಧಾನದಲ್ಲಿ 128 ಕಿಲೋಮೀಟರ್ ಸಂಚರಿಸಿ ಪ್ರಾಣಿಗಳ ಮಲದ ನಮೂನೆ, ಮರ ಮತ್ತು ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಪರಚಿದ ಗುರುತುಗಳನ್ನು ವೀಕ್ಷಿಸಲಾಗಿದೆ. ಲೈನ್ಸ್ ಟ್ರಾನ್ಸಕ್ಟ್ ವಿಧಾನದಲ್ಲಿ ಪ್ರಾಣಿಗಳ ಸಂಚಾರ ಮಾರ್ಗ ಗಮನಿಸಲಾಗಿದೆ. ಜತೆಗೆ ಕ್ಯಾಮೆರಾ ಟ್ರ್ಯಾಪ್ ವಿಧಾನದಲ್ಲಿ ಕಪ್ಪತಗುಡ್ಡದಲ್ಲಿ 98 ಕ್ಯಾಮೆರಾ ಅಳವಡಿಸಿ 30 ದಿನ ನಿರಂತರ ವೀಕ್ಷಣೆ ಮಾಡಲಾಗಿದೆ. ಈ ಮೂರು ವಿಧಾನಗಳಿಂದ ಪ್ರಾಣಿಗಳ ಸಂತತಿ ಸಂಖ್ಯೆ, ಅವುಗಳ ನೆಲೆ ಹಾಗೂ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಕಪ್ಪತಗುಡ್ಡದಲ್ಲಿ ಹಿಂದೆ ಎಷ್ಟು ಸಂಖ್ಯೆಯಲ್ಲಿ ಪ್ರಾಣಿಗಳಿದ್ದವು ಎಂಬುದಕ್ಕೆ ಮೂಲ ದಾಖಲೆಗಳಿಲ್ಲ. ಸಮೀಕ್ಷೆಗಳು ನಡೆದಿಲ್ಲ. ಆದರೆ, ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆಯಾದ ನಂತರ ಹೆಚ್ಚಿನ ಅನುದಾನ ಸಿಗುತ್ತಿರುವುದು, ಕಾಡಿನ ರಕ್ಷಣೆಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿರುವುದು, ಕುಡಿಯುವ ನೀರಿನ ಹೊಂಡಗಳ ನಿರ್ಮಾಣ, ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಒತ್ತು ನೀಡಿರುವುದು, ಕಳ್ಳಬೇಟೆ ನಿಯಂತ್ರಣ ಮೊದಲಾದ ಕಾರಣಗಳಿಂದ ಪ್ರಾಣಿಗಳ ಸಂತತಿ ಹೆಚ್ಚಿದೆ. ಮುಂದಿನ ಐದತ್ತು ವರ್ಷಗಳಲ್ಲಿ ಪ್ರಾಣಿಗಳ ಸಂಖ್ಯೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದಿದ್ದಾರೆ ದೀಪಿಕಾ ಬಾಜಪೇಯಿ.
ಮಾನವ ಹಸ್ತಕ್ಷೇಪ ಕಡಿಮೆ ಆಗಿದ್ದರಿಂದ ಕಾಡು ಬೆಳೆದಿದೆ. ಕಾಡು ವೃದ್ಧಿಸುತ್ತಿರುವುದರಿಂದ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ. ಅರಣ್ಯ ಇಲಾಖೆಯವರು ಜನರ ಸಹಕಾರ ಪಡೆದು ಕಪ್ಪತಗುಡ್ಡಕ್ಕೆ ಇನ್ನೂ ಹೆಚ್ಚಿನ ಕಾವಲು ಹಾಕಬೇಕು. ಕಾಳಜಿ ಮಾಡಬೇಕು.
ವೈಜ್ಞಾನಿಕ ಸಮೀಕ್ಷೆಯಿಂದ ಕಪ್ಪತಗುಡ್ಡ ಪ್ರದೇಶದಲ್ಲಿ ಕತ್ತೆಕಿರುಬ, ಚಿರತೆ, ನರಿ, ತೋಳ, ಕಾಡುಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ, ಮೂರು ಜಾತಿಯ ಹುಲ್ಲೆಗಳು ಸೇರಿದಂತೆ ಹಲವು ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳು, ಸರೀಸೃಪಗಳು ಕಂಡುಬಂದಿವೆ. ನಿಸರ್ಗ ಅದ್ಭುತ ತಾಣವನ್ನು ಉಳಿಸಿ ಬೆಳೆಸುವುದು ನಮ್ಮಗಳ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.