ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಗಿರಿಶಿಖರಗಳಿವೆ. ಅವುಗಳಲ್ಲಿ ಕುದುರೆಮುಖವೂ ಒಂದು. ನಾವು ಹತ್ತು ಜನ ಗೆಳೆಯರು ಕುದುರೆಮುಖ ಶಿಖರದ ಆರಂಭ ಬಿಂದುವನ್ನು ತಲುಪಿ, ಅಲ್ಲಿ ಅರಣ್ಯಾಧಿಕಾರಿಗಳಿಂದ ತಪಾಸಣೆಗೆ ಒಳಗಾಗಿ ನಮ್ಮ ಚಾರಣವನ್ನು ಆರಂಭಿಸಿದೆವು.
ಸಾವಿರಾರು ಜನರು ನಡೆದಾಡಿ ಸವೆದ ಹಾಗೆ ಕಾಣುತ್ತಿದ್ದ ಕಾಲುದಾರಿಯಲ್ಲಿ ಒಬ್ಬರ ಹಿಂದೆ ಒಬ್ಬರು ಸಾಲಾಗಿ ಶಿಖರದ ತುದಿಯ ಕಡೆಗೆ ಹೆಜ್ಜೆ ಹಾಕಿದೆವು. ಆ ಕಾಲುದಾರಿ ಹಿಡಿದು ಹೊರಟರೆ ಸಾಕು, ಅದೇ ನಮ್ಮನ್ನು ಶಿಖರದ ತುದಿಗೆ ಕರೆದೊಯ್ಯುತ್ತದೆ. ಎಲ್ಲಿಯೂ ದಾರಿ ತಪ್ಪಿಸುವುದಿಲ್ಲ. ಆದರೂ ನಮ್ಮೆಲ್ಲರಿಗಿಂತಲೂ ಮುಂದೆ ಸ್ಥಳೀಯ ಗೈಡ್ ಹೋಗುತ್ತಿದ್ದರು.
ಅರಣ್ಯ ಇಲಾಖೆಯ ನಿಯಮದ ಪ್ರಕಾರ ಕುದುರೆಮುಖ ಶಿಖರದ ಚಾರಣ ಮಾಡಬೇಕಾದರೆ ಒಬ್ಬರು ಸ್ಥಳೀಯ ಗೈಡ್ ಅನ್ನು ನೇಮಿಸಿಕೊಳ್ಳುವುದು ಕಡ್ಡಾಯವಾಗಿದೆ.
ಶೋಲಾ ಕಾಡು: ಕುದುರೆಮುಖ ಶಿಖರ ಚಾರಣದಲ್ಲಿ ಮೊದಲಿಗೆ ಶೋಲಾ ಕಾಡನ್ನು ಹಾದುಹೋಗಬೇಕು. ಅಂದರೆ ಎರಡೂ ಕಡೆಯು ಪರ್ವತ ಸಾಲುಗಳಿದ್ದು, ಅದರ ಮಧ್ಯದಲ್ಲಿ ಶಿಖರದಿಂದ ಇಳಿಯುವ ನೀರು ಹರಿದು ಹೋಗುವ ಕಣಿವೆಯ ಜಾಗದಲ್ಲಿ ಮರಗಿಡಗಳು ಬೆಳೆದು ಕಾಡು ಸೃಷ್ಟಿಯಾಗಿದೆ. ಕುದುರೆಮುಖ ಚಾರಣದ
ವೈಶಿಷ್ಟ್ಯಗಳಲ್ಲಿ ಶೋಲಾ ಕಾಡು ಪ್ರಮುಖವಾಗಿದೆ. ಚಾರಣ ಶುರು ಮಾಡಿದಾಗ ಬಯಲಲ್ಲಿ ನಡೆದು ಹೋಗುತ್ತಿರುತ್ತೇವೆ. ಮರುಕ್ಷಣ ಇದ್ದಕ್ಕಿದ್ದಂತೆ ಕಾಡನ್ನು ಪ್ರವೇಶಿಸುತ್ತೇವೆ. ಕಣಿವೆಯಲ್ಲಿ ಸ್ವಲ್ಪ ದೂರ ಸಾಗಿದ ಮೇಲೆ ಮತ್ತೆ ಬಯಲಿಗೆ ಬರುತ್ತೇವೆ. ಬಯಲಿನಲ್ಲಿ ಸ್ವಲ್ಪ ದೂರ ಸಾಗಿದ ಮೇಲೆ ಮತ್ತೆ ಕಾಡಿನ ಪ್ರವೇಶ. ಒಂದು ರೀತಿಯಲ್ಲಿ ಬಯಲು ಮತ್ತು ಕಾಡು ಕಣ್ಣಾಮುಚ್ಚಾಲೆ ಆಟ ಆಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ!
ಚಾರಣದ ಹಾದಿ
ಕಣಿವೆಯ ಶೋಲಾ ಕಾಡಿನೊಳಗಿನ ಅನುಭವವೇ ರೋಮಾಂಚನಕಾರಿ. ಮುಗಿಲೆತ್ತರದ ಮರಗಳು, ಶಿಖರದಿಂದ ಹರಿದು ಬರುವ ನೀರಿನ ಜುಳುಜುಳು ನಾದ, ಹಕ್ಕಿಗಳ ಚಿಲಿಪಿಲಿ, ಕಪ್ಪೆಗಳ ವಟಗುಟ್ಟುವಿಕೆ, ಒಂದೇ ಸಮನೆ ಗುಯ್‌ಗುಡುವ ಜೀರುಂಡೆಗಳ ಶಬ್ದ... ಇವೆಲ್ಲವೂ ಒಟ್ಟಿಗೆ ಸೇರಿ ದಟ್ಟ ಕಾಡಿನ ಅನುಭವವನ್ನು ನೀಡುತ್ತದೆ. ಶೋಲಾ ಕಾಡು ಒಮ್ಮೆ ಭಯಪಡಿಸಿದ್ದು ಉಂಟು. ಶಿಖರದ ತುದಿ ತಲುಪಿ ವಾಪಸ್ ಮರಳುವಾಗ ನಾಲ್ಕು ಜನರ ಒಂದು ತಂಡ ಮುಂದೆ ಹೋಗಿತ್ತು. ನಾಲ್ಕು ಜನರ ಇನ್ನೊಂದು ತಂಡ ಹಿಂದೆ ಬರುತ್ತಿತ್ತು. ನಾನು ಮತ್ತು ಇನ್ನೊಬ್ಬರು ಈ ಎರಡು ತಂಡಗಳಿಂದ ಬೇರ್ಪಟ್ಟಿದ್ದೆವು. ಒಳಗೊಳಗೆ ಭಯ, ಆತಂಕ. ಆದರೂ ಪರಸ್ಪರ ತೋರಿಸಿಕೊಳ್ಳಲಿಲ್ಲ. ಸಂಜೆ ಐದು ಗಂಟೆ ಸಮಯ. ಆಗಸದಲ್ಲಿ ಕಾರ್ಮೋಡ ಕವಿದಿತ್ತು. ಕತ್ತಲು ಇಣುಕುತ್ತಿತ್ತು. ಹಾಗೇ ನಡೆದುಕೊಂಡು ಕಣಿವೆ ಕಾಡಿನೊಳಗೆ ಬಂದಾಗ ಕಾಡ್ಗತ್ತಲು ಆವರಿಸಿದಂತಾಗಿ, ಭಯ ಹೆಚ್ಚಾಯಿತು. ಅದೇ ಸಮಯಕ್ಕೆ ದೂರದಲ್ಲಿ ಮನುಷ್ಯರ ರೀತಿಯಲ್ಲಿಯೇ ಸಿಳ್ಳೆ ಹಾಕುತ್ತಿದುದ್ದು ಕೇಳಿಸಿತು. ಜೊತೆಯಲ್ಲಿದ್ದ ಇನ್ನೊಬ್ಬರಿಗೆ ಹೇಳಿದೆ. ಅವರು ಅದನ್ನು ಆಲಿಸಿ ‘ಹೌದು. ಯಾರೋ ಸಿಳ್ಳೆ ಹಾಕುತ್ತಿದ್ದಾರೆ’ ಎಂದರು. ಆದರೆ ಈ ಕಾಡಿನೊಳಗೆ ಇಷ್ಟೊತ್ತಲ್ಲಿ ಯಾರೋ ಬಂದು ಸಿಳ್ಳೆ ಹಾಕಲು ಹೇಗೆ ಸಾಧ್ಯ? ಎಂದು ಅನಿಸಿದರೂ, ಮನಸ್ಸಿನಲ್ಲಿ ಏನೇನೋ ಕಲ್ಪನೆಗಳು ನುಸುಳಿ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಅಷ್ಟೊತ್ತಿಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಯಾವುದೋ ಪುಸ್ತಕದಲ್ಲಿ ಮನುಷ್ಯರ ರೀತಿಯಲ್ಲಿಯೇ ಸಿಳ್ಳೆ ಹಾಕುವ ಪಕ್ಷಿಯ ಬಗ್ಗೆ ಉಲ್ಲೇಖಿಸಿರುವುದು ನೆನಪಾದರೂ, ಹೆದರಿಕೆ ದೂರವಾಗಿರಲಿಲ್ಲ. ಇಂಥ ದಟ್ಟ ಕಾಡಿನ ಅನುಭವಕ್ಕೆ ಕುದುರೆಮುಖ ಶಿಖರದ ಚಾರಣದ ಹಾದಿಯಲ್ಲಿ ಸಿಗುವ ಶೋಲಾ ಕಾಡು ಸಾಕ್ಷಿಯಾಯಿತು.
ಪರ್ವತ ಬಯಲು
ಶೋಲಾ ಕಾಡನ್ನು ದಾಟಿ ಮುಂದೆ ಬಂದರೆ ಪರ್ವತದ ಅನಂತ ಬಯಲು ಎದುರಾಗುತ್ತದೆ. ಈ ಬಯಲಿನಲ್ಲಿ ಐದು ಬೆಟ್ಟಗಳನ್ನು ಹತ್ತಿಳಿದರೆ ಅಂತಿಮವಾಗಿ ಕುದುರೆಮುಖ ಶಿಖರ ಕಾಣಿಸುತ್ತದೆ. ಮೊದಲನೆಯ ಬೆಟ್ಟವು ಸ್ವಲ್ಪ ಕಡಿದಾಗಿದ್ದು, ಹತ್ತಲು ಸವಾಲೊಡ್ಡುತ್ತದೆ. ಬೆಟ್ಟದ ಹೊಟ್ಟೆಯ ಮೇಲೆ ನಡೆದು ಸ್ವಲ್ಪ ದೂರ ಸಾಗಿದ ಮೇಲೆ ಒಂಟಿಮರವೊಂದು ಸಿಗುತ್ತದೆ. ಅಲ್ಲಿಗೆ ಕುದುರೆಮುಖ ಶಿಖರ ಚಾರಣದ ಅರ್ಧದಾರಿಯನ್ನು ಕ್ರಮಿಸಿದ್ದೆವು. ಒಂಟಿಮರ ಇರುವ ಸ್ಥಳವು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಒಂದು ‘ವ್ಯೂ ಪಾಯಿಂಟ್’ ಕೂಡ. ಜೊತೆಗೆ ಚಾರಣಿಗರ ವಿಶ್ರಾಂತಿಯ ತಾಣವು ಹೌದು. ಅಲ್ಲಿಗೆ ತಲುಪುವ ಹೊತ್ತಿಗಾಗಲೇ ಚಾರಣಿಗರ ಗುಂಪೊಂದು ಅಲ್ಲಿ ಕುಳಿತು ವಿಶ್ರಮಿಸುತ್ತಾ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿತ್ತು. ಅವರ ಜೊತೆಗೂಡಿದ ನಾವು ಕೂಡ ನಿಸರ್ಗದ ರಮಣೀಯ ಸೊಬಗನ್ನು ಆನಂದಿಸಿದೆವು. ಮನಸ್ಸು ಉಲ್ಲಾಸಗೊಂಡಿತು. ಆಗ ಉಳಿದರ್ಧ ಶಿಖರ ಏರಲು ಉತ್ಸಾಹ ಮೂಡಿತು.
ಬೆಟ್ಟದ ಮೇಲಿನ ನಡಿಗೆ ಸಹಜವಾಗಿ ತುಸು ನಿಧಾನವಾಗಿತ್ತು. ದಾರಿಯು ಸಣ್ಣ ಸಣ್ಣ ಕಲ್ಲುಗಳಿಂದ ಕೂಡಿದೆ. ದಾರಿ ಉದ್ದಕ್ಕೂ ಬೆಂಬಿಡದ ಬೇತಾಳದಂತೆ ಕಾಡುವ ಕುದುರೆ ನೊಣಗಳು. ನಡಿಗೆ ಸ್ವಲ್ಪ ನಿಧಾನವಾದರೂ ಕೈ, ಕಾಲು, ಮುಖ, ಹಣೆ ಎನ್ನದೆ ಎಲ್ಲೆಂದರಲ್ಲಿ ಕುಳಿತು ಕ್ಷಣಾರ್ಧದಲ್ಲಿ ರಕ್ತ ಹೀರಿಬಿಡುತ್ತವೆ. ಇವುಗಳ ಕಾಟ ಕಿರಿಕಿರಿ ಅನಿಸಿದರೂ ಸಹಿಸಿಕೊಳ್ಳದೆ ಬೇರೆ ದಾರಿ ಇಲ್ಲ.
ಒಂಟಿ ಮರದ ಬಳಿ ಚಾರಣಿಗರು
ಕುದುರೆಮುಖ ಶಿಖರ
ಪಶ್ಚಿಮ ಘಟ್ಟವು ಗಿರಿ ಶಿಖರಗಳ ತವರೂರು. ಇಲ್ಲಿರುವ ಶಿಖರಗಳಲ್ಲಿ ಕುದುರೆಮುಖ ಗಿರಿಧಾಮವು ಒಂದು. ಇದರ ತುದಿಯು ಕುದುರೆ ಮುಖವನ್ನು ಹೋಲುವುದರಿಂದ ಕುದುರೆಮುಖ ಶಿಖರ ಎಂದು ಕರೆಯುತ್ತಾರೆ ಎಂದು ನಮ್ಮ ಜೊತೆ ಬಂದಿದ್ದ ಸ್ಥಳೀಯ ಗೈಡ್ ಹೇಳಿದರು. ನಾವು ಶಿಖರವನ್ನೇ ದೃಷ್ಟಿಸಿ ನೋಡಿದೆವು. ಅದು ನಮಗೆ ಕುದುರೆಯ ಮೊಗದಂತೆಯೇ ಕಂಡಿತು. ಬಹುಶಃ ನಾವು ಮೊದಲೇ ಕುದುರೆಯ ಮುಖವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ನೋಡುವುದರಿಂದ ಹಾಗೆ ಕಾಣುತ್ತದೆಯೋ ಏನೋ? ಪ್ರಜ್ಞೆಯಿಂದ ಪರಿಸರವೋ? ಪರಿಸರದಿಂದ ಪ್ರಜ್ಞೆಯೋ?
ಕುದುರೆಮುಖ ಶಿಖರ ಹತ್ತುವ ಕಲ್ಪನೆಯೇ ಸೋಜಿಗ. ಸ್ಥಳೀಯರು ಆ ಶಿಖರವನ್ನು ನಿಂತಿರುವ ಕುದುರೆ ಆಕಾರಕ್ಕೆ ಹೋಲಿಸಿದ್ದಾರೆ. ಕುದುರೆಮುಖ ಶಿಖರದ ಆರಂಭದ ತುದಿಯನ್ನು ಬಾಲ ಎಂತಲೂ, ಶಿಖರದ ಮಧ್ಯಭಾಗವನ್ನು ಕುದುರೆಯ ಬೆನ್ನು ಎಂತಲೂ, ಶಿಖರದ ಅಂತ್ಯದ ತುದಿಯನ್ನು ಮುಖ ಎಂತಲೂ ಭಾವಿಸಿದ್ದಾರೆ. ಸ್ಥಳೀಯರ ಪ್ರಕಾರ ಶಿಖರವನ್ನು ಅದರ ಬಾಲದಿಂದ ಹತ್ತುತ್ತೇವೆ. ಬಾಲ ಹತ್ತಲು ಶ್ರಮ ಪಡಬೇಕು. ಅದು ಸ್ವಲ್ಪ ಕಡಿದಾಗಿದೆ. ಬಾಲವೇರಿ ಅದರ ಬೆನ್ನ ಮೇಲೆ ಬಂದರೆ ಅದು ಸಮತಟ್ಟಾಗಿದೆ. ಇದೇ ಕೊನೆ ಶಿಖರ. ತಲೆ ಎತ್ತಿ ನೋಡಿದರೆ ಬರೀ ಆಕಾಶವಷ್ಟೆ ಕಾಣುತ್ತದೆ. ಕುದುರೆಮುಖ ಶಿಖರವು ಸಮುದ್ರ ಮಟ್ಟದಿಂದ 1894 ಮೀಟರ್ ಎತ್ತರದಲ್ಲಿದೆ. ಅಷ್ಟು ಎತ್ತರದಲ್ಲಿ ಸಮತಟ್ಟಾದ ಹುಲ್ಲುಗಾವಲಿನ ಮೇಲಿನ ನಡಿಗೆ, ತಂಗಾಳಿಯ ಮೃದು ಸ್ಪರ್ಶ ಮನಸ್ಸಿಗೆ ಮುದ ನೀಡಿತು.
ಶಿಖರದ ತುದಿ ಮುಟ್ಟಿದಾಗ ಸಮಯ ಮಧ್ಯಾಹ್ನ 1.15 ಗಂಟೆ. ತುದಿಯಲ್ಲಿ ನಿಂತು ನೋಡಿದರೆ ಅರಬ್ಬೀ ಸಮುದ್ರ ಕಾಣುತ್ತದೆಯಂತೆ. ಆದರೆ ನಾವು ತುದಿ ತಲುಪಿದಾಗ ಮಂಜು ಎಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡಿತ್ತು. ಎಷ್ಟೂ ಕಾದರೂ ಹೊರಗೆ ಬಿಟ್ಟುಕೊಡಲಿಲ್ಲ. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಮಂಜು ಸರಿದಾಗ ನೆತ್ತಿಯ ಮೇಲಿಂದ ಕಾಣುವ ದೃಶ್ಯ ಮನಮೋಹಕ. ‘ಹಸುರತ್ತಲ್, ಹಸುರಿತ್ತಲ್ ಹಸುರೆತ್ತಲ್’ ಎಂಬ ಕವಿವಾಣಿಯನ್ನು ನೆನಪಿಸಿತು. ಅದರಲ್ಲೂ ಬೆಳ್ಮೋಡವು ನಮ್ಮನ್ನೇ ಆಪೋಶನ ತೆಗೆದುಕೊಳ್ಳುವಂತಹ ಅನುಭವ ಪದಗಳಿಗೆ ನಿಲುಕದು.
ಕುದುರೆಮುಖ ಶಿಖರವು ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಸಾಯುವುದರೊಳಗೆ ಇನ್ನೊಮ್ಮೆಯಾದರೂ ಕುದುರೆಮುಖ ಶಿಖರ ಏರಬೇಕು ಎಂದೆನಿಸದೇ ಇರದು.
ಎಷ್ಟು ದೂರ?
ಕುದುರೆಮುಖವು ಬೆಂಗಳೂರಿನಿಂದ 318 ಕಿಲೋಮೀಟರ್, ಚಿಕ್ಕಮಗಳೂರಿನಿಂದ 95 ಕಿಲೋಮೀಟರ್ ಮತ್ತು ಕಳಸದಿಂದ 10 ಕಿಲೋ ಮೀಟರ್ ದೂರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.