ADVERTISEMENT

ತುಂಗಭದ್ರೆಯ ತಟದಲ್ಲಿ...

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಮಾರ್ಚ್ 2019, 19:30 IST
Last Updated 27 ಮಾರ್ಚ್ 2019, 19:30 IST
ತುಂಗಭದ್ರೆಯ ನೋಟ         ಚಿತ್ರಗಳು: ಬಿ. ಬಾಬುಕುಮಾರ್‌
ತುಂಗಭದ್ರೆಯ ನೋಟ ಚಿತ್ರಗಳು: ಬಿ. ಬಾಬುಕುಮಾರ್‌   

ಕಣ್ಣು ಹಾಯಿಸಿದಷ್ಟು ದೂರದ ವರೆಗೆ ಕಾಣುವ ನೀರು. ಥೇಟ್‌ ಸಮುದ್ರದಂತೆ ಭಾಸವಾದರೂ ಸಮುದ್ರವಲ್ಲ. ಹಚ್ಚ ಹಸಿರಿನಿಂದ ಕೂಡಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಸದ್ದಿಲ್ಲದೆ ಹರಿಯುವ ಈಕೆಯ ಚೆಲುವು ನೋಡುವುದೇ ಕಣ್ಣಿಗೆ ಸೊಗಸು.

ಇದು ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಚೆಲುವಿನ ವರ್ಣನೆ. ಹಿನ್ನೀರಿನಲ್ಲಿ ನಿಂತು ಒಂದು ಕ್ಷಣ ಅಣೆಕಟ್ಟೆಯತ್ತ ಕಣ್ಣು ಹಾಯಿಸಿದರೆ, ಥೇಟ್‌ ಕೋಟೆಯಂತೆ ಭಾಸವಾಗುತ್ತದೆ. ಅದು ಮಾನವ ನಿರ್ಮಿತವಾದ ಕೋಟೆಯಲ್ಲ. ಪ್ರಕೃತಿ ನಿರ್ಮಿತ ಕೋಟೆ.

ಬೆಟ್ಟಗುಡ್ಡಗಳೇ ಜಲಾಶಯದಲ್ಲಿ ನೀರನ್ನು ತಡೆದು ನಿಲ್ಲಿಸಿವೆಯೇನೋ ಎನ್ನುವಷ್ಟರ ಮಟ್ಟಿಗೆ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಈ ಕಾರಣಕ್ಕಾಗಿಯೇ ಜಲಾಶಯ ನಿರ್ಮಾಣಕ್ಕೆ ಈ ಸ್ಥಳ ಆಯ್ಕೆ ಮಾಡಿರಬಹುದು ಎಂದು ಯಾರಿಗಾದರೂ ಒಂದು ಕ್ಷಣ ಅನಿಸುತ್ತದೆ.

ADVERTISEMENT

ಬೆಟ್ಟಗುಡ್ಡಗಳ ಮಧ್ಯದಿಂದ ಕಾಲುವೆಗಳಲ್ಲಿ ನೀರು ಹರಿದು ಹೋಗುತ್ತಿರುವುದನ್ನು ಎತ್ತರದ ಸ್ಥಳದಿಂದ ನೋಡುತ್ತಿದ್ದರೆ ಹರಿವ ನೀರು ಹಾವುಗಳಂತೆ ಭಾಸವಾಗುತ್ತದೆ. ಇನ್ನು ಹಿನ್ನೀರಿನಲ್ಲಿರುವ ಗುಂಡಾ ಅರಣ್ಯದಂಚಿನ ಪ್ರದೇಶ, ‘ಲೇಕ್‌ ವ್ಯೂ’ ಯಾವ ಬೀಚ್‌ಗಿಂತಲೂ ಕಡಿಮೆಯೇನಿಲ್ಲ. ಈ ಕಾರಣಕ್ಕಾಗಿಯೇ ವರ್ಷದ 365 ದಿನ ಪ್ರವಾಸಿಗರನ್ನು ಈ ಎರಡೂ ಸ್ಥಳಗಳು ಆಕರ್ಷಿಸುತ್ತವೆ.

ಗುಂಡಾ ಅರಣ್ಯದ ಹಿನ್ನೀರಿನ ಬಳಿಯೇ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಅಲ್ಲಿಂದ ಹಾದು ಹೋಗುವವರು ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದು ಹೋಗಲು ಇಷ್ಟಪಡುತ್ತಾರೆ. ಕುಟುಂಬ ಸದಸ್ಯರೊಂದಿಗೆ ನೀರಾಟವಾಡುತ್ತಾರೆ. ಅಲ್ಲಿಯೇ ಬುತ್ತಿ ಬಿಚ್ಚಿಕೊಂಡು ಮನೆ, ಮಂದಿಯೆಲ್ಲ ಕುಳಿತುಕೊಂಡು ಊಟ ಮುಗಿಸುತ್ತಾರೆ.

ಸದಾಕಾಲ ಹಿನ್ನೀರಿನಲ್ಲಿ ಪಕ್ಷಿಗಳು ಬೀಡು ಬಿಟ್ಟಿರುವುದರಿಂದ ಹವ್ಯಾಸಿ ಛಾಯಾಗ್ರಾಹಕರ ದಂಡೇ ಇರುತ್ತದೆ. ‘ಲೇಕ್‌ ವ್ಯೂ’ಗೆ ಹೋದರೆ ಥೇಟ್‌ ತುಂಗಭದ್ರೆಯ ಒಡಲಲ್ಲಿ ನಿಂತ ಅನುಭವ. ಹಿನ್ನೀರು ಪ್ರದೇಶವಾದರೂ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದ್ದಾರೆ. ಅಲ್ಲಿನ ಮರಳು, ನೀರಿನ ಹೊಡೆತಕ್ಕೆ ವಿಶಿಷ್ಟ ರೂಪ ಪಡೆದಿರುವ ಕಲ್ಲುಗಳ ಮೇಲೆ ಕುಳಿತುಕೊಂಡು ಸಮಯ ಕಳೆಯಲು ಜನ ಇಷ್ಟಪಡುತ್ತಾರೆ. ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆಂದು ಕೆಲವರು ಬರುತ್ತಾರೆ.

ಜಲಾಶಯದ ಒಂದು ಅಂಚಿನ ಬೆಟ್ಟದ ಮೇಲೆ ‘ವೈಕುಂಠ’, ಇನ್ನೊಂದೆಡೆ ‘ಇಂದ್ರ ಭವನ’ ಇದೆ. ಈ ಭವನಗಳಲ್ಲಿ ನಿಂತು ಕಿಟಕಿಯಿಂದ ಇಣುಕಿದರೆ, ಅಲ್ಲಿ ಕಾಣುವ ದೃಶ್ಯ ಕ್ಯಾನ್ವಾಸ್‌ ಚಿತ್ತಾರ ಬಿಡಿಸಿದಂತೆ ಕಾಣುತ್ತದೆ ಜಲಾಶಯ ಮತ್ತು ಆಸುಪಾಸಿನಲ್ಲಿರುವ ಉದ್ಯಾನ, ಕ್ರಸ್ಟ್‌ಗೇಟ್‌ಗಳು.

ಬೆಳಿಗ್ಗೆ ಡ್ಯಾಮ್ ಸುತ್ತಾಡಿ ದಣಿದರೆ, ಸಂಜೆ ವೇಳೆಗೆ ಉದ್ಯಾನದಲ್ಲಿ ವಿಹರಿಸಬಹುದು. ನಿಮ್ಮ ವಿಹಾರವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಂಗೀತ ಕಾರಂಜಿ ಇದೆ. ದೋಣಿ ವಿಹಾರವೂ ಇದೆ. ಮತ್ಸ್ಯಾಲಯ, ಜಿಂಕೆ ವನಗಳನ್ನು ಸುತ್ತಾಡುತ್ತಾ ನೋಡಬಹುದು.

ಜಲಾಶಯ ತುಂಬಿರಲಿ ಅಥವಾ ಮಳೆ ಕೊರತೆಯಿಂದ ನೀರು ಕಡಿಮೆ ಇರಲಿ, ಪ್ರವಾಸಿಗರ ಸಂಖ್ಯೆ ಎಂದೂ ಕುಗ್ಗುವುದಿಲ್ಲ. ಆದರೆ, ಸೆಪ್ಟೆಂಬರ್ – ಫೆಬ್ರವರಿ ನಡುವೆ ಪ್ರವಾಸಿಗರು ಹೆಚ್ಚು. ಬಿರು ಬಿಸಿಲಿನಲ್ಲೂ ಜಲಾಶಯ ನೋಡುವವರು, ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಭೇಟಿ ನೀಡಿದರೆ ಸೂಕ್ತ. ಉದ್ಯಾನದಲ್ಲಿ ಸುತ್ತಾಡಲು ಸೂಕ್ತ ಸಮಯ.

ಹೋಗುವುದು ಹೇಗೆ: ರಾಜ್ಯದ ಎಲ್ಲ ಭಾಗಗಳಿಂದಲೂ ಹೊಸಪೇಟೆಗೆ ಬಸ್ಸಿನ ಸೌಕರ್ಯವಿದೆ. ಸ್ವಂತ ವಾಹನದಲ್ಲಿ ಬರುವವರಿಗೆ ಹೊಸಪೇಟೆ ಜತೆಗೆ, ಹಂಪಿ, ಆನೆಗೊಂದಿಯಂತಹ ಸುತ್ತಲಿನ ತಾಣಗಳನ್ನು ನೋಡಬಹುದು. ಹೊಸಪೇಟೆಯಲ್ಲಿ ಎಲ್ಲ ವರ್ಗದವರಿಗೂ ಅನುಕೂಲವಾಗುವ ಹೋಟೆಲ್‌ಗಳಿವೆ. ಅನ್‌ಲೈನ್‌ನಲ್ಲಿ ಬುಕ್‌ ಮಾಡುವ ವ್ಯವಸ್ಥೆಯೂ ಇದೆ.

ಟಿಬಿ ಡ್ಯಾಂ ಅಡಿಗಲ್ಲಿಗೆ 75 ವರ್ಷ!
ಟಿ.ಬಿ.ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಫೆ.28, 1945ರಂದು. ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿದಿದ್ದು ಜುಲೈ1, 1953ರಂದು. ಈಗ ಜಲಾಶಯಕ್ಕೆ ಅಡಿಗಲ್ಲು ಹಾಕಿ 74 ವರ್ಷಗಳು ತುಂಬಿ, 75ರ ವರ್ಷಾಚರಣೆಯಲ್ಲಿದೆ.

ಈ ಜಲಾಶಯ ನಿರ್ಮಾಣಕ್ಕೆ ಮುನ್ನ ಈ ಜಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು. ಅಣೆಕಟ್ಟು ಕಟ್ಟಿದ ಮೇಲೆ ಬರಡು ಬಯಲು ಹಸಿರಾಯಿತು. ಅದಕ್ಕೆ ಈ ಭಾಗದ ಜನ ಹೇಳೋದು ‘ತುಂಗಭದ್ರೆಗೊಂದು ಒಡ್ಡು ಕಟ್ಟಿ ಬಯಲು ಸೀಮೆಯ ಒಣ ಭೂಮಿ ಹಸಿರಾಯಿತು ನೋಡಿ....’ ಎಂದು.

‘ಆಗ ಭೂಮಿ ಬರಡಾಗಿತ್ತು. ಈಗ ಬರಡು ಭೂಮಿ ಭತ್ತದ ಕಣಜವಾಗಿದೆ’– ರೈತ ಮುಖಂಡ ವೆಂಕಟಾಚಲ ನಾಯ್ಡು ನೆನಪಿಸಿಕೊಳ್ಳುತ್ತಾರೆ. ‘ಈ ಜಲಾಶಯದಿಂದ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ 5 ಲಕ್ಷ ಹೆಕ್ಟೇರ್‌ಗೆ ನೀರುಣಿಸಲಾಗುತ್ತಿದೆ. ತಕರಾರಿಲ್ಲದೇ ನೀರು ಹಂಚಿಕೆಯಾಗುತ್ತಿದೆ’ – ಹೆಮ್ಮೆಯಿಂದ ಹೇಳುತ್ತಾರೆ ಮಂಡಳಿಯ ಅಧ್ಯಕ್ಷ ಡಿ. ರಂಗಾರೆಡ್ಡಿ.

ಜಲಾಶಯದ ಮುಂಭಾಗದಲ್ಲಿ ಸುಂದರವಾದ ಉದ್ಯಾನವಿದೆ. ಮೀನುಗಾರಿಕೆಗೆ ಟೆಂಡರ್‌ನಿಂದ ಪ್ರತಿ ವರ್ಷ ಸುಮಾರು ₹ 1.50 ಕೋಟಿ ಆದಾಯ ಬರುತ್ತದೆ. ಈ ಜಲಾಶಯದಲ್ಲಿ 127 ಮೆಗಾ ವಾಟ್‌ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಘಟಕವಿದೆ. ಜಲಾಶಯ ಪ್ರವಾಸಿ ತಾಣವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.