ADVERTISEMENT

ಅಮೆರಿಕಕ್ಕೂ ಹಾರಿದ ರಾಂಬೋ ನಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ನಟ ಶರಣ್ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ `ರಾಂಬೋ~ ಅಮೆರಿಕದಲ್ಲಿಯೂ ತೆರೆಕಾಣುವ ಭಾಗ್ಯ ಪಡೆದುಕೊಂಡಿದೆ. ಶರಣ್ ಮತ್ತು ಅಟ್ಲಾಂಟಾ ನಾಗೇಂದ್ರ ಅವರ ಜಂಟಿ ನಿರ್ಮಾಣದ ಚಿತ್ರವಿದು. ಶರಣ್ ಅಭಿನಯದ ನೂರನೇ ಚಿತ್ರ ಕೂಡ.

ಅಮೆರಿಕದಲ್ಲಿ ವಾಸವಾಗಿರುವ ನಿರ್ಮಾಪಕ ಅಟ್ಲಾಂಟಾ ನಾಗೇಂದ್ರ `ರಾಂಬೋ~ವನ್ನು ಅಲ್ಲಿಯೂ ತೆರೆಗಾಣಿಸಿದ್ದಾರೆ. ಸ್ಯಾನ್‌ಹೋಸೆಯ ಸೆರ‌್ರಾ ಚಿತ್ರಮಂದಿರ, ಮಿಲ್ಪಿಟಾಸ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ವಾರಾಂತ್ಯ ಚಿತ್ರ ಪ್ರದರ್ಶನಗೊಂಡಿದೆ.

ಸಾಕ್ರಮೆಂಟೋದಲ್ಲಿ ಅಕ್ಟೋಬರ್ ಏಳರಂದು ಚಿತ್ರಪ್ರದರ್ಶನಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಸೀಟಲ್, ಪೋರ್ಟ್‌ಲೆಂಡ್, ಆಸ್ಟಿನ್, ಹ್ಯೂಸ್ಟನ್, ಡಲ್ಲಾಸ್, ಅಟ್ಲಾಂಟಾ, ನ್ಯೂಜೆರ್ಸಿ, ಬೋಸ್ಟನ್, ನ್ಯೂಯಾರ್ಕ್, ಫ್ಲಾರಿಡಾ, ತಾಂಪಾ, ಅರಿಜೋನಾ ಮತ್ತು ಶಿಕಾಗೋ ನಗರಗಳಲ್ಲಿಯೂ ಚಿತ್ರ ಬಿಡುಗಡೆಯಾಗಲಿದೆ.

ನಾಲ್ಕನೇ ವಾರ ಪ್ರದರ್ಶನಗೊಳ್ಳುತ್ತಿರುವ ಶರಣ್, ತಬಲಾನಾಣಿ, ಮಾಧುರಿ, ಉಮಾಶ್ರೀ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬ ಖುಷಿ ನಿರ್ಮಾಪಕದ್ವಯರದ್ದು.

ಅಮೆರಿಕದಲ್ಲಿರುವ ಕನ್ನಡಿಗರು ಕನ್ನಡ ಚಿತ್ರಗಳನ್ನು ಅಲ್ಲಿನ ಚಿತ್ರಮಂದಿರದಲ್ಲಿ ನೋಡಲು ಉತ್ಸುಕರಾಗಿದ್ದಾರೆ. ಆದರೆ ಅವರಿಗೆ ಚಿತ್ರಗಳೇ ತಲುಪುತ್ತಿಲ್ಲ. ಈ ಕೊರಗನ್ನು `ರಾಂಬೋ~ ತುಂಬಿಕೊಡಲಿದೆ ಎಂಬ ವಿಶ್ವಾಸ ನಾಗೇಂದ್ರ ಅವರದು.

`ರಾಂಬೋ~ದಂತಹ ಯಶಸ್ವಿ ಹಾಗೂ ಹಾಸ್ಯಮಯ ಚಿತ್ರವನ್ನು ಅಲ್ಲಿನ ಜನ ಖಂಡಿತ ಇಷ್ಟಪಟ್ಟು ನೋಡುತ್ತಾರೆ ಎಂಬ ವಿಶ್ವಾಸ ಅವರಿಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.