ADVERTISEMENT

ಅರ್ಧಶತಕದ ಗಡಿಯಲ್ಲಿ ಸ್ನೇಹಿತರ ನಡಿಗೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 19:30 IST
Last Updated 15 ನವೆಂಬರ್ 2012, 19:30 IST
ಅರ್ಧಶತಕದ ಗಡಿಯಲ್ಲಿ ಸ್ನೇಹಿತರ ನಡಿಗೆ
ಅರ್ಧಶತಕದ ಗಡಿಯಲ್ಲಿ ಸ್ನೇಹಿತರ ನಡಿಗೆ   

ಎರಡು ಯಶಸ್ಸುಗಳನ್ನು ಕಂಡಿದ್ದ ನಿರ್ಮಾಪಕರ ಗೆಲುವಿನ ಓಟಕ್ಕೆ ಮತ್ತೊಂದು ಕೊಂಡಿ. ಅವರಿಗೆ ಹ್ಯಾಟ್ರಿಕ್ ಸಾಧಿಸಿದ ಸಂಭ್ರಮವಾದರೆ, ವರ್ಷಗಳಿಂದ ಗೆಲುವಿನ ಹುಡುಕಾಟದಲ್ಲಿದ್ದ ನಾಲ್ವರು ನಟರ ಪಾಲಿಗೆ ದೀಪಾವಳಿಗೆ ಮೂಡಿಸಿದ ಹೊಸಬೆಳಕು.

ಹಲವು ಚಿತ್ರಗಳ ಪೈಪೋಟಿಯ ನಡುವೆ ಬಿಡುಗಡೆಯಾದ `ಸ್ನೇಹಿತರು~ ಗೆಲುವಿನ ಸವಿ ಕಂಡಿದೆ. ಅರ್ಧಶತಕದತ್ತ ದಾಪುಗಾಲು ಹಾಕಿದೆ. ಹಾಸ್ಯ ರಸಾಯನ ಉಣಬಡಿಸಿದರೆ ಪ್ರೇಕ್ಷಕ ಮೆಚ್ಚುತ್ತಾನೆ ಎಂಬ ಭರವಸೆಯಲ್ಲಿ ಚಿತ್ರ ನೀಡಿದ ನಿರ್ದೇಶಕ ರಾಮ್‌ನಾರಾಯಣ್ ಮತ್ತು ನಿರ್ಮಾಪಕ ಸೌಂದರ್ಯ ಜಗದೀಶ್‌ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಹಬ್ಬಕ್ಕೆ ದೊಡ್ಡ ಉಡುಗೊರೆ ದೊರೆತಂತಾಗಿದೆ.

ನಾಯಕನಟರಾದ ವಿಜಯ್ ರಾಘವೇಂದ್ರ, ತರುಣ್ ಚಂದ್ರ, ಸೃಜನ್ ಲೋಕೇಶ್ ಮತ್ತು ರವಿಶಂಕರ್ ಅವರಲ್ಲಿ `ಸ್ನೇಹಿತರು~ ಉತ್ಸಾಹ ಮೂಡಿಸಿದೆ. ಚಿತ್ರದ ಹಾಡೊಂದು ದೊಡ್ಡ ಹಿಟ್ ಆಗುತ್ತದೆ ಎಂದು ತರುಣ್ ಚಂದ್ರ ಮತ್ತೊಬ್ಬ ನಟ ವಿಜಯ್ ರಾಘವೇಂದ್ರ ಬಳಿ ಬಾಜಿ ಕಟ್ಟಿದ್ದರಂತೆ. ಸೋತವರು ಗೋವಾಕ್ಕೆ ಕರೆದುಕೊಂಡು ಹೋಗಬೇಕೆಂಬುದು ಅದರ ನಿಯಮ. ಅದರಂತೆ ತರುಣ್‌ರನ್ನು ಗೋವಾಕ್ಕೆ ಕರೆದೊಯ್ಯುವ ಭರವಸೆಯನ್ನು ಸೋತ ವಿಜಯ್ ರಾಘವೇಂದ್ರ ನೀಡಿದರು.

`ಜನರಿಗೆ ಪರಿಪೂರ್ಣ ಮನರಂಜನೆ ನೀಡುವ ಸಿನಿಮಾಗಳನ್ನು ನಿರ್ಮಿಸುವುದು ನನ್ನ ಉದ್ದೇಶ. ವರ್ಷಕ್ಕೆ ಒಂದು ಸಿನಿಮಾ ಎಂಬ ನಿಯಮ ಹಾಕಿಕೊಂಡಿದ್ದೇನೆ~ ಎಂದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರಲ್ಲಿ ರಾಜ್ಯ ಬಂದ್ ಮತ್ತು ಕಾವೇರಿ ವಿವಾದದ ಸಂಕಷ್ಟಗಳ ನಡುವೆಯೂ ಸಿನಿಮಾ ತಮ್ಮನ್ನು ಸುರಕ್ಷಿತ ಹಂತಕ್ಕೆ ತಲುಪಿಸಿದೆ ಎಂಬ ಸಂತಸವಿತ್ತು. ಮಗ ಸ್ನೇಹಿತ್ ಕೂಡ ಜನ ಮೆಚ್ಚುವ ರೀತಿಯಲ್ಲಿ ನಟಿಸಿರುವುದು ಅವರ ಖುಷಿ ಇಮ್ಮಡಿಯಾಗಲು ಕಾರಣ.

ಗೆಲ್ಲುವ ಸಿನಿಮಾ ನೀಡುತ್ತೇನೆ ಎಂದು ನಿರ್ಮಾಪಕರಿಗೆ ಭರವಸೆ ನೀಡಿದ್ದ ನಿರ್ದೇಶಕ ರಾಮ್‌ನಾರಾಯಣ್‌ಗೆ ತಮ್ಮ ಮೊದಲ ನಿರ್ದೇಶನದ ಚಿತ್ರದ ಯಶಸ್ಸು ನೆಮ್ಮದಿ ತಂದಿದೆ. ಸಿನಿಮಾ ಬಗ್ಗೆ ನಿರ್ಮಾಪಕರು ತುಸು ಆತಂಕ ವ್ಯಕ್ತಪಡಿಸಿದ್ದರಂತೆ. ಅದೀಗ ಬಗೆಹರಿದಿದೆ ಎಂದರು.

ಇನ್ನು ಸ್ನೇಹಿತರಾಗಿ ಕಾಣಿಸಿಕೊಂಡ ನಾಲ್ವರು ನಟರಿಗೂ ಚಿತ್ರಕಥೆಯ ಹಂತದಲ್ಲಿದ್ದಾಗಲೇ ಚಿತ್ರವು ಯಶ ಕಾಣಲಿದೆ ಎಂಬ ವಿಶ್ವಾಸ ಮೂಡಿಸಿತ್ತಂತೆ. ಬಾಲನಟ ಸ್ನೇಹಿತ್‌ಗೆ ತಮ್ಮ ನೆಚ್ಚಿನ ನಟರಲ್ಲಿ ಒಬ್ಬರಾದ ದರ್ಶನ್ ಜೊತೆ ನಟಿಸಿರುವುದು ಖುಷಿ ತಂದಿದೆ. ಗೆಲುವಿನ ಸಂತೋಷ ಕೂಟದಲ್ಲಿ ನಾಯಕಿ ಪ್ರಣೀತಾ ಗೈರುಹಾಜರಿ ಎದ್ದುಕಾಣುತ್ತಿತ್ತು.

ಸಿನಿಮಾ ಗಳಿಕೆಯಲ್ಲಿ ಮಾತ್ರವಲ್ಲ, ನಗೆ ಸಿಂಚನದ ಮೂಲಕ ಜನರ ಹೃದಯವನ್ನೂ ಮುಟ್ಟಿದೆ ಎಂಬ ಸಂತಸ ಚಿತ್ರತಂಡದ್ದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.