ಜನಸಾಮಾನ್ಯರ ಕೈಗೆಟುಕುವ ದರದಲ್ಲಿ, ಅಪ್ಪಟ ಮನೆ ಅಡುಗೆಯ ಸವಿಯನ್ನು ಉಣಬಡಿಸುತ್ತಿರುವ `ಅಲ್‌ಬೇಕ್' ರೆಸ್ಟೋರೆಂಟ್ ಹಲವು ವಿಶೇಷಗಳನ್ನು ಹೊಂದಿದೆ.
ಎಂ.ಕೆ.ಕೆ. ರಸ್ತೆ, ಹರಿಶ್ಚಂದ್ರ ಘಾಟ್ ಸಮೀಪವಿರುವ ಅಲ್ ಬೇಕ್ ರೆಸ್ಟೋರೆಂಟ್‌ನಲ್ಲಿ ಚಿಕನ್ ಕಬಾಬ್, ಗ್ರಿಲ್ ಚಿಕನ್, ಶವರ್ಮಾ ರೋಲ್, ಚಿಕನ್ ರೋಲ್, ಚಿಕನ್ ಚಾಪ್ಸ್, ಪೆಪ್ಪರ್ ಚಿಕನ್, ಚಿಕನ್ ಶಾಶ್ಲಿಕ್, ಬ್ರಾಸ್ಟ್ ಚಿಕನ್, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಪೆಪ್ಪರ್ ರೋಸ್ಟ್, ತಂದೂರಿ ಕಬಾಬ್, ತಂದೂರಿ ಚಿಕನ್, ಚಿಕನ್ ಬಂಜಾರ... ಹೀಗೆ 150ಕ್ಕೂ ಹೆಚ್ಚು ವೆರೈಟಿಗಳು ಲಭ್ಯ.
`ಕುಟ್ಟಿ ಪುಡಿ ಮಾಡಿದ' ಮಸಾಲೆ
ಬಗೆಬಗೆಯ ಅಡುಗೆ ತಯಾರಿಕೆಗೆ ಬೇಕಾದ ದನಿಯಾ, ಮೆಣಸಿನ ಪುಡಿ, ಅರಿಶಿಣ, ಗರಂ ಮಸಾಲ ಇತ್ಯಾದಿ ಪದಾರ್ಥಗಳನ್ನು ಹಳ್ಳಿ ಮಾದರಿಯಲ್ಲಿ ಬೀಸಿಕೊಳ್ಳುವುದರಿಂದ ವೆರೈಟಿಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಸೌದೆ ಒಲೆಯಲ್ಲಿ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಯಾರಿಸುವುದು ರುಚಿಯ ತಾಜಾತನದ ಮತ್ತೊಂದು ಗುಟ್ಟು.
ಒಂದಿಷ್ಟು ಹೊಸತು
`ಮುರ್ಗ್ ಮಸಾಲಾ, ಚಿಕನ್ ಕರಿ, ಬ್ರಾಸ್ಟ್ ಚಿಕನ್, ಶವರ್ಮಾ ರೋಲ್, ಶೋಲೆ ಕಬಾಬ್ ಹೊಸದಾಗಿ ಪರಿಚಯಿಸಿರುವ ವೆರೈಟಿಗಳು. ಇವುಗಳಿಗೆ ಜನರಿಂದಲೂ ಹೆಚ್ಚು ಬೇಡಿಕೆ ಇದೆಯಂತೆ. ಒಂದಿಲ್ಲೊಂದು ಹೊಸ ಅಡುಗೆ ರುಚಿ ಪರಿಚಯಿಸುವುದು ಇಲ್ಲಿ ಮಾಮೂಲು. ಚಿಕನ್ ಕಬಾಬ್, ಚಿಕನ್ ರೋಲ್, ಚಿಕನ್ ಲಾಲಿಪಪ್ ಎಲ್ಲರಿಗೂ ಅಚ್ಚುಮೆಚ್ಚು. ಮನೆಯಲ್ಲಿ ಚಿಕನ್ ತಂದು ಅಡುಗೆ ಮಾಡಿ ಊಟ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಒಂದು ಪ್ಲೇಟ್ ಚಿಕನ್ ಕಬಾಬ್ ಒಯ್ದರೆ ಮೂವರು ತಿನ್ನಬಹುದು' ಎನ್ನುತ್ತಾರೆ ಮಂಜುನಾಥ್.
ಚಿಕನ್ ರೋಲ್, ಚಿಕನ್ ಲಾಲಿಪಪ್‌ಗೆ ಮಕ್ಕಳಿಂದ ಭಾರೀ ಬೇಡಿಕೆ ಇದೆಯಂತೆ. ಚಿಕನ್ ಖೈಮಾವನ್ನು ರೊಟ್ಟಿಯಲ್ಲಿ ಸುತ್ತಿ ಕೊಡುವುದರಿಂದ ಕೈಯಲ್ಲಿ ಹಿಡಿದು ರುಚಿಯನ್ನು ಅನುಭವಿಸುತ್ತಾ ತಿನ್ನಲು ಬಲು ಸೊಗಸು. ಲಾಲಿಪಪ್ ಚಾಕೊಲೇಟಿನ ತದ್ರೂಪಿಯಂತೆ ಕಾಣುವ ಚಿಕನ್ ಲಾಲಿಪಪ್ ಸವಿ ಬಹಳ ಹೊತ್ತಿನವರೆಗೂ ನಾಲಿಗೆಯಲ್ಲಿರುತ್ತದೆ. ಮೂಳೆಯನ್ನೇ ಕಡ್ಡಿ ಮಾಡಿ ಮಾಂಸವನ್ನು ಒಂದೆಡೆ ತಂದು ಗರಂ ಮಸಾಲಾ ಹಾಕಿ ಬೇಯಿಸಲಾಗುವ ಚಿಕನ್ ಲಾಲಿಪಪ್ ಜೊತೆ ಮೂಳೆಯ ಸೂಪ್ ಕುಡಿಸುವುದು ಮಕ್ಕಳಿಗೆ ಶಕ್ತಿವರ್ಧಕವಂತೆ. ರುಮಾಲಿ ರೋಟಿ ಇಲ್ಲಿನ ಮತ್ತೊಂದು ವಿಶೇಷ. ಅತ್ಯಂತ ಪಾರದರ್ಶಕವಾದ ರುಮಾಲಿ ರೋಟಿ ಹೆಚ್ಚಿನ ಕಡೆ ಸಿಗುವುದಿಲ್ಲ. ಸಿಕ್ಕರೂ ಬೆಲೆ ದುಬಾರಿ.
ಕೈಗೆಟುಕುವ ದರ
ಎಂತಹವರಿಗೂ ಕೈಗೆಟುಕುವ ದರದಲ್ಲಿ ಈ ಎಲ್ಲಾ ವೆರೈಟಿಗಳು ದೊರೆಯುವುದರಿಂದ ದಿನದ 24 ಗಂಟೆಯೂ ರೆಸ್ಟೋರೆಂಟ್ ಜನ ಜಂಗುಳಿಯಿಂದ ಕೂಡಿರುತ್ತದೆ.
ಒಂದು ಪ್ಲೇಟ್ ವೆಜ್ ಫ್ರೈಡ್ ರೈಸ್ ಕೊಳ್ಳಲು ಬೇರೆಡೆ ರೂ.100 ದರವಿದ್ದರೆ ಇಲ್ಲಿ ಅದಕ್ಕಿಂತ ಕಡಿಮೆ ಬೆಲೆ. ಒಂದು ಪ್ಲೇಟ್ ಚಿಕನ್ ಕಬಾಬ್‌ಗೆ ರೂ.65, ಒಂದು ರುಮಾಲಿ ರೋಟಿ ಬೆಲೆ ರೂ.7.
ಪಕ್ಕದಲ್ಲಿಯೇ ಫಾರಂ
ರೆಸ್ಟೋರೆಂಟ್ ಪಕ್ಕದಲ್ಲಿಯೇ ಕೋಳಿ ಮತ್ತು ಕುರಿ ಫಾರಂ ಇದೆ. ಕೋಳಿಗಳನ್ನು ಪೌಲ್ಟ್ರಿಯಿಂದಲೇ ನೇರವಾಗಿ ಖರೀದಿಸಿ ತಂದು ಹಲಾಲ್ ಮಾಡಿ, ಸ್ವಚ್ಚಗೊಳಿಸಿದ ಮಾಂಸವನ್ನು ಅಡುಗೆಗೆ ಬಳಸಲಾಗುತ್ತದೆ. ರೆಸ್ಟೋರೆಂಟ್ ಸ್ವಚ್ಛತೆಯೂ ಗ್ರಾಹಕರ ವೆುಚ್ಚುಗೆ ಗಳಿಸಿದೆ.
ಮೂಲತಃ ಬೆಂಗಳೂರಿನವರೇ ಆದ ಡಿ. ಮಂಜುನಾಥ್, ಮೊಹಮ್ಮದ್ ಯೂಸುಫ್ ಹಾಗೂ ನಯೀಮ್ ಎಂಬ ಮೂವರು ಸಹಪಾಠಿ ಸ್ನೇಹಿತರು ಕಳೆದ 13 ವರ್ಷಗಳಿಂದಲೂ ತಮ್ಮ ಈ ಉದ್ಯಮದಲ್ಲಿ ಸೋತಿಲ್ಲ. ಗ್ರಾಹಕರು ಇವರನ್ನು ಕೋಮು ಸೌಹಾರ್ದತೆಗೆ ಮಾದರಿ ಎಂದು ಗುರುತಿಸಿರುವುದು ಸಜಹವೇ.
`ನಿಮ್ಮ ಸಾಮರಸ್ಯದ ಗುಟ್ಟೇನು ಎಂದು ಕೇಳಿದರೆ, ನಮ್ಮಲ್ಲಿ ಯಾರಿಗೂ ಹಣದ ವ್ಯಾಮೋಹವಿಲ್ಲ. ಹಾಗಾಗಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳೂ ಬಂದಿಲ್ಲ. ಒಗ್ಗಟ್ಟೂ ಮುರಿದಿಲ್ಲ' ಎಂದು ನಗುತ್ತಾರೆ, ಈ ತ್ರಿಮೂರ್ತಿಗಳು.
`ರಾಜಾಜಿನಗರದ 6ನೇ ಬ್ಲಾಕ್, ಆರ್.ಟಿ.ನಗರ, ಮಲ್ಲೇಶ್ವರದಲ್ಲೂ ರೆಸ್ಟೋರೆಂಟ್ ಆರಂಭಿಸಿದ್ದೇವೆ. ಜನರಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದೇವೆ' ಎಂದರು ಮಂಜುನಾಥ್.
ಸಂಪರ್ಕಕ್ಕೆ: ಅಲ್ ಬೇಕ್ ರೆಸ್ಟೋರೆಂಟ್, ಎಂ.ಕೆ.ಕೆ. ರಸ್ತೆ, ಹರಿಶ್ಚಂದ್ರ ಘಾಟ್ ಸಮೀಪ.
ದೂರವಾಣಿ: 080-23461077, 4166 6626.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.