ADVERTISEMENT

ಆಂಗ್ಲೊ ಇಂಡಿಯನ್ನರ ಪುನರ್ಮಿಲನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2010, 18:30 IST
Last Updated 27 ಅಕ್ಟೋಬರ್ 2010, 18:30 IST


ನಮ್ಮ ನೆಲದಲ್ಲಿ ಹಿಂದೆಂದೂ ಇಲ್ಲದಷ್ಟು ಅದ್ಧೂರಿಯಾಗಿ ಆಂಗ್ಲೊ ಇಂಡಿಯನ್ನರ ಸಮಾವೇಶ ‘ಜಾಂಬೋರಿ 2010’ ನಿನ್ನೆ ಆರಂಭವಾಗಿದ್ದು ಶನಿವಾರ ಕೊನೆಗೊಳ್ಳಲಿದೆ.

‘ಇದು ಒಂಥರ ನಮ್ಮ ಬದುಕನ್ನು ಮತ್ತೆ ನೆನಪಿಸಿಕೊಳ್ಳುವ ಯತ್ನ’ ಎನ್ನುತ್ತಾರೆ ಕ್ರೆಸ್‌ವೆಲ್ ವೇಯ್ಟೆಮನ್. ಆಂಗ್ಲೊ ಇಂಡಿಯನ್ ಸಮುದಾಯದ ಕಲ್ಯಾಣಾರ್ಥ ಸಂಸ್ಥೆ ‘ಆಂಗ್ಲೋಸ್ ಯುನೈಟೆಡ್’ನ ಸ್ಥಾಪಕ ಸದಸ್ಯರು ಅವರು.

ಇಲ್ಲಿದೆ ನಮ್ಮನೆ
ಇಷ್ಟು ವರ್ಷಗಳೂ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿರುತ್ತಿದ್ದ ಆಂಗ್ಲೋ ಇಂಡಿಯನ್ ಸಮುದಾಯದವರು ಆಗಾಗ ಸೇರಬೇಕೆಂದರೆ ಅದು ಭಾರೀ ಖರ್ಚಿನ ಬಾಬತ್ತೇ ಆಗುತ್ತಿತ್ತು. ಮೂರು ವರ್ಷಗಳಿಗೊಮ್ಮೆ ಟೊರಾಂಟೊದಲ್ಲಿ ನಡೆಯುತ್ತಿದ್ದ ‘ಸೆಪ್ಟೆಂಬರ್ ಪುನರ್ಮಿಲನ’ಗಳಲ್ಲಿ ಕುಟುಂಬವೊಂದು ಪಾಲ್ಗೊಳ್ಳ ಬಯಸಿದರೆ ಏನಿಲ್ಲವೆಂದರೂ ಎರಡು ಲಕ್ಷ ರೂಪಾಯಿ ಖರ್ಚಾಗುತ್ತಿತ್ತು.
ಹೀಗಾಗಿ, ಭಾರತವೇ ಆಂಗ್ಲೋ ಇಂಡಿಯನ್ನರ ನಿಜವಾದ ಮನೆಯಲ್ಲವೆ ಎಂದುಕೊಂಡು ಇಲ್ಲೇ ಈ ಕಾರ್ಯಕ್ರಮ ನಡೆಸಲು ಯೋಚಿಸಿದೆವು ಎನ್ನುತ್ತಾರೆ ಕ್ರೆಸ್‌ವೆಲ್.

‘ಕರ್ನಾಟಕದಾದ್ಯಂತ ಸುಮಾರು ಮೂರು ಸಾವಿರ ಆಂಗ್ಲೋ ಇಂಡಿಯನ್ನರಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲೇ ಸಾವಿರದೈನೂರು ಜನರಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಹಾಂಗ್‌ಕಾಂಗ್ ಹಾಗೂ ಮಧ್ಯಪ್ರಾಚ್ಯ ದೇಶಗಳಿಂದಲೂ ‘ಜಾಂಬೋರಿ’ಗೆ ಜನ ಆಗಮಿಸಲಿದ್ದಾರೆ. ಜತೆಗೆ ಆಂಗ್ಲೋ ಇಂಡಿಯನ್ನರು ಮಾತ್ರ ಕರೆತರಬಹುದಾದ ಅತಿಥಿಗಳ ಲೆಕ್ಕವನ್ನೂ ಸೇರಿಸಿದರೆ? ಕನಿಷ್ಠ ಹತ್ತು ಸಾವಿರ ಜನರ ಸಂಭ್ರಮದ ಸಂಚಲನ’ ಇದು’ ಎಂದು ವಿವರಿಸುತ್ತಾರೆ ಕ್ರೆಸ್‌ವೆಲ್.

ಏನಿದೆ
ಗುರುವಾರ ಕುಟುಂಬ ಮತ್ತು ಕಾರ್ನಿವಲ್, ಸೆವೆನ್- ಅ- ಸೈಡ್ ಫುಟ್‌ಬಾಲ್ ಪ್ರದರ್ಶನ. ಜತೆಗೆ ಮೊಟ್ಟ ಮೊದಲ ‘ಮೊದಲ ಆಂಗ್ಲೊ ಇಂಡಿಯನ್ ಐಡಲ್’ನ ಶೋಧ. ಆಂಗ್ಲೊ ಇಂಡಿಯನ್ ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮುಖ್ಯ ಆಕರ್ಷಣೆ. 

 ಆಂಗ್ಲೊ ಇಂಡಿಯನ್ ಆಹಾರ ಉತ್ಸವ ಎಲ್ಲ ದಿನಗಳೂ ಜರುಗಲಿದ್ದು ಯುರೋಪಿನ ಮತ್ತು ಸ್ಥಳೀಯ ರುಚಿಗಳು ಹದವಾಗಿ ಬೆರೆತ ಸವಿ ಲಭ್ಯ. ಕೊಬ್ಬರಿ ಅನ್ನ, ಬಾಲ್ ಕರ್ರಿ ಅಲ್ಲದೆ ವಿಂಡಾಲೂ, ಜಲ್‌ಫ್ರೆಜಿಗಳೆಲ್ಲ ನಾಲಿಗೆ ಚಪಲ ತಣಿಸಲಿವೆ.

ಯುವಜನತೆಗೆಂದೇ ರಾಜಕುಮಾರ ಮತ್ತು ರಾಜಕುಮಾರಿಯ ಆಯ್ಕೆ ಇದೆ. ಈ ಸ್ಪರ್ಧೆಯ ಹಾಗೂ ಐಡಲ್ ಶೋಧದ ಫೈನಲ್ ಶನಿವಾರ ನಡೆಯುತ್ತದೆ.

ನೃತ್ಯವಿಲ್ಲದೇ ಇವರ ಬದುಕಿಲ್ಲ. ಪುನರ್ಮಿಲನದ ಶುಭಗಳಿಗೆಗೂ ಡೈನ್ ಆ್ಯಂಡ್ ಡಾನ್ಸ್ ಪಾರ್ಟಿ ಇರದಿದ್ದರೆ ಅದು ಅಪೂರ್ಣ. ಸಂಗೀತ ಪ್ರೇಮಿಗಳಿಗೆ ‘ಸ್ಟೀಮ್’ ಮತ್ತು ‘ಫೋರ್‌ಸ್ಟ್ರೋಕ್ಸ್’ ಎಂಬ ವೃತ್ತಿಪರ ಬ್ಯಾಂಡ್‌ಗಳ ದರ್ಬಾರಿದೆ. ಆಸ್ಟ್ರೇಲಿಯ ಮೂಲದ ಆಂಗ್ಲೊ ಇಂಡಿಯನ್ ಗಾಯಕ ಟೆರ್ರಿ ಮಿಸ್ರಾ ವಿಶೇಷ ಕಾರ್ಯಕ್ರಮವೂ ಇದೆ.

ಸ್ಥಳ: ಅರಮನೆ ಮೈದಾನ. ಗುರುವಾರ, ಶುಕ್ರವಾರ ಬೆಳಿಗ್ಗೆ 11ರಿಂದ ರಾತ್ರಿ 10. ಶನಿವಾರ ಸಂಜೆ 4 ರಿಂದ ರಾತ್ರಿ 11.
g ಮೇಘಾ ಶೆಣೈ
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.