ADVERTISEMENT

ಆನ್‌ಲೈನ್ ವೈದ್ಯಲೋಕ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST
ಆನ್‌ಲೈನ್ ವೈದ್ಯಲೋಕ
ಆನ್‌ಲೈನ್ ವೈದ್ಯಲೋಕ   

ಆ ಪರಿಚಿತ ಜಾಗಕ್ಕೆ ಹೋಗಿ ವಾಸ್ತವ್ಯ ಹೂಡುವುದು ಈಗ ಮೊದಲಿನಷ್ಟು ಕಷ್ಟವಾಗಿ ಉಳಿದಿಲ್ಲ. ಅಂತರ್ಜಾಲದ ಪರಿಚಯವೊಂದಿದ್ದರೆ ಎಲ್ಲ ಮಾಹಿತಿಗಳೂ ಕುಳಿತಲ್ಲೇ ಬಂದು ಬೀಳುತ್ತವೆ.

ಯಾವ ಜಾಗಕ್ಕೆ ಯಾವ ಸಮಯದಲ್ಲಿ ಹೋಗಬೇಕು. ಅಲ್ಲಿ ಸಿಗುವ ಆಹಾರ, ವಾಸಿಸಲು ಮನೆ ಎಲ್ಲವನ್ನೂ ಆನ್‌ಲೈನ್‌ನಲ್ಲೇ ಬುಕ್ ಮಾಡಿ ಪ್ರಯಾಣವನ್ನು ಜಾಲಿಯಾಗಿ ಕಳೆಯಬಹುದು. ಇಂಥದ್ದೇ ಸೇವೆ ಆರೋಗ್ಯ ಕ್ಷೇತ್ರದ್ಲ್ಲಲಿ ಯಾಕಿಲ್ಲ ಎಂದುಕೊಂಡಾಗ ಸೃಷ್ಟಿಯಾಗಿದ್ದು www.peoplehealthindia.com.

2004ರಿಂದ ಆರೋಗ್ಯ ಕ್ಷೇತ್ರಗಳಲ್ಲಿ ಮಾಹಿತಿ ನೀಡುತ್ತ ಬಂದ ಪೀಪಲ್‌ಹೆಲ್ತ್ ಸಂಸ್ಥೆ ಇಂಥದ್ದೊಂದು ವೆಬ್‌ಸೈಟ್‌ನ್ನು ಹುಟ್ಟುಹಾಕಿದೆ. ಸುಮಾರು 1 ಲಕ್ಷದ 10 ಸಾವಿರ ಗ್ರಾಹಕರಿಗೆ ಇದುವರೆಗೆ ವೈದ್ಯಕೀಯ ಸಲಹೆ ನೀಡಿದ ಸಂಸ್ಥೆ ಆನ್‌ಲೈನ್ ಕನಸನ್ನು ಇತ್ತೀಚೆಗಷ್ಟೇ ನಿಜವಾಗಿಸಿಕೊಂಡಿದೆ.

ಬೆಂಗಳೂರಿನಲ್ಲಿ ದೊರೆಯುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ತುಂಬಿರುವ ಈ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸಮಸ್ಯೆ, ಗೊಂದಲಗಳಿಗೆ ಪರಿಹಾರ ದೊರೆಯುವುದಂತೂ ಸತ್ಯ.

ಯಾವ ಯಾವ ಏರಿಯಾದಲ್ಲಿ ಯಾವ ವೈದ್ಯರಿದ್ದಾರೆ, ಸಲಹೆ ನೀಡುವುದಕ್ಕೆ (ಕನ್‌ಸಲ್ಟೇಶನ್ ಫೀ) ಅವರು ಪಡೆಯುವ ಶುಲ್ಕವೆಷ್ಟು, ಇದುವರೆಗಿನ ಅವರ ಅನುಭವ, ಚಿಕಿತ್ಸೆ ಪಡೆದವರು ಅವರ ಬಗ್ಗೆ ನೀಡಿದ ಅಭಿಪ್ರಾಯ, ಅವರ ಸಾಧನೆ ಮುಂತಾದ ಮಾಹಿತಿ ಇಲ್ಲಿ ಲಭ್ಯ.

ಅದೂ ಅಲ್ಲದೆ ಯಾವ ವೈದ್ಯರ ಬಳಿ ನೀವು ಚಿಕಿತ್ಸೆ ಪಡೆಯಬೇಕು ಎಂದು ನಿರ್ಧರಿಸಿದರೆ ಆನ್‌ಲೈನ್‌ನಲ್ಲೇ ಸಮಯವನ್ನು ನಿಗದಿಮಾಡಿಕೊಳ್ಳಬಹುದು. ಯಾವ ಸಮಯಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ನೀಡುವ ವೆಬ್‌ಸೈಟ್‌ನಲ್ಲಿ `ಕನ್‌ಸಲ್ಟೇಶನ್ ಫೀ~ ಕೂಡ ಭರಿಸಬಹುದು. ಈ ಎಲ್ಲಾ ಮಾಹಿತಿಗಳ ವೋಚರ್ ನಿಮ್ಮ ಬಳಿ ಇದ್ದರಾಯಿತಷ್ಟೆ.

ಕೇವಲ ಸಣ್ಣಪುಟ್ಟ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿ ಅಷ್ಟೇ ಅಲ್ಲ, ಯಾವುದಾದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಶ್ಯಕತೆ ನಿಮಗಿದೆ ಎಂದಾದರೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವೈದ್ಯರ ಬಗ್ಗೆ ನೀವು ಮಾಹಿತಿ ಪಡೆಯಬಹುದು.

ಅಲ್ಲದೆ ವೈದ್ಯರ ಬಗ್ಗೆ ರೋಗಿಗಳು ನೀಡಿದ ಅಭಿಪ್ರಾಯಗಳು ಕೂಡ ಇದರಲ್ಲಿರುತ್ತವೆ. ವೈದ್ಯರ ಬಗ್ಗೆ ಚಿಕಿತ್ಸೆ ಪಡೆದವರ ಬಳಿ ಅಭಿಪ್ರಾಯ ತಿಳಿದುಕೊಳ್ಳಬೇಕು ಎಂದಿದ್ದರೆ ಕಂಪೆನಿಯವರು ಅದಕ್ಕೂ ವ್ಯವಸ್ಥೆ ಮಾಡಿಸಿಕೊಡುತ್ತಾರೆ ಎನ್ನುವುದು ವಿಶೇಷ.

ಒಂದೊಮ್ಮೆ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮೆ ಮಾಡಿಸಿದ್ದಲ್ಲಿ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ನೀಡಿದರಾಯಿತು. ಅದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಯನ್ನು ಕಂಪೆನಿಯೇ ಮಾಡಿಕೊಳ್ಳುತ್ತದೆ. ಆನ್‌ಲೈನ್‌ನಲ್ಲೇ ಶುಲ್ಕವನ್ನೂ ಭರಿಸಿದರೆ ರೋಗಿಗೆ ತಗಲುವ ಖರ್ಚು ಕಡಿಮೆ ಎನ್ನುವುದು ತಂಡದವರು ನೀಡುವ ವ್ಯಾಖ್ಯಾನ.

ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ಮಾತ್ರ ನಿಗದಿಪಡಿಸಿದ ಸಮಯದಲ್ಲಿ ಸಲಹೆ ನೀಡಲು ಸಾಧ್ಯವಾಗದೇ ಇರಬಹುದಷ್ಟೆ. ಎಲ್ಲೆಲ್ಲಿ ಯಾವ ಯಾವ ವೈದ್ಯರಿದ್ದಾರೆ. ಅವರ ಅನುಭವ ಎಷ್ಟು ಎಂಬ ಬಗ್ಗೆ ಮಾಹಿತಿಯನ್ನು ನೀಡುವುದು ಮಾತ್ರ ನಮ್ಮ ಕೆಲಸ. ಯಾವ ವೈದ್ಯರು ಉತ್ತಮ ಎಂಬ ಆಯ್ಕೆಯನ್ನು ಗ್ರಾಹಕರಿಗೇ ಬಿಟ್ಟಿದ್ದೇವೆ. ಅಲ್ಲದೆ ಮಾಹಿತಿ ಇದ್ದೇ ಆಸ್ಪತ್ರೆ ಪ್ರವೇಶಿಸಿದರೆ ಗೊಂದಲವಾಗದು ಎಂಬುದು ತಂಡದ ದೃಢ ನಿರ್ಧಾರ.

`ಅಗತ್ಯವಿದ್ದವರಿಗೆ ವೈದ್ಯಕೀಯ ಸಲಹೆ ನೀಡುತ್ತಿದ್ದ ನಮಗೆ ಆರೋಗ್ಯ ರಕ್ಷಣೆ ಕ್ಷೇತ್ರವನ್ನು ಇನ್ನಷ್ಟು ಗ್ರಾಹಕ ಸ್ನೇಹಿಯನ್ನಾಗಿಸಬೇಕು ಎಂದೆನಿಸಿತು. ಮೊದಲೇ ಆರೋಗ್ಯ ಹದಗೆಟ್ಟಿರುತ್ತದೆ. ಅಂಥ ಸಂದರ್ಭದಲ್ಲಿ ಎಲ್ಲಿ ಯಾವ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂಬುದೂ ಗೊಂದಲವಾಗಬಾರದು. ಆಧುನಿಕ ಬದುಕಿನಲ್ಲಿ ವಸತಿ, ಪ್ರಯಾಣ ಮುಂತಾದ ಎಲ್ಲವುಗಳ ಮಾಹಿತಿ ಸುಲಭವಾಗಿ ಸಿಗುತ್ತವೆ.
 
ಆದರೆ ಭಾರತದಲ್ಲಿ ವೈದ್ಯಕೀಯ ನೆರವಿನ ಸ್ಥಿತಿ ಇನ್ನೂ ಗಂಭೀರವಾಗೇ ಇದೆ.

               ಜಿ. ಕೃಷ್ಣಮೂರ್ತಿ


ಈ ನಿಟ್ಟಿನಲ್ಲಿ ಮಾಹಿತಿ ನೀಡುವ ವೆಬ್‌ಸೈಟ್ ಯಾಕೆ ರಚಿಸಬಾರದು ಎಂದು ಪ್ರಯತ್ನಿಸಿದೆವು. ಆರೋಗ್ಯ ಸುಧಾರಣೆಗೆ ಬೇಕಾದ ಅಡಿಗಲ್ಲನ್ನು ಹಾಕಿ ಆಯ್ಕೆ ಸ್ವಾತಂತ್ರ್ಯವನ್ನು ಗ್ರಾಹಕರಿಗೇ ಬಿಟ್ಟಿದ್ದೇವೆ. ಇದು ಅಗತ್ಯ ನೆರವು ನೀಡುವುದರಲ್ಲಿ ಸಂಶಯವಿಲ್ಲ~ ಎನ್ನುತ್ತಾರೆ ಪೀಪಲ್‌ಹೆಲ್ತ್‌ನ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿ. ಕೃಷ್ಣಮೂರ್ತಿ.

ಆರೋಗ್ಯ ಉತ್ತಮವಾಗಿರುವಾಗ ಸಾಕಷ್ಟು ಕಾಳಜಿ ವಹಿಸದ ಜನರು ತೊಂದರೆ ಬಂದಾಗ ಅಲವತ್ತುಕೊಳ್ಳುತ್ತಾರೆ. ಆರೋಗ್ಯ ತಪಾಸಣೆಗೆ ತಗಲುವ ಖರ್ಚುವೆಚ್ಚದ ಬಗ್ಗೆಯೂ ಅರಿವಿಲ್ಲದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ.
 
ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಏನು ಪ್ರಯೋಜನ, ತೆಗೆದುಕೊಳ್ಳುವ ಶುಲ್ಕದಲ್ಲಿ ಆಗುವ ವ್ಯತ್ಯಾಸಗಳು, ತನಗೆ ಚಿಕಿತ್ಸೆ ನೀಡುವ ವೈದ್ಯರ ಅನುಭವ ಎಲ್ಲವನ್ನೂ ತಿಳಿದು ಹೋಗುವ ರೋಗಿಗೆ ಚಿಕಿತ್ಸೆಯನ್ನು ಪೂರ್ಣ ಅರಿವಿನಿಂದ ಪಡೆಯುವ ಅವಕಾಶ ದೊರೆತಂತಾಗುತ್ತದೆ.

ಅಂದಹಾಗೆ ಆಯುರ್ವೇದ, ಹೋಮಿಯೋಪಥಿ ಹಾಗೂ ಪರ್ಯಾಯ ಚಿಕಿತ್ಸೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಈ ವೆಬ್‌ಸೈಟ್‌ನ್ನೊಮ್ಮೆ ಜಾಲಾಡಿ. ನಿಮ್ಮ ಸಮಸ್ಯೆಗೂ ಅಲ್ಲಿ ಪರಿಹಾರ ಕಂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT