ADVERTISEMENT

ಆಮೋದದ ಕ್ಷಣಗಳು...

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST
ಆಮೋದದ ಕ್ಷಣಗಳು...
ಆಮೋದದ ಕ್ಷಣಗಳು...   

ಹಲವು ವರ್ಷಗಳಿಂದ ಅಭಿನಯ, ರಂಗಸಜ್ಜಿಕೆ, ಬೆಳಕು ಹೀಗೆ ರಂಗಭೂಮಿಯ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಯುವಕರ ಗುಂಪು ರವೀಂದ್ರ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ `ಆಮೋದ ನಾಟಕೋತ್ಸವ~ ಹಮ್ಮಿಕೊಂಡಿತ್ತು.

`ಕಲಾಶಿಖರ~, `ರಂಗವಿಶೇಷ~, `ಸಿರಿ ಸಂಭ್ರಮ~, `ಸಂಭ್ರಮ~ ಹಾಗೂ `ಪಂಚಮುಖಿ~ ನಟರ ಸಮೂಹಗಳು ಒಟ್ಟಾರೆಯಾಗಿ ಸೇರಿ ಆಮೋದ ನಾಟಕೋತ್ಸವವನ್ನು ಏರ್ಪಡಿಸಿದ್ದವು. ಬಿ. ಜಯಶ್ರೀ ಅವರು ಉದ್ಘಾಟಿಸಿದ ನಾಟಕೋತ್ಸವದಲ್ಲಿ ಸಫ್ದರ್ ಹಶ್ಮಿ ನೆನಪಿನಲ್ಲಿ ಸಮಕಾಲೀನ ರಾಜಕೀಯ ವಿಡಂಬನೆಯ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಮೊದಲ ದಿನ ಕಲಾಶಿಖರ ತಂಡವು ಜೈನೇಂದ್ರ ಕುಮಾರ್ ಅವರ ವಸಾಹತುಶಾಹಿ ಕಾಲದ ನೀಳ್ಗತೆಯನ್ನು ಆಧರಿಸಿ ಕನ್ನಡಕ್ಕೆ ರೂಪಾಂತರವಾದ `ಗಲ್ಲು~ ನಾಟಕವನ್ನು ಪ್ರದರ್ಶಿಸಿತು. ಬಡವರ ಪರವಾಗಿ ಚಿಂತಿಸುವ, ಕ್ರಿಯಾಶೀಲ ಯುವಕ ಶಂಶೇರ್‌ನನ್ನು ಬ್ರಿಟೀಷ್ ಅಧಿಕಾರಿಗಳು ಕುತಂತ್ರದಿಂದ ಹಿಡಿದು ಗಲ್ಲಿಗೇರಿಸುವ ಕಥಾವಸ್ತುವುಳ್ಳ ಈ ನಾಟಕವು ಸಾಮಾಜಿಕ ಆಶಯವನ್ನೊಳಗೊಂಡಿತ್ತು. ಶಂಶೇರ್ ಪಾತ್ರದಲ್ಲಿ ಸಂಪತ್‌ಕುಮಾರ್ ಅಭಿನಯ ಗಮನಾರ್ಹ. ನಾಟಕದ ನಿರ್ದೇಶಕ ಮಹದೇವಸ್ವಾಮಿ. ಇಸ್ಮಾಯಿಲ್ ಗೋನಾಳ್ ಸಂಗೀತ ಸಂಯೋಜನೆ ಮಾಡಿದ್ದರು.

ಎರಡನೇ ದಿನ `ಸಿರಿ ಸಂಭ್ರಮ~ ತಂಡದವರು `ಬೆತ್ತಲೆ ಹರಕೆ~ ನಾಟಕವನ್ನು ಪ್ರಯೋಗಿಸಿದರು. ಚಂದ್ರಗುತ್ತಿಯಲ್ಲಿ ಎಲ್ಲಮ್ಮ ಹಾಗೂ ಮಾತಂಗಿಯ ಬಗೆಗೆ ಪುರಾಣ ಪ್ರಸಿದ್ಧವಾದ ಕಥೆಯಿದೆಯಲ್ಲ, ಅದನ್ನು ಹಾಗೂ ಜಾನಪದ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ. ಮಹೇಶ್ ಎಸ್. ಪಲ್ಲಕ್ಕಿ ನಿರ್ದೇಶನದ ನಾಟಕದಲ್ಲಿ ಮಹಾರಾಣಿಯಾಗಿ ವರ್ಷಾ ಹೆಗಡೆ ಅಭಿನಯ ಮನೋಜ್ಞವಾಗಿತ್ತು.

ಮೂರನೇ ದಿನ `ಪಂಚಮುಖಿ~ ನಟರ ಸಮೂಹ ಬಿ.ಆರ್. ಲಕ್ಷ್ಮಣ್ ರಾವ್ ಅವರ `ನಂಗ್ಯಾಕೋ ಡೌಟು~ ನಾಟಕವನ್ನು ಪ್ರದರ್ಶಿಸಿತು. ಇದೊಂದು ಹಾಸ್ಯ ಪ್ರಧಾನ ನಾಟಕ. ಮಧುಸೂದನ್ ಕನೇಕಲ್ ನಿರ್ದೇಶನದ ನಾಟಕವಿದು. ಮಧುಸೂದನ್, ಮಹೇಶ್, ನಯನ ಶೆಟ್ಟಿ, ಅರ್ಚನಾ, ರಕ್ಷಿತ್, ಪ್ರಭಾಕರ್, ಸಂಧ್ಯಾ ಲವಲವಿಕೆಯ ಅಭಿನಯ ನಾಟಕದ ಗಮನಾರ್ಹ ಅಂಶ. ಅರ್ಜುನ್ ತೇಜಸ್ವಿಯವರ ಸಂಗೀತ ಕೂಡ ಯುವಕರನ್ನು ಹಿಡಿದಿಡುವಂತಿತ್ತು.

`ರಂಗವಿಶೇಷ~ ತಂಡದ `ಮುಂದೇನು ನೀವೇ ಹೇಳಿ~ ಹಾಗೂ `ಸಂಭ್ರಮ~ ತಂಡದ `ಚದುರಂಗ~ ಉತ್ಸವದಲ್ಲಿ ಪ್ರದರ್ಶಿತವಾದ ಇನ್ನೆರಡು ನಾಟಕಗಳು. ರಂಗಭೂಮಿಗೆ ದುಡಿದ ಹನುಮಕ್ಕ, ರುದ್ರಣ್ಣ, ಶ್ರೀನಿವಾಸ ಮೇಷ್ಟ್ರು, ಕೇಶವಮೂರ್ತಿ, ಅಂಕಲ್ ಶ್ಯಾಮ್, ಬಿ.ಎಸ್.ಕೇಶವರಾವ್, ರಾಮಕೃಷ್ಣ ಕನ್ನರಪಾಡಿ, ಇಸ್ಮಾಯಿಲ್ ಗೋನಾಳ್ ಅವರನ್ನು ಉತ್ಸವದಲ್ಲಿ ಸನ್ಮಾನಿಸಲಾಯಿತು.
 
ಬಾದಲ್ ಸರ್ಕಾರ್ ನೆನಪಿನಲ್ಲಿ ಪ್ರಸ್ತುತ ಸಮಾಜದ ರಾಜಕೀಯ ತಲ್ಲಣ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಡಾ. ಎಲ್. ಬಸವರಾಜು ಹಾಗೂ ಹಬೀದ್ ತನ್ವೀರ್ ನೆನೆಪಿನಲ್ಲಿ `ಪದ್ಯಕಾಲ~ ಹಾಗೂ ಕೆ.ಪಿ. ಪೂರ್ಣಚಂದ್ರ ನೆನಪಿನಲ್ಲಿ `ಕಥಾಸಮಯ~ ಕೂಡ ನಡೆದವು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.