ADVERTISEMENT

‘ಊಟ, ಬಟ್ಟೆಯಷ್ಟೇ ಕೇಶ ವಿನ್ಯಾಸ ಮುಖ್ಯ’

ಶಶಿಕುಮಾರ್ ಸಿ.
Published 10 ಮೇ 2018, 19:30 IST
Last Updated 10 ಮೇ 2018, 19:30 IST
‘ಊಟ, ಬಟ್ಟೆಯಷ್ಟೇ ಕೇಶ ವಿನ್ಯಾಸ ಮುಖ್ಯ’
‘ಊಟ, ಬಟ್ಟೆಯಷ್ಟೇ ಕೇಶ ವಿನ್ಯಾಸ ಮುಖ್ಯ’   

ಹೊಸ ಕೇಶ ವಿನ್ಯಾಸ ಈಗಿನ ಟ್ರೆಂಡ್. ಸಿನಿ ನಟರ ಹಾಗೂ ಕ್ರಿಕೆಟಿಗರ ಕೇಶವಿನ್ಯಾಸಕ್ಕೆ ಮಾರುಹೋಗಿ ಅವರನ್ನು ಅನುಸರಿಸುವವರ ಸಂಖ್ಯೆಯು ಹೆಚ್ಚಾಗಿದೆ. ಅದರಲ್ಲಿಯೂ ಮಕ್ಕಳು ಹಾಗೂ ಯುವಕರೇ ಹೆಚ್ಚು. ಫ್ಯಾಷನ್‌ನ ಒಂದು ಭಾಗವೇ ಆಗಿರುವ ಕೇಶ ವಿನ್ಯಾಸವನ್ನು ಟ್ರೆಂಡ್‌ಗೆ ತಕ್ಕಂತೆ ಒಳಗಣ್ಣಿನಿಂದ ಕಂಡು ಹೊಸತನಕ್ಕೆ ತನ್ನನ್ನು ತಾನು ಒಗ್ಗಿಕೊಂಡ ವ್ಯಕ್ತಿ ರವಿ ವಂಶಿ.

ಬಿ.ಕಾಂ ಪದವೀಧರರಾದ ರವಿ, ಜ್ಞಾನ ಹಾಗೂ ವಿದ್ಯಾರ್ಹತೆ ಇದ್ದರೂ ಎಲ್ಲರಂತೆ ವೈಟ್‌ಕಾಲರ್ ಉದ್ಯೋಗದ ಹಿಂದೆ ಬಿದ್ದವರಲ್ಲ. ಕುಲಕಸುಬು ಆದ ಕ್ಷೌರಿಕ ವೃತ್ತಿಯಲ್ಲಿ ತಂದೆ ಹಾಗೂ ಅಣ್ಣನಂತೆ ಶ್ರದ್ಧೆಯಿಂದ ತೊಡಗಿಕೊಂಡು ಯಶಸ್ಸು ಕಂಡವರು. ಸುಮಾರು 22 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಅವರು ತೃಪ್ತಿದಾಯಕ ಮಾತುಗಳನ್ನಾಡಿದರೂ, ತನ್ನಲ್ಲಿನ ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕಿಲ್ಲ ಎಂಬ ಕೊರಗು ಧ್ವನಿಸುತ್ತಿತ್ತು.

ವೈಟ್‌ಫೀಲ್ಡ್ ಬಳಿಯ ಜೆಡ್‌ಪಿ ಕಾಂಪ್ಲೆಕ್ಸ್‌ನಲ್ಲಿ ಸುಷ್ಮಾ ಸಲೂನ್ ಅಂಗಡಿ ಇಟ್ಟುಕೊಂಡಿರುವ ರವಿ, ಕೂದಲನ್ನು ವಿಭಿನ್ನವಾಗಿ ಕತ್ತರಿಸುವುದರಲ್ಲಿ ಮತ್ತು ವಿನ್ಯಾಸ ಮಾಡುವುದರಲ್ಲಿ ಎತ್ತಿದ ಕೈ. ತಲೆಯಲ್ಲೇ ಚಿಟ್ಟೆ, ಮೀನು, ಪಾರಿವಾಳ, ಚಿರತೆ, ಹೂವು, ನಕ್ಷತ್ರ, ಎಲೆ, ನವಿಲು, ಮೊಲ, ತಾಜ್‌ಮಹಲ್‌, ಗಣಪತಿ, ಓತಿಕ್ಯಾತ, ರಾಜಕೀಯ ಪಕ್ಷಗಳ ಚಿಹ್ನೆಗಳ ಹೀಗೆ ಸಾಕಷ್ಟು ವಿನ್ಯಾಸ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಇದುವರೆಗೆ 400 ಕ್ಕೂ ಅಧಿಕ ಕೇಶ ವಿನ್ಯಾಸ ಮಾಡಿರುವ ಅವರು, ಸ್ಥಳೀಯವಾಗಿ ಹೆಸರುವಾಸಿ. ಕೇಶವಿನ್ಯಾಸಕ್ಕೆ ಸಂಬಂಧಪಟ್ಟ ಎಲ್ಲ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ.

ADVERTISEMENT

ಕೇಶವಿನ್ಯಾಸದ ಟ್ರೆಂಡ್ ಬದಲಾದಂತೆ ಕ್ಷೌರಿಕ ವೃತ್ತಿಯ ಮೇಲೆ ಜನರಿಗಿದ್ದ ಭಾವನೆಯೂ ಬದಲಾಗಿದೆ. ಒಬ್ಬ ವ್ಯಕ್ತಿಗೆ ಒಳ್ಳೆ ಊಟ, ಬಟ್ಟೆ ಹಾಗೂ ಹಣದಷ್ಟೇ ಕೇಶ ವಿನ್ಯಾಸವೂ ಮುಖ್ಯ. ಹೀಗಾಗಿ, ನಾನೂ ಹೊಸ ರೀತಿಯ ಕೇಶ ವಿನ್ಯಾಸ ಮಾಡುವುದನ್ನು ರೂಢಿಸಿಕೊಂಡೆ ಎನ್ನುತ್ತಾರೆ ಅವರು.

ಎಲ್ಲರಂತೆ ನಾನೂ ಸಾಮಾನ್ಯ ಕೇಶವಿನ್ಯಾಸ ಮಾಡಿಕೊಂಡಿದ್ದೆ. ಬಾಲ್ಯ ಸ್ನೇಹಿತ ವಿನೋದ್ ಇಚ್ಛೆಯಂತೆ, ಅವನಿಗೆ ಹೊಸ ಕೇಶ ವಿನ್ಯಾಸ ಮಾಡಿದೆ. ಸ್ನೇಹಿತರ ನಡುವೆ ಅದು ತುಂಬಾ ಚರ್ಚೆಗೆ ಗ್ರಾಸವಾಯಿತು. ಬಹುತೇಕರು ಆ ವಿನ್ಯಾಸ ಮೆಚ್ಚಿಕೊಂಡು ನಮಗೂ ಅದೇ ರೀತಿ ಕೇಶ ವಿನ್ಯಾಸ ಮಾಡಿ ಎಂದು ಅಂಗಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಕ್ರಮೇಣ ಗ್ರಾಹಕರ ಬೇಡಿಕೆಗನುಗುಣವಾಗಿ ಆ ಬಗ್ಗೆ ಚಿಂತನೆ ಮಾಡಿ ಹೊಸ ಕೇಶ ವಿನ್ಯಾಸಕ್ಕೆ ಆದ್ಯತೆ ನೀಡಿದೆ. ಅದು ಕ್ಲಿಕ್ ಆಯಿತು ಎನ್ನುವ ಅವರು ಸ್ನೇಹಿತನಿಂದ ಸಿಕ್ಕ ಸ್ಪೂರ್ತಿ ಹಾಗೂ ಅಣ್ಣ ರಾಜೇಶ್ ಸಹಕಾರವನ್ನು ನೆನಪಿಸಿಕೊಳ್ಳುವುದನ್ನು ಮರೆಯಲಿಲ್ಲ.

ನಕ್ಷತ್ರ ಹಾಗೂ ಎರಡು ಗೆರೆ ರೀತಿಯ ಕೇಶ ವಿನ್ಯಾಸ ಮಾಡಿ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿದ್ದೆ. ಅದನ್ನು ನೋಡಿದ ಶಾಲೆಯ ಶಿಕ್ಷಕಿ ತನ್ನ ಮಗನಿಗೆ ಅದೇ ರೀತಿ ಕೇಶ ವಿನ್ಯಾಸ ಮಾಡಿಸಿದ್ದರು. ಇಂಥಹ ಸಣ್ಣ ಸಣ್ಣ ವಿಚಾರಗಳು ತುಂಬಾ ಖುಷಿ ಕೊಡುತ್ತವೆಯಂತೆ ರವಿಗೆ.

ನನ್ನ ಬಳಿಗೆ ಮಕ್ಕಳು ಹಾಗೂ ಯುವಕರ ದಂಡೇ ಬರುತ್ತದೆ. ತರಹೇವಾರಿ ವಿನ್ಯಾಸಕ್ಕೆ ಅವರು ಬೇಡಿಕೆ ಇಡುತ್ತಾರೆ. ಅವರಿಗೆ ತೃಪ್ತಿದಾಯಕವಾಗುವ ರೀತಿಯಲ್ಲಿ ವಿನ್ಯಾಸ ಮಾಡುತ್ತೇನೆ. ವೈಟ್‌ಫೀಲ್ಡ್, ಬೆಳಗೆರೆ, ಮಾರತ್ತಹಳ್ಳಿ, ದೊಮ್ಮಲೂರು, ಬಾಗಲೂರಿನಿಂದ ಜನರು ಇಲ್ಲಿಗೆ ಬರುತ್ತಾರೆ. ನಿತ್ಯ 30 ರಿಂದ 40 ಮಂದಿ ಕೇಶ ವಿನ್ಯಾಸಕ್ಕೆ ಬರುತ್ತಾರೆ. ಹೊಸ ಕೇಶ ವಿನ್ಯಾಸ ಮಾಡಲು ಆಗುವ ಸಮಯಕ್ಕನುಗುಣವಾಗಿ ಗ್ರಾಹಕರಿಂದ ಹಣ ಪಡೆಯುತ್ತೇನೆ. ಅದೇನೂ ಹೆಚ್ಚು ಹೊರೆಯೆನಿಸುವುದಿಲ್ಲ ಎನ್ನುತ್ತಾರೆ ಅವರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ. ಅದನ್ನು ಪ್ರದರ್ಶಿಸಲು ಪ್ರಯತ್ನ ಮಾಡಬೇಕು. ಅಂತಹ ಪ್ರಯತ್ನದಿಂದಲೇ ಈಗ ನನ್ನಲ್ಲಿ ಯಾವುದೇ ರೀತಿಯ ವಿನ್ಯಾಸ ಬೇಕಾದರೂ ಮಾಡುತ್ತೇನೆ ಎಂಬ ವಿಶ್ವಾಸವಿದೆ. ಚಂದನವನದ ಖ್ಯಾತ ನಟರಿಗೆ ವಿಭಿನ್ನ ರೀತಿಯಲ್ಲಿ ಕೇಶವಿನ್ಯಾಸ ಮಾಡಬೇಕು ಎಂಬ ಆಸೆ ಇದೆ. ಅದಕ್ಕೆ ನನಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಇರುವವರು ಅದಕ್ಕೆ ನನಗೆ ಅವಕಾಶ ಮಾಡಿಕೊಟ್ಟರೆ ಅದನ್ನು ಸಾಬೀತು ಮಾಡಿತೋರಿಸುವೆ ಎನ್ನುತ್ತಾರೆ ರವಿ.

ಕವನ ಬರೆಯುವುದು, ನಾಟಕಗಳಲ್ಲಿ ನಟಿಸುವುದನ್ನು ಹವ್ಯಾಸವಾಗಿರಿಸಿಕೊಂಡ ರವಿ, ಈ ವೃತ್ತಿಯಲ್ಲಿ ವಿಪುಲ ಅವಕಾಶಗಳಿದ್ದು, ಅದಕ್ಕೆ ಪೋಷಕರು ಅವಕಾಶ ಮಾಡಿಕೊಡಬೇಕಿದೆ ಎಂದು ಮನವಿ ಮಾಡಿದರು.

ಸಂಪರ್ಕ: 7019593737

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.