ADVERTISEMENT

ಒಡವೆಮೋಹಿಗಳಿಗೆ ಇನ್ನೂ ಒಂದು!

ಸುಮಾ ಬಿ.
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಬಿಸಿಲು ಕಂತಿತ್ತು. ಮೋಡಗಳು ದಟ್ಟೈಸಿದ್ದವು. ಅವುಗಳ ನಡುವಿಂದ ತೂರಿಬರಲು ಚಂದ್ರಮನ ಯತ್ನ ನಡೆದಿತ್ತು. ಆ ಹೊತ್ತಲ್ಲಿ ರ‌್ಯಾಂಪ್ ಮೇಲೆ ಬಳುಕುತ್ತಾ ಬಂದವರು ನಟಿ ರಾಧಿಕಾ ಪಂಡಿತ್.

ಅವರ ನೋಟ-ನಡಿಗೆ ಕಂಡ ಕೆಲವರಿಗೆ ಬೇಸಿಗೆಯ ಧಗೆಯೂ ಮರೆತುಹೋಯಿತು. ಅವರ ಜೊತೆ ಹೆಜ್ಜೆ ಹಾಕಿದ್ದು ಉತ್ಸಾಹದ ಬುಗ್ಗೆಯಂತಿರುವ ನಟ ರಮೇಶ್ ಅರವಿಂದ್. ಎಂದಿನ ಅವರ ತುಂಬುನಗುವಿನ ರುಜು ಸಮಾರಂಭವನ್ನು ಕಳೆಗಟ್ಟಿಸಿತು.

ಗುಲಾಬಿ ಬಣ್ಣದ ಸಲ್ವಾರ್ ತೊಟ್ಟ ರಾಧಿಕಾಗೆ ಕಡುಗಪ್ಪು ಬಣ್ಣದ ಸೂಟ್ ಧರಿಸಿ ರಮೇಶ್ ಸಾಥ್ ನೀಡಿದರು. ಇಬ್ಬರ ಮೊಗದಲ್ಲೂ ನಗುವಿನ ಜುಗಲ್‌ಬಂದಿ. ನೋಡುತ್ತಿದ್ದವರಿಗೆ ದಿವ್ಯಾನಂದ.

ಆರ್. ಆರ್. ಗೋಲ್ಡ್ ಪ್ಯಾಲೇಸ್‌ನ ಎರಡನೇ ಶಾಖೆ ಆರಂಭಗೊಂಡ ಸಮಾರಂಭಕ್ಕೆ ಬಣ್ಣ ತುಂಬಿದವರು ರಮೇಶ್, ರಾಧಿಕಾ. ಜಯನಗರದ ಎಲಿಫೆಂಟ್ ರಾಕ್ ರಸ್ತೆಯಲ್ಲಿ ಬುಧವಾರ ಈ ಶಾಖೆ ಶುರುವಾಯಿತು.

ದೀಪ ಬೆಳಗಿಸಿದ ನಟ-ನಟಿ ಎರಡನೇ ಮಳಿಗೆ ಆರಂಭವಾಗಿಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ತುಸು ಹೊತ್ತು ಎಲ್ಲರ ಗಮನ ಸೆಳೆದ ರಾಧಿಕಾ, ರಮೇಶ್ ವೇದಿಕೆಯಿಂದ ನಿರ್ಗಮಿಸಿದ ಮೇಲೆ ಒಡವೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಲಾರಂಭಿಸಿದರು.

ಆಮೇಲೆ ರ‌್ಯಾಂಪ್ ಮೇಲೆ ಬೆಡಗಿಯರದ್ದೇ ಕಾರುಬಾರು. ಬಣ್ಣಬಣ್ಣದ ಸೀರೆಯಟ್ಟ ನೀರೆಯರು ತಂತಮ್ಮ ಮುಖಕ್ಕೆ ಹೊಂದುವ ಒಡವೆಗಳನ್ನು ಅತಿ ಎನಿಸದಂತೆ ತೊಟ್ಟಿದ್ದರು. ಶಾಖೆಯ ಹೊರಬದಿಯಲ್ಲೇ ಬೆಡಗಿಯರ ಕ್ಯಾಟ್‌ವಾಕ್ ನಡೆದಿದ್ದರಿಂದ ಒಬ್ಬೊಬ್ಬ ಬೆಡಗಿಗೂ ಪ್ರೇಕ್ಷಕರಿಂದ ಚಪ್ಪಾಳೆಯ ಸಮ್ಮಾನ. ವೇದಿಕೆ ಸುತ್ತಲೂ ಜನರ ಗುಂಪು ನೆರೆದಿತ್ತು. ಹಾದಿಹೋಕರು, ವಾಹನ ಚಾಲಕರು ನಿಧಾನಿಸಿ ಇತ್ತ ಒಮ್ಮೆ ಕಣ್ಣು ಹೊರಳಿಸಿ ನೋಡುತ್ತಿದ್ದರು.

ಸುದ್ದಿಮಿತ್ರರೊಂದಿಗೆ ಮಾತನಾಡಿದ ಆರ್. ಆರ್. ಗೋಲ್ಡ್ ಪ್ಯಾಲೇಸ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ರಮೇಶ್, `ಹೊಸ ಶಾಖೆಯನ್ನು ಆರಂಭಿಸಿರುವುದು ಮತ್ತಷ್ಟು ಹುರುಪು ನೀಡಿದೆ.

ಸಾರ್ವಜನಿಕರಿಗೆ ಉಪಯೋಗವಾಗುವಂತೆ ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ. ಅದರಂತೆ ಈ ಬಾರಿಯ ಅಕ್ಷಯ ತೃತೀಯ ಸಂಭ್ರಮಾಚರಣೆಯ ಅಂಗವಾಗಿ ಇನ್ನೂ ಹಲವು ಯೋಜನೆಗಳನ್ನೂ ಹಾಕಿಕೊಂಡಿದ್ದೇವೆ~ ಎಂದರು.

ಆರ್. ಆರ್. ಗೋಲ್ಡ್ ಪ್ಯಾಲೇಸ್ 1.9ರಷ್ಟು ಗೋಲ್ಡ್ ವೆಸ್ಟೇಜ್ ದರ ಹೊರತುಪಡಿಸಿ ಬೇರೆ ಯಾವ ದರವನ್ನೂ ವಿಧಿಸುವುದಿಲ್ಲವಂತೆ. ಚಿನ್ನ ಖರೀದಿಯ ಮೇಲೆ `ಮೇಕಿಂಗ್ ಚಾರ್ಜ್~ ಹಾಗೂ ಹರಳುಗಳ ಮೇಲೆ ಯಾವುದೇ ದರ ಇಲ್ಲವೆಂಬುದು ಗ್ರಾಹಕರನ್ನು ಸೆಳೆಯುವ ತಂತ್ರ.

ಒಂದು ಗ್ರಾಂ ಚಿನ್ನ ಖರೀದಿಸಿದರೆ ಒಂದು ಗ್ರಾಂ ಬೆಳ್ಳಿ ಉಚಿತವಾಗಿ ಸಿಗುವ ಆಮಿಷವೂ ಇಲ್ಲಿದೆ. ಅಲ್ಲದೆ, ಪ್ರತಿ ಗ್ರಾಂ ಚಿನ್ನದ ಮೇಲೆ 51 ರೂಪಾಯಿ ರಿಯಾಯಿತಿಯೂ ಉಂಟು. ವೇಸ್ಟೇಜ್ ಹಾಗೂ ಮೇಕಿಂಗ್ ಚಾರ್ಜ್ ಇಲ್ಲದೆ ವಜ್ರದಾಭರಣವನ್ನು ಕೂಡ ಇಲ್ಲಿ ಮಾಡಿಕೊಡಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ನಟ ದರ್ಶನ್ ನೂತನ ಶಾಖೆಯನ್ನು ಬುಧವಾರ ಬೆಳಿಗ್ಗೆ ಉದ್ಘಾಟಿಸಿದ್ದರು. ವಜ್ರಾಭರಣ ವಿಭಾಗವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ ಮತ್ತು ಬೆಳ್ಳಿ ವಿಭಾಗವನ್ನು ಮಾಜಿ ಸಚಿವ ಬಂಡೆಪ್ಪ ಕಾಶೇಂಪೂರ್ ಉದ್ಘಾಟಿಸಿದ್ದರು.

ಸಂಪರ್ಕಕ್ಕೆ: (ಹರೀಶ್) 98807 22973/ 080 23565395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.