ADVERTISEMENT

ಒತ್ತಡ ನಿವಾರಣೆಗೆ ಶ್ವಾನಗಳ ಸೇವೆ

ಅನಿತಾ ಈ.
Published 4 ಅಕ್ಟೋಬರ್ 2016, 19:30 IST
Last Updated 4 ಅಕ್ಟೋಬರ್ 2016, 19:30 IST
ಒತ್ತಡ ನಿವಾರಣೆಗೆ ಶ್ವಾನಗಳ ಸೇವೆ
ಒತ್ತಡ ನಿವಾರಣೆಗೆ ಶ್ವಾನಗಳ ಸೇವೆ   

ಒತ್ತಡದಲ್ಲಿ ಕೆಲಸ ಮಾಡಿ ಬೇಸರ ಬಂದಿದೆಯೇ? ಕೆಲಸದಿಂದ ಕೊಂಚ ಬಿಡುವು ಪಡೆದು ಮುದ್ದಾದ ಶ್ವಾನಗಳೊಂದಿಗೆ ಕಚೇರಿಯಲ್ಲೇ ಒಂದಿಷ್ಟು ಹೊತ್ತು ಕಾಲ ಕಳೆಯಬೇಕು ಅನಿಸುತ್ತಿದೆಯೇ?

ತಮ್ಮ ತರಬೇತಿ ಪಡೆದ ನಾಯಿಗಳನ್ನು ನಿಮ್ಮಲ್ಲಿಗೆ ಕರೆತಂದು ಒತ್ತಡ ನಿವಾರಣೆ ಮಾಡಿಕೊಳ್ಳುವ ಸೇವೆ ಒದಗಿಸುತ್ತಿರುವ ನಗರದ ಸರ್ಜಾಪುರ ರಸ್ತೆಯ ನಿವಾಸಿ ರಾಜೇಶ್ವರಿ ಎಂಬುವವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ರಾಜೇಶ್ವರಿ ಅವರು ಕಳೆದ 6 ತಿಂಗಳಿನಿಂದ ಕಾರ್ಪೊರೇಟ್ ಉದ್ಯೋಗಿಗಳಿಗೆಂದೇ ‘ಕಾರ್ಪೊರೇಟ್ ಕೆ9 ಎಕ್ಸ್‌ಪ್ರೆಸ್‌’ ಹಾಗೂ ಒತ್ತಡ ನಿವಾರಣೆ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.

ಕಾರ್ಯಾಗಾರದ ಬಗ್ಗೆ...
ಒತ್ತಡ ನಿವಾರಣೆ ಕಾರ್ಯಾಗಾರದಲ್ಲಿ ನಾಯಿಗಳನ್ನು ಮೊದಲು ಪರಿಚಯಿಸಲಾಗುತ್ತದೆ. ನಂತರ ಅವುಗಳೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಮಾಹಿತಿ ನೀಡಿ, ಆಟವಾಡಲು ಬಿಡುತ್ತಾರೆ. ಇದು 90 ರಿಂದ 120 ನಿಮಿಷ ನಡೆಯುತ್ತದೆ.

‘‘ಕಾರ್ಪೋರೇಟ್ಸ್ ಕೆ9 ಎಕ್ಸ್‌ಪ್ರೆಸ್‌’ ಕಾರ್ಯಕ್ರಮದಲ್ಲಿ ‘ಟೀಂ ಬಿಲ್ಡಿಂಗ್‌’ ಹಾಗೂ ‘ಟೀಂ ವರ್ಕ್‌’  ಹೇಳಿಕೊಡಲಾಗುತ್ತದೆ. ಇದಕ್ಕೆ ನಾಯಿಗಳ ಸಹಾಯ ಪಡೆಯುತ್ತೇವೆ. ಮೊದಲಿಗೆ ಸಂಸ್ಥೆಯ ಸಿಬ್ಬಂದಿಯನ್ನು ಕಚೇರಿಯಿಂದ ಹೊರಗಡೆ ಶ್ವಾನಸ್ನೇಹಿ ಉದ್ಯಾನ ಅಥವಾ ಲಾನ್‌ಗಳಿಗೆ ಕರೆತರುತ್ತೇವೆ. ಅಲ್ಲಿ ಅವರಲ್ಲೇ ನಾಲ್ಕೈದು ಗುಂಪುಗಳನ್ನಾಗಿ ಮಾಡಿ, ಒಂದೊಂದು ಗುಂಪಿಗೂ ಒಂದೊಂದು ಶ್ವಾನಗಳನ್ನು ನೀಡುತ್ತೇವೆ.

ನಂತರ ಪ್ರತಿ ತಂಡಕ್ಕೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲೆಂದು ಒಂದು ಕೆಲಸ (ಟಾಸ್ಕ್‌) ನೀಡುತ್ತೇವೆ. ಒಗ್ಗಟ್ಟಿನಲ್ಲಿ ಕೆಲಸ ಮಾಡುವಾಗ ನಾಯಿಯನ್ನು ಹೆಚ್ಚು ಸಮರ್ಥವಾಗಿ ಹೇಗೆ ಬಳಸಿಕೊಳ್ಳಬೇಕು ಎಂದು ಹೇಳಿ ಕೊಡಲಾಗುತ್ತದೆ. ಇದರಿಂದ ಗುಂಪಾಗಿ ಕೆಲಸ ಮಾಡುವ ಅನುಭವವಾಗುತ್ತದೆ. ಇದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎನ್ನುತ್ತಾರೆ ರಾಜೇಶ್ವರಿ. 

ಒಂದು ಕಾರ್ಯಕ್ರಮಕ್ಕೆ ಎಷ್ಟು ಮಂದಿ ಬರುತ್ತಾರೆ ಮತ್ತು ಎಷ್ಟು ಸಮಯ ಈ ಕಾರ್ಯಕ್ರಮ ನಡೆಯುತ್ತದೆ ಎಂಬ ಆಧಾರದಲ್ಲಿ ಅವರು ಶುಲ್ಕ ನಿಗದಿಪಡಿಸುತ್ತಾರೆ.
‘ಬ್ರಿಲ್ಯೊ’ ಹಾಗೂ ‘ಇಮ್ಮೊಬಿ’ ಸಂಸ್ಥೆಗಳಲ್ಲಿ ಈಗಾಗಲೇ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ‘ಇಮ್ಮೊಬಿ’ಯಲ್ಲಿ ಎರಡು ಬಾರಿ ಕಾರ್ಯಕ್ರಮ ಹಾಗೂ ಕಾರ್ಯಾಗಾರ ನಡೆಸಿದ್ದಾರೆ.

ನಗರಕ್ಕೆ ಹೊಸ ಪರಿಕಲ್ಪನೆ
ನಗರದಲ್ಲಿ ನಾಯಿಗಳನ್ನು ಬಳಸಿಕೊಂಡು ಈ ರೀತಿಯ ಸೇವೆ ನೀಡುವ ಪರಿಕಲ್ಪನೆ ತುಂಬಾ ಹೊಸದು. ಮುಂಬೈ, ದೆಹಲಿಯಲ್ಲಿ ಈ ಸೇವೆ ಪ್ರಾರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಅಲ್ಲಿ ಮಕ್ಕಳಿಗಾಗಿ ಆಯೋಜಿಸುವ ಮನರಂಜನಾ ಕಾರ್ಯಕ್ರಮಗಳಿಗೂ ನಾಯಿಗಳನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ಪರಿಚಿತ
ಅಮೆರಿಕ ಸೇರಿದಂತೆ ಕೆಲವು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಒತ್ತಡ ನಿವಾರಣೆಗೆ ನಾಯಿಗಳೊಂದಿಗೆ ಆಟವಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ  ಪ್ರತ್ಯೇಕವಾದ ಪೆಟ್‌ ರೂಮ್‌ಗಳಿರುತ್ತವೆ.

ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರಿಗೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಲಳುತ್ತಿರು ವವರಿಗೆ ವೈದ್ಯರು ಪ್ರಾಣಿಗಳನ್ನು ಸಾಕುವಂತೆ ಸಲಹೆ ನೀಡುತ್ತಾರೆ. ಪ್ರಾಣಿಗಳ ಒಡನಾಟದಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಕೊಂಚ ಖುಷಿಯಾಗುತ್ತದೆ ಎಂದು ಸಾಕಷ್ಟು ಅಧ್ಯಯನಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.