ADVERTISEMENT

ಕತ್ತಲೆ ಕೋಣೆಯಲ್ಲಿ ಹೊಂಬೆಳಕು

ಸುರೇಖಾ ಹೆಗಡೆ
Published 6 ಸೆಪ್ಟೆಂಬರ್ 2015, 19:30 IST
Last Updated 6 ಸೆಪ್ಟೆಂಬರ್ 2015, 19:30 IST

ನಗರದ ‘ಮಜೋಲಿ ಪ್ರಾಜೆಕ್ಟ್‌’ ಎಂಬ ಬ್ಯಾಂಡ್‌ ಸದಸ್ಯರು ರಚಿಸಿ, ಸಂಯೋಜಿಸಿದ ಡಾರ್ಕ್‌ ರೂಂ ಎಂಬ ಹಾಡೊಂದಕ್ಕೆ ಗ್ಲೋಬಲ್‌ ಮ್ಯೂಸಿಕ್‌ ಅವಾರ್ಡ್‌ ದೊರೆತಿದೆ. ಬೆಸ್ಟ್‌ ಎಮರ್ಜಿಂಗ್‌ ಆರ್ಟಿಸ್ಟ್‌ ಹಾಗೂ ಉತ್ತಮ ಹಾಡು ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದೆ ಈ ತಂಡ.

ಹಾಡು ನಿರ್ಮಾಣಗೊಂಡು ಒಂದೂವರೆ ತಿಂಗಳಿನಲ್ಲಿಯೇ ಇಂಥ ಪ್ರಶಸ್ತಿ ಮಜೋಲಿ ಪ್ರಾಜೆಕ್ಟ್‌ ತಂಡದ್ದಾಗಿರುವುದು ವಿಶೇಷ. ಅನೇಕ ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಪಿಯಾನೊ ವಾದಕಿ ನೀಸಿಯಾ ಮಜೋಲಿ, ಅಶ್ವಿನ್‌ ಶೇಖರ್‌ ಹಾಗೂ ಅನೀಶ್‌ ಥಾಮಸ್‌ ಪಣಿಕ್ಕರ್ ಈ ತಂಡದ ರೂವಾರಿಗಳು.

ಎರಡೂವರೆ ವರ್ಷಕ್ಕೇ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡ ನೀಸಿಯಾ ಪಿಯಾನೊ ವಾದಕಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡವರು. ಅಲ್ಲದೆ ನೀಸಿಯಾ ಸ್ವೀಡನ್‌, ಆಸ್ಟ್ರೇಲಿಯಾ ಮುಂತಾದ ಕಡೆ ಸಂಗೀತ ಕಛೇರಿ ನೀಡಿ ಸೈ ಎನಿಸಿಕೊಂಡವರು.

‘ಅನೇಕ ವರ್ಷಗಳಿಂದ ಬ್ಯಾಂಡ್‌ ಒಂದನ್ನು ಕಟ್ಟಬೇಕು ಎಂಬ ಆಸೆ ನನಗಿತ್ತು. ಆದರೆ ಸಂಗೀತ ಸಾಧನೆಗೆ ಅತ್ಯವಶ್ಯಕವಾದ ಒಂದೇ ಮನೋಧರ್ಮ ಉಳ್ಳ ಕಲಾವಿದರನ್ನು ಹುಡುಕುವುದು ಕಷ್ಟವಾಯಿತು. ಅನೇಕ ವರ್ಷಗಳಿಂದ ಪರಿಚಯ ಉಳ್ಳ ನಾವು ಕಳೆದ ಸೆಪ್ಟೆಂಬರ್‌ನಲ್ಲಿ ಮಜೋಲಿ ಪ್ರಾಜೆಕ್ಟ್‌ ಎಂಬ ಬ್ಯಾಂಡ್‌ ಕಟ್ಟಿಕೊಂಡೆವು. ಆದರೆ ಇದುವರೆಗೂ ಬ್ಯಾಂಡ್‌ ಒಂದೂ ಸಂಗೀತ ಕಛೇರಿ ನೀಡಿಲ್ಲ. ವೇದಿಕೆ ಸಿಗಲಿಲ್ಲ. ಆದರೂ ಬ್ಯಾಂಡ್‌ ಸದಸ್ಯರ ಮೊದಲ ಹೆಜ್ಜೆ ‘ಡಾರ್ಕ್‌ರೂಂ’ ಹಾಡಿಗೆ ಇಂಥ ದೊಡ್ಡ ಮನ್ನಣೆ ದೊರೆತ ಖುಷಿ ನಮ್ಮ ಪಾಲಿಗೆ ಸಿಕ್ಕಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ನೀಸಿಯಾ.

ನೀಸಿಯಾ ಅವರ ಬದುಕಿನಲ್ಲಿ ನಡೆದ ಘಟನೆಯೇ ಡಾರ್ಕ್‌ ರೂಂ ಹಾಡಿನ ಸೃಷ್ಟಿಗೆ ಸ್ಫೂರ್ತಿಯಾಯಿತಂತೆ. ಹಾಡಿನ ಸಾಲುಗಳಿಗೆ ಅಕ್ಷರ ರೂಪ ನೀಡಿದ್ದು ನೀಸಿಯಾ ಅವರೇ. ಬ್ಯಾಂಡ್‌ ಇದುವರೆಗೆ ಹೆಚ್ಚಾಗಿ ಸ್ಟುಡಿಯೊ ಕೆಲಸಗಳಲ್ಲಿಯೇ ತೊಡಗಿಕೊಂಡಿದೆ ಎಂದು ಮಾಹಿತಿ ನೀಡುವ ಸದಸ್ಯರು ವಾರಕ್ಕೊಮ್ಮೆಯಾದರೂ ಸೇರಿ ಸಂಗೀತಾಭ್ಯಾಸಕ್ಕೆ ಸಮರ್ಪಿಸಿಕೊಳ್ಳುತ್ತಾರೆ.

ವಿವಿಧ ಸಂಗೀತ ಪ್ರಕಾರದ ಹಿನ್ನೆಲೆ ಇರುವ ಸದಸ್ಯರು ಈ ತಂಡದಲ್ಲಿ ಇರುವುದು ವಿಶೇಷ. ‘ಡಾರ್ಕ್‌ ರೂಂ ಹಾಡು ನಮ್ಮ ಬ್ಯಾಂಡ್‌ನ ಸಂಗೀತ ಶೈಲಿಯನ್ನು ಪ್ರತಿನಿಧಿಸುವುದಿಲ್ಲ. ಅದು ನಮ್ಮ ಸಂಗೀತ ಚಿಂತನೆಯ ಒಂದು ಭಾಗವಷ್ಟೇ. ತಂಡದ ಅನೀಶ್‌ ಫ್ಯೂಷನ್‌ ಹಾಗೂ ಎಲೆಕ್ಟ್ರಾನಿಕ್‌ ಸಂಗೀತದ ಹಿನ್ನೆಲೆ ಇರುವವರು. ಅಶ್ವಿನ್‌ ಡ್ರಮ್‌ ವಾದಕ. ಹಾಗೂ ಹಾರ್ಡ್‌ರಾಕ್‌ ಮೆಟಲ್‌ ಬ್ಯಾಂಡ್‌ ಒಂದರಲ್ಲಿ ಕೆಲಸ ಮಾಡಿದವರು. ನಾನು ಸ್ವತಃ ಪಾಶ್ಚಾತ್ಯ ಸಂಗೀತ ಶೈಲಿಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದವಳು. ಈ ಎಲ್ಲ ಪ್ರಕಾರಗಳನ್ನು ಸೇರಿಸಿ ಹೊಸತನದ ಸಂಗೀತಾನುಭವ ನೀಡುವುದು ನಮ್ಮ ಉದ್ದೇಶ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ನೀಸಿಯಾ.

ಪಿಯಾನೊ ನುಡಿಸುವುದು, ವಿವಿಧ ಸಂಗೀತ ಕಛೇರಿಗಳಲ್ಲಿ ಭಾಗವಹಿಸುವುದು, ಹಾಡುಗಳ ರಚನೆಯಲ್ಲಿ ತೊಡಗಿಕೊಳ್ಳುವುದಷ್ಟೇ ಅಲ್ಲದೆ ‘ಮಜೋಲಿ ಮ್ಯೂಸಿಕ್‌ ಟ್ರಸ್ಟ್‌’ ಅನ್ನು ಕೂಡ ನೀಸಿಯಾ ಅವರು ಹುಟ್ಟುಹಾಕಿದ್ದಾರೆ. ತಮ್ಮ ಟ್ರಸ್ಟ್‌ ಮೂಲಕ ಸಂಗೀತ ಪಸರಿಸುವ ಕೆಲಸದಲ್ಲಿ ನಿರತರಾಗಿರುವ ಅವರಿಗೆ ಕುಟುಂಬದಿಂದ ಸಂಪೂರ್ಣ ಸಹಕಾರ ದೊರೆತಿದೆಯಂತೆ. ‘ಒಬ್ಬರಿಗೊಬ್ಬರು ಅವರವರ ವೃತ್ತಿ ಬದುಕನ್ನು ಗೌರವಿಸುತ್ತೇವೆ. ಅಲ್ಲದೆ ಕಾರ್ಯಯೋಜನೆಯನ್ನು ಸರಿಯಾದ ನಿಟ್ಟಿನಲ್ಲಿ ಜೋಡಿಸಿಕೊಳ್ಳುವುದರಿಂದ ಸಾಧನೆಯ ಹಾದಿ ಸುಲಭವಾಗಿದೆ’ ಎನ್ನುತ್ತಾರೆ ನೀಸಿಯಾ.

‘ಸಂಗೀತವೇ ಎಲ್ಲ. ಬದುಕು, ಧರ್ಮ ಎಲ್ಲವೂ ನನಗೆ ಸಂಗೀತವೇ’ ಎಂದು ಹೇಳಿಕೊಳ್ಳುವ ನೀಸಿಯಾ ಅವರ ತಂಡದ ಡಾರ್ಕ್‌ ರೂಂ ಹಾಡು ಇಂಟರ್‌ನ್ಯಾಷನಲ್‌ ಮ್ಯೂಸಿಕ್‌ ಅಂಡ್‌ ಎಂಟರ್‌ಟೈನ್‌ಮೆಂಟ್‌ ಅವಾರ್ಡ್‌ (ಐಎಂಇಎ) ಆಯೋಜಿಸಿರುವ ‘ರಾಕ್‌ ಸಾಂಗ್‌ ಆಫ್‌ ದಿ ಈಯರ್‌’ ಪ್ರಶಸ್ತಿಗೆ ಕೂಡ ನಾಮಾಂಕಿತಗೊಂಡಿದೆ.

ಅಂದಹಾಗೆ ಡಾರ್ಕ್‌ ರೂಂ ಹಾಡಿಗೆ ದಕ್ಕಿದ ಎರಡೂ ಪ್ರಶಸ್ತಿಗಳ ಪ್ರದಾನ ಸಮಾರಂಭ ಅಕ್ಟೋಬರ್‌ 24ರಂದು ಅಮೆರಿಕದಲ್ಲಿ ನಡೆಯಲಿದೆ. ವಿದೇಶದಲ್ಲಿ ಕಿರೀಟ ತೊಟ್ಟು ಬೀಗುವ ಖುಷಿಯಲ್ಲಿ ಮಜೋಲಿ ಪ್ರಾಜೆಕ್ಟ್‌ ತಂಡ ಕಾತರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.