
ಬೆಂಗಳೂರು ಎಂಬ ಮಹಾನಗರಿಯ ಜೀವವಿರುವುದು ಅದರ ವೇಗದಲ್ಲಿ. ಆ ವೇಗ ತರುವ ಬದಲಾವಣೆಯಲ್ಲಿ. ಇಲ್ಲಿನ ಡಾಂಬರು ರಸ್ತೆಯ ಮೇಲೆ ಉಸಿರುಗಟ್ಟಿ ಓಡುವ ಕಾರು, ಬೈಕು, ಬಿಎಂಟಿಸಿ ಬಸ್ಸುಗಳಿಗಷ್ಟೇ ಅಲ್ಲ; ಗಾಳಿ, ನೀರು ಅಷ್ಟೇ ಏಕೆ, ಬರಿಗಣ್ಣಿಗೆ ನಿಂತಂತೇ ಕಾಣುವ ಸಿಗ್ನಲ್ ದೀಪಕಂಬಗಳು, ವೃತ್ತಮಧ್ಯದ ಪ್ರತಿಮೆಗಳು, ಗಾಜುಗಣ್ಣಿನ ಸಾಲು ಸಾಲು ಕಟ್ಟಡಗಳಿಗೂ ಹೃದಯಕ್ಕಷ್ಟೇ ಗೋಚರವಾಗುವ ಅನಿರ್ವಚನೀಯ ವೇಗವಿದೆ. ಆ ವೇಗದ ಆವೇಗಕ್ಕೆ ತಕ್ಕಂತೆ ನಗರ ಬದಲಾಗುತ್ತಿರುತ್ತದೆ.
ಇಂತಹ ಬದಲಾವಣೆಯನ್ನು ಸಾಮಾನ್ಯವಾಗಿ ಎರಡು ಬಗೆಯ ಯೋಚನಾಕ್ರಮಗಳಿಂದ ಎದುರಿಸಬಹುದು. ಮೊದಲನೆಯದು, ನಗರದ ಎಲ್ಲ ಬದಲಾವಣೆಗಳಿಗೆ ಹಿಂದು ಮುಂದು ನೋಡದೇ ತಮ್ಮನ್ನು ತಾವು ಒಡ್ಡಿಕೊಂಡು, ಒಪ್ಪಿಕೊಂಡು ಆ ಕ್ಷಣದ ಬದುಕಿನಲ್ಲಿ ಕಳೆದು ಹೋಗುವುದು.
ಇನ್ನೊಂದು, ಬದಲಾವಣೆಯ ಫಲವಾಗಿ ಬಂದ ಹೊಸದೆಲ್ಲವನ್ನೂ ದೂಷಿಸುತ್ತಾ ‘ಮೊದಲೆಲ್ಲ ಹಿಂಗಿರಲಿಲ್ಲ’ ಎಂಬ ಹಳೆಯದರ ಹಳಹಳಿಕೆಯಲ್ಲಿ ಇಂದಿನ ಬದುಕಿನ ಜೀವಂತಿಕೆಗೂ ಕುರುಡಾಗುವುದು. ಇವೆರಡು ಕ್ರಮವನ್ನು ಬಿಟ್ಟೂ ಇನ್ನೊಂದು ಯೋಚನಾಕ್ರಮವಿದೆ. ಅದು ಬದಲಾದ, ಬದಲಾಗುತ್ತಿರುವ ಇಂದಿನ ನೆಲದಲ್ಲಿಯೇ ನಿಂತು ವಿಸ್ಮೃತಿಗೆ ಸರಿದ ಕ್ಷಣಗಳನ್ನು ನೆನಪಿಸಿಕೊಳ್ಳಲು ಯತ್ನಿಸುವುದು.
ಹಳೆಯದರ ಪುನರುಜ್ಜೀವನದಿಂದಲೇ ಇಂದಿನ ಆಧುನಿಕವನ್ನು ಇನ್ನಷ್ಟು ಸಹನೀಯಗೊಳಿಸಿಕೊಳ್ಳಲು ಸಾಧ್ಯವೇ ಎಂಬ ಪರಿಶೋಧನೆಯಲ್ಲಿ ತೊಡಗುವುದು. ಇದು ಕಷ್ಟದ ಮಾರ್ಗ. ಆದರೆ ಅಷ್ಟೇ ಮಹತ್ವದ ಮಾರ್ಗವೂ ಹೌದು. ‘ಇಂಡಿಯನ್ ಫೌಂಡೇಶನ್ ಫಾರ್ ದಿ ಆರ್ಟ್ಸ್’ (ಐಎಫ್ಎ) ಇದೇ 5ರಿಂದ 8ರವರೆಗೆ ನಡೆಸಲಿರುವ ನಾಲ್ಕು ದಿನಗಳ ‘ಪ್ರಾಜೆಕ್ಟ್ 560 ಹಬ್ಬ’ದ ಹಿಂದೆಯೂ ಇಂತಹುದೇ ಉದ್ದೇಶವಿದೆ.
ಏನಿದು ಪ್ರಾಜೆಕ್ಟ್ 560 ಹಬ್ಬ?
560 ಎನ್ನುವುದು ಬೆಂಗಳೂರು ನಗರದ ಅಂಚೆ ಪಿನ್‌ಕೋಡ್‌ಗಳ ಮೊದಲ ಮೂರು ಸಂಖ್ಯೆ. ಮಹಾನಗರದ ಭೂಗೊಳವನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ಈ ಮೂರು ಸಂಖ್ಯೆಗಳನ್ನು ತನ್ನ ಹೆಸರಲ್ಲಿ ಇರಿಸಿಕೊಂಡಿರುವ ಈ ‘ಹಬ್ಬ’ ಬೆಂಗಳೂರಿನ ಭೂಗೋಳಕ್ಕೆ ಕಲಾ ಪ್ರದರ್ಶನಗಳ ಮೂಲಕ ಒಂದು ಹೊಸ ಪರಿಭಾಷೆ ಕಲ್ಪಿಸುವ ಪ್ರಯತ್ನವಾಗಿದೆ. ಬೆಂಗಳೂರಿನ ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ಕಲಾ ಪ್ರದರ್ಶನಗಳನ್ನು ನೀಡುವ ಮೂಲಕ ಮಹಾನಗರವನ್ನು ವಿಭಿನ್ನವಾಗಿ ಬಿಂಬಿಸುವ ಆಶಯದಿಂದ ಹುಟ್ಟಿಕೊಂಡ ಯೋಜನೆ ಇದು.
ಆರಂಭಗೊಂಡಿದ್ದು ಹೇಗೆ?
ಕಳೆದ 20 ವರ್ಷಗಳಿಂದ ಕಲೆ–ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಇಂಡಿಯನ್ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆ, ತನ್ನನ್ನು ಬೆಳೆಸಿದ ನಗರಕ್ಕೆ ಏನನ್ನಾದರೂ ಕೊಡಬೇಕು ಎಂಬ ಆಶಯದಿಂದ ಈ ನಾಲ್ಕು ದಿನದ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲು ನಿರ್ಧರಿಸಿತು.
ಈ ಯೋಜನೆಯ ಮೊದಲನೇ ಹಂತವಾಗಿ ಆಸಕ್ತ ಸಂಗೀತಗಾರರು, ನೃತ್ಯಗಾರರು, ರಂಗಭೂಮಿ, ತೊಗಲುಗೊಂಬೆಯಾಟ, ಕಥಾವಾಚನ, ಕವಿ, ಬರಹಗಾರರು ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಬೆಂಗಳೂರು ಮೂಲದ ಕಲಾತಂಡಗಳಿಂದ ಕಾರ್ಯಕ್ರಮಗಳ ಪರಿಕಲ್ಪನೆಯನ್ನು ನೀಡಲು ಅರ್ಜಿ ಆಹ್ವಾನಿಸಲಾಯ್ತು.
ಈ ಆಹ್ವಾನಕ್ಕೆ ಸ್ಪಂದಿಸಿ ಅರ್ಜಿ ಸಲ್ಲಿಸಿದ ಕಲಾತಂಡಗಳ ಸಂಖ್ಯೆ 23. ವಿವಿಧ ಕಲಾ ವಿಭಾಗಗಳ ನಾಲ್ಕು ತಜ್ಞರ ಸಮಿತಿಯು ಈ ತಂಡಗಳ ಯೋಜನೆಯನ್ನು ಪರಿಶೀಲಿಸಿ ಆರು ಕಲಾತಂಡಗಳ 16 ಪರಿಕಲ್ಪನೆಗಳನ್ನು ಆಯ್ಕೆ ಮಾಡಿತು. ಈ ಆಯ್ಕೆ ಸಮಿತಿಯಲ್ಲಿ ಕನ್ನಡದ ಪ್ರಮುಖ ಕತೆಗಾರ ವಿವೇಕ ಶಾನಭಾಗ, ಬೆಂಗಳೂರು ಇತಿಹಾಸ ಸಂಶೋಧಕ ಸುರೇಶ್ ಮೂನಾ, ಪಾಂಡಿಚೇರಿ ಮೂಲದ ನೃತ್ಯ ಕಲಾವಿದ ಮತ್ತು ವಿಮರ್ಶಕ ಕೃಷ್ಣ ದೇವನಂದನ್, ದೆಹಲಿಯ ಪ್ರಮುಖ ರಂಗಭೂಮಿ ನಟ, ನಿರ್ದೇಶಕ ಸುಧನ್ವ ದೇಶಪಾಂಡೆ ಇದ್ದರು.
ಆಯ್ಕೆಯಾದ ತಂಡಗಳು ತಾವೇ ಆಯ್ದುಕೊಂಡ ಒಂದು ಅನೌಪಚಾರಿಕ ಜಾಗಕ್ಕೆ ಕಲಾ ಪ್ರದರ್ಶನಗಳ ಮೂಲಕ ಜೀವ ತುಂಬವುದು ಕಾರ್ಯಕ್ರಮದ ರೂಪುರೇಷೆ. ಪ್ರತಿ ತಂಡಕ್ಕೆ ಪ್ರದರ್ಶನದ ತಯಾರಿಕಾ ವೆಚ್ಚ ಸೇರಿದಂತೆ ₨ 2.5 ಲಕ್ಷ ಅನುದಾನ ನೀಡಲಾಯಿತು. ತಯಾರಿಗಾಗಿ ಮಾರ್ಚ್‌ನಿಂದ ಮೂರು ತಿಂಗಳ ಸಮಯವನ್ನೂ ನೀಡಲಾಯಿತು.
ಈ ಮೂರು ತಿಂಗಳಲ್ಲಿ ಕಲಾತಂಡಗಳು ತಾವು ಆಯ್ದುಕೊಂಡ ಸ್ಥಳದಲ್ಲಿ ನಿರಂತರವಾಗಿ ಚಿಕ್ಕ ಪುಟ್ಟ ಪ್ರದರ್ಶನಗಳನ್ನು ನೀಡುತ್ತಾ ಬಂದಿವೆ. ಉದಾಹರಣೆಗೆ ‘ಮಾಸ್ತಿ ಚಾಕ್ಲೆಟ್’ ಪ್ರದರ್ಶನದ ಜವಾಬ್ದಾರಿ ಹೊತ್ತಿರುವ ಮೌನೇಶ ಬಡಿಗೇರ ಅವರು ಕಳೆದ ಮೂರು ತಿಂಗಳಿಂದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪ್ರತಿ ವಾರವೂ ‘ಸಾಹಿತ್ಯ ಸಂಜೆ’ ಎಂಬ ಕಾರ್ಯಕ್ರಮದಲ್ಲಿ ಮಾಸ್ತಿ ಅವರ ಕತೆಗಳನ್ನು ಓದುತ್ತಾ ಬಂದಿದ್ದಾರೆ.
‘ಸುಚಿತ್ರಾ ಸಾಹಿತ್ಯ ಸಂಜೆಯಲ್ಲಿ ಮಾಸ್ತಿ ಕತೆಗಳನ್ನು ಓದಲು ಇರುವ ಮುಖ್ಯ ಕಾರಣವೆಂದರೆ ಸಾಹಿತ್ಯಾಸಕ್ತರೇ ಹೆಚ್ಚಾಗಿ ಸೇರುವ ಇಲ್ಲಿ ನಾನು ಆಯ್ಕೆ ಮಾಡಿಕೊಂಡು ಓದುವ ಮಾಸ್ತಿ ಕತೆಗಳನ್ನು ಹೇಗೆ ನೋಡುತ್ತಾರೆ, ಅವರ ಅಭಿಪ್ರಾಯಗಳೇನು ಎಂದು ತಿಳಿಯುವುದು ಹಾಗೂ ಜೂನ್ ೬ರಂದು ಬ್ಯೂಗಲ್ ರಾಕ್ ಗಾರ್ಡನ್‌ನಲ್ಲಿ ನಡೆಯುವ ಮಾಸ್ತಿ ಕತೆಗಳ ವಿಶಿಷ್ಟ ರಂಗಪ್ರಯೋಗ ‘ಮಾಸ್ತಿ ಚಾಕ್ಲೇಟ್’ ಕುರಿತು ಆಸಕ್ತಿ ಹುಟ್ಟಿಸಿ ಹೆಚ್ಚು ಪ್ರೇಕ್ಷಕರು ನೆರೆಯುವಂತೆ ಮಾಡುವುದು’ ಎನ್ನುತ್ತಾರೆ ಮೌನೇಶ ಬಡಿಗೇರ.
‘ರಂಗಸಿರಿ’ ತಂಡ ಅನೇಕ ರಂಗಗೀತೆ ಗಾಯನ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ಇದೊಂದು ರೀತಿಯಲ್ಲಿ ಜನರ ಕುತೂಹಲ ಕೆರಳಿಸಿ ಅಂತಿಮ ಪ್ರದರ್ಶನಕ್ಕೆ ಅವರನ್ನು ಸೆಳೆಯುವ ಪ್ರಯತ್ನ. ಅಂತಿಮವಾಗಿ ಇದೇ 5ರಿಂದ ಆರಂಭವಾಗಲಿರುವ ಈ ಪ್ರಾಜೆಕ್ಟ್ 560 ಹಬ್ಬದಲ್ಲಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಆರು ಕಲಾತಂಡಗಳು 16 ಪ್ರದರ್ಶನಗಳನ್ನು ನೀಡಲಿವೆ.
‘560’ರ ಉದ್ದೇಶ
‘ಬೆಂಗಳೂರು ತೀರಾ ಕ್ಷಿಪ್ರಗತಿಯಲ್ಲಿ ಬದಲಾವಣೆ ಆಗುತ್ತಿರುವ ಸಮಯ ಇದು. ಎಲ್ಲೋ ಒಂದಿಷ್ಟು ಮರಗಳನ್ನು ಕಡಿಯುತ್ತಾರೆ. ಫ್ಲೈ ಓವರ್‌ಗಳು ಬರುತ್ತವೆ. ಈ ಜಗತ್ತು ಪ್ರತಿದಿನ, ಪ್ರತಿನಿತ್ಯ ಬದಲಾಗುತ್ತಿದೆ. ಈ ಕ್ಷಣಕ್ಷಣದ ಬದಲಾವಣೆಗೆ ಕಲಾವಿದರು ತಮ್ಮ ಕಲೆಯ ಮುಖಾಂತರ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದೇ ಈ ಪ್ರಾಜೆಕ್ಟ್‌ನ ಮೂಲ ಉದ್ದೇಶ’ ಎಂದು ವಿವರಿಸುತ್ತಾರೆ ಐಎಫ್‌ಎದ ಕಾರ್ಯಕ್ರಮ ಕಾರ್ಯನಿರ್ವಾಹಕಿ ಮತ್ತು ಪ್ರಾಜೆಕ್ಟ್ 560 ಹಬ್ಬದ ಮೇಲ್ವಿಚಾರಕಿ ಸುಮನಾ ಚಂದ್ರಶೇಖರ.
‘ಇಂದು ನಗರದಲ್ಲಿ ಕಲಾವಿದರಿಗೆ ರಿಹರ್ಸಲ್‌ಗೆ ಸರಿಯಾದ ಸ್ಥಳವಿಲ್ಲ. ಇದ್ದರೂ ಅದು ಸುಲಭಕ್ಕೆ ಲಭ್ಯವಾಗದಂತಹ ಪರಿಸ್ಥಿತಿ ಇದೆ. ಹಣ ಕೊಟ್ಟೇ ರಿಹರ್ಸಲ್‌ಗೆ ಸ್ಥಳ ಪಡೆದುಕೊಳ್ಳಬೇಕು ಎಂದರೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ತನ್ನ ಕಲೆಯನ್ನು ಬೆಳೆಸಿಕೊಂಡು ಹೋಗುವುದು ಹೇಗೆ ಎಂಬ ಸವಾಲು ಕಲಾವಿದನ ಎದುರಿಗಿದೆ. ಔಪಚಾರಿಕ ಪ್ರದರ್ಶನ ಸ್ಥಳಗಳನ್ನು ಬಿಟ್ಟು ಹೊರಬರುವುದೂ ಇದಕ್ಕೆ ಒಂದು ಪರ್ಯಾಯ ಮಾರ್ಗ. ಈ ಮಾರ್ಗದ ಅನ್ವೇಷಣೆಯ ಉದ್ದೇಶವೂ ಪ್ರಾಜೆಕ್ಟ್560 ಹಬ್ಬದ ಹಿಂದಿದೆ’ ಎಂದು ಎನ್ನುತ್ತಾರೆ ಸುಮನಾ.
ವಿವರಗಳಿಗಾಗಿ http://indiaifa.org ಸಂಪರ್ಕಿಸಬಹುದು.
ಮಾಸ್ತಿ ಚಾಕ್ಲೇಟ್
ಪ್ರಾಜೆಕ್ಟ್ 560 ಹಬ್ಬದಲ್ಲಿ ಕನ್ನಡದ ಸಣ್ಣಕತೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕುರಿತಾದ ಪ್ರದರ್ಶವೂ ಇದೆ. ಜೂನ್ 6ರಂದು ಮಾಸ್ತಿ ಅವರ ಜನ್ಮದಿನ. ಮಾಸ್ತಿ ನಿಧನರಾದದ್ದು ಕೂಡ ಜೂನ್ 6ರಂದೇ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ 560 ಹಬ್ಬದಲ್ಲಿ ಮೌನೇಶ ಬಡಿಗೇರ ಅವರ ಕಲಾ ತಂಡ ಜೂನ್ 6ರಂದು ‘ಮಾಸ್ತಿ ಚಾಕ್ಲೆಟ್’ ಎಂಬ ವಿಭಿನ್ನ ಪ್ರದರ್ಶನ ನೀಡಲಿದೆ.
‘ಮಾಸ್ತಿ ನಡಿಗೆ: ಕತೆಗಳ ಕಡೆಗೆ’ ಎಂಬ ಘೋಷವಾಕ್ಯದ ಈ ಪ್ರದರ್ಶನದ ಮೊದಲನೇ ಹಂತದಲ್ಲಿ ಸಂಜೆ 6 ಗಂಟೆಗೆ ಮಾಸ್ತಿ ವೇಷಧಾರಿ ನಟ ಮಹೇಶ್ ಪಲ್ಲಕ್ಕಿ ಗಾಂಧಿ ಬಜಾರಿನ ಹಿರಿಚೌಕದಿಂದ ಬಸವನಗುಡಿ ಕ್ಲಬ್‌ನವರೆಗೂ ಬಂದು ಅಲ್ಲಿಂದ ಮತ್ತೆ ಡಿವಿಜಿ ರಸ್ತೆಯ ಮೂಲಕ ಟಿ.ಆರ್. ಶಾಮಣ್ಣ ಉದ್ಯಾನವನದ ಬಯಲು ರಂಗಮಂದಿರದ ಕಡೆಗೆ ಸಾಗುತ್ತಾರೆ.
ಈ ನಡಿಗೆಯಲ್ಲಿ ಕವಿ, ಕಲಾವಿದರು, ಮಾಸ್ತಿ ಅಭಿಮಾನಿಗಳು, ವಿದ್ಯಾರ್ಥಿಗಳು ಹೀಗೆ ಯಾರು ಬೇಕಾದರೂ ಭಾಗವಹಿಸಬಹುದು. ಮಾಸ್ತಿ ನಡಿಗೆ ಟಿ.ಆರ್. ಶಾಮಣ್ಣ ಉದ್ಯಾನವನದ ಬಯಲು ರಂಗಮಂದಿರಕ್ಕೆ ಬಂದ ನಂತರ ಮಾಸ್ತಿಯವರ ಆಯ್ದ ಎರಡು ಕತೆಗಳ ರಂಗದರ್ಶನ ನಡೆಯಲಿದೆ.
‘ನಗರದ ಇತಿಹಾಸವನ್ನು ಮರುಕಲ್ಪಿಸಿಕೊಳ್ಳುವ ಪ್ರಯತ್ನ’
*ಪ್ರಾಜೆಕ್ಟ್ 560 ಹುಟ್ಟಿಕೊಂಡಿದ್ದು ಹೇಗೆ? ಅದರ ರೂಪುರೇಷೆಗಳು ಹೇಗೆ ರೂಪುಗೊಂಡವು?
ನಮ್ಮ ದೇಶದಲ್ಲಿ ಕಲಾಪ್ರದರ್ಶನಕ್ಕೆ ಇರುವ ಅಗತ್ಯಗಳು ಮತ್ತು ಬೇಡಿಕೆಗಳನ್ನು ಅರಿಯಲು ಕೆಲವು ವರ್ಷಗಳ ಹಿಂದೆ 10 ನಗರಗಳಲ್ಲಿ ನಾವೊಂದು ಸಂಶೋಧನೆ ಮಾಡಿದ್ದೆವು. ಇದರಿಂದ ಕಲಾಪ್ರದರ್ಶನಕ್ಕೆ ಇರುವ ಗಂಭೀರ ಕೊರತೆಗಳು ನಮ್ಮ ಅರಿವಿಗೆ ಬಂದವು.
ಇಂದು ಹಲವಾರು ಕಲಾವಿದರು ತಮ್ಮ ಕಲಾ ಚಟುವಟಿಕೆಗಳಿಗೆ ಅನೌಪಚಾರಿಕ ಸ್ಥಳಗಳನ್ನೇ ಆಯ್ದುಕೊಂಡಿದ್ದಾರೆ.
ಅವರಲ್ಲಿ ಕೆಲವರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅನೌಪಚಾರಿಕ ಸ್ಥಳಗಳನ್ನು ಆಯ್ದುಕೊಂಡಿದ್ದರೆ, ಇನ್ನು ಕೆಲವರು ಆಯಾ ಸ್ಥಳಗಳಿಂದ ಸ್ಫೂರ್ತಿಯನ್ನು ಪಡೆದು ಮತ್ತು ಇದರಿಂದ ಎದುರಾಗುವ ಸೃಜನಶೀಲತೆಯ ಸವಾಲನ್ನು ಸ್ವೀಕರಿಸಲು ಇಂತಹ ಜಾಗಗಳನ್ನು ಆಯ್ದುಕೊಂಡಿದ್ದಾರೆ.
ಇಂದು ನಗರದಲ್ಲಿ ಕಲೆಗೆ ಇರುವ ಸ್ಥಳ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅಭಿವೃದ್ಧಿ ಮಾದರಿಗಳು ವಾಣಿಜ್ಯೀಕರಣಗೊಂಡು ಕಲೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣ ಮರೆಯುತ್ತಿವೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಕಲಾ ಪ್ರದರ್ಶನಗಳನ್ನು ನೀಡಿ ಆ ಮೂಲಕ ನಗರದ ಇತಿಹಾಸವನ್ನು ಮರುಕಲ್ಪಿಸಿಕೊಳ್ಳುವ ಉದ್ದೇಶದಿಂದ ‘ಪ್ರಾಜೆಕ್ಟ್ 560 ಹಬ್ಬ’ ಆಯೋಜಿಸಿದೆವು.
*ಹಳೆಯ ಸಂಗತಿಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯ ಇದೆಯೇ?
ಈ ಬದಲಾವಣೆಯ ಕಾಲಘಟ್ಟದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿ ಇತಿಹಾಸವನ್ನು ಅರ್ಥೈಸಿಕೊಳ್ಳಬೇಕು. ತಾನು ಎಲ್ಲಿಂದ ಬಂದಿದ್ದೇನೆ ಎಂಬುದರ ಕುರಿತೇ ಅರಿವಿಲ್ಲದೆ ವ್ಯಕ್ತಿ ತಾನು ಈಗ ಎಲ್ಲಿ ನಿಂತಿದ್ದೇನೆ? ಎಲ್ಲಿಗೆ ಹೋಗಬೇಕಾಗಿದೆ ಎಂಬುದು ತಿಳಿಯುವುದಾದರೂ ಹೇಗೆ?
*ಈ ಯೋಜನೆಗೆ ಬೆಂಗಳೂರನ್ನೇ ಯಾಕೆ ಆಯ್ದುಕೊಂಡಿರಿ?
ಬೆಂಗಳೂರು ಐಎಫ್‌ಎ ಸಂಸ್ಥೆಯ ಮನೆ... ಈ ನಗರ ನಮ್ಮನ್ನು ಎರಡು ದಶಕಗಳಿಂದ ಪೋಷಿಸಿಕೊಂಡು ಬಂದಿದೆ. ಆದ್ದರಿಂದ ಬೆಂಗಳೂರಿನಲ್ಲಿಯೇ ಈ ಹಬ್ಬ ಆಚರಿಸಲು ನಿರ್ಧರಿಸಿದೆವು.
*ಪ್ರತಿವರ್ಷ ಇಂತಹ ಹಬ್ಬ ಹಮ್ಮಿಕೊಳ್ಳುವ ಉದ್ದೇಶ ಇದೆಯೇ?
ಖಂಡಿತ. ನಮಗೆ ಸೂಕ್ತ ಬೆಂಬಲ ದೊರೆತರೆ ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಇಂತಹ ಹಬ್ಬಗಳನ್ನು ಆಚರಿಸುವ ಉದ್ದೇಶವಿದೆ.
–ಅರುಂಧತಿ ಘೋಷ್
ಐಎಎಫ್‌ಎ ಕಾರ್ಯನಿರ್ವಾಹಕ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.