ADVERTISEMENT

ಕಿರುಪಥವೂ ವಾತ್ಸಲ್ಯಪಥವೂ...

​ಪ್ರಜಾವಾಣಿ ವಾರ್ತೆ
Published 12 ಜೂನ್ 2015, 19:30 IST
Last Updated 12 ಜೂನ್ 2015, 19:30 IST
‘ಅಹಂ ಬ್ರಹ್ಮಾಸ್ಮಿ’ ಕಿರುಚಿತ್ರ ಪ್ರದರ್ಶನದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಅವರಿಗೆ ಸನ್ಮಾನ ಮಾಡಲಾಯಿತು.  ನಟರಾದ ವಾದಿರಾಜ್‌, ತಬಲಾ ನಾಣಿ, ನಿರ್ದೇಶಕರಾದ ನಾಗೇಶ್‌ ಕಾರ್ತಿ, ಶಶಾಂಕ್‌, ಬಿ.ಎಂ. ಗಿರಿರಾಜ್‌ ಇತರರು ಚಿತ್ರದಲ್ಲಿದ್ದಾರೆ.
‘ಅಹಂ ಬ್ರಹ್ಮಾಸ್ಮಿ’ ಕಿರುಚಿತ್ರ ಪ್ರದರ್ಶನದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಅವರಿಗೆ ಸನ್ಮಾನ ಮಾಡಲಾಯಿತು. ನಟರಾದ ವಾದಿರಾಜ್‌, ತಬಲಾ ನಾಣಿ, ನಿರ್ದೇಶಕರಾದ ನಾಗೇಶ್‌ ಕಾರ್ತಿ, ಶಶಾಂಕ್‌, ಬಿ.ಎಂ. ಗಿರಿರಾಜ್‌ ಇತರರು ಚಿತ್ರದಲ್ಲಿದ್ದಾರೆ.   

‘ನಿರ್ದೇಶಕ ಗಿರಿರಾಜ್ ಅವರ ಜತೆ ಸೇರಿ ಕೆಲಸ ಮಾಡಬೇಕು ಎಂದುಕೊಂಡಿದ್ದೆ. ಈವರೆಗೂ ಅದು ಸಾಧ್ಯವಾಗಲಿಲ್ಲ. ಈಗ ಅವರಿಂದಲೇ ಹೊಗಳಿಸಿಕೊಳ್ಳುತ್ತಿದ್ದೇನೆ.’ ಹೀಗೆ ತಮ್ಮ ಸಿನಿಮಾ ದಿನಗಳ ಆರಂಭಿಕ ಸೈಕಲ್ ತುಳಿತವನ್ನು ನೆನಪಿಸಿಕೊಂಡರು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್.

ಬಿ.ಎಂ. ಗಿರಿರಾಜ್ ಕಥೆ ಆಧಾರಿತ, ನಾಗೇಶ್ ಕಾರ್ತಿ ನಿರ್ದೇಶನದ ‘ಅಹಂ ಬ್ರಹ್ಮಾಸ್ಮಿ’ ಎರಡು ವರ್ಷಗಳ ಹಿಂದೆ ಸಿದ್ಧವಾದ ಕಿರುಚಿತ್ರ. ಆ ಕಿರುಚಿತ್ರವನ್ನು ತೋರಿಸಿ ಎನ್ನುವ ಚಿತ್ರತಂಡದ ಒತ್ತಾಸೆಗೆ ಮಣಿದು ನಿರ್ದೇಶಕರು ಕಿರುಚಿತ್ರದ ಪ್ರದರ್ಶನ ಮತ್ತು ಸಂಚಾರಿ ವಿಜಯ್‌ಗೆ ಸನ್ಮಾನ ಹಮ್ಮಿಕೊಂಡಿದ್ದರು. ನಿರ್ದೇಶಕ ಶಶಾಂಕ್ ಆ ಕಾರ್ಯಕ್ರಮದ ಮುಖ್ಯ ಅತಿಥಿ.

ತಬಲಾ ನಾಣಿ ಅವರ ಆರ್ಕೆಸ್ಟ್ರಾ ತಂಡದಲ್ಲಿ ವಿಜಯ್ ಗಾಯಕರಾಗಿದ್ದವರು. ನಾಣಿ ಅವರು ಕಲಾವಿದರ ಜತೆ ನಡೆದುಕೊಳ್ಳುವ ಆತ್ಮೀಯತೆಯನ್ನು ತಮ್ಮ ನೆನಪಿನ ಜೋಳಿಗೆಯಿಂದ ತೆಗೆದಿಟ್ಟರು ವಿಜಯ್. ‘ಒಂದೂವರೆ ವರುಷಗಳ ಕಾಲ ನಾಣಿ ಅವರ ಆರ್ಕೆಸ್ಟ್ರಾ ತಂಡದಲ್ಲಿದ್ದೆ. ಒಮ್ಮೆ ರಾತ್ರಿ ಆರ್ಕೆಸ್ಟ್ರಾ ಮುಗಿಸಿ ಬರುವುದು ತಡವಾಯಿತು. ಮಳೆ, ಹಸಿವು. ಮಿನರ್ವ ಸರ್ಕಲ್ ಹತ್ತಿರ ಬಂದೆವು. ರಾತ್ರಿ ಎರಡು ಗಂಟೆಯಲ್ಲಿ ಒಂದು ಹೋಟೆಲ್ ತೆರೆದಿತ್ತು. ಉದ್ದ ಕ್ಯೂ... ನಾನು ನೋಡುತ್ತಾ ನಿಂತೆ. ನಾಣಿ ಎಲ್ಲರನ್ನೂ ಮುಂದೆ ದೂಡಿ ಊಟ ಕೊಡಿಸಿದರು’ ಎಂದು ನೆನಪಿಸಿಕೊಂಡ ವಿಜಯ್, ಶಶಾಂಕ್ ಅವರಲ್ಲಿಯೂ ಕೆಲಸ ಕೇಳಿಕೊಂಡು ಹೋಗಿದ್ದರಂತೆ. ಆ ಸಂದರ್ಭವನ್ನೂ ನೆನಪಿಸಿಕೊಂಡರು.

‘ನಾವು ಯಾವುದಾದರೂ ಕಥೆ ಮಾಡಿಕೊಂಡು ಅರ್ಧರ್ಧ ಗಂಟೆಗಳ ನಾಲ್ಕು ಬಿಡಿ ಬಿಡಿ ಸಿನಿಮಾ ಮಾಡಿ ಅದನ್ನು ಚಿತ್ರಮಂದಿರದಲ್ಲಿ ಎರಡು ಗಂಟೆಗಳಲ್ಲಿ ಪ್ರದರ್ಶಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದೆವು. ಆಗ ಪತ್ರಿಕೆಯಲ್ಲಿ ಪ್ರಕಟವಾದ ನನ್ನದೇ ಕಥೆಯನ್ನು ಸಿನಿಮಾ ಮಾಡುವುದಾಗಿ ನಾಗೇಶ್ ಆರಿಸಿಕೊಂಡರು. ಸದ್ಯ ಒಂದು ಚಿತ್ರ ನಿರ್ಮಾಣವಾಗಿದೆ. ಇನ್ನು ಮೂರು ಚಿತ್ರಗಳು  ನಿರ್ಮಾಣವಾಗುತ್ತವೆಯೋ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದು ಗಿರಿರಾಜ್ ಹೇಳಿದರು. ‘ವಿಜಯ್ ನಮ್ಮೆಲ್ಲರ ಊಹೆಯನ್ನು ಮೀರಿ ಈಗ ಮೀರಿ ಬೆಳೆದಿದ್ದಾರೆ’ ಎಂದು ಶಶಾಂಕ್ ಖುಷಿಪಟ್ಟರು. ತಬಲಾ ನಾಣಿ, ನಟ ವಾದಿರಾಜ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.