ADVERTISEMENT

ಕೀನ್ಯಾಗೆ ಕರೀತಾರೆ...

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST
ಕೀನ್ಯಾಗೆ ಕರೀತಾರೆ...
ಕೀನ್ಯಾಗೆ ಕರೀತಾರೆ...   

`ಇನ್ನೇನು ಕೆಲವೇ ದಿನಗಳಲ್ಲಿ ಮಲಿಲಿಯಲ್ಲಿ ಬೃಹತ್ ಸಿಲಿಕಾನ್ ನಗರವೇ ತಲೆ ಎತ್ತಲಿದೆ. ಇದು ನಿಮ್ಮ ಸಿಲಿಕಾನ್ ಸಿಟಿಯನ್ನೂ ಹಿಂದಿಕ್ಕುವುದು ಖಂಡಿತ. ಆ ವೈಭವೋಪೇತ ಹಾಗೂ ಸುಸಜ್ಜಿತ ಸಿಲಿಕಾನ್ ಸಿಟಿಯನ್ನು ನೋಡಲು ನೀವು ಬರಲೇಬೇಕು. ಬರುವಾಗ ಪ್ರವಾಸಿಗಳಾಗಿ ಬನ್ನಿ. ಒಂದಷ್ಟು ದಿನ ಇದ್ದು ನಮ್ಮ ಆತಿಥ್ಯ ಸ್ವೀಕರಿಸಿ~ ಎಂದು ಕೀನ್ಯಾ ಪ್ರವಾಸ ಮಂಡಳಿಯ ನಿರ್ದೇಶಕಿ ಜೆನ್ನಿಫರ್ ಒಪೊಂಡೊ ಬೆಂಗಳೂರಿಗರಿಗೆ ಆಹ್ವಾನ ನೀಡಿದರು.

ಮನುಕುಲದ ತೊಟ್ಟಿಲು ಎಂದೇ ಕರೆಯುವ ಆಫ್ರಿಕಾ ಖಂಡಕ್ಕೆ ಒಂದು ಕಾಲದಲ್ಲಿ ಕೀನ್ಯಾ ಕೇಂದ್ರ ಪ್ರದೇಶವಾಗಿತ್ತು. ಭೂಮಧ್ಯ ರೇಖೆಯಲ್ಲಿರುವ ಈ ರಾಷ್ಟ್ರದಲ್ಲಿ ಹಸಿರು ಗಿರಿಗಳ ಸಾಲು, ಸಕಲ ಪ್ರಾಣಿ-ಪಕ್ಷಿ ಸಂಕುಲ, ಅಷ್ಟೇ ಹಿತವೆನಿಸುವ ಹವೆ, ಸಮುದ್ರ, ಮರುಭೂಮಿ ಹೀಗೆ ಭೂಮಿಯ ಮೇಲೆ ಇರಬಹುದಾದ ಎಲ್ಲಾ ಬಗೆಯ ವೈವಿಧ್ಯಗಳಿವೆ.

ಕಳೆದ ಐದು ವರ್ಷಗಳಿಂದ ಕೀನ್ಯಾ ದೇಶ ಸುತ್ತಿ ಬರುತ್ತಿರುವ ಭಾರತೀಯರ ಸಂಖ್ಯೆ ಶೇ 70ರಷ್ಟು ಏರಿಕೆಯಾಗಿದೆ. 2011ರಲ್ಲಿ ಒಂದು ಲಕ್ಷ ಭಾರತೀಯರು ಕೀನ್ಯಾ ಪ್ರವಾಸ ಕೈಗೊಂಡಿರುವ ಸಂಗತಿ ಆ ದೇಶದ ಪ್ರವಾಸೋದ್ಯಮದ ಆಸೆಯನ್ನು ಚಿಗುರಿಸಿದೆ.

ಹೀಗಾಗಿ ಕೀನ್ಯಾ ಪ್ರವಾಸೋದ್ಯಮ ತನ್ನ ವಹಿವಾಟು ವಿಸ್ತರಣೆಯ ದೃಷ್ಟಿಯಿಂದ ಭಾರತದತ್ತ ಮುಖ ಮಾಡಿದೆ. ಇದಕ್ಕಾಗಿ ಕೀನ್ಯಾ ಪ್ರವಾಸಿ ಮಂಡಳಿ ಹಾಗೂ 17 ಇತರ ಕಂಪೆನಿಗಳ ಪ್ರತಿನಿಧಿಗಳನ್ನೊಳಗೊಂಡ ಬೃಹತ್ ತಂಡ ಈಗ ಭಾರತದಾದ್ಯಂತ ಸುತ್ತಾಡುತ್ತಿದೆ. ಹೀಗೆ ಅವರು ಬೆಂಗಳೂರಿಗೂ ಬಂದಿದ್ದರು.

`ಭಾರತ ಹಾಗೂ ಕೀನ್ಯಾ ಸಂಬಂಧಕ್ಕೆ ಒಂದು ಇತಿಹಾಸವೇ ಇದೆ. 18ನೇ ಶತಮಾನದಲ್ಲಿ ಬ್ರಿಟಿಷರು ಉಗಾಂಡದಿಂದ ಹಿಂದೂ ಮಹಾಸಾಗರಕ್ಕೆ ರೈಲು ಹಳಿ ನಿರ್ಮಾಣ ಕಾಮಗಾರಿಗಾಗಿ ಒಂದು ತುಕಡಿ ಭಾರತೀಯರನ್ನು ಕರೆತಂದಿದ್ದರು.

ಕೀನ್ಯಾದ ಸೌಂದರ್ಯಕ್ಕೆ ಮಾರು ಹೋಗಿ ಆ ಕುಟುಂಬಗಳು ಅಲ್ಲಿಯೇ ನೆಲೆಯೂರಿದವು. ಹೀಗಾಗಿ ಇಲ್ಲಿ ಭಾರತೀಯ ಸಂಸ್ಕೃತಿಯೂ ಹಾಸುಹೊಕ್ಕಿದೆ. ದೀಪಾವಳಿ ಹಬ್ಬಕ್ಕೆ ರಜೆ ನೀಡುವ ಮೂಲಕ ಇಡೀ ರಾಷ್ಟ್ರವೇ ಹಬ್ಬವನ್ನು ಆಚರಿಸುತ್ತದೆ. ಭಾರತೀಯ ಊಟೋಪಚಾರಗಳು ಇಲ್ಲಿ ಲಭ್ಯ.

ಬಾಲಿವುಡ್ ಇಲ್ಲಿನ ನಾಡಿ ಮಿಡಿತ. ಹಿಂದಿಯ ಗಂಧಗಾಳಿಯೂ ಗೊತ್ತಿಲ್ಲದ ಸ್ವಹೀಲಿ ಮಾತನಾಡುವವರೂ ಹಿಂದಿ ಹಾಡುಗಳನ್ನು ಗುನುಗುತ್ತಾರೆ. ಶಾರುಕ್ ಖಾನ್ ಸಿನಿಮಾಗಳು ಗೀತೆಗಳು ಉಲಿಯುತ್ತವೆ~ ಎಂದು ಜೆನ್ನಿಫರ್ ಅತ್ಯಂತ ಅಭಿಮಾನದಿಂದ ಕೀನ್ಯಾ ಹಾಗೂ ಭಾರತದ ನಡುವಿನ ಸಂಬಂಧವನ್ನು ಹಂಚಿಕೊಂಡರು.

ಕೀನ್ಯಾದಲ್ಲಿ ಒಟ್ಟು 64 ಗೇಮ್ ಪಾರ್ಕ್‌ಗಳಿವೆ. ಇವುಗಳಲ್ಲಿ ರಾಷ್ಟ್ರೀಯ ಉದ್ಯಾನ, ಹಿಂದೂ ಮಹಾಸಾಗರದಲ್ಲಿನ ಗೇಮ್ ಪಾರ್ಕ್‌ಗಳು, ಸಾಹಸ ಉದ್ಯಾನಗಳು ಸೇರಿವೆ. ವನ್ಯಮೃಗಗಳ ಸಫಾರಿ, ಹಕ್ಕಿಗಳ ಸಫಾರಿ, ಒಂಟೆ ಸಫಾರಿ, ಸಾಂಸ್ಕೃತಿಕ ಸಫಾರಿ ಪ್ರವಾಸಿಗರನ್ನು ಸಂಪೂರ್ಣವಾಗಿ ಬೇರೆ ಲೋಕಕ್ಕೇ ಕರೆದೊಯ್ಯಲಿದೆ.

ಭಾರತದಲ್ಲಿ ಆರ್ಥಿಕ ಚೇತರಿಕೆಯಿಂದ ವಿಶ್ವದ ವಿವಿಧ ಪ್ರವಾಸೋದ್ಯಮ ಸಂಸ್ಥೆಗಳು ಭಾರತದ ಪ್ರವಾಸಿಗರತ್ತ ಮುಗಿಬಿದ್ದಿವೆ. ವಾರ್ಷಿಕ 1.2 ಕೋಟಿ ಭಾರತೀಯ ಪ್ರವಾಸಿಗರು ಕೀನ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ. 2015ರ ವೇಳೆಗೆ ಒಂದೂವರೆ ಕೋಟಿಗೆ ಹೆಚ್ಚಿಸಿಕೊಳ್ಳುವುದು ಕೀನ್ಯಾ ಪ್ರವಾಸಿ ಮಂಡಳಿಯ ಗುರಿ.

`ನಮ್ಮಲ್ಲಿ ಹಲವಾರು ಸಫಾರಿಗಳಿವೆ. ಆಫ್ರಿಕಾದ ಸಫಾರಿಗಳು ಸಹಜವಾಗಿರಬೇಕು ಎಂಬ ಆಶಯ. ಕೀನ್ಯಾದ ಎಲ್ಲಾ ಪ್ರಮುಖ ತಾಣಗಳನ್ನು ವೀಕ್ಷಿಸಬೇಕೆಂದರೆ ಕನಿಷ್ಟ ಹದಿನೈದು ದಿನ ಬೇಕು. ಆದರೆ ಐದು ದಿನಗಳ ಪ್ರವಾಸವನ್ನು ಶಿಫಾರಸ್ಸು ಮಾಡುತ್ತೇವೆ. ಒಬ್ಬ ವ್ಯಕ್ತಿಗೆ ತಗಲುವ ವೆಚ್ಚ 80 ಸಾವಿರ ರೂಪಾಯಿ. ಅವರವರ ಅಪೇಕ್ಷೆಗೆ ತಕ್ಕಂಥ ತಾಣಗಳನ್ನು ಒಳಗೊಳ್ಳುವ ಪ್ರವಾಸಿ ಪ್ಯಾಕೇಜ್‌ಗಳನ್ನು ಮಾಡಲಾಗಿದೆ ಎಂದು ಕೀನ್ಯಾ ಪ್ರವಾಸಿ ಮಂಡಳಿಯ ಶಿವಾಲಿ ಸೂರಿ ಅವರು ತಿಳಿಸುತ್ತಾರೆ.

`ಭಾರತೀಯ ಚಿತ್ರರಂಗಕ್ಕೂ ಕೀನ್ಯಾ ಆಹ್ವಾನ ನೀಡಿದೆ. ಚಲನಚಿತ್ರ ಸಮಿತಿಯನ್ನೂ ಸ್ಥಾಪಿಸಲಾಗಿದೆ. ಚಿತ್ರ ನಿರ್ಮಾಣ ಸಂಸ್ಥೆಗಳಿಗೆ ತಾಣಗಳನ್ನು ತೋರಿಸುವ, ಬೇಕಾದ ಅನುಕೂಲಗಳನ್ನು ಮಾಡಿಕೊಡಲು ಗೈಡ್‌ಗಳನ್ನು ನೇಮಿಸುವ ವ್ಯವಸ್ಥೆ ಮಾಡಲಿದೆ~ ಎಂದು ಜೆನ್ನಿಫರ್ ತಿಳಿಸಿದರು.

`ದೆಹಲಿ, ಮುಂಬೈ ಮುಗಿಸಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ನನಗೆ ನೈರೋಬಿಯ ನೆನಪಾಯಿತು. ಇಲ್ಲಿನ ಹಸಿರು, ವಸತಿ ಪ್ರದೇಶಗಳ ವಿನ್ಯಾಸ ಹಾಗೂ ಸುತ್ತಲಿನ ಪರಿಸರ ಇತರ ಭಾರತೀಯ ನಗರಗಳಿಗೆ ಹೋಲಿಸಿದಲ್ಲಿ ಬೆಂಗಳೂರು ನೈರೋಬಿಗೆ ಬಹಳ ಸಾಮ್ಯತೆ ಇದೆ. ನನಗೆ ಬೆಂಗಳೂರು ನೈರೋಬಿಯಷ್ಟೇ ಇಷ್ಟ~ ಎಂದ ಜೆನ್ನಿಫರ್ ಮತ್ತೊಮ್ಮೆ ಬೆಂಗಳೂರಿಗರನ್ನು ಕೀನ್ಯಾಕ್ಕೆ ಆಹ್ವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.