
ರಾಮಾಯಣ ಮತ್ತು ರಾಮನನ್ನು ಹಲವು ಸಾಂಸ್ಕೃತಿಕ ದೃಷ್ಟಿಕೋನಗಳಿಂದ ನೋಡುವ ಪ್ರಯತ್ನ ನಡೆದಿದೆ. ಲೆಕ್ಕವಿಲ್ಲದಷ್ಟು ಸಿನಿಮಾ, ನಾಟಕಗಳು ಪ್ರಯೋಗಗೊಂಡಿವೆ. ಆದರೆ ಇಡೀ ರಾಮಾಯಣದ ಮುಖ್ಯ ಆಶಯವನ್ನು, ಪ್ರಮುಖ ಘಟ್ಟಗಳನ್ನು ನಾಟ್ಯದಲ್ಲಿ ಹಿಡಿದಿಡುವ ಪ್ರಯತ್ನ ವಿರಳವಾಗಿದೆ. ಒಂದೊಂದು ಪ್ರಸಂಗವನ್ನು ವಿಸ್ತೃತವಾಗಿ ನೋಡುವ ನಾಟ್ಯ ಪ್ರಯೋಗಗಳು ನಡೆದಿವೆ.
ಬಾಲರಾಮನನ್ನು ಸುಪ್ರಭಾತದೊಂದಿಗೆ ಎದ್ದೇಳಿಸುವುದದರಿಂದ ಹಿಡಿದು ರಾವಣ ವಧೆಯವರೆಗೆ, ರಾಮ ಬೆಳೆಯುವ ಬಗೆ ಕಂಡು ಹಿಗ್ಗುವ ಕೌಸಲ್ಯ, ಸೀತಾ ಪರಿಣಯ, ಪಟ್ಟಾಭಿಷೇಕ ಸಂಭ್ರಮ, ಮಂಥರೆ ಪ್ರಸಂಗ, ವನವಾಸ, ಗುಹನ ತುಂಟತನದ ಮಾತುಗಳು, ಶಬರಿ ಭಕ್ತಿ, ಹನುಮಂತ ಪ್ರವೇಶ, ಲಂಕಾ ದಹನ, ಸೇತು ನಿರ್ಮಾಣ ಮತ್ತು ರಾವಣ ವಧೆ ಇವಿಷ್ಟು ಕತೆಗಳು ನೃತ್ಯ ರೂಪಕದಲ್ಲಿ ಸೃಷ್ಟಿಯಾಗಿದ್ದು ಚಿತ್ರಕಲಾ ಪರಿಷತ್ತಿನಲ್ಲಿ. ಅದರಲ್ಲೂ ವಿಶೇಷವೆಂದರೆ ಇದೊಂದು ಏಕವ್ಯಕ್ತಿ ಪ್ರದರ್ಶನ.
ಹಿಂದೆ ಹಳ್ಳಿಗಳಲ್ಲಿ ರಾತ್ರಿ ಊಟದ ಬಳಿಕ ನಾಟಕ ಇತ್ಯಾದಿ ಮನೋರಂಜನೆಗಳು ನಡೆಯುತ್ತಿದ್ದವು. ಬೆಂಗಳೂರಿನ ಮಟ್ಟಿಗೆ ಇದು ಹೊಸದು. ಅಲ್ಲಲ್ಲಿ ಯಕ್ಷಗಾನ, ನಾಟಕಗಳು ನಡೆದರೂ ಮುಕ್ತ ಬಯಲಿನಲ್ಲಿ ಹತ್ತರ ಬಳಿಕ ಕಾರ್ಯಕ್ರಮ ನಡೆಯುವುದು ವಿರಳ. ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ‘ರಾಮ ಕಥೆ’ ಇಂಥದ್ದೊಂದು ಸಾಧ್ಯತೆಯನ್ನು ತೆರೆದಿಟ್ಟಿತು.
ರಾಮ ಕಥೆಯ ಕೇಂದ್ರ ಬಿಂದು ಗುರು ಸತ್ಯನಾರಾಯಣ ರಾಜು. ಒಂದು ಗಂಟೆಯ ಕಾಲ ನಿರಾಯಾಸವಾಗಿ ಸತ್ಯನಾರಾಯಣ ರಾಜು ಅವರು ವಿವಿಧ ಪಾತ್ರಗಳ ಪ್ರವೇಶ ಮಾಡಿದರು. ತಂದೆ, ತಾಯಿ, ಸೇವಕ, ಭಕ್ತ, ಸಾಹಸಿ, ರಾಕ್ಷಸಿ, ರಾಕ್ಷಸ ಹೀಗೆ ಎಲ್ಲ ಪಾತ್ರಗಳ ಪರಕಾಯ ಪ್ರವೇಶ ಮಾಡಿದರು. ಪ್ರೀತಿ, ಭಕ್ತಿ, ಅಸೂಯೆ, ವೈರತ್ವ ಎಲ್ಲವನ್ನೂ ವೇದಿಕೆ ಮೇಲೆ ತಂದರು.
ಏಕ ವ್ಯಕ್ತಿ ಪ್ರದರ್ಶನವಾಗಿ ರಾಮ ಕಥೆಯ ಪರಿಕಲ್ಪನೆಯನ್ನು ಸತ್ಯನಾರಾಯಣ ರಾಜು ಅವರ ಮುಂದಿಟ್ಟವರು ಆರ್.ಕೆ. ಉಷಾ. ಗುರು ಭಾನುಮತಿ ಅವರ ನೆರವಿನೊಂದಿಗೆ ಸತ್ಯನಾರಾಯಣ ರಾಜು ರಾಮಕಥೆಯನ್ನು ಸೃಷ್ಟಿಸಿದರು. ನವದೆಹಲಿ, ಮುಂಬೈ, ಚೆನ್ನೈ, ಇಂಫಾಲ ಮತ್ತು ಸಿಂಗಪುರಗಳಲ್ಲಿ ಸತ್ಯನಾರಾಯಣ ರಾಜು ಅವರ ‘ರಾಮ ಕಥೆ’ ಮೆಚ್ಚುಗೆ ಪಡೆದಿತ್ತು.
ಬೆಂಗಳೂರಿಗೆ ಇದನ್ನು ತಂದವರು ಹೂವು ಕಲಾ ಪ್ರತಿಷ್ಠಾನ. ಅದಕ್ಕೆ ಸಹಯೋಗ ನೀಡಿದವರು ಹೋಮ್‌ಟೌನ್ ಪ್ರೊಡಕ್ಷನ್ಸ್. ದಿವಂಗತ ತಾಯಿಯ ನೆನಪಿನಲ್ಲಿ ನಟಿ ಭಾವನಾ ಹೂವು ಪ್ರತಿಷ್ಠಾನ ಹುಟ್ಟುಹಾಕಿ ವಿನೂತನ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿದ್ದಾರೆ. ಹಿಂದೆ ಅವರ ‘ಮಾತೃನಮನ’ ನಾಟ್ಯ ಗಮನ ಸೆಳೆದಿತ್ತು. ಇದರಿಂದ ಹುಮ್ಮಸ್ಸುಗೊಂಡಿರುವ ಭಾವನಾ ‘ಭಾವಾಂಗನ’ ಎಂಬ ಸರಣಿ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಮುಂದಿನ ವರ್ಷದಿಂದ ಜನವರಿಯಿಂದ ಮೇ ತಿಂಗಳವರೆಗೆ ಪ್ರತಿ ಎರಡನೇ ಶನಿವಾರ ಚಿತ್ರಕಲಾ ಪರಿಷತ್ತಿನ ಬಯಲು ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ವರ್ಷ ರಾಮ ಕಥಾ ಮೂಲಕ ಇದಕ್ಕೆ ಮುನ್ನುಡಿ ಬರೆಯಲಾಗಿದೆ.
ನೃತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ನಿರುಪಮಾ ರಾಜೇಂದ್ರ ದಂಪತಿ, ಮಂಜು ಭಾರ್ಗವಿ, ಸುಭಾಷಿಣಿ ವಸಂತ್, ಶತಾವಧಾನಿ ಗಣೇಶ್ ಸೇರಿದಂತೆ ಸಾಕಷ್ಟು ಪ್ರೇಕ್ಷಕರು ರಾಮ ಕಥೆಗೆ ಸಾಕ್ಷಿಯಾಗಿದ್ದರು. ಸತ್ಯನಾರಾಯಣ ರಾಜು ಅವರ ನೃತ್ಯಕ್ಕೆ ಹಾಡಿನ ಮೆರುಗು ನೀಡಿದವರು ಗಾಯಕ ಡಿ.ಎಸ್. ಶ್ರೀವತ್ಸ. ನಟುವಾಂಗದಲ್ಲಿ ಶಕುಂತಲಾ ಪ್ರಭಾತ್, ಲಿಂಗರಾಜು ಅವರ ಮೃದಂಗ ಮತ್ತು ರಘುನಂದನ್ ಅವರ ವೇಣು ವಾದನ ಪುಟವಿಟ್ಟಂತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.