ADVERTISEMENT

ಗವಾಯಿ ಸ್ಮೃತಿ ಗಾನ

ಪ್ರೊ.ಮೈ.ವಿ.ಸು
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST

ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ ಅವರು ವಾದಕ, ಬೋಧಕ, ರಚನಾಕಾರರಾಗಿ ಸ್ಮರಣೀಯರು. ಹಾರ್ಮೋನಿಯಂ ವಾದಕರಾಗಿ ಅವರು ಸಾಥ್ ನೀಡದ ಗಾಯಕರೇ ವಿರಳ.

ಅಲ್ಲದೆ ಅರವಿಂದ ಸಂಗೀತ ವಿದ್ಯಾಲಯದ ಮೂಲಕ ನೂರಾರು ಜನಕ್ಕೆ ಶಿಕ್ಷಣ ನೀಡಿದ ಜನಪ್ರಿಯ ಮೇಷ್ಟ್ರು. `ಉರಗಾಚಲ~ ಅಂಕಿತದಿಂದ ನೂರಾರು ಕೃತಿ ರಚನೆ ಮಾಡಿದ್ದಲ್ಲದೆ  `ಗಾಯನಗಂಗಾ~  ಸಂಪಾದಕರಾಗಿ ಕನ್ನಡದಲ್ಲಿ ಸಂಗೀತ ಪತ್ರಿಕೆ ನಡೆಸಿದ ಸಾಹಸಿ.

ಪುಣ್ಯ ಸ್ಮೃತಿ
ಇಂಥ ಹಿರಿಯರಿಗೆ ನಾದಾಂಜಲಿ ಅರ್ಪಿಸಲು  ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ ಪುಣ್ಯ ಸ್ಮೃತಿ ಸಮಿತಿ  ಪ್ರತಿ ವರ್ಷ ಸಂಗೀತ ಸಮಾರೋಹ ಏರ್ಪಡಿಸಿ, ಹಿರಿಯ ಕಲಾವಿದರೊಬ್ಬರನ್ನು ಸನ್ಮಾನಿಸುತ್ತಾ ಬಂದಿರುವುದು ಶ್ಲಾಘನೀಯ.
 
ಈ ವರ್ಷದ ಸಮಾರೋಹದಲ್ಲಿ ಹಿರಿಯ ಕಲಾವಿದ, ಬೋಧಕ, ರಾಗಸಂಯೋಜಕ ಪಂಡಿತ್ ವಸಂತ ಬಿ. ಕನಕಾಪುರ ಅವರಿಗೆ  ಸಂಗೀತ ಶಿರೋಮಣಿ  ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೊದಲಿಗೆ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಮೇಲ್ವಿಚಾರಕ ಸ್ವಾಮಿ ಸ್ವಾತ್ಮಾರಾಮಾನಂದಜಿ ಅವರು ಶೇಷಾದ್ರಿ ಗವಾಯಿಗಳ ಕೆಲ ರಚನೆಗಳನ್ನು ಹಾಡಿದರು. ಭೈರವಿ ರಾಗದಲ್ಲಿ `ನಿಂದಾಸ್ತುತಿ~ಯ ರೂಪದಲ್ಲಿದ್ದ `ಮಾಡಿದುದು ಏನೆಂದು ಮಹದೇವ ಮುನಿದಿರುವೆ~  ಮತ್ತು ಆಹಿರ್ ಭೈರವ್ ರಾಗದಲ್ಲಿ `ಇದ್ದ ಮಾತು ಇದ್ದಂತೆ ನುಡಿಯೊ~ ಸುಶ್ರಾವ್ಯವಾಗಿತ್ತು.
 
ವಿ.ಎಂ. ನಾಗರಾಜರ `ರಾಮನಾಮವ ಜಪಿಸೆಲೊ ಮನವೇ~ದೊಂದಿಗೆ ಮುಕ್ತಾಯಗೊಳಿಸಿದರು. ಒಳ್ಳೆಯ ಕಂಠದಿಂದ ಇಂಪಾಗಿ ಹಾಡಿದ ಸ್ವಾಮಿಗಳ ಗಾಯನಕ್ಕೆ ಸಂದೀಪ್ ತಬಲಾ ಸಾಥ್ ನೀಡಿದರು.

ಹಾರ್ಮೊನಿಯಂನಲ್ಲಿ ಕೈಚಳಕ
ನಂತರದ ಬೈಠಕ್‌ನಲ್ಲಿ ಪಂಡಿತ್ ವಸಂತ ಬಿ. ಕನಕಾಪುರ ಅವರು ಹಾರ್ಮೊನಿಯಂ ತನಿ ವಾದನದಲ್ಲಿ ಬೃಂದಾವನ ಸಾರಂಗ ರಾಗವನ್ನು ವಿನಿಕೆ ಮಾಡಿದರು. ರಾಗದ ವಾದಿ ಸ್ವರಗಳನ್ನು ಹಿತವಾಗಿ ಸ್ಪರ್ಶಿಸುತ್ತಾ ನಿರೂಪಿಸಿದ ಬಗೆಯಲ್ಲೇ ಒಂದು ಘನತೆ ಇತ್ತು! ಒಮ್ಮೆ ಕೋಮಲವಾದ ಸಂಗತಿ ಬಂದರೆ, ಇನ್ನೊಮ್ಮೆ ಪ್ರಖರವಾದ ಸಂಚಾರ.

ವಾದ್ಯದ ಮೇಲಿರುವ ಅವರ ಪ್ರಭುತ್ವ, ಸುಲಲಿತ ವಾದನ ಹಾಗೂ ಮೋಡಿ ಮಾಡುವ ಕೈಚಳಕಗಳಿಂದ ಸಭೆಯ ಗೌರವಕ್ಕೆ ಪಾತ್ರರಾದರು. 75ರ ಇಳಿ ವಯಸ್ಸಿನಲ್ಲೂ ಹೊಮ್ಮಿದ ನಾದಸೌರಭ ಬೆರಗುಗೊಳಿಸುವಂಥಹದು. ತಬಲದಲ್ಲಿ ನೆರವಾದವರು ಮೇಘಶ್ಯಾಂ. ಪಂಡಿತ್ ವಿ.ಎಂ. ನಾಗರಾಜ್ ಅವರ ನೇತೃತ್ವದಲ್ಲಿ ಸಂಗೀತ ಸಮಾರೋಹ ನಡೆಯಿತು.

ಉದಯೋನ್ಮುಖ ಕಲಾವಿದರಿಗೆ ವೇದಿಕೆ, ಶಿಷ್ಯವೇತನದ ಮೂಲಕ ಪ್ರೋತ್ಸಾಹ, ಹಿರಿಯ ಕಲಾವಿದರ ಸನ್ಮಾನ, ಅವರ ಕಾರ್ಯಕ್ರಮ ಆಲಿಸುವ ಅವಕಾಶ ಮತ್ತಿತರ ಘನ ಉದ್ದೇಶಗಳನ್ನು ಹೊಂದಿರುವ `ಸಪ್ತಕ~ದ ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ  `ಪಂಚಂ ಝೇಂಕಾರ್~  ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ಮೊದಲಿಗೆ ಹಾಡಿದ ಪಂಡಿತ್ ಗಣಪತಿ ಭಟ್ ಹಾಸಣಗಿ ಸಂಗೀತ ಪ್ರಿಯರಿಗೆ ಪರಿಚಿತರೇ. ಪ್ರಾರಂಭಕ್ಕೆ ಧನಿಕೊನಿ ಕಲ್ಯಾಣವನ್ನು ಸಬಲವಾಗಿ ವಿಸ್ತರಿಸಿದರು. ಧೃತ್ ತೀನ್ ತಾಳದಲ್ಲಿ ವೇಗದಲ್ಲೂ ವಿರಳವಾಗಿ ಹಾಡಿದ್ದಲ್ಲದೆ ವೈವಿಧ್ಯಮಯ ತಾನುಗಳೊಂದಿಗೆ ಚೆಂದ ಕಾಣಿಸಿದರು.

ಭೂಪ್ ರಾಗದಲ್ಲಿ ಮಧ್ಯಲಯ ಹಾಗೂ ಧೃತ್ ತೀನ್ ತಾಳ್‌ನಲ್ಲಿ ಹಾಡಿದ್ದು ಮಾಧುರ್ಯಪೂರ್ಣವಾಗಿತ್ತು. `ಸಾವನಕಿ ಋತು ಆಯಿ~  ಹಾಗೂ ದೇವರನಾಮ `ದೇವಕಿ ಕಂದ ಮುಕುಂದ~  ಲಾಲಿತ್ಯದಿಂದ ಕೂಡಿತ್ತು.

ಸಿರಿ ಕಂಠ, ಚೇತೋಹಾರಿ ನಿರೂಪಣೆಗಳಿಂದ ಗಣಪತಿ ಭಟ್‌ರ ಗಾಯನ ಮೆಚ್ಚುಗೆ ಪಡೆಯಿತು. ಹಾರ್ಮೊನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಹಾಗೂ ತಬಲಾದಲ್ಲಿ ಗುರುಮೂರ್ತಿ ವೈದ್ಯ ನೆರವಾದರು.

ತನಿ ತಬಲಾ
ನಂತರ ನಡೆದ ತನಿ ತಬಲಾ ವಾದನದಲ್ಲಿ ಮುಂಬೈಯ ಡಾ. ಅನೀಶ್ ಪ್ರಧಾನ್ ಭಾಗವಹಿಸಿದರು. ತೀನ್ ತಾಳದಲ್ಲಿ ಪೇಶ್ಕಾರ್, ಕಾಯದಾ, ರೇಲಾ, ಗತ್‌ಮುಖಡಾ, ಚಕ್ರಧಾರಗಳಿಂದ ತಮ್ಮ ಸಾಧನೆ- ಪ್ರತಿಭೆಗಳನ್ನು ಬಿಂಬಿಸಿದರು.

ಯಾವುದೇ ಅಟಾಟೋಪಗಳಿಲ್ಲದ ಸಾಂಪ್ರದಾಯಿಕ ವಾದನ. ಮುಂದಿನ ಕೇಹರವಾ ತಾಳ ಸಹ ಗಮನ ಸೆಳೆಯಿತು. ಜೊತೆಗೆ ಸುಧೀರ್ ನಾಯಕರ ಹಾರ್ಮೊನಿಯಂ ಲೆಹರಾ ಆಹ್ಲಾದಕರವಾಗಿ ಮುದ ಕೊಟ್ಟಿತು.
 
ಇದೇ ಸಂದರ್ಭದಲ್ಲಿ ಯುವ ಪರಿಣಿತ ಗಾಯಕ ಧನಂಜಯ ಹೆಗಡೆ ಹಾಡಿರುವ ಹಾಡುಗಳ ಸಿ.ಡಿ ಲೋಕಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.