ADVERTISEMENT

ಚಾಟರ್ ಬಾಕ್ಸ್ ಮಾತು

ಪ್ರಜಾವಾಣಿ ವಿಶೇಷ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST
ಚಾಟರ್ ಬಾಕ್ಸ್ ಮಾತು
ಚಾಟರ್ ಬಾಕ್ಸ್ ಮಾತು   

ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಪ್ರತಿಷ್ಠಿತ ಕಂಪೆನಿಯಲ್ಲೂ ಕೈ ತುಂಬಾ ಸಂಬಳ ಬರುವ ಕೆಲಸವೂ ಸಿಕ್ಕಿತ್ತು. ಆಗ ಬೀಸಿದ ರಿಸೆಷನ್ ಗಾಳಿಗೆ ನಾನು ತತ್ತರಿಸಿದೆ. ಸಂಸ್ಥೆಗೆ ಹೊಸಬನಾದ ಪರಿಣಾಮ ಕಂಪೆನಿಯಿಂದ ಹೊರಬಿದ್ದ ಇನ್ನೂರು ಮಂದಿಯ ಪೈಕಿ ನಾನೂ ಒಬ್ಬನಾದೆ. ಮುಂದಿನ ಆರು ತಿಂಗಳು ಉದ್ಯೋಗಕ್ಕಾಗಿ ಅಲೆದಾಟ.
 
ಎಲ್ಲಾ ಸಂಸ್ಥೆಗಳೂ ವೃತ್ತಿಪರರನ್ನು ಮನೆಗೆ ಕಳುಹಿಸುತ್ತಿದ್ದವೇ ಹೊರತು ಸೇರಿಸಿಕೊಳ್ಳುತ್ತಿರಲಿಲ್ಲ.ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಅನುಭವದಿಂದ ಹಾಗೂ ಗೆಳೆಯರ ಪ್ರೋತ್ಸಾಹದಿಂದ ನಗರದ ಎಲ್ಲಾ ಎಫ್‌ಎಂ ಚಾನೆಲ್‌ಗಳಿಗೂ ಅರ್ಜಿ ರವಾನಿಸಿದೆ. ಮಾತಿನ ರೆಕಾರ್ಡರ್ ಒಂದನ್ನೂ ಅದರೊಂದಿಗೆ ಇಟ್ಟಿದ್ದೆ.

ಹೊಟ್ಟೆ ಹೊರೆಯುವ ಉದ್ಯೋಗ ಹುಡುಕುವುದಷ್ಟೇ ನನ್ನ ಧ್ಯೇಯವಾಗಿತ್ತು. ಕೊನೆಗೂ ಒಂದು ಶುಭ ಸಂಜೆ ದೂರವಾಣಿ ರಿಂಗಣಿಸಿತು. ತಿಂಗಳಿಗೆ ಮೂವತ್ತು ಸಾವಿರ ಪಡೆಯುತ್ತಿದ್ದ ಕೈಗಳು ಮೂರು ಸಾವಿರಕ್ಕೆ ತೃಪ್ತಿಪಡಬೇಕಾಯಿತು. ಮನೆಯವರು ನಿನಗೆ ಹುಚ್ಚು ಎಂದರು. ಆ ಟೀಕೆಗಳನ್ನು ಲೆಕ್ಕಿಸದೆ ಹೊಸ ಬದುಕಿನ ಪಯಣಕ್ಕೆ ಅಣಿಯಾದೆ. ಅದನ್ನು ಹಸನಾಗಿಸಲು ದಿನದ ಹನ್ನೆರಡು ಗಂಟೆ ಟೊಂಕ ಕಟ್ಟಿ ದುಡಿದೆ.

ಇವೆಲ್ಲಾ ಮೂರು ವರ್ಷಗಳ ಹಿಂದಿನ ಮಾತು. ಅದಿನ್ನೂ ಹೊಸ ವೃತ್ತಿ. ಬದುಕು ಆರಂಭಗೊಂಡ ನಾಲ್ಕನೇ ದಿನ. ರಾತ್ರಿ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿ ನನ್ನ ಮೇಲಿತ್ತು. 11.30ರ ವೇಳೆಗೆ ಕರೆ ಮಾಡಿದ ಹುಡುಗಿಯೊಬ್ಬಳು ನನ್ನ ಪ್ರಿಯತಮನಿಗೆ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕಿದೆ ಎಂದು ಅವಲತ್ತುಕೊಂಡಳು.

ಅವನ ಹೆಸರು ಹೇಳು, ಪ್ರಯತ್ನಿಸುವೆ  ಎಂದೊಡನೆ ಆಕೆ ನನ್ನ ಹೆಸರೇ ಹೇಳಬೇಕೇ. ಆ ಕ್ಷಣ ಬೆಚ್ಚಿ ಬಿದ್ದಿದ್ದೆ. ಹೇಗೆ ಪ್ರತಿಕ್ರಿಯಿಸುವುದೆಂದೂ ತಿಳಿದಿರಲಿಲ್ಲ. ಆ ಘಟನೆ ನನಗೆ ಮಾತನಾಡುವ ರೀತಿ ಕಲಿಸಿತು. ಪರಿಸ್ಥಿತಿ ನಿಭಾಯಿಸುವ ಭರವಸೆ ತುಂಬಿತು.

ಇದೀಗ `ಅನಪ್ಲಗ್ಡ್ ವಿದ್ ಮಯೂರ್~ ಎಂಬ ಹೊಸ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಪ್ರತಿ ಭಾನುವಾರ ಬೆಳಿಗ್ಗೆ 7ರಿಂದ 11ರವರೆಗೆ ನಡೆಯುವ ಕಾರ್ಯಕ್ರಮವದು. ಪ್ಲಗ್ ಮಾಡದ ಸಂಗೀತದ ಪರಿಕರಗಳೊಂದಿಗೆ ಸಂಗೀತ ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಸಂಗಿತದ ಪಯಣದ ಕುರಿತಾಗಿ ಮಾತುಕತೆಯೂ ನಡೆಯುತ್ತದೆ. ಏಳು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ ಕಲಿತಿದ್ದು ನನಗೆ ಈ ಕಾರ್ಯಕ್ರಮ ನಡೆಸಿಕೊಡಲು ನೆರವಾಯಿತು.

ಈಗ ಆರ್‌ಜೆ ಜವಾಬ್ದಾರಿಯೊಂದಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಬೇಕಿದೆ. ಮೈಕ್ ಮುಂದೆ ಆರ್‌ಜೆ ನಿಂತು ಪಟಪಟನೆ ಮಾತನಾಡುತ್ತಾನೆ ಎಂದಾದರೆ ಅದರ ಹಿಂದೆ ನಿರ್ಮಾಣ ತಂಡದ ಶ್ರಮವೂ ಸಾಕಷ್ಟಿರುತ್ತದೆ. ಆ ದಿನ ಮಾತನಾಡಬೇಕಾದ ವಿಷಯ ಆಯ್ಕೆ ಮಾಡುವುದು, ಕಾರ್ಯಕ್ರಮದ ಮಧ್ಯದಲ್ಲಿ ಸೆಲೆಬ್ರಿಟಿಗಳ ಸಂಪರ್ಕ ಒದಗಿಸುವುದು, ಹಾಡುಗಳನ್ನು ಹೊಂದಿಸುವುದು ಎಲ್ಲವೂ ಈ ನಿರ್ಮಾಪಕನದ್ದೇ ಕೆಲಸ.

ದಿನದ ನಾಲ್ಕು ಗಂಟೆ ಕಾರ್ಯಕ್ರಮ ನಿರೂಪಣೆಯಲ್ಲಿ ಕಳೆದರೆ ಉಳಿದ ಎಂಟು ಗಂಟೆಯನ್ನು ಪಟ್ ಪಟ್ ಪಟಾಕಿ ಶ್ರುತಿ ಅವರ ಕಾರ್ಯಕ್ರಮದ ನಿರ್ಮಾಣದಲ್ಲಿ ಕಳೆಯುತ್ತೇನೆ. ಇಷ್ಟಪಟ್ಟು ಮಾಡುವ ಕೆಲಸವಾದ್ದರಿಂದ ದಿನದ ಹನ್ನೆರಡು ಗಂಟೆ ಕೆಲಸ ಮಾಡಿದರೂ ಹೊರೆ ಎನಿಸುತ್ತಿಲ್ಲ.

ಸಿನೆಮಾ ನಟನಾಗುವ ಆಸಕ್ತಿಯಿಲ್ಲ. ಅವಕಾಶ ಸಿಕ್ಕರೆ ಟೀವಿಗಳಲ್ಲಿ ಸಂಗೀತ ಕಾರ್ಯಕ್ರಮ ನಿರೂಪಣೆ ಮಾಡಬೇಕೆಂದಿದ್ದೇನೆ. ದೇಶದಲ್ಲಿ 800 ರೇಡಿಯೊ ಚಾನೆಲ್‌ಗಳ ಆರಂಭಕ್ಕೆ ಪರವಾನಗಿ ದೊರೆತಿದ್ದರಿಂದ ಹೊಸಬರ ಮುಂದೆ ಅವಕಾಶಗಳ ಮಹಾಪೂರವೇ ಇದೆ. ರಾಜ್ಯದಲ್ಲೂ ಮೈಸೂರು, ಮಂಡ್ಯಗಳಲ್ಲಿ ಹೊಸ ಎಫ್‌ಎಂ ಚಾನೆಲ್‌ಗಳು ಆರಂಭಗೊಳ್ಳಲಿವೆ.

ಅವಕಾಶಕ್ಕಾಗಿ ತಕ್ಕ ಪೂರ್ವಸಿದ್ಧತೆಯೊಂದಿಗೆ ರೇಡಿಯೊ ಚಾನೆಲ್‌ಗಳ ಕದ ತಟ್ಟಿ. ಒಮ್ಮೆ ಒಳಹೊಕ್ಕ ಬಳಿಕ ಸಾಧ್ಯತೆಗಳು ವಿಸ್ತರಣೆಯಾಗುತ್ತಲೇ ಹೋಗುತ್ತವೆ.ನನಗೆ ಮಾತೆಂದರೆ ಪ್ರೀತಿ. ಅದು ಭಾವಗಳ ಅಭಿವ್ಯಕ್ತಿ. ಮಾತಿಲ್ಲದೆ ಹೋದರೆ ಜಗತ್ತೇ ಮೂಕ.

ನಾನು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ. ಬೆಳೆದಿದ್ದು ಉದ್ಯಾನನಗರಿಯಲ್ಲೇ. ಮತ್ತೆ ಸಾಫ್ಟ್‌ವೇರ್ ಲೋಕದ ಮೆಟ್ಟಿಲೇರುವ ಕನಸಿಲ್ಲ. ರೇಡಿಯೊದಲ್ಲೇ ಉನ್ನತ ಹುದ್ದೆ ಏರಬೇಕು ಎಂಬ ಗುರಿ ಇದೆ. ನನ್ನದೇ ಸಂಗೀತ ಸಂಸ್ಥೆ `ರಾಗರಾಗಂ~ ಆರಂಭಿಸಿ ಸಂಗೀತದ ಮೇರು ವ್ಯಕ್ತಿಗಳನ್ನು ಆಯ್ಕೆ ಮಾಡಿ ಸನ್ಮಾನಿಸುತ್ತಿದ್ದೇನೆ. ಇದನ್ನೇ ಮುಂದೆ ದೊಡ್ಡ ಸಂಸ್ಥೆಯನ್ನಾಗಿಸಬೇಕೆಂಬ ಬಯಕೆಯಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.