ADVERTISEMENT

ಡಾನ್ಸ್ ಫಾರ್ ಮಿ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಎಲ್ಲರ ಮುಖದಲ್ಲೂ ಕಾತರ. ಸ್ಪರ್ಧೆಯಲ್ಲಿ ನಾವು ಗೆದ್ದೇಗೆಲ್ಲುತ್ತೇವೆಂಬ ಆತ್ಮವಿಶ್ವಾಸ. ಪಕ್ಕದವರನ್ನು ನೋಡಿ ನಮ್ಮ ಉಡುಗೆ ತುಸು ಮಂಕಾಯಿತೇನೋ, ಇಲ್ಲ ಅವರಿಗಿಂತ ನಮ್ಮದೇ ಚೆನ್ನಾಗಿದೆ ಎಂದು ಮನದಲ್ಲೇ ಎಣಿಕೆ ಮಾಡಿ; ಏನಾದರಾಗಿಲಿ ನಾವೇ ಎಲ್ಲರಿಗಿಂತ ಉತ್ತಮವಾಗಿ ನೃತ್ಯ ಮಾಡಬೇಕೆನ್ನುತ್ತಿದ್ದವು ಎಲ್ಲರ ಮನಗಳು.

ಅದು ನೃತ್ಯ ಸ್ಪರ್ಧೆಯ ವೇದಿಕೆ. ಒಬ್ಬರಿಗಿಂತ ಒಬ್ಬರು ಬಲು ಜೋರು ಎಂಬಂತಿತ್ತು ಅವರ ನೃತ್ಯ ಪ್ರದರ್ಶನ. `ಡಾನ್ಸ್ ಫಾರ್ ಮಿ-ಲೆಮನ್ ಗುಂಪು~ ಎಂಬ ಹೆಸರಿನಲ್ಲಿ 7ಅಪ್ ಹಮ್ಮಿಕೊಂಡಿರುವ ನೂತನ ನೃತ್ಯ ಸ್ಪರ್ಧೆಯದು.

ರಾಷ್ಟ್ರದಾದ್ಯಂತ ಈ ಸ್ಪರ್ಧೆ ನಡೆಯಲಿದ್ದು ಬೆಂಗಳೂರು ಸುತ್ತಿನ ಸ್ಪರ್ಧೆ ಇತ್ತೀಚೆಗೆ ನಡೆಯಿತು.

ADVERTISEMENT

ತೆಲುಗು ನಟ ಮತ್ತು 7ಅಪ್ ಬ್ರ್ಯಾಂಡ್ ಅಂಬಾಸಿಡರ್ ಅಲ್ಲು ಅರ್ಜುನ್ ಅವರೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಗರದಲ್ಲಿ ನಡೆದ ಸ್ಪರ್ಧೆಗಳಿಗೆ ಕೀರ್ತಿ ಮತ್ತು ಶಾಹಿದ್ ತೀರ್ಪುಗಾರರಾಗಿದ್ದರು.

ನಗರದ ಸೇಂಟ್ ಜೋಸೆಫ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಕಳೆದ ವಾರ  ಮೈಸೂರು ಮತ್ತು ಮಂಗಳೂರುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ 34 ಮತ್ತು 18 ತಂಡಗಳು ಭಾಗವಹಿಸಿದ್ದವು.

ತಮ್ಮ ಪ್ರತಿಭೆ ಪ್ರದರ್ಶಿಸಿ ವಿಜೇತರಾದವರಿಗೆ 51 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.  ಭಾವಾಭಿವ್ಯಕ್ತಿ, ದೇಹಭಾಷೆ, ವಸ್ತ್ರವಿನ್ಯಾಸ ಮತ್ತು ಹಾಡಿನ ಆಯ್ಕೆಯ ಆಧಾರದಲ್ಲಿ ತೀರ್ಪು ನೀಡಲಾಗುತ್ತದೆ.

ಈ ತಂಡಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಸೆಂಟರ್ ಆಡಿಷನ್ ನಡೆಸಲಾಗುತ್ತದೆ. ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈಗಳಲ್ಲಿನ ಸೆಂಟರ್ ಆಡಿಷನ್‌ನಲ್ಲಿ ಅಂತಿಮ ಸುತ್ತಿನಲ್ಲಿ ಆಯ್ಕೆಯಾದವರಿಗೆ ಚೆನ್ನೈನಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಅಲ್ಲಿ ಅಲ್ಲು ಅರ್ಜುನ್ ಮತ್ತು ಸಿಂಬು ಅಂತಿಮ ವಿಜೇತರನ್ನು ಆಯ್ಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.