ADVERTISEMENT

ಡ್ರ್ಯಾಗ್ ರೇಸ್ ಸಲ್ಲ...

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST
ಡ್ರ್ಯಾಗ್ ರೇಸ್ ಸಲ್ಲ...
ಡ್ರ್ಯಾಗ್ ರೇಸ್ ಸಲ್ಲ...   

ಕಿಕ್ ಹೊಡೆದಾಕ್ಷಣ ರೊಯ್ಯಂನೆ ಹಾರುವ ಬೈಕ್ ಯಾರಿಗೆ ತಾನೇ ಇಷ್ಟವಿಲ್ಲ? ಆಕ್ಸಿಲರೇಟರ್‌ಗೆ ಕೈ ಹೋಗುತ್ತಲೇ ಮೀಟರ್ ನೂರರ ಕಡ್ಡಿ ದಾಟಿರಬೇಕು. ಗಾಳಿಯಲ್ಲಿ ತೇಲಿದ ಅನುಭವವಾಗಬೇಕು. ದಾರಿಹೋಕರು `ಅಬ್ಬಾ...~ ಎಂದು ಉದ್ಗರಿಸಬೇಕು... ನಗರದ ಬಹುಮಂದಿಯ ಹವ್ಯಾಸವೂ ಆಗಿರುವ ಡ್ರ್ಯಾಗ್ ರೈಸ್‌ಗೆ ಸ್ಪೋರ್ಟ್ಸ್ ಬೈಕ್‌ಗಳೇ ಆಗಬೇಕೆಂದಿಲ್ಲ. ಆ ಮಟ್ಟಿಗಿದೆ ಫಾಸ್ಟ್ ರೈಡಿಂಗ್ ಹುಚ್ಚು.

ನೂರು ಮೀಟರ್‌ಗೊಮ್ಮೆ ಬ್ರೇಕ್ ಒತ್ತಬೇಕಾದ ಟ್ರಾಫಿಕ್ ಸಿಗ್ನಲ್‌ಗಳ ಮಧ್ಯೆಯೂ ಹುಚ್ಚುಹುಚ್ಚಾಗಿ ಓಡಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ನಗರದ ರಸ್ತೆ ಮೇಲೆ ಡ್ರ್ಯಾಗ್ ರೇಸ್ ಸಂಪೂರ್ಣ ನಿಷೇಧ. ನಿಮ್ಮ ಹುಚ್ಚಿಗೆ ಇನ್ನೊಂದು ಜೀವ ಬಲಿಯಾಗುವುದು ಬೇಡ, ನಿಮ್ಮ ಪ್ರಯೋಗಗಳಿಗೆ ನಾವು ಸ್ಥಳ ಒದಗಿಸುತ್ತೇವೆ ಎನ್ನುತ್ತದೆ ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್.

`ಯಾವುದೇ ಆಟವಾದರೂ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಪ್ರಾಣಕ್ಕೆ ಎರವಾಗುವುದು ಖಚಿತ. ಬೈಕ್ ರೈಡಿಂಗ್‌ಗೆ ಯುವಜನತೆ ಮಾರು ಹೋಗಿದ್ದಾರೆ. ನಾವು ಹೆಲ್ಮೆಟ್, ಡ್ರೈವಿಂಗ್ ಡ್ರೆಸ್ ಇಲ್ಲದೆ ರೇಸ್‌ನಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ. ಏರ್ಪಡಿಸುವ ಪ್ರತಿ ರೇಸ್‌ಗೂ ಕಮಿಷನರ್ ಅನುಮತಿ ಪಡೆದಿರುತ್ತೇವೆ. ರೇಸ್‌ಗೆಂದೇ ಪ್ರತ್ಯೇಕ ಅಂಗಣ ನಮ್ಮಲ್ಲಿದೆ.

ನಿಮ್ಮ ಪ್ರತಿಭೆ ನಮ್ಮ ರೇಸ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಕಟಿಸಿ. ನೈಸ್ ರಸ್ತೆಯಲ್ಲಿ ರಾತ್ರಿ ಹೊತ್ತು ಫೈರ್‌ಕ್ಯಾಂಪ್ ಹಾಕಿ ಇತರರನ್ನು ಬೆದರಿಸುವ ರೀತಿಯಲ್ಲಿ ಬೇಡ~ ಎಂಬ ಮನವಿ ಕರ್ನಾಟಕ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಬಾಲಕೃಷ್ಣ ಜಯಸಿಂಹ ಅವರದ್ದು.

`ಬದುಕಿದ್ದರೆ ತಾನೇ ಜೀವನದ ಸಂತೋಷ ಅನುಭವಿಸುವುದು. ಡ್ರ್ಯಾಗ್ ರೇಸ್‌ಗಳನ್ನು ನಗರದ ರಸ್ತೆಗಳ ಮೇಲೆ ನಡೆಸುವಂತಿಲ್ಲ. ಕಳೆದ ಆರು ತಿಂಗಳಿನಿಂದ ಇದನ್ನು ನಿಷೇಧಿಸಲಾಗಿದೆ.

ಹೀಗಿದ್ದೂ ಅತಿ ವೇಗದಲ್ಲಿ ಚಾಲನೆ ಮಾಡಿದವರನ್ನು ಹಿಡಿದು ವಾಹನ ಪರವಾನಗಿ ರದ್ದುಪಡಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗುತ್ತಿರುವುದು ಕಡಿಮೆಯಾಗಿದೆ~ ಎನ್ನುತ್ತಾರೆ ಸಂಚಾರ ಹಾಗೂ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎಸ್. ಸಲೀಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.