ADVERTISEMENT

ತರಕಾರಿ ಶಿವರಾಜು ದಿನಚರಿ...

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST
ತರಕಾರಿ ಶಿವರಾಜು ದಿನಚರಿ...
ತರಕಾರಿ ಶಿವರಾಜು ದಿನಚರಿ...   

`ತಕ್ಕೋಯಿ...~
ಉಹುಂ, ಒಂದು ವಾರ ಆ ಪದದ ಅರ್ಥವೇ ತಿಳಿದಿರಲಿಲ್ಲ. ಮುಂಜಾನೆಯ ಸಿಹಿಗನಸನ್ನು ಸೀಳಿ ಬರುವ ಈ ಕೂಗು ಯಾವುದು ಎಂದು ಪತ್ತೆಹಚ್ಚಲೇಬೇಕು ಎಂಬ ಹಠದಿಂದ ಬೇಗನೆ ಎದ್ದು ಆತನ ಬರುವಿಕೆಗೆ ಕಾದಿದ್ದೆ. ನನ್ನಂತಹ ಎಷ್ಟೋ ಜನರ ಸಿಹಿನಿದ್ದೆಯನ್ನು ಕಸಿಯುವ ಆ ದನಿ ಮೇಲೆ ಭಾರೀ ಸಿಟ್ಟೂ ಇತ್ತು. ಮತ್ತೆ ಕೇಳಿಸಿತು ಅದೇ ದನಿ. ಅದೂ ಸುಮಾರು ಒಂದು ಕಿ.ಮೀ.ದೂರದಿಂದ. 

ಇಂದಿರಾನಗರದ ಸಿಎಂಎಚ್ ರಸ್ತೆಯ ಮೂರನೆ ಅಡ್ಡರಸ್ತೆಯಲ್ಲಿರುವ ಮನೆ ಬಳಿ ಬಂದಾಗ ಗೊತ್ತಾಯಿತು ಈ `ತಕ್ಕೋಯಿ~, ತರಕಾರಿಯ ರೂಪಾಂತರ ಎಂದು!
ಮೊದಲಿಗೆ ತಮಾಷೆ ಎನಿಸಿದರೂ ಆತನ ಬಗ್ಗೆ ಕುತೂಹಲ ಕೆರಳಿತು. ಕಾಯಿಪಲ್ಲೆ ಏನೂ ಬೇಡದಿದ್ದರೂ ಮಹಡಿಯಿಂದ ಇಳಿದು ಆತನನ್ನು ಮಾತಿಗೆಳೆದೆ. `ಯೋನಾದ್ರೂ ಬೇಕಾದ್ರೆ ಯೋಳೀಮ್ಮ, ಹರಟೆ ಹೊಡ್ಯೋಕೆ ಟೇಮಿಲ್ಲ~ ಎನ್ನುತ್ತಾ ಸೈಕಲ್ ಪೆಡಲ್ ತುಳಿದ. ಮಾತನಾಡಬೇಕೆಂಬ ಹಟಕ್ಕೆ ನಾನೂ ಅವನೊಂದಿಗೆ ಹೆಜ್ಜೆ ಹಾಕಿದೆ.
ಅಯ್ಯೋ, ನಿಮಗೆ ಹುಚ್ಚು. ನನ್ನ ಜೊತೆ ಯಾಕೆ ಬರುತ್ತೀರಿ? ನಮ್ಮ ಗೋಳಿನ ಕತೆ ನಿಮಗ್ಯಾಕೆ ಅಂದರೂ ದಿನಚರಿ ಮಾತಿಗಿಳಿಯಿತು...

“ನಾನು ಶಿವರಾಜು. ಊರು ಮಹಾರಾಷ್ಟ್ರ. ತುತ್ತಿನ ಚೀಲ ತುಂಬಿಸಿಕೊಳ್ಳಲು ಆರು ವರ್ಷಗಳ ಕೆಳಗೆ ಬೆಂಗಳೂರಿಗೆ ಬಂದಾಗ ಕೈಯಲ್ಲಿದ್ದ ಬಂಡವಾಳ ಐದು ಸಾವಿರ ಮಾತ್ರ. ಅದರಲ್ಲೇ ಬಾಡಿಗೆ ಸೈಕಲ್ ಪಡೆದು ಮುಂಜಾನೆ ನಾಲ್ಕಕ್ಕೆ ಮಾರ್ಕೆಟ್‌ಗೆ ಹೋಗಿ ಅಲ್ಲಿಂದ ತರಕಾರಿ ಆಯ್ದುಕೊಂಡು ಆರು ಗಂಟೆಗೆ ಇಂದಿರಾನಗರ ತಲುಪಬೇಕು. ಅಲ್ಲಿಂದ ಆರಂಭವಾಗುತ್ತದೆ ಸವಾಲಿನ ಬದುಕು.

ಮಧ್ಯಾಹ್ನ ಹನ್ನೆರಡರವರೆಗಷ್ಟೇ ವ್ಯಾಪಾರ ಗಿಟ್ಟೋದು. ದನಿಯೇ ಬಂಡವಾಳ. ಗಂಟಲು ಹರ‌್ಕೊಂಡು ದೊಡ್ಡ ದನಿಯಲ್ಲಿ ಕೂಗಿದರಷ್ಟೇ ಮಂದಿ ಕಿವಿ ನೆಟ್ಟಗಾಗುತ್ತದೆ. ಕೆಲವೊಮ್ಮೆ ಗೂಡಿನಲ್ಲಿ ಕೂಡಿಹಾಕಿದ ಆಲ್ಸೇಷಿಯನ್ ನಾಯಿ ಬೊಗಳಿತು ಅನ್ನಿ...

ನಮ್ಮ ದನಿಯೂ ಉಡುಗುತ್ತದೆ. ಅದೆಷ್ಟೋ ಬಾರಿ ಒಂದಿಬ್ಬರು ಬಾಲ್ಕನಿಯಿಂದ ತಲೆ ಹೊರಹಾಕಿ, `ಬೆಳ್ಳಂಬೆಳಗ್ಗೆ ಈ ರಸ್ತೆಯಲ್ಲಿ ಹೀಗೆ ಕೂಗುತ್ತಾ ಬರಬೇಡ, ಇಲ್ಯಾರೂ ಗಿರಾಕಿಗಳಿಲ್ಲ~ ಎಂದು ಛೀಮಾರಿ ಹಾಕಿದ್ದಿದೆ. ನಮ್ಮ ದುರದೃಷ್ಟವೇ ಇದು ಎಂದುಕೊಳ್ಳುತ್ತಾ ಮುಂದೆ ಸಾಗುವುದು. ಅದೇನೋ ಮಾಲ್‌ಗಳಂತೆ, ಎಲ್ಲವೂ ಎ.ಸಿ. ರೂಂಗಳಂತೆ. ನಾವು ಮಾರುವ ತರಕಾರಿಗಳಿಂತ `ಫ್ರೆಶ್~ ಆಗಿದ್ದು ಅಲ್ಲಿ ಸಿಗುತ್ತಂತೆ.

ಅಲ್ಲಿ ಸಿಗುವ `ಗುಣಮಟ್ಟ~ದ ವಸ್ತುಗಳ ಎದುರು ಅರ್ಧ ಹರಿದ ಅಂಗಿ ತೊಟ್ಟು ಪ್ಲಾಸ್ಟಿಕ್ ಚೀಲದಲ್ಲಿ ತರಕಾರಿ ತುಂಬಿ ತರುವ ನಾವು ಸ್ಪರ್ಧಿಸುವುದಾದರೂ ಹೇಗೆ? ಐದು ವರ್ಷಗಳ ಹಿಂದೆ ನಮಗಿದ್ದ ಗಿರಾಕಿಗಳು ಈಗಿಲ್ಲ. ತರಕಾರಿ, ಸೊಪ್ಪು ಎಲ್ಲಾ ಸೇರಿ ದಿನಕ್ಕೆ ಹತ್ತರಿಂದ ಹದಿನೈದು ಕೆ.ಜಿ. ಮಾರಾಟವಾದರೆ ಅದೇ ಹೆಚ್ಚು. ಹಿಂದೆಲ್ಲಾ ಮೂವತ್ತು ಕೆ.ಜಿ.ವರೆಗೆ ಮಾರಾಟ ಮಾಡಿದ್ದಿದೆ.

ನೋಡಿ, ಈ ವಾಕಿಂಗ್ ಹೋಗುವವರಿಗೆ ಒಂಥರಾ ಹುಚ್ಚು. ಸೈಕಲ್‌ನಲ್ಲಿ ಹೋಗುವ ನಮ್ಮಂಥವರನ್ನು ಕಂಡರೆ ಏನನಿಸುತ್ತೋ. ಸುಮ್ಮನೆ ನಿಲ್ಲಿಸಿ ಎಲ್ಲಾ ತರಕಾರಿ ಕೈಯಲ್ಲಿ ಮುಟ್ಟಿ, ಬೆಲೆ ಕೇಳಿ ಅಲ್ಲೇ ಇಡುತ್ತಾರೆ. ಪರ್ಸ್ ತಂದಿಲ್ಲವಲ್ಲ, ತಂದಿದ್ದರೆ ಕೊಳ್ಳಬಹುದಿತ್ತು ಎನ್ನುತ್ತಾ ಮುಂದೆ ಹೆಜ್ಜೆ ಇಡುತ್ತಾರೆ. ಇವರಿಂದ ನಮ್ಮ ಸಮಯವೂ ವ್ಯರ್ಥ. ದಿನದ ತರಕಾರಿ ಆ ದಿನವೇ ಖರ್ಚಾಗದಿದ್ದರೆ ಮರುದಿನ ಯಾರೂ ತಗೊಳ್ಳಲ್ಲ. `ಎಲ್ಲಾ ಬಾಡಿ ಹೋಗಿದೆ~ ಅಂತ ಗದರುತ್ತಾರೆ.

ಇದರಿಂದ ನಮಗೇನೋ ಭಾರಿ ಲಾಭ ಇದೆ ಅಂದ್ಕೋಬೇಡಿ, ಮತ್ತೆ. ದಿನಕ್ಕೆ ಒಂದಿನ್ನೂರು ಉಳಿಯುವುದೇ ಅಪರೂಪ. ಪ್ರತಿಯೊಬ್ಬರೂ ಒಂದೆರಡು ರೂಪಾಯಿಗೆ ಚರ್ಚೆಗೆ ಇಳಿಯುತ್ತಾರೆ. ಹೋಟೆಲ್-ಮಾಲ್‌ಗಳಲ್ಲಿ ಹತ್ತಿಪ್ಪತ್ತು ರೂಪಾಯಿ ಟಿಪ್ಸ್ ನೀಡುವ ಇವರು ನಮ್ಮ ಜೊತೆ ಮಾತ್ರ ವಾದ ಮಾಡುತ್ತಾರೆ. ಒಟ್ಟು 23 ರೂಪಾಯಿ ಕೊಡಿ ಎಂದರೆ 20 ಸಾಕು, ನಾಳೆಯೂ ಬರುತ್ತೀಯಲ್ಲಾ ಎಂದು ನಿರ್ಲಕ್ಷ್ಯದಿಂದ ಗೇಟ್ ಮುಚ್ಚುತ್ತಾರೆ. ನಮ್ಮಲ್ಲೂ ಸ್ಪರ್ಧೆ ಇದೆ. ಪ್ರತಿ ಏರಿಯಾವನ್ನೂ ಸಮಾನವಾಗಿ ಹಂಚಿಕೊಂಡಿದ್ದೇವೆ. ಇನ್ನೊಬ್ಬನ ವಲಯಕ್ಕೆ ನಾನು ತಲೆಹಾಕುವಂತಿಲ್ಲ. ಕೆಲವೊಮ್ಮೆ ಹೊಸಬರು ನಮ್ಮ ಏರಿಯಾದಲ್ಲಿ ಮಾರಾಟ ಆರಂಭಿಸುವುದುಂಟು. ಆಗೆಲ್ಲಾ ಜಗಳ ಮಾಮೂಲು. ನಮ್ಮ ತುತ್ತಿಗೆ ಕಲ್ಲು ಹಾಕುವುದು ಎಷ್ಟು ಸರಿ ನೀವೇ ಹೇಳಿ?ನಮಗೆ ಗೊತ್ತಿರೋದು ಈ ವೃತ್ತಿ ಮಾತ್ರ. ಬೇರೇನಾದರೂ ಹೊಸ ಉದ್ಯೋಗ ಹುಡುಕೋಣವೆಂದರೆ ಬಂಡವಾಳವಿಲ್ಲ. ಮೂರನೇ ಕ್ಲಾಸಿನಲ್ಲಿ ಓದುತ್ತಿರುವ ಮಗನ ಭವಿಷ್ಯ ಪೆಡಲ್ ತುಳಿಯುವ ನನ್ನ ಕಾಲಿನಲ್ಲಿದೆ. ರಜೆ ಹಾಕದೆ ವರ್ಷದ ಎಲ್ಲಾ ದಿನವೂ ದುಡಿಯಲೇಬೇಕು. ಹಬ್ಬಗಳಲ್ಲಿ ಕೆಲಮನೆಯವರು ಸಿಹಿತಿಂಡಿ ಕೊಟ್ಟಾಗ ಖುಷಿಯಾಗುತ್ತದೆ. ಇಡೀ ಬದುಕೂ ಸಿಹಿಯಾಗಿದ್ದರೆ...!

ಸಾಕು ಬಿಡಿ, ಪೂರಾ ನಮ್ಮ ಪುರಾಣವೇ ಆಯ್ತು. ಇಷ್ಟಕ್ಕೂ ಇದನ್ನೆಲ್ಲಾ ಯಾಕೆ ಕೇಳ್ತಾ ಇದ್ದೀರಿ...?”

ಇವರು ಹೀಗಂತಾರೆ...
`ಈ ರಸ್ತೆಯಲ್ಲಿ ಹತ್ತಾರು ಮಂದಿ ತರಕಾರಿ ಮಾರೋರು ಬರುತ್ತಾರೆ. ಒಬ್ಬೊಬ್ಬರದೂ ಒಂದೊಂದು ದನಿ. ನಮ್ಮ ವ್ಯಾಪಾರಿಯ ದನಿ ಗುರುತಿಸಿಕೊಂಡು ತರಕಾರಿ ಕೊಳ್ಳಲು ಹೊರಗೆ ಬರುತ್ತೇನೆ. ಪ್ರತಿದಿನ ಕೊಳ್ಳುವ ನಮ್ಮಂತಹ ಗಿರಾಕಿಗಳು ಮನೆಯೊಳಗಿಂದ ಬರುವುದು ಒಂದೆರಡು ನಿಮಿಷ ತಡವಾದರೂ ಆತ ಕಾಯುತ್ತಾನೆ. ಸೊಪ್ಪು, ತರಕಾರಿ ಇವನಲ್ಲೇ ಕೊಳ್ಳುತ್ತೇನೆ~
-ಜಯಶ್ರೀ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.