ADVERTISEMENT

ನಗುವಿನಲೆಯ ವಿಷಾದ ಶರಧಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಅಲಿ ದ ಗೋಟ್‌ ಆ್ಯಂಡ್ ಇಬ್ರಾಹಿಂ ಚಿತ್ರದ ಒಂದು ದೃಶ್ಯ
ಅಲಿ ದ ಗೋಟ್‌ ಆ್ಯಂಡ್ ಇಬ್ರಾಹಿಂ ಚಿತ್ರದ ಒಂದು ದೃಶ್ಯ   

ಅಬ್ಬರದ ತೆರೆಗಳಿಲ್ಲದೆ ನಿಂತಲ್ಲೇ ತೊನೆಯುತ್ತಿರುವ ಸಮುದ್ರ. ದಡದಲ್ಲಿನ ಸೇತುವೆಯ ಮೇಲೆ ನಿಂತು ಸಮುದ್ರಕ್ಕೆ ಅಲಿ ಮತ್ತು ಇಬ್ರಾಹಿಂ ಇಬ್ಬರೂ ಕಲ್ಲುಗಳನ್ನು ಎತ್ತಿ ಎಸೆಯುತ್ತಾರೆ. ನೀರಿನ ಮೇಲ್ಮೈಗೆ ಅಪ್ಪಳಿಸಿ ಅಲೆಯ ಉಂಗುರವೆಬ್ಬಿಸಿ ನಿಧಾನಕ್ಕೆ ಮುಳುಗುತ್ತ ಅವೆರಡು ಕಲ್ಲುಗಳು ತಳ ಸೇರುತ್ತವೆ.

ಇದು ‘ಅಲಿ, ದ ಗೋಟ್‌ ಆ್ಯಂಡ್‌ ಇಬ್ರಾಹಿಂ’ ಸಿನಿಮಾದ ಕೊನೆಯ ದೃಶ್ಯ. ಹೀಗೆ ಹೇಳಿದರೆ ಆ ದೃಶ್ಯದ ಬಗ್ಗೆ ಬಗ್ಗೆ ಏನನ್ನೂ ಹೇಳಿದಂತಾಗುವುದಿಲ್ಲ. ಯಾಕೆಂದರೆ ಆ ದೃಶ್ಯ ನಮ್ಮ ಮನಸ್ಸಿನಲ್ಲಿ ಹುಟ್ಟಿಸುವ ಭಾವತರಂಗಗಳು ಬರೀ ಆ ದೃಶ್ಯವೊಂದರಿಂದಲೇ ಹುಟ್ಟಿರುವುದಲ್ಲ. ಅದು ಅಷ್ಟು ಹೊತ್ತು ಅಲಿ ಮತ್ತು ಇಬ್ರಾಹಿಂ ಜೊತೆಗಿನ ಕಥನ ಪಯಣ ನಮ್ಮ ಮನಸ್ಸಿನಲ್ಲಿ ರೂಪಿಸಿದ ಅನುಭವ ಸರೋವರದಲ್ಲಿ ಹುಟ್ಟಿದ ಭಾವತರಂಗಗಳು.

2016ರಲ್ಲಿ ತಯಾರಾದ ಈಜಿಪ್ಟ್‌ ದೇಶದ ಸಿನಿಮಾ ‘ಅಲಿ, ದ ಗೋಟ್‌ ಆ್ಯಂಡ್‌ ಇಬ್ರಾಹಿಂ’. ಕಿರುಚಿತ್ರಗಳಿಂದಲೇ ಸಾಕಷ್ಟು ಜನಪ್ರಿಯರಾಗಿದ್ದ ಷರೀಫ್‌ ಎಲ್ಬೆಂಡಾರಿ ಅವರು ನಿರ್ದೇಶಿಸಿದ ಮೊದಲ ಪೂರ್ಣ ಪ್ರಮಾಣದ ಸಿನಿಮಾ ಇದು. ವಸ್ತುವಿನಲ್ಲಿನ ಹೊಸತನ ಮತ್ತು ಚಿತ್ರಕಥೆಯಲ್ಲಿನ ತಾಜಾತನ, ಜೊತೆಗೆ ಬಹುಕಾಲ ಮನಸ್ಸಿನಲ್ಲುಳಿಯುವ ಸಂಗೀತ - ಈ ಎಲ್ಲವೂ ಇದನ್ನು ನೋಡಲೇಬೇಕಾದ ಸಿನಿಮಾದ ಸಾಲಿಗೆ ಸೇರಿಸಿವೆ.

ADVERTISEMENT

ಅಲಿಗೆ ನದಾ ಎಂದರೆ ಪಂಚಪ್ರಾಣ. ನದಾ ಮೇಕೆಯ ಹೆಸರು. ಅದನ್ನು ತನ್ನ ಪ್ರೇಯಸಿ ಎಂದು ಅವನು ನಂಬಿದ್ದಾನೆ. ಇದೇ ಕಾರಣಕ್ಕೆ ಅವನು ಸುತ್ತಮುತ್ತಲಿನ ಜಗತ್ತಿನಲ್ಲಿ ಎಲ್ಲರಿಂದಲೂ ನಗೆಪಾಟಲಿಗೀಡಾಗುತ್ತಾನೆ. ಅದೇ ಊರಿನಲ್ಲಿರುವ ಸೌಂಡ್‌ ಎಂಜಿನಿಯರ್‌ ಇಬ್ರಾಹಿಂಗೆ ವಿಚಿತ್ರವಾದ ಕಾಯಿಲೆ. ಅವನಿಗೆ ಆಗಾಗ ಸಹಿಸಲಸಾಧ್ಯವಾದ ಕೀರಲು ಧ್ವನಿಯೊಂದು ಕೇಳಿಸುತ್ತದೆ. ಅದು ಅವನಿಗೆ ವಂಶಪಾರಂಪರ್ಯವಾಗಿ ಬಂದಿರುವ ಕಾಯಿಲೆ. ಅವನ ಅಮ್ಮ ಇದೇ ಶಬ್ದವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಜ್ಜ ಇದೇ ಕಾಯಿಲೆಯ ಕಾರಣಕ್ಕೆ ತನ್ನನ್ನು ತಾನು ಕಿವುಡನನ್ನಾಗಿ ಮಾಡಿಕೊಂಡಿದ್ದಾನೆ.

ಈ ಇಬ್ಬರೂ ವೈದ್ಯರನ್ನು ನೋಡಲು ಹೋದಾಗ ಭೇಟಿಯಾಗುತ್ತಾರೆ. ಇಬ್ಬರಿಗೂ ಒಂದಿಷ್ಟು ಕಲ್ಲುಗಳನ್ನು ಕೊಟ್ಟು ಅವುಗಳನ್ನು ಸಮುದ್ರಕ್ಕೆ ಎಸೆಯಲು ಹೇಳುತ್ತಾರೆ. ಅದಕ್ಕಾಗಿ ಅಲಿ, ಇಬ್ರಾಹಿಂ ಮತ್ತು ಮೇಕೆ ನದಾ ಮೂವರೂ ಹೊರಡುತ್ತಾರೆ. ಅವರ ಪ್ರಯಾಣವೇ ಈ ಚಿತ್ರದ ಮುಖ್ಯ ವಸ್ತು.

ಪ್ರೇಕ್ಷಕರನ್ನು ನಗಿಸುತ್ತಲೇ ಹಿಡಿದಿಡುವ ಹಾಸ್ಯಗುಣವೂ ನಿರೂಪಣೆಯಲ್ಲಿ ಇದೆ. ಹಾಗೆಂದು ಹಾಸ್ಯ ಹುಟ್ಟಿಸಲೆಂದೇ ಪಾತ್ರಗಳು ವರ್ತಿಸುವುದಿಲ್ಲ. ಬದಲಿಗೆ ಅದು ಅವರ ಜೀವನವೇ ಆಗಿರುತ್ತದೆ. ಹಾಗಾಗಿಯೇ ಸಿನಿಮಾದೊಳಗಿನ ಉಳಿದ ಪಾತ್ರಗಳ ಪಾಲಿಗೂ ಅವರು ಹಾಸ್ಯಾಸ್ಪದವೇ ಆಗಿರುತ್ತಾರೆ. ಈ ಹಾಸ್ಯದ ಅಡಿಯಲ್ಲಿಯೇ ನಿರ್ದೇಶಕರು ಪ್ರೇಕ್ಷಕನಲ್ಲಿ ಒಂದು ಬಗೆಯ ಎಚ್ಚರವನ್ನೂ ಮೂಡಿಸುತ್ತ ಹೋಗುತ್ತಾರೆ. ನಮ್ಮೊಳಗೆ ನಮಗೇ ಗೊತ್ತಿಲ್ಲದೇ ಬೆಳೆಯುತ್ತ ಹೋಗುವ ಆ ಎಚ್ಚರ ಒಂದು ಹಂತದಲ್ಲಿ ಸ್ಫೋಟಗೊಳ್ಳುತ್ತದೆ. ಅಲಿ ಮತ್ತು ಮೇಕೆ ನದಾ ಸಂಬಂಧವನ್ನು ಹಾಸ್ಯಾಸ್ಪದ ಎನ್ನುವಂತೆ ನೋಡಿ ನಗುತ್ತಲೇ ಇರುವ ಪ್ರೇಕ್ಷಕ ಕೊನೆಯಲ್ಲಿ ಆ ಸಂಬಂಧವನ್ನು ಒಪ್ಪಿಕೊಂಡುಬಿಡುತ್ತಾನೆ.

ಸಂಗೀತ ಎನ್ನುವುದು ಇಲ್ಲಿ ಒಂದು ಪಾತ್ರದ ಹಾಗೆಯೇ ಬಳಕೆಯಾಗಿರುವುದು ವಿಶೇಷ. ಸಂಗೀತದ ಬಲದಿಂದ ದೃಶ್ಯವೊಂದರಿಂದ ಹಲವು ಅನಿರ್ವಚನೀಯ ಅನುಭವಗಳನ್ನು ಸಹೃದಯರಿಗೆ ದಾಟಿಸಬಹುದು ಎನ್ನುವುದಕ್ಕೆ ಈ ಚಿತ್ರದಲ್ಲಿ ಹಲವು ಪುರಾವೆಗಳು ಸಿಗುತ್ತವೆ. ಪ್ರತ್ಯೇಕರಿಸಿ ನೋಡಲು ಸಾಧ್ಯವಾಗದಂತೆ ಛಾಯಾಗ್ರಹಣವು ಕಥೆಯೊಂದಿಗೆ ಮಿಳಿತಗೊಂಡಿದೆ. ಅಲಿ ಸೂಬಿ ಮತ್ತು ಮಹಮ್ಮದ್ ಮ್ಯಾಗ್ಡಿ ಅವರ ನಟನೆಯೂ ಯಾವುದೋ ದೇಶದ ಕಥನವನ್ನು ನಮ್ಮದನ್ನಾಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
***
ಚಿತ್ರ: ಅಲಿ, ದ ಗೋಟ್‌ ಆ್ಯಂಡ್‌ ಇಬ್ರಾಹಿಂ
ದೇಶ: ಈಜಿಪ್ಟ್, ಭಾಷೆ: ಅರೇಬಿಕ್‌
ವರ್ಷ: 2016, ಅವಧಿ: 97 ನಿಮಿಷ
ನಿರ್ದೇಶಕ: ಷರೀಫ್‌ ಎಲ್ಬೆಂಡಾರಿ
ಮರುಪ್ರದರ್ಶನ: ಸೋಮವಾರ (ಫೆ.26) ಬೆಳಿಗ್ಗೆ 9.40, ಪರದೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.