ADVERTISEMENT

ನಗ್ಮೇಶನ ಸ್ಪೀಡ್ ಸೈಕಲ್

ಸುಮಲತಾ ಎನ್, ಪದ್ಮನಾಭ ಭಟ್ಟ
Published 4 ಫೆಬ್ರುವರಿ 2013, 19:59 IST
Last Updated 4 ಫೆಬ್ರುವರಿ 2013, 19:59 IST
ನಗ್ಮೇಶನ ಸ್ಪೀಡ್ ಸೈಕಲ್
ನಗ್ಮೇಶನ ಸ್ಪೀಡ್ ಸೈಕಲ್   

ಸೈಕಲ್ ಎಂದರೆ ಹುಡುಗರಿಗೆ ಎಲ್ಲಿಲ್ಲದ ಒಲವು. ಅದರೊಡಗಿನ ಒಡನಾಟವೇ ಅಂಥದ್ದು. ಚಿಕ್ಕವರಿದ್ದಾಗ ಶುರುವಾಗುವ ಸೈಕಲ್ ನಂಟು ಬಾಲ್ಯದ ಗೆಳೆಯನಂತೆ ಎಷ್ಟೇ ಕಾಲ ಹೋದರೂ ದೂರ ಸರಿಯುವುದಿಲ್ಲ. ಅದೆಷ್ಟೋ ಚಿಕ್ಕ ಪುಟ್ಟ ಅನುಭವಗಳ ಕ್ಷಣಗಳಿಗೆ ಸಾಕ್ಷಿಯಾಗುವ ಸೈಕಲ್ ಆಪ್ತರಕ್ಷಕನಂತೆ. ಅದರ ಕಿವಿ ಹಿಂಡುತ್ತಾ, ಹಾದಿ ಬೀದಿಯಲ್ಲಿ ಆಯ ತಪ್ಪಿ ಬಿದ್ದು ತರಚಿದ ಗಾಯವೂ ನಗು ಮೂಡಿಸುತ್ತದೆ. ಆದರೆ ತಂತ್ರಜ್ಞಾನದ ಭರದಲ್ಲಿ ಸೈಕಲ್ ಮೂಲೆ ಗುಂಪಾದ ಸಂದರ್ಭವೂ ಬಂತು.

ಈಗ ಮತ್ತೆ ಸೈಕಲ್ ಜಮಾನ ಬಂದಿದೆ. ಪರಿಸರಸ್ನೇಹಿ ಎಂಬ ಕಾರಣಕ್ಕೆ ಸೈಕಲ್‌ಗಳು ಮತ್ತೆ ರೋಡಿಗಿಳಿದಿವೆ. ಬೈಕ್, ಕಾರುಗಳೇ ತುಂಬಿ ಗಿಜಿಗುಡುತ್ತಿರುವ ರಸ್ತೆಗಳಲ್ಲೂ ಸೈಕಲ್ ತನ್ನ ಇರುವನ್ನು ಸಾರಿ ಹೇಳುತ್ತಿವೆ. ಇದೇ ಕಾರಣಕ್ಕೆ ಸೈಕಲ್‌ನಲ್ಲಿನ ತಂತ್ರಜ್ಞಾನ ಮತ್ತು ನೋಟವನ್ನು ಇನ್ನಷ್ಟು ಸುಂದರಗೊಳಿಸುವ ನಿಟ್ಟಿನಲ್ಲಿ ಕಂಪೆನಿಗಳೂ ಮುಂದಾಗಿವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಸೈಕಲ್‌ಪಯಣವನ್ನು ಇನ್ನಷ್ಟು ಸುಲಭಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ.

ನಾಗರಭಾವಿಯ ಸೇಂಟ್ ಸೋಫಿಯಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ನಗ್ಮೇಶ್‌ಗೆ ಸೈಕಲ್ ಎಂದರೆ ಪಂಚಪ್ರಾಣ. ಅದರ ಮೇಲಿನ ಸವಾರಿಯೇ ಎಲ್ಲಿಲ್ಲದ ಹಿಗ್ಗು ಎನ್ನುವ ಈ ಹುಡುಗನಿಗೆ ಸೈಕಲ್‌ನಲ್ಲೇ ವಿಭಿನ್ನತೆ ಹುಡುಕುವ ಕನಸು ಹುಟ್ಟಿಕೊಂಡಿತು.
ಹೀಗೆ ಸುತ್ತಾಡಲೆಂದು ಮಾಲ್‌ಗೆ ಹೋಗಿದ್ದ ಸಂದರ್ಭ ಟ್ರ್ಯಾಲಿಗಳನ್ನು ಕಂಡ ನಗ್ಮೇಶ್‌ಗೆ ಅದೇಕೋ ಟ್ರ್ಯಾಲಿಗೂ ಸೈಕಲ್‌ಗೂ ಸಂಬಂಧ ಬೆಸೆಯುವ ಮನಸ್ಸಾಯಿತು.

ಈ ಟ್ರ್ಯಾಲಿ ಬಳಸಿಕೊಂಡು ಅಂಗವಿಕಲರಿಗೆ ನೆರವಾಗುವಂತೆ ತಾನೇ ಚಕ್ರ, ಕಂಬಿಗಳನ್ನು ಕೊಂಡುತಂದು ಸೈಕಲ್‌ತಯಾರಿಸಿದನಂತೆ. ಅದೂ ಅತಿ ಕಡಿಮೆ ಖರ್ಚಿನಲ್ಲಿ. ಶಾಲೆಯ ವಾರ್ಷಿಕ ವಿಜ್ಞಾನ ಉತ್ಸವದಲ್ಲಿ ಅದನ್ನು ಪ್ರದರ್ಶನಕ್ಕೆ ಅಣಿ ಮಾಡಿದ ನಗ್ಮೇಶ್‌ಗೆ ಶಾಲೆಯಿಂದ ದೊರೆತ ಪ್ರೋತ್ಸಾಹ ಅಪಾರ.

ಆದರೆ ಸೈಕಲ್ ಕನಸಿನ ಪಯಣವನ್ನು ಇಷ್ಟಕ್ಕೇ ನಿಲ್ಲಿಸುವ ಮನಸ್ಸಾಗಲಿಲ್ಲ. ಇನ್ನೂ ಏನಾದರೂ ಮಾಡಬೇಕೆಂದು ಆಲೋಚಿಸುತ್ತಾ ಸಾಗಿದ್ದ ನಗ್ಮೇಶ್ ತಾನು ತುಳಿಯುತ್ತಿದ್ದ ಸೈಕಲ್ ಇದ್ದಕ್ಕಿದ್ದಂತೆ ನಿಂತಿದ್ದನ್ನು ನೋಡಿದ. ಎಲ್ಲಾ ಕಡೆ ಸರಾಗವಾಗಿ ಓಡುವ ಸೈಕಲ್ ಅದೇಕೆ ಏರು ಬಂದಂತೆ ನಿಂತೇ ಬಿಡುತ್ತದೆ ಎಂಬ ಯೋಚನೆ ತಲೆ ಹೊಕ್ಕಿತ್ತು. ಹೇಗಾದರೂ ಮಾಡಿ ಏರು ಪ್ರದೇಶಗಳಲ್ಲೂ ಸೈಕಲ್ ಆರಾಮವಾಗಿ ಚಲಿಸುವಂತೆ ಮಾಡಬೇಕು ಎಂದು ಅಂದುಕೊಂಡ. ಅಂದುಕೊಂಡಂತೆ ತನ್ನ ಬಳಿ ಇದ್ದ ಸೈಕಲ್‌ನಲ್ಲೇ ವೇಗ ಹೆಚ್ಚು ಮಾಡುವ ತಂತ್ರಜ್ಞಾನ ಕಂಡುಕೊಂಡ.

`ಸಾಮಾನ್ಯ ಸೈಕಲ್‌ಗಳಿಗೆ ಬಲಭಾಗದಲ್ಲಿ ಚೈನ್ ಇರುತ್ತದೆ. ಇದು ವೇಗಕ್ಕೆ ಸಹಾಯಕ. ಸೈಕಲ್‌ನ ಎರಡೂ ಬದಿಗಳಲ್ಲಿ ಚೈನ್ ಅಳವಡಿಸಿದರೆ, ವೇಗ ಇನ್ನಷ್ಟು ಹೆಚ್ಚಾಗಬಹುದು ಎಂದು ಸೈಕಲ್‌ನ ಎರಡೂ ಬದಿಗಳಲ್ಲಿ ಚೈನ್ ಅಳವಡಿಸಿದೆ. ಸಾಮಾನ್ಯ ಸೈಕಲ್‌ಗಳಲ್ಲಿ 27 ಗೇರ್ ಇದ್ದರೆ, ಈ ಸೈಕಲ್‌ನಲ್ಲಿ 54 ಗೇರ್ ಸಾಧ್ಯವಿದೆ. ಕೆಟ್ಟು ಹೋಗಿದ್ದ ಸೈಕಲ್‌ನ ಚೈನ್ ಮತ್ತು ವೀಲ್ ಬಳಸಿ ಈ ಸೈಕಲ್‌ಗೆ ಅಳವಡಿಸಿದೆ. ಇದೀಗ ನನ್ನ ಸೈಕಲ್ ದುಪ್ಪಟ್ಟು ವೇಗದಿಂದ ಓಡಬಲ್ಲದು' ಎಂದು ನಗುತ್ತಾ ಸೈಕಲ್ ತೋರಿಸುತ್ತಿದ್ದನು ನಗ್ಮೇಶ್.

ಅಂದಹಾಗೆ ನಗ್ಮೇಶ್‌ನ ಈ ಸೈಕಲ್ ಸ್ಪೀಡ್‌ಗೆ ಪೋಷಕರೂ ಬ್ರೇಕ್ ಹಾಕಿಲ್ಲ. ಇನ್ನು ಶಾಲೆ ಈತನಿಗೆ ಪ್ರತಿಯೊಂದು ಹಂತದಲ್ಲೂ ಪ್ರೋತ್ಸಾಹ ನೀಡಿದೆಯಂತೆ. `ಪರಿಸರ ಸಂರಕ್ಷಣೆಗೆ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ನಗ್ಮೇಶ್ ಕೂಡ ಈ ಹಾದಿಯಲ್ಲೇ ನಡೆಯುತ್ತಿದ್ದಾನೆ. ಅವನ ಈ ಚಿಕ್ಕ ಪುಟ್ಟ ಅನ್ವೇಷಣೆಗಳೇ ಮುಂದೊಂದು ದಿನ ದೊಡ್ಡ ಮಟ್ಟದ ಬೆಳವಣಿಗೆಯಾಗಬಹುದು. ಅದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ' ಎಂದು ಬೆನ್ನುತಟ್ಟಿದರು ಶಾಲೆಯ ಪ್ರಾಂಶುಪಾಲರಾದ ಯೋಗೇಶ್ ಬಿ.ಕೆ.

ಇಷ್ಟೇ ಅಲ್ಲ, ಸೈಕಲ್‌ನಿಂದ ಆಗಬಹುದಾದ ಇನ್ನಷ್ಟು ಸಾಧ್ಯತೆಗಳನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಆಸೆ ಹೊತ್ತಿರುವ ನಗ್ಮೇಶ್‌ಗೆ ನಾಲ್ಕು ಚಕ್ರಗಳ ವಿಶೇಷ ಸೈಕಲ್ ಹೊರತರುವ ಕನಸಿದೆಯಂತೆ. ಸಂಪರ್ಕ ಸಂಖ್ಯೆ: 7795464314.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT