ADVERTISEMENT

ನಿಯತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ನಿಯತಿ
ನಿಯತಿ   

ಹುಟ್ಟುವ ಪದಗಳಿಗೆ ಯಾವ

ಕಟ್ಟಳೆಯಿಹುದು? ಭಾವಗಳ!

ಮನ ಮುಟ್ಟುವ ಕವಿತೆಯಾಗಲಿಕ್ಕೆ!

ADVERTISEMENT

ಬೀಸುವ ಗಾಳಿಗೆ ಯಾರ

ಅಪ್ಪಣೆ ಬೇಕು? ಸುಳಿಸುಳಿದು

ಹಿತವಾದ ತಂಪು ತೀಡಲಿಕ್ಕೆ!

ಮಾಮರದ ಕೋಗಿಲೆಗೆ ಯಾವ

ಪ್ರೇರಣೆಯಿಹುದು? ಉಲಿದು ತಾ

ಗಂಧರ್ವ ಗಾನ ಭುವಿಗಿಳಿಸಲು!

ಹರಿಯುವ ನದಿಯು ಯಾವ

ನಿಯಮಕೆ ಒಲಿದು ಸರಿಸರಿದು

ಹಸಿರು- ಹೊನ್ನು ಹಾಸುತಿಹುದು?

ದಟ್ಟೈಸುವ ಮೋಡಕ್ಕೆ ಯಾರ

ಸಲಹೆಯು ಬೇಕು? ಸುರಿಸುರಿದು

ಮಳೆಯಾಗಿ ಇಳೆಯನು ತಣಿಸಲಿಕ್ಕೆ!

ಕರಿಮೋಡದಡಿಯ ಮಯೂರ ಯಾರ

ಒಪ್ಪಿಗೆಗೆ ನಮಿಸಿ ಕುಣಿಕುಣಿದು

ಯಕ್ಷ ಲೋಕ ಧರೆಗಿಳಿಸುವುದು!

ಹಗಲೆಲ್ಲಾ ತಿರುಗುತ್ತಾ ಕಾನು

ಮಧುರ ಮಧುವಿತ್ತ ಜೇನು!

ಹೆಮ್ಮೆಯಿಂದೊಮ್ಮೆ ಬೀಗುವುದೇನು?

ಬಾನಲಿ ತೇಲುವ ತಂಗದಿರಂಗೆ

ಸನ್ನೆ ಮಾಡಿದವರಾರು?

ಸೊಂಪಾದ ಸೊದೆ ಸುರಿಯಲಿ ಎಂದು

ಬಿಡುವಿರದ ದುಡಿತದಲಿ

ಬಯಸುತ್ತಿಲ್ಲ ಯಾವ ಪದವಿ!

ಭಾನು, ತಾರೆ, ಭೂಮಿತಾಯಿ!!

ಎಂಥ ಸಂಕುಚಿತ ಸ್ವಾರ್ಥ

ತುಂಬಿ ತುಳುಕಿದೆ ಮನುಜರಲಿ

ತನ್ನಿಂದಲೇ ಎಲ್ಲವೆಂದು ಬೀಗುತಿರುವ!?

ಎಲ್ಲವನೂ ತನ್ನಿಚ್ಛೆಯಂತೆ ದಾಳ ಉರುಳಿಸಿ

ನಡೆಸುತಿಹ ನಿಯತಿ ಯಾವುದು ತಿಳಿ

ಕಾಲವ್ಯಾಪಿಯದರ ನೆಲೆಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.