ADVERTISEMENT

ಪಾತರಗಿತ್ತಿ ಪಕ್ಕಾ...ಮಕ್ಕಳಿಗೆ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2011, 19:30 IST
Last Updated 14 ನವೆಂಬರ್ 2011, 19:30 IST
ಪಾತರಗಿತ್ತಿ ಪಕ್ಕಾ...ಮಕ್ಕಳಿಗೆ ಗೊತ್ತಾ?
ಪಾತರಗಿತ್ತಿ ಪಕ್ಕಾ...ಮಕ್ಕಳಿಗೆ ಗೊತ್ತಾ?   

ಅಂಗಳವಿರದೆ ಉದ್ದಾನುದ್ದ ಪ್ಯಾಸೇಜಿನ ಮನೆ. ಹಿತ್ತಲಿರದೆ ಇಕ್ಕಟ್ಟಿನ ಬಾಲ್ಕನಿಯ ಮನೆ. ಅದಕ್ಕೆ ಮನೆ ಅನ್ನುವುದಾದರೂ ಹೇಗೆ?

ಕಣ್ಬಿಡುವುದರಲ್ಲಿ ಅಪ್ಪ ಕಚೇರಿಗೆ ಹೋಗಿಯಾಗಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೆ ರೆಪ್ಪೆ ಆಡಿಸಲೂ ಬಿಡುವಿರದಂತೆ ಸಿದ್ಧರಾಗಿ ಶಾಲೆಗೆ ಓಡಲೇಬೇಕು. ಬರುವುದರಲ್ಲಿ ಮನೇಲಿ ಅಮ್ಮನೂ ಇಲ್ಲ. ಅಪ್ಪನೂ ಇಲ್ಲ.  ಮೇಡ್ ಅಮ್ಮ ಅಥವಾ ಆಯಮ್ಮ, ಅಮ್ಮ ಮಾಡಿಟ್ಟ ಅಡುಗೆಯನ್ನು ಕೆಲವೊಮ್ಮೆ ಕಲಿಸಿಟ್ಟ ಅನ್ನವನ್ನೇ ಓವನ್‌ಗೆ ಇಟ್ಟು ಬಿಸಿ ಮಾಡಿ ತಿನ್ನಿಸ್ತಾರೆ.

ಸೋಫಾ ಮೇಲೆ ಟಾಂ ಅಂಡ್ ಜೆರ‌್ರಿ, ಡೊರೆಮನ್ ನೋಡುತ್ತ ಕಣ್ಮುಚ್ಚಿದ್ದರೆ ಕಣ್ತೆರೆವಾಗ ಆಯಮ್ಮನೂ ಹೋಗುವ ಸಿದ್ಧತೆಯಲ್ಲಿರ್ತಾಳೆ. ಕಣ್ಣಲ್ಲಿ ಮತ್ತೆ ಎಂದೂ ಮುಗಿಯದ ನಿರೀಕ್ಷೆ. ಇವೊತ್ತಾದರೂ ಅಮ್ಮ ಬೇಗ ಬರ್ತಾಳಾ? ಅಪ್ಪ ಬೇಗ ಬರ್ತಾರಾ? ಪಕ್ಕದ ಮನೇಲಿ ಬೀಗ ಹಿಡ್ಕೊಂಡು ಕೂರಬೇಕಾ? ಇಷ್ಟೆಲ್ಲ ಪ್ರಶ್ನೆಗಳನ್ನು ಪುಟ್ಟ ಮನಸಿನಲ್ಲಿ ಕೇಳುತ್ತ ದಿನದೂಡುವ ಮಗು ಕಳೆದುಕೊಳ್ಳುತ್ತಿರುವುದು ಏನು?

ಇನ್ನೂ ಕಠಿಣ ಶಬ್ದಗಳಲ್ಲಿ ಹೇಳುವುದಾದರೆ ಮಗು ತ್ಯಾಗ ಮಾಡಿರುವುದು ಏನನ್ನು? ತನ್ನ `ಬಾಲ್ಯ~!. ಜೀವನದ ಅತ್ಯಮೂಲ್ಯ ಕ್ಷಣಗಳನ್ನೇ ನಗರದ ಮಕ್ಕಳು ಕಳೆದುಕೊಳ್ಳುತ್ತಿವೆ.
`ಬಿಶಿ ಮೊಮ್ಮು ಉಪ್ಪುಕಾಯಿ ಕಲ್ಸಿ ಕೊಡು ಅಮ್ಮಾ... ನಂಗೆ~ ಅಂತ ಲಲ್ಲೆಗರೆಯ ಬೇಕಾದ ಪುಟ್ಟ ಕಿಟ್ಟಣ್ಣಗಳಿಗೆ, ಕಾಡುವ ಮಗುವಿಗೆ ಕಲಸನ್ನವೇ ಗತಿ.

ಚಪಾತಿ ತುಪ್ಪ ಚಕ್ರಿ, ತುಪ್ಪ ಬೆಲ್ಲ, ತುಪ್ಪ ಹುಂಚೀಹುಳಿ ಸವರಿ, ಸುರಳಿ ಸುತ್ತಿ ಕೊಟ್ಟರೆ ಆಟವಾಡುತ್ತ ತಿನ್ನುವ ಕೂಸಿಗೆ ಈಗ ವಿವಿಧ ರುಚಿಯ ಫ್ರಾಂಕಿಗಳೇ ಗೊತ್ತು.
`ಆಡಿ ಬಾ ನನ್ನ ಕಂದ... ಅಂಗಾಲ ತೊಳೆದೇನ..~ ಎಂದು ಹೇಳುವಂತೆಯೇ ಇಲ್ಲ. ಅಂಗಳವಂತೂ ಮೊದಲೇ ಇರುವುದಿಲ್ಲ. ಇದ್ದರೂ ಕಾರುಗಳು ಅಲ್ಲಿ ನಿಂತಿರುತ್ತವೆ. ಬೀದಿಗೆ ಹೋದರೆ ನಾಯಿಗಳ ಕಾಟ.

ಆಟ ಅಂದ್ರೆನೆ ಡಿಜಿಟಲ್ ಗೇಂಗಳು. ರಾ-ವನ್ ಮೂಲಕ ದುಷ್ಟರ ಸಂಹಾರ, ಇಲ್ಲದಿದ್ದರೆ ಯಾವ್ಯಾವುದೋ ಹೀರೋಯಿಕ್ ಪಾತ್ರಗಳು, ಇನ್ನಾರನ್ನೋ ಧ್ವಂಸಗೊಳಿಸುವ ಆಟಗಳು. ಸೋತು ಗೊತ್ತಿಲ್ಲದೆ, ಮನದೊಳಗೆ ಎದುರಾಳಿಯ ಬಗ್ಗೆ ಕಹಿಯನ್ನೇ ತುಂಬುವ, ಈ ಆಟಗಳು ನಿಧಾನವಾಗಿ ನಮ್ಮ ಮಕ್ಕಳನ್ನು ಆತ್ಮಹತ್ಯೆಯತ್ತ ಕರೆದೊಯ್ಯುತ್ತವೆ. ಒಂದು ಸಣ್ಣ ಸೋಲನ್ನೂ ಸ್ವೀಕರಿಸಲಾಗದ ಇವರ ಮನ ಜೀವನ ಎದುರಿಸುವುದಾದರೂ ಹೇಗೆ?

ಪರಸ್ಪರ ಕುಸ್ತಿ ಹಿಡಿದರೂ ಮರುಗಳಿಗೆಯೇ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುವ ಸ್ನೇಹ ಪರ ಸ್ವಾಸ್ಥ್ಯ ಮನಸ್ಸು ಇವರದ್ದಾಗಲು ಸಾಧ್ಯವೇ? ತುಂಟ ಕೃಷ್ಣನ ಕಾಲಿಗೆ ಯಶೋದೆ ಸರಪಳಿ ಬಿಗಿದಂತೆ, ಈ ಮಕ್ಕಳಿಗೆ ಯಾವತ್ತೂ ಅಪ್ಪ-ಅಮ್ಮನ ಬೆಂಗಾವಲು. ನವೆಯದಂತೆ, ಸೋಲದಂತೆ, ತಮ್ಮಳಗಿನ ಅಪರಾಧಿ ಪ್ರಜ್ಞೆ ತಪ್ಪಿಸಲು ಕೇಳಿದ್ದನ್ನೆಲ್ಲ ತೆಗಿಸಿಕೊಡುತ್ತಾರೆ. ಮಕ್ಕಳ ಕಣ್ಣೀರು ಕೆನ್ನೆಗಿಳಿಯಲಿಲ್ಲ ಎಂಬುದೊಂದೇ ಸಮಾಧಾನ. ಆದರೆ ಆ ಮಕ್ಕಳಲ್ಲಿಯ ಧಾರಣಾ ಶಕ್ತಿಯನ್ನೇ ಕಸಿಯುತ್ತಿರುವ ಅರಿವು ಮಾತ್ರ ಇಬ್ಬರಿಗೂ ಇರುವುದೇ ಇಲ್ಲ.

ಇದರೊಂದಿಗೆ ಈ ಮಕ್ಕಳಿಗೆ ಕುತೂಹಲವಾಗಲೀ, ಸಂಭ್ರಮ ಪಡುವ ಮನಃಸ್ಥಿತಿಯಾಗಲೀ ಇಲ್ಲವೇ ಇಲ್ಲ. ಎಲ್ಲವೂ ಗೊತ್ತು ಎಂಬ ಗತ್ತು. ಅಷ್ಟೇನಾ ಎಂಬ ಭ್ರಮ ನಿರಸನ ಮನೆ ಮಾಡುತ್ತಿದೆ.

ಬಣ್ಣದ ಚಿಟ್ಟೆ ನೋಡಿ, `ಪಾತರಗಿತ್ತಿ ಪಕ್ಕಾ... ನೋಡಿದೇನ ಅಕ್ಕಾ~ ಅಂತ ನಾವೀಗಲೂ ಸಂಭ್ರಮಿಸಿದರೆ, ಇವರಿಗೆ ಆ ಚಿಟ್ಟೆಯ ಪೂರ್ವಾಪರಗಳೆಲ್ಲ ಡಿಸ್ಕವರಿ, ನ್ಯಾಷನಲ್ ಜಿಯಾಗ್ರಫಿಯಲ್ಲಿ ನೋಡಿಯೇ ಗೊತ್ತು. ಸೋಜಿಗ ಎನಿಸುವಂಥದ್ದೇನೂ ಕಾಣುವುದೇ ಇಲ್ಲ.

ದಿಗಿಲಾಗುವ ಇನ್ನೊಂದು ವಿಷಯವೆಂದರೆ ಈ ಮಕ್ಕಳಿಗೆ ಸಂಬಂಧ ವಾಚಕಗಳೇ ಗೊತ್ತಾಗದು. ಕಾಕಾ- ಕಾಕಿ, ಮಾಮಾ- ಮಾಮಿ, ಅತ್ತೆ ಮಾವ, ಅತ್ತೆಮ್ಮ, ಅಜ್ಜ- ಅಜ್ಜಿ, ಅವ್ವ-ತಾತ ಇವುಗಳ ವ್ಯತ್ಯಾಸವೂ ಗೊತ್ತಿಲ್ಲ. ಎಲ್ಲರೂ ಅಂಕಲ್- ಆಂಟಿಗಳೇ. ಅವರುಕಾಕಾ ಎಂದರೂ ಕಾಕಾ ಅಂಕಲ್ ಎಂದೇ ಕರೆಯುವಷ್ಟು ಮುಗ್ಧರು ಈಮೆಟ್ರೊ ಮಕ್ಕಳು.

ಭಾಷಾ ಪಾರಂಗತರು ಆಗುವುದೇನೂ ಬೇಡ. ಮಾತೃಭಾಷೆಯನ್ನೇ ಪರಿಶುದ್ಧವಾಗಿ ಕಲಿತರೂ ಸಾಕು ಅಂತ ಅನ್ನಿಸದೇ ಇರದು. ಪಾತರಗಿತ್ತಿಯ ರೆಕ್ಕೆಗೂ `ಪಕ್ಕಾ~ ಅಂತಾರೆ ಅಂತ ಗೊತ್ತೇ ಇಲ್ಲದ ಈ ಮಕ್ಕಳಿಗೆ ಕೇವಲ ಅಕ್ಕ-ಪಕ್ಕ ಮಾತ್ರ ಗೊತ್ತು. ಇವು ತಮ್ಮಲ್ಲಿಯ ಮಕ್ಕಳತನವನ್ನೇ ಕಳೆದುಕೊಳ್ಳುತ್ತಿವೆ. ಅದರಲ್ಲಿ ಹಿರಿಯರ ಪಾತ್ರವೇ ದೊಡ್ಡದು.
ಇವರ ಬಾಲ್ಯ ಕಬಳಿಸಿದ ಅಪರಾಧಿ ಪ್ರಜ್ಞೆಯಿಂದಾಚೆ ಬರಬೇಕಾದರೆ ನಾವೇನು ಮಾಡಬೇಕು?
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.