ADVERTISEMENT

ಪುಟಾಣಿ ಜೀವಿಗಳತ್ತ ಲೆನ್ಸ್‌ ನೆಟ್ಟ ಹಯಾತ್‌...

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಪುಟಾಣಿ ಜೀವಿಗಳತ್ತ ಲೆನ್ಸ್‌ ನೆಟ್ಟ ಹಯಾತ್‌...
ಪುಟಾಣಿ ಜೀವಿಗಳತ್ತ ಲೆನ್ಸ್‌ ನೆಟ್ಟ ಹಯಾತ್‌...   

ಸಂದರ್ಶನ: ರಮ್ಯಾ ಕೆದಿಲಾಯ
*ಮ್ಯಾಕ್ರೊ ಫೋಟೊಗ್ರಫಿ ಎಂದರೇನು?
ಸೂಕ್ಷ್ಮ ವಸ್ತುಗಳ, ಜೀವಿಗಳ ಚಿತ್ರ ತೆಗೆಯುವುದನ್ನು ಮ್ಯಾಕ್ರೊ ಫೊಟೊಗ್ರಫಿ ಎನ್ನಲಾಗುತ್ತದೆ. ಒಂದೊಂದು ಫೋಟೊಗೂ ಬಹಳ ತಾಳ್ಮೆ ಬೇಕಾಗುತ್ತದೆ.

*ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡ ಬಗೆ ಹೇಗೆ?
ಭಾರತೀಯ ಮೀನುಗಳು ಜಗತ್ತಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿರಲಿಲ್ಲ. ಭಾರತೀಯ ಮೀನುಗಳನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ ಛಾಯಾಗ್ರಹಣವನ್ನು ಆಯ್ದುಕೊಂಡೆ.

*ಛಾಯಾಗ್ರಹಣ ನಿಮ್ಮ ವೃತ್ತಿಯೇ?
ಛಾಯಾಗ್ರಹಣ ನನ್ನ ಹವ್ಯಾಸ. ವೃತ್ತಿಯಲ್ಲಿ ನಾನು ಸಾಫ್ಟ್‌ವೇರ್ ಎಂಜಿನಿಯರ್. ಬಾಲ್ಯದಿಂದಲೇ ಛಾಯಾಗ್ರಹಣದಲ್ಲಿ ಅತೀವ ಆಸಕ್ತಿ. ಕುಟುಂಬದೊಂದಿಗೆ ಊರೂರು ಸುತ್ತಿದಾಗಲೂ ಕ್ಯಾಮರಾ ಮೂಲಕವೇ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದೆ.

ADVERTISEMENT

*ಛಾಯಾಗ್ರಹಣಕ್ಕೆ ಕಾಲಿಡಲು ಪ್ರೇರಣೆ ಯಾರು?
ಅತ್ಯುತ್ತಮ ಛಾಯಾಗ್ರಾಹಕರೆನಿಸಿಕೊಂಡಿರುವ ವಿಪಿನ್ ಬಾಳಿಗ, ಬ್ರೈನ್ ವ್ಯಾಲೆಂಟಿನ್, ಥಾಮಸ್ ಶಹಾನ್, ರವಿಪ್ರಕಾಶ್ ಶರ್ಮ, ಕಲ್ಯಾಣ್ ವರ್ಮಾ ಅವರ ಕೆಲಸಗಳೇ ನನಗೆ ಪ್ರೇರಣೆ.

*ಮ್ಯಾಕ್ರೊ ಛಾಯಾಗ್ರಹಣವನ್ನೇ ಯಾಕೆ ಆಯ್ದುಕೊಂಡಿರಿ?
ಮ್ಯಾಕ್ರೊ ಛಾಯಾಗ್ರಹಣ ನನಗೆ ಇಷ್ಟ. ಇದರ ಜೊತೆ ಪ್ರಕೃತಿ ಛಾಯಾಗ್ರಹಣವನ್ನೂ ಮಾಡುತ್ತೇನೆ.

*ಛಾಯಾಗ್ರಹಣದ ಸಂದರ್ಭದಲ್ಲಿನ ಅವಿಸ್ಮರಣೀಯ ಸಂದರ್ಭ ಯಾವುದಾದರೂ ಇದೆಯೇ?
ಆಗತಾನೇ ಮೊಟ್ಟೆಯಿಂದ ಹೊರಬರುತ್ತಿರುವ ಚಿಟ್ಟೆ ಮರಿಯನ್ನು ನೋಡಿರುವುದು ಛಾಯಾಗ್ರಹಣದ ಸಂದರ್ಭದಲ್ಲಿ ಅದ್ಭುತ ಗಳಿಗೆ.

*ಛಾಯಾಗ್ರಹಣದಲ್ಲಿ ನಿಮಗೆ ಭಯ ಹುಟ್ಟಿಸಿದ ಸನ್ನಿವೇಶಗಳು ಇವೆಯೆ?
ಕೆಲವೊಮ್ಮೆ ವಿಷಕಾರಿ ಹಾವುಗಳು ಎದುರಾಗುತ್ತವೆ. ಅವುಗಳಿಗೆ ತೊಂದರೆ ಮಾಡದೇ ಸುಮ್ಮನಿದ್ದರೆ ಅವುಗಳಿಂದ ಯಾವುದೇ ಅಪಾಯವಿಲ್ಲ.

*ಮ್ಯಾಕ್ರೊ ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗವನ್ನು ಹೇಗೆ ಯೋಜಿಸಿಕೊಳ್ಳುವಿರಿ?
ಬೆಳಕಿನ ಸಾಂದ್ರತೆಯನ್ನು ಉಪಯೋಗಿಸುವ ಸಲುವಾಗಿ ಫ್ಲಾಶ್ ಲೈಟ್‌ಗಳ ಜೊತೆಗೆ ನಾನೇ ತಯಾರಿಸಿದ ಉಪಕರಣಗಳನ್ನು ಬಳಸುತ್ತೇನೆ. ವಿಶೇಷವಾಗಿ ಯಾವುದೇ ಒಂದು ಫೋಟೊ ತೆಗೆಯಬೇಕಾದರೂ ಅತ್ಯಂತ ಸೂಕ್ಷ್ಮ ವಸ್ತುವಿನ ವಿವರವನ್ನು ಸೆರೆಹಿಡಿಯಲು ನನ್ನ ಈ ಉಪಕರಣಗಗಳು ಬಹಳ ಸಹಕಾರಿಯಾಗಿವೆ.

*ಮ್ಯಾಕ್ರೊ ಛಾಯಾಗ್ರಹಣಕ್ಕೆ ಉತ್ತಮ ಸ್ಥಳ?
ಮ್ಯಾಕ್ರೊ ಛಾಯಾಗ್ರಹಣ ಎಲ್ಲಿ ಬೇಕಾದರೂ ಮಾಡಬಹುದು. ಇಂತಹುದೇ ಚೌಕಟ್ಟು, ಪ್ರದೇಶ, ವಾತಾವರಣ ಎಂಬ ನಿರ್ದಿಷ್ಟ ಚೌಕಟ್ಟು ಬೇಕಾಗಿಲ್ಲ. ಕೈತೋಟದಲ್ಲಿರುವ ಒಂದು ಸಣ್ಣ ಹೂವು ಕೂಡಾ ವಸ್ತುವಾಗಬಲ್ಲದು. ಆದರೆ ಕರ್ನಾಟಕದಲ್ಲಿ ಆಗುಂಬೆ, ಕೊಡಗು, ಪಶ್ಚಿಮ ಘಟ್ಟಗಳು ಮಾಕ್ರೊ ಛಾಯಾಗ್ರಹಣಕ್ಕೆ ನಾನು ಅತ್ಯಂತ ಇಷ್ಟಪಡುವ ಸ್ಥಳಗಳು.

*ಎಲ್ಲಿ ಮತ್ತೆ ಮತ್ತೆ ಫೋಟೊ ತೆಗೆಯಬೇಕು ಎಂದು ಬಯಸುತ್ತೀರಿ?
ಗುಜರಾತ್. ರಾಜಸ್ತಾನ, ಅಮೆರಿಕ ನನ್ನ ನೆಚ್ಚಿನ ಛಾಯಾಗ್ರಹಣದ ತಾಣಗಳು.

*ಮ್ಯಾಕ್ರೊ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುವವರಿಗೆ ಕಿವಿಮಾತು?
ಛಾಯಾಗ್ರಹಣದಲ್ಲಿ ವಿಷಯಕ್ಕಿಂತ ಯಾವುದೂ ದೊಡ್ಡದಲ್ಲ. ಛಾಯಾಗ್ರಹಣವು ನಮ್ಮ ಕೌಶಲವನ್ನು ಹೊರಹಾಕುವ ಕಲೆ. ಧ್ಯಾನದಂತೆ ಛಾಯಾಗ್ರಹಣವನ್ನು ಅಭ್ಯಸಿಸಬೇಕು. ಆಗಲೇ ಅದ್ಭುತ ಎನ್ನುವಂತಹ ಫೋಟೊಗಳು ದಕ್ಕುವುದು.

***


ಹಯಾತ್ ಮೊಹಮ್ಮದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.