ADVERTISEMENT

ಪುಸ್ತಕ ಲೋಕದೊಳಗೊಂದು ಸುತ್ತು...

ಸುಚೇತನಾ ನಾಯ್ಕ
Published 20 ಮೇ 2012, 19:30 IST
Last Updated 20 ಮೇ 2012, 19:30 IST
ಪುಸ್ತಕ ಲೋಕದೊಳಗೊಂದು ಸುತ್ತು...
ಪುಸ್ತಕ ಲೋಕದೊಳಗೊಂದು ಸುತ್ತು...   

ಒಂದೇ ಸ್ಥಳದಲ್ಲಿ ಕುಳಿತು ಜಗತ್ತಿನ ಯಾವುದೇ ಮೂಲೆಯ ಮಾಹಿತಿಯನ್ನು, ಕಥೆಗಳನ್ನು, ಸ್ಥಳ ವಿಶೇಷತೆಯನ್ನು ಅನುಭವಿಸುತ್ತ ತಿಳಿದುಕೊಳ್ಳುವ ಸಾಧ್ಯತೆ ಇರುವುದು ಪುಸ್ತಕಗಳಿಗೆ ಮಾತ್ರ. ರೇಡಿಯೋ, ಟಿ.ವಿ. ಚಲನಚಿತ್ರ,  ಕಂಪ್ಯೂಟರ್ ಯಾವುದೇ ಮಾಧ್ಯಮ ಲಗ್ಗೆ ಇಟ್ಟರೂ ಪುಸ್ತಕ ಮಾತ್ರ ತನ್ನ ವಿಶೇಷತೆಯನ್ನು ಹಾಗೆಯೇ ಕಾಪಾಡಿಕೊಂಡು ಬಂದಿದೆ.

ಹಾಗೆನೇ, ದೇಶ ಸುತ್ತಿ ನೋಡು, ಕೋಶ (ಪುಸ್ತಕ) ಓದಿ ನೋಡು ಎನ್ನುವುದು ಹಳೆಯ ಮಾತು. ಆದರೆ ಈಗ ಬೆಂಗಳೂರಿನ ಜನರಿಗೆ ಸಾವಿರಾರು ಬಗೆಯ ಕೋಶ ಒಂದೇ ಸೂರಿನಡಿ ಲಭ್ಯ, ಅದೂ ಅತ್ಯಂತ ಕಡಿಮೆ ಬೆಲೆಯಲ್ಲಿ!

ಕ್ವೀನ್ಸ್ ರಸ್ತೆ ತಿರುವಿನ (ಇಂಡಿಯನ್ ಎಕ್ಸ್‌ಪ್ರೆಸ್ ಮುಂಭಾಗ) ಲೇಡಿ ಜಹಾಂಗೀರ್ ಕೊಠಾರಿ ಸಭಾಂಗಣದಲ್ಲಿ ಪುಸ್ತಕಗಳ ಸೇಲ್ ಆರಂಭಗೊಂಡಿದೆ. ಇದೇ ತಿಂಗಳ ಅಂತ್ಯದವರೆಗೆ ಈ ಸೇಲ್  ನಡೆಯಲಿದೆ.

ಇಲ್ಲಿ ಮಕ್ಕಳ ಪುಸ್ತಕದಿಂದ ಹಿಡಿದು, ಶಾಲೆ, ಕಾಲೇಜು, ಉನ್ನತ ಶಿಕ್ಷಣ ಹೀಗೆ ಎಲ್ಲ ಬಗೆಯ ಪುಸ್ತಕಗಳೂ ಲಭ್ಯ. ಶಾಲಾ, ಕಾಲೇಜುಗಳಿಗೆ ಮಾತ್ರ ಇದು ಸೀಮಿತಗೊಂಡಿಲ್ಲ. ಬದಲಿಗೆ ಸಾಮಾನ್ಯ ಜ್ಞಾನ, ಪ್ರಬಂಧ, ವಿವಿಧ ನಿಘಂಟುಗಳೂ ಇಲ್ಲುಂಟು.
 
ಅಷ್ಟೇ ಏಕೆ, ಗೃಹಿಣಿಯರಿಗೆ ಬೇಕಾಗುವ ಪಾಕ ವೈವಿಧ್ಯ, ಕೈತೋಟದ ಮಾಹಿತಿ ಪುಸ್ತಕಗಳು ಇಲ್ಲಿವೆ.ಇಲ್ಲಿಯ ಆಕರ್ಷಣೆ ಮಕ್ಕಳ ಪುಸ್ತಕಗಳು. ಮಿಕ್ಕಿ ಮೌಸ್, ರಾಜ- ರಾಣಿ ಕಥೆಗಳು, ಸಾಮಾನ್ಯ ಜ್ಞಾನ, ಆಟದ ಮೂಲಕ ಕಲಿಕೆ, ಬಣ್ಣಗಳ ಗುರುತಿಸುವಿಕೆ, ಪುಟಾಣಿಗಳಿಗೆ ಅಗತ್ಯವಿರುವ ಲೆಕ್ಕದ ಆಟ ಹೀಗೆ ಮಕ್ಕಳ ಜ್ಞಾನವರ್ಧನೆಗೆ ಅಗತ್ಯ ಇರುವ ವೈವಿಧ್ಯಮಯ ಪುಸ್ತಕಗಳ ಭಂಡಾರವೇ ಇಲ್ಲಿವೆ.

`ಇಂದು ಅಪ್ಪ-ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ. ಅದೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾಲಕರಿಗೆ ಅವರ ದಿನನಿತ್ಯದ ಕೆಲಸ ಮಾಡಿ ಕೊಳ್ಳಲು ವೇಳೆ ಸಿಗುವುದೇ ಕಷ್ಟವಾಗಿದೆ. ಆದುದರಿಂದ ಮಕ್ಕಳ ಕಡೆ ಹೆಚ್ಚಿಗೆ ಗಮನ ಕೊಡಲು ಆಗುವುದಿಲ್ಲ. ಹಿಂದಿನಂತೆ ಅವರನ್ನು ಹತ್ತಿರ ಕುಳ್ಳರಿಸಿಕೊಂಡು ಗಣಿತವಾಗಲೀ, ಚಿತ್ರ ಬಿಡಿಸುವುದಾಗಲೀ ಹೇಳಿಕೊಡುವುದು ಕಷ್ಟ.
 
ಅದಕ್ಕಾಗಿಯೇ ಪುಸ್ತಕಗಳ ಮೂಲಕ ಮಕ್ಕಳ ಬುದ್ಧಿಮತ್ತೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ವಿವಿಧ ಬಗೆ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ~ ಎನ್ನುತ್ತಾರೆ ಆಯೋಜಕ ಮುಂಬೈ ಮೂಲದ ಸುರೇಶ್.

ಇಲ್ಲಿ 20 ರಿಂದ 200 ರೂಪಾಯಿ ದರದಲ್ಲಿ ಎಂಥ ಪುಸ್ತಕ ಬೇಕಾದರೂ ಸಿಗುತ್ತವೆ. ಅದರಿಂದಾಗಿಯೇ ಪ್ರತಿಕ್ರಿಯೆ ಚೆನ್ನಾಗಿದೆ ಎನ್ನುತ್ತಾರೆ ಅವರು. `ಇಂದು ಕಲಿಕೆಗೆ ಅಗಾಧ ಅವಕಾಶ ಇದೆ. ಉನ್ನತ ಶಿಕ್ಷಣದ ಆಯ್ಕೆಯಲ್ಲಿ ಕೂಡ ಅನೇಕ ದಾರಿಗಳಿವೆ.

ಅದಕ್ಕಾಗಿಯೇ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ವಿವಿಧ ಕೋರ್ಸ್‌ಗಳ ಪುಸ್ತಕಗಳನ್ನು ಒಂದೇ ಕಡೆಯಲ್ಲಿ ಕೊಡುವ ಪ್ರಯತ್ನ ಇಲ್ಲಿ ನಡೆದಿದೆ. ಇದು ಸ್ಪರ್ಧಾತ್ಮಕ ಯುಗ. ಆದುದರಿಂದ ವಿವಿಧ ಪರೀಕ್ಷೆ ಎದುರಿಸಲು ಬೇಕಾಗುವ ಕ್ವಿಜ್ ಪುಸ್ತಕಗಳು, ಸಾಮಾನ್ಯ ಜ್ಞಾನದ ಹೊತ್ತಿಗೆಗಳು ಎಲ್ಲವೂ ಇಲ್ಲಿವೆ. ಆದರೆ ಒಂದು ಮಾತು. ಅಡುಗೆ ಪುಸ್ತಕಗಳನ್ನು ಹೊರತುಪಡಿಸಿದರೆ ಇಲ್ಲಿ ಲಭ್ಯ ಇರುವುದು ಇಂಗ್ಲಿಷ್ ಪುಸ್ತಕಗಳು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.