ADVERTISEMENT

ಪ್ರಜ್ವಲಿಸಿದ ಪ್ರಖರ ಪ್ರತಿಭೆಗಳು

ಡಾ.ಎಂ.ಸೂರ್ಯ ಪ್ರಸಾದ್
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಭರತನಾಟ್ಯ ಕಲೆಯಷ್ಟೇ ಅಲ್ಲದೇ ಇತರೆ ನೃತ್ಯ ಪ್ರಕಾರಗಳಲ್ಲೂ ಯುವ ನರ್ತಕರ ಬಾಹುಳ್ಯ ಹಾಗೂ ವಿಶಿಷ್ಟ ಕೊಡುಗೆಗಳು ಹೆಚ್ಚುತ್ತಿರುವುದು ಸ್ತುತ್ಯರ್ಹ. ಕಥಕ್ಕಳಿಯ ಸ್ತ್ರೀ ವೇಷದ ಬಗೆಗೂ ಈ ಮಾತನ್ನು ಹೇಳಬಹುದು. ಬೆಂಗಳೂರಿನಲ್ಲಿ ನೆಲೆಸಿರುವ ಯುವ ಕಲಾವಿದ ಪ್ರಬಲ್ ಗುಪ್ತ ಈ ಪ್ರಕಾರದಲ್ಲಿ ದಾಪುಗಾಲು ಹಾಕುತ್ತಿರುವುದು ಗಮನಾರ್ಹ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಾಗಿ ನೃತ್ಯವನ್ನು ನೆಚ್ಚಿಕೊಂಡಿರುವುದು ಆಶಾದಾಯಕ. ಸುಪರಿಚಿತ ನರ್ತಕ ಜೋಡಿ ನಂದಿನಿ ಮೆಹ್ತಾ ಮತ್ತು ಮುರಳೀಮೋಹನ್ ಅವರ `ಕಲಾನಾದಂ' ಆಶ್ರಯದಲ್ಲಿ  ಎಡಿಎ ರಂಗಮಂದಿರದಲ್ಲಿ ನಡೆದ 13ನೇ ವಾರ್ಷಿಕ ನೃತ್ಯೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಪ್ರಬಲ್ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಿದರು.

ಪ್ರಬಲ ಸ್ತ್ರೀಪಾತ್ರಾಭಿನಯ
ಸ್ತ್ರೀವೇಷವೆಂದರೆ ಸಂಪ್ರದಾಯಬದ್ಧ ಮತ್ತು ವಿಶದವಾದ, ಸ್ತ್ರೀಗೆ ಸಂಬಂಧಿಸಿದ ವೇಷಭೂಷಣಗಳನ್ನು ಧರಿಸಿ ಪುರುಷ ಕಲಾವಿದನು ಸ್ತ್ರೀಪಾತ್ರಗಳನ್ನು ನಿರ್ವಹಿಸುವಾಗ ಇರಬೇಕಾದ ವಿಶೇಷ ಪರಿಣತಿಯನ್ನು ಪ್ರಬಲ್ ಗುಪ್ತ ಸಾಧಿಸಿದ್ದಾರೆ. ಧ್ವನಿಮುದ್ರಿತ ಸಂಗೀತ ಸಹಕಾರದೊಡನೆ ಅವರು ತನ್ಮಯರಾಗಿ ನರ್ತಿಸಿ ರಸಿಕರನ್ನು ಮನಗೆದ್ದರು.

ಸಂಪ್ರದಾಯದಂತೆ ತಂತ್ರ-ಪ್ರಧಾನವಾದ ಪುರಪ್ಪಾಡುವಿನೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದವರು ನಂತರ ಪೂತನಾ ಮೋಕ್ಷವನ್ನು ಕೈಗೆತ್ತಿಕೊಂಡರು. ಮಹಾಭಾರತದ ಕಥಾಭಾಗದಂತೆ, ರಾಕ್ಷಸಿ ಪೂತನಿಯು ಸುಂದರ ಸ್ತ್ರೀ ಮಾರುವೇಷದಲ್ಲಿ  ಶಿಶು ಕೃಷ್ಣನ ಬಳಿಗೆ ಹೋಗಿ ತನ್ನ ವಿಷಲೇಪಿತ ಸ್ತನಗಳನ್ನುಣಿಸಿ ಅವನನ್ನು ಕೊಲ್ಲಲು ಯತ್ನಿಸುವ ವೇಳೆ ಅವಳನ್ನು ಕೊಲ್ಲುವ ಪ್ರಸಂಗವನ್ನು ಪ್ರಬಲ್ ಅವರು ಕೂಲಂಕಷವಾಗಿ ಚಿತ್ರಿಸಿದರು. ಅವರ ಸೂಕ್ಷ್ಮ ಹಾಗೂ ಸಂವೇದನಾಶೀಲ ಅಭಿನಯದಿಂದಾಗಿ ಸ್ತ್ರೀಪಾತ್ರಾಭಿನಯ ಸಮಗ್ರವಾಗಿ ಮೂಡಿಬಂತು.

ಪ್ರಬುದ್ಧ ಭರತನಾಟ್ಯ
ಕಲಾನಾದಂ ಉತ್ಸವದ ಕೊನೆಯ ದಿನದಂದು ಹಿರಿಯ ಭರತನಾಟ್ಯ ಕಲಾವಿದೆ ಸುಶೀಲಾ ಮೆಹ್ತಾ ಮತ್ತು ಕಥಕ್‌ನ ದಂತಕಥೆಯಾಗಿರುವ ಪಂಡಿತ್ ಬಿರ್ಜು ಮಹಾರಾಜ್ ಅವರ ಪುತ್ರ ಪಂಡಿತ್ ದೀಪಕ್ ಮಹಾರಾಜ್ ಅವರು ಮಿಂಚಿದರು. ಐದು ದಿನಗಳ ಕಲೋತ್ಸವಕ್ಕೆ ಔಚಿತ್ಯಪೂರ್ಣವಾದ ಸಮಾಪ್ತಿಯಂತಿದ್ದವು ಅವರ ಈ ಕಾರ್ಯಕ್ರಮಗಳು.

ಸುಶೀಲಾ ಮೆಹ್ತಾ ಅವರು ಎಂದಿನಂತೆ ಭರತನಾಟ್ಯದ ಮಾರ್ಗವನ್ನು ಅನುಸರಿಸದಿದ್ದುದೇ ಮುಖ್ಯಾಂಶ. ತ್ರಿವೇಣಿಕಾ ಎಂಬ ಹೆಸರಿನಲ್ಲಿ  ಗಂಗಾ, ಯಮುನಾ ಮತ್ತು ಸರಸ್ವತಿಯರ ಹಿರಿಮೆ-ಗರಿಮೆಗಳನ್ನು ಅವರು ಶ್ರುತಪಡಿಸಿದರು. ಯೋಗ ಮತ್ತು ಮನುಷ್ಯ ಶರೀರಕ್ಕೂ ಅವುಗಳನ್ನು ಅನ್ವಯಿಸುತ್ತಾ ಪಿಂಗಳ, ಇಡಾ ಮತ್ತು ಸುಷುಮ್ನೋಗಳ ಸಮನ್ವಯವನ್ನು ಅವರು ಚಿತ್ರಿಸಿದರು.  ಹಿಮಶೀಲ ಕನ್ಯೆ (ರಾಗ ಮತ್ತು ತಾಳಮಾಲಿಕೆ, ಶತಾವಧಾನಿ ಗಣೇಶ್‌ಅವರ ರಚನೆ)ಯನ್ನು ಅವಲಂಬಿಸಿ ಪ್ರಬುದ್ಧವಾದ ಸಂಯೋಜನೆಯಲ್ಲಿ  ತಮ್ಮ ಕಲ್ಪನೆಗಳನ್ನು ಸುಶೀಲಾ ಅವರು ಪ್ರೌಢವಾಗಿ ಸಾಕಾರಗೊಳಿಸಿದರು. ಪ್ರವೀಣ್ ಕುಮಾರ್ (ನಟುವಾಂಗ), ವಸುಧಾ ಬಾಲಕೃಷ್ಣ (ಗಾಯನ), ಜಯರಾಮ (ಕೊಳಲು) ಮತ್ತು ಬಾಲಕೃಷ್ಣ (ಮೃದಂಗ) ಅವರ ಸಮರ್ಥ ಪಕ್ಕವಾದ್ಯ ಸಹಕಾರ ಅತ್ಯಂತ ಗಂಭೀರವಾದ ವಿಷಯವಸ್ತುವನ್ನು ಅಷ್ಟೇ ಗಾಂಭೀರ್ಯ ಮತ್ತು ಘನತೆಯಿಂದ ಮಂಡಿಸಲು ನೆರವಾಯಿತು.

ಅಪೂರ್ವ ಕಥಕ್
ಪಂಡಿತ್ ದೀಪಕ್ ಮಹಾರಾಜ್ ಅವರ ಕಥಕ್ ಪ್ರದರ್ಶನ ತಮ್ಮ ತಂದೆಯ ಕೀರ್ತಿ ಹೆಚ್ಚಿಸುವಂತಿತ್ತು. ಲಯದ ಸೂಕ್ಷ್ಮಾತಿಸೂಕ್ಷ್ಮ ಪದರಗಳಲ್ಲೂ ಅವರ ಸಂಚಾರವಾಯಿತು. ಸೂಕ್ಷ್ಮ ಎಳೆಗಳನ್ನು ಹೆಣೆಯುವಾಗಲೂ ಭಾವಕ್ಕೆ ಭಂಗವುಂಟಾಗದಿದ್ದುದು ಉಲ್ಲೇಖನೀಯ. ತಮ್ಮ ಸೋದರನ ತಬಲಾ ವಾದನ ಮತ್ತು ಪಢಂತ್‌ದಿಂದ ಪ್ರೇರಿತರಾಗಿ ಮತ್ತು ಅವರೊಡನೆ ಅವರು ನಡೆಸಿದ ಲಯ ಸಂವಾದ ಸಂತಸವನ್ನುಂಟು ಮಾಡಿತು. ತೀನ್‌ತಾಳ್‌ನ ವಿಸ್ತರಣೆಯಲ್ಲಿ  ಅವರ ಉಪಜ್, ಆಮದ್, ಥಾಟ್, ಫರನ್ ಮುಂತಾದುವು ಅನನ್ಯವಾಗಿದ್ದವು. ಸುತ್ತಿ ಬಳಸಿ ಅವರು ಸಮ್‌ಗೆ ತಲುಪುತ್ತಿದ್ದ ಪರಿ ರೋಚಕವೆನಿಸಿತು. ಚಕ್ಕರ್ ಮತ್ತು ತತ್ಕಾರಗಳಂತೂ ವೈವಿಧ್ಯಮಯವೂ ವೈಶಿಷ್ಟ್ಯಪೂರ್ಣವೂ ಆಗಿದ್ದವು.

ಪ್ರಶಂಸನೀಯ ಗುರುವಂದನೆ
ನುರಿತ ಭರತನಾಟ್ಯ ಕಲಾವಿದೆ ಶ್ವೇತಾ ಲಕ್ಷ್ಮಣ್ ಅವರು ಕಳೆದ ಮಂಗಳವಾರ ತಮ್ಮ ನೂಪುರ ನಿನಾದ ಸಂಸ್ಥೆಯ ಆಶ್ರಯದಲ್ಲಿ ಗುರು ವಂದನೆಯನ್ನು ಸಲ್ಲಿ ಸಿದರು. ಪೊನ್ನಯ್ಯ ಲಲಿತಕಲಾ ಅಕಾಡೆಮಿಯ ರೂವಾರಿ ದಿವಂಗತ ಗುರು ಪದ್ಮಿನಿ ರಾವ್ ಅವರ ಶಿಷ್ಯೆಯಾಗಿರುವ ಶ್ವೇತಾ ತಮ್ಮ ಕಾರ್ಯಕ್ರಮವನ್ನು ಅದೇ ಅಕಾಡೆಮಿಯ ಪರಂಪರಧಾರಾ ಸಭಾಭವನದಲ್ಲಿ  ನಡೆಸಿದ್ದು ಸ್ವಾಗತಾರ್ಹ.

ಶ್ರೇಯಸ್ (ನಟುವಾಂಗ ಮತ್ತು ಗಾಯನ), ವೇಣುಗೋಪಾಲ್ (ಕೊಳಲು), ಡಾ.ನಟರಾಜಮೂರ್ತಿ (ಪಿಟೀಲು) ಮತ್ತು ಗಿರಿಧರ್ (ಮದಂಗ) ಅವರ ಸಮುಚಿತ ಸಹಕಾರದೊಂದಿಗೆ ಶ್ವೇತಾ ಅವರು ಪುಷ್ಪಾಂಜಲಿಯನ್ನು ಸಲ್ಲಿ ಸಿ ಸಭಾಪತಿ ಕಿ ಸಮಾನ (ಅಭೋಗಿ) ರಚನೆಯ ಮೂಲಕ ನಟರಾಜನನ್ನು ಸ್ತುತಿಸಿದರು. ಕಾಳಿ ಕೌತುವಂನ ಮೂಲಕ ಕಾಳಿಯನ್ನು ವಂದಿಸಿ ಅದರ ಶೊಲ್ಕಟ್ಟು ಮತ್ತು ಸಾಹಿತ್ಯ ಭಾಗಗಳನ್ನು ನಿರಾಯಾಸವಾಗಿ ಪ್ರತಿಪಾದಿಸಿದರು.
ತಂಜಾವೂರು ಸೋದರರ ಬೃಹದೀಶ್ವರನನ್ನು ಕುರಿತಾದ ಯದುಕುಲಕಾಂಭೋಜಿ ಸ್ವರಜತಿವರ್ಣ (ಸರೋಜಾಕ್ಷಿ)ದ ಸವಿಸ್ತಾರ ಅನಾವರಣ ಅಂದಿನ ಕಾರ್ಯಕ್ರಮದ ಮುಖ್ಯಾಂಶವಾಗಿತ್ತು. ವಿರಹೋತ್ಕಂಠಿತ ನಾಯಕಿಯು ತನ್ನ ಸಖಿಯೊಡನೆ ಬೃಹದೀಶ್ವರನ ಗುಣಗಾನವನ್ನು ಮಾಡುತ್ತಾಳೆ.

ಸಹಿಸಲು ಸಾಧ್ಯವಾಗದ ತನ್ನ ವಿರಹತಾಪದ ತೀವ್ರತೆಯನ್ನು ವರ್ಣಿಸುತ್ತಾ ತನ್ನ ನಾಯಕನಿಗಾಗಿ ಅವಳು ಹಂಬಲಿಸುತ್ತಾಳೆ. ಮೊದಲು ವಿಳಂಬ ಲಯದಲ್ಲಿ ನೃತ್ತ ಮತ್ತು ಅಭಿನಯಗಳನ್ನು ಮಾಡಿ ನಂತರ ಚುರುಕಾದ ಲಯದಲ್ಲಿ ನಿರೂಪಿಸಲಾದ ವಸ್ತುವು ಭಾವ ಸಂಪ್ರೇಷಕವಾಗಿತ್ತು. ಜಾವಳಿಯಲ್ಲಿ ಅವರ ಅಭಿನಯ ಪರಿಣತಿ ಅನುರಣಿಸಿತು. ಗುರು ಪದ್ಮಿನಿರಾವ್‌ಅವರಿಂದ ಕಲಿತ ಪುರಂದರದಾಸರ ಸೂಳಾದಿ (ನಾರಾಯಣ ಕೇಶವ)ಯನ್ನು ತ್ರಿಕಾಲ ಮತ್ತು ತ್ರಿತಾಳಗಳಲ್ಲಿ ನಿರ್ವಹಿಸಿ ಶ್ವೇತಾ ಅವರು ತಮ್ಮ ಹಿರಿಮೆಯನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.