ADVERTISEMENT

ಪ್ರಬುದ್ಧಾಲಯಕ್ಕೆ ವಾರ್ಷಿಕ ಸಂಭ್ರಮ

ಉಮಾ ಅನಂತ್
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
`ಪ್ರಭುದ್ಧಾಲಯ'ದಲ್ಲೊಂದು ವಾಚನಾಲಯ
`ಪ್ರಭುದ್ಧಾಲಯ'ದಲ್ಲೊಂದು ವಾಚನಾಲಯ   

ನಗರ ಜೀವನ ಯಾಂತ್ರಿಕವಾಗಿದೆ. ಕೂಡು ಕುಟುಂಬ ಎಂಬ ಪರಿಕಲ್ಪನೆ ಮಸುಕಾಗಿದೆ. ಆದರೆ ಇಲ್ಲೊಂದು ಅವಿಭಕ್ತ ಕುಟುಂಬವಿದೆ. ಒಂದೇ ಮನೆಯಲ್ಲಿ ಸುಮಾರು 200 ಮಂದಿಯ ವಾಸ. ಮಕ್ಕಳು, ಮೊಮ್ಮಕ್ಕಳು ಯಾರೂ ಇಲ್ಲ. ಎಲ್ಲರೂ ಸಮಾನ ಮನಸ್ಕರು, ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಇವರೆಲ್ಲ ಬಾಳ ಸಂಜೆಯ ಬಂಧುಗಳು. ಬದುಕಿನ ಕೊನೆಗಾಲದಲ್ಲಿ ಯಾವುದೋ ಕಾರಣಕ್ಕೆ ಮನೆ ತೊರೆದು ಬಂದು ಈ `ಮನೆ'ಯಲ್ಲಿ ನೆಲೆ ನಿಂತವರು.

ಜಗನ್ನಾಥರಾಯರಿಗೆ ಮೂವರು ಪುತ್ರಿಯರು. ಬದುಕಿನ ಕೊನೆಗಾಲದಲ್ಲಿ ಆಸರೆಯಾಗಲು ಒಬ್ಬ ಗಂಡು ಮಗು ಬೇಕು ಎಂದು ಹರೆಯದಲ್ಲಿ ಬಯಸಿದ್ದರೂ ಪುತ್ರ ಸಂತಾನ ಒಲಿಯಲಿಲ್ಲ. ಈ ಹೆಣ್ಣು ಮಕ್ಕಳಿಗೆ ಚೆನ್ನಾಗಿ ಓದಿಸಿ ಅದ್ದೂರಿಯಾಗಿ ಮದುವೆ ಮಾಡಿ ಮೂವರ ಜೀವನಕ್ಕೂ ಭದ್ರ ನೆಲೆ ಕಾಣಿಸಿದ ಮೇಲೆ ಇವರನ್ನು ಕಾಡಲಾರಂಭಿಸಿದ್ದು ಒಂಟಿತನ. ಗುಣಪಡಿಸಲಾಗದ ಕಾಯಿಲೆಗೆ ತುತ್ತಾದ ಪತ್ನಿ ಕೂಡ ಅಗಲಿದ ಮೇಲೆ ಈ ಅಜ್ಜ ಅಕ್ಷರಶಃ ಒಬ್ಬಂಟಿ. ಬಾಳಿನ ಇಳಿವಯಸ್ಸಿನಲ್ಲಿ ಒಬ್ಬರೇ ಇರುವುದು ಹೇಗೆ? ಇವರ ಆತಂಕಕ್ಕೆ ಸ್ಪಂದಿಸಿ ಆಶ್ರಯ ನೀಡಿದ್ದು `ಪ್ರಬುದ್ಧಾಲಯ' ಎಂಬ ಹಿರಿಯ ನಾಗರಿಕರ ತಾಣ.

ನಾಗವೇಣಮ್ಮ ಅವರದ್ದು ವಿಭಿನ್ನ ಕಥೆ. ಇವರಿಗೆ ಒಬ್ಬನೇ ಮಗ. ಚೆನ್ನಾಗಿ ಓದಿ ಎಂಜಿನಿಯರಿಂಗ್ ವೃತ್ತಿ ಆಯ್ದುಕೊಂಡ ಮಗನಿಗೆ ಬಿಡುವಿಲ್ಲದಷ್ಟು ಕೆಲಸ. ತನ್ನ ಕ್ಷೇತ್ರದಲ್ಲೇ ಕೆಲಸ ಮಾಡುವ ಹುಡುಗಿಯನ್ನು ಬಯಸಿ, ಆಕೆಯ ಕೈಹಿಡಿದದ್ದೂ ಆಯಿತು. ಮದುವೆ ಆದಮೇಲೆ ಗಂಡ ಹೆಂಡತಿ ಇಬ್ಬರೂ ಬೆಳಿಗ್ಗೆ ಮನೆ ಬಿಟ್ಟರೆ ಮತ್ತೆ ಮನೆ ಸೇರುತ್ತಿದ್ದದ್ದು ರಾತ್ರಿಯೇ. ಅತ್ತೆಗೆ ಹೊತ್ತು ಹೊತ್ತಿಗೆ ತಿನ್ನಲು ಅಡುಗೆ ಮಾಡಿಟ್ಟು ಮುಂಬಾಗಿಲಿಗೆ ಬೀಗ ಹಾಕಿ ಸೊಸೆ ಗಂಡನ ಜತೆಗೆ ಕಾರು ಹತ್ತಿದರೆ ನಾಗವೇಣಮ್ಮ ಮನೆಯಲ್ಲಿ ಇಡೀ ದಿನ ಒಬ್ಬರೇ.  ಬದುಕೇ ಬೇಸರ ಎನಿಸಿದವರಿಗೆ ಎಲ್ಲಾದರೂ ಓಡಿಬಿಡಬೇಕು ಎನಿಸಿತ್ತು. ಈ ಇಳಿಹೊತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಆಸರೆ ನೀಡಿದ್ದು ಪ್ರಬುದ್ಧಾಲಯ.

ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ `ವೀಯೆಲ್ಲೆನ್ ಪ್ರಬುದ್ಧಾಲಯ' ಬಾಳ ಸಂಜೆಯಲ್ಲಿ ಒಂಟಿಯಾಗಿದ್ದ ಸುಮಾರು 200 ಮಂದಿಗೆ ಆಶ್ರಯ ನೀಡಿದೆ. ವಿವಿಧ ಕಾರಣಗಳಿಂದ ಅನಿವಾರ್ಯವಾಗಿ ಮಕ್ಕಳು ಮೊಮ್ಮಕ್ಕಳಿಂದ ದೂರವಾಗಿರುವ ಈ ಹಿರಿಯ ಜೀವ ಇಲ್ಲಿ ಸ್ವತಂತ್ರವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ವೃತ್ತಿನಿಮಿತ್ತ ದೂರದೂರುಗಳಲ್ಲಿ ನೆಲೆಸಿ ಹೆತ್ತವರನ್ನು ಅಲ್ಲಿಗೆ ಕರೆದೊಯ್ಯಲು ಸಾಧ್ಯವಾಗದೇ ಇದ್ದಾಗ ಒಂಟಿಯಾಗಿ ಇರುವ ಬದಲು ಇಲ್ಲಿ ಬಾಳಬಹುದು. ಬದುಕಿನ ಸಂಧ್ಯಾಕಾಲದಲ್ಲಿ ನೆಮ್ಮದಿಯ ಜೀವನ ಬಯಸುವವರಿಗೆ ಈ ಪ್ರಬುದ್ಧಾಲಯವೇ ಸೂಕ್ತ ಆಸರೆ.

`ಪ್ರಬುದ್ಧಾಲಯದಲ್ಲಿ ಉತ್ತಮ ಕೌಟುಂಬಿಕ ವಾತಾವರಣ ಇರುವಂತೆ ನೋಡಿಕೊಂಡಿದ್ದೀವಿ. ಹಿರಿಯ ಜೀವಗಳು ಹಳೆಯ ನೋವು ಮರೆತು ಮುಂದಿನ ಜೀವನ ಲವಲವಿಕೆಯಿಂದ ಸಾಗಿಸಬೇಕು ಎಂಬ ಮಹತ್ತರ ಉದ್ದೇಶ ಪ್ರಬುದ್ಧಾಲಯದ್ದು' ಎಂದು ವಿವರಿಸುತ್ತಾರೆ ಪ್ರಬುದ್ಧಾಲಯದ ರೂವಾರಿ ವಿ. ಲಕ್ಷ್ಮೀನಾರಾಯಣ.

`ಇಲ್ಲಿ ಬೆಂಗಳೂರು, ಮುಂಬಯಿ, ತಮಿಳುನಾಡು, ಕೊಯಮತ್ತೂರು ಮುಂತಾದ ಕಡೆಗಳಿಂದ ಬಂದ ವೃದ್ಧರಿದ್ದಾರೆ. ಮಹಿಳೆಯರೂ ಆಶ್ರಯ ಪಡೆದಿದ್ದಾರೆ. ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಪ್ರತಿ ತಿಂಗಳು ಎರಡು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತೇವೆ. ಆಧ್ಯಾತ್ಮಿಕ ಚಿಂತನೆ, ಚರ್ಚೆ, ಕ್ರೀಡೆ ಎಲ್ಲದಕ್ಕೂ ಅವಕಾಶ ಕಲ್ಪಿಸಲಾಗಿದೆ' ಎಂದು ಹೇಳುತ್ತಾರೆ ಸಮಾಜ ಸೇವಕರೂ ಆಗಿರುವ ನಿರ್ಮಾಣ್ ಶೆಲ್ಟರ್ಸ್‌ನ ವ್ಯವಸ್ಥಾಪಕರಾದ ಲಕ್ಷ್ಮೀನಾರಾಯಣ.

ಸಂಭ್ರಮದ ವಾರ್ಷಿಕೋತ್ಸವ
ಕಳೆದ ಐದು ವರ್ಷಗಳ ಹಿಂದೆ ಆರಂಭವಾದ ಪ್ರಬುದ್ಧಾಲಯ ಇದೀಗ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಇದೇ ಬುಧವಾರ (ಏ.10) ಇಲ್ಲಿ ಸಂಭ್ರಮದ ಹಬ್ಬ. ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಹಿರಿಯರನ್ನು ಗೌರವಿಸುವ ಉದ್ದೇಶದಿಂದ `ವಿ.ಎಲ್.ಎನ್ ನಿರ್ಮಾಣ್ ಹಿರಿಯ ನಾಗರಿಕರ ಆಜೀವ ಸಾಧನಾ ಪ್ರಶಸ್ತಿ'ಯನ್ನು ಈ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

ಈ ಬಾರಿ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಪ್ರೊ. ಎಂ.ಆರ್. ಗಜೇಂದ್ರಗಡ್ (82 ವರ್ಷ), ಹಿರಿಯ ಸಮಾಜ ಸೇವಕರಾದ ಎ.ಕೆ.ಕೇಶವಾಚಾರ್ (95 ವರ್ಷ), ಖ್ಯಾತ ವಿಜ್ಞಾನಿ ಬಿ. ಆರ್. ಸಂಪತಕುಮಾರ್ (92 ವರ್ಷ) ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಮಲಮ್ಮ (89 ವರ್ಷ) ಮೈಸೂರು ಮಹಾಜನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಮಾದಾಪುರ (88 ವರ್ಷ) ಕೃಷಿ ವಿವಿಯ ನಿವೃತ್ತ ಪ್ರಾಧ್ಯಾಪಕ ಜಡೆ ಶ್ರಿನಿವಾಸ ಮೂರ್ತಿ (87 ವರ್ಷ) ಇವರಿಗೆ ಸನ್ಮಾನ ಇದೆ. ಗಾಯಕಿ ಸ್ಮಿತಾ ಬೆಳ್ಳೂರು ಗಾಯನವಿದೆ.
ಪ್ರಬುದ್ಧಾಲಯ ಬಗ್ಗೆ ಹೆಚ್ಚಿನ ಮಾಹಿತಿಗೆ: 080-27824314 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT