ADVERTISEMENT

ಬರೆಯುವವರ ನಡಿಗೆಯು...

ಸವಿತಾ ಎಸ್.
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಅಲ್ಲಿ ಸಂಗೀತದ ಅಬ್ಬರವಿರಲಿಲ್ಲ, ತುಂಡುಡುಗೆಯ ನಡಿಗೆ ಇರಲಿಲ್ಲ, ಕೇವಲ ಕ್ಯಾಮೆರಾದ ಕ್ಲಿಕ್‌ಗಾಗಿ ಮೊಗವರಳಿಸುವ ನಿರ್ಭಾವುಕತೆ ಇರಲಿಲ್ಲ. ಹಾಸಿದ್ದ ಬಿಳಿ ಕಾರ್ಪೆಟ್ ಮೇಲೆ ಹೆಜ್ಜೆಗುರುತು ಮೂಡಿಸುವ ಹಠವೂ ಇರಲಿಲ್ಲ.

ಹಾಗೆಂದ ಮಾತ್ರಕ್ಕೆ ಅದು ನಿರ್ಜೀವ ರ‌್ಯಾಂಪ್ ಆಗಿರಲಿಲ್ಲ. ಮೆಲುದನಿಯ ಲಯಬದ್ಧ ಸಂಗೀತಕ್ಕೆ ಪ್ರೇಕ್ಷಕರ ತಲೆಯೂ ಬಾಗುತ್ತಿತ್ತು. ಅಂದಕ್ಕೆ ತಕ್ಕಷ್ಟು ಬಟ್ಟೆ ತೊಟ್ಟಿದ್ದ ಬೆಡಗಿಯರು ರ‌್ಯಾಂಪ್ ಮೇಲೆ ಕಳ್ಳಬೆಕ್ಕಿನ ಹೆಜ್ಜೆಯಿಡುತ್ತಿದ್ದರೆ ಕೆಳಗೆ ಕುಳಿತಿದ್ದವರ ಮೈಯಲೆಲ್ಲಾ ಕಚಗುಳಿ.

ಮೊದಲ ಬಾರಿಗೇನೋ ಎಂಬಂತೆ ಧರಿಸಿದ್ದ ನಾಲ್ಕಿಂಚು ಎತ್ತರದ ಚಪ್ಪಲಿ ಅವರ ಈ ಕಳ್ಳನಡಿಗೆ ಮೇಲೆ ಪರಿಣಾಮ ಬೀರಿದಂತಿರಲಿಲ್ಲ. ಅಲ್ಲಿ ಕೃತಕ ನಗುವೂ ಇರಲಿಲ್ಲ. ಆ ಸ್ನಿಗ್ಧ ಸೌಂದರ್ಯಕ್ಕೆ ನೆರೆದಿದ್ದವರ ಮನಸೂರೆಗೊಳ್ಳಲು ಹೆಚ್ಚು ಸಮಯವೂ ಬೇಕಾಗಲಿಲ್ಲ.

ಇದೇನು ಎಂಬ ನಿಮ್ಮ ಹತ್ತಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಈ ಫ್ಯಾಶನ್ ಶೋನಲ್ಲಿ ಹೆಜ್ಜೆ ಹಾಕಿದ್ದು ವೃತ್ತಿಪರ ಮಾಡೆಲ್‌ಗಳಲ್ಲ. ಸದಾ ಕಂಪ್ಯೂಟರ್ ಕೀಲಿಮಣೆಯಲ್ಲಿ ಕೈಯಾಡಿಸುತ್ತಿದ್ದ ಸಾಫ್ಟ್‌ವೇರ್ ಸಂಸ್ಥೆಗಳ ತಾಂತ್ರಿಕ ಬರಹಗಾರರು (ಕಂಟೆಂಟ್ ರೈಟರ್ಸ್‌) ಹಾಗೂ ಟೆಕ್ಕಿಗಳು!

ಇದು ನಡೆದಿದ್ದು ಹೋಟೆಲ್ ತಾಜ್ ವಿವಂತಾದಲ್ಲಿ. ಟಿ.ಸಿ.ವರ್ಲ್ಡ್ ಸಂಸ್ಥೆ ಟೆಕ್ನಿಕಲ್ ಕಮ್ಯುನಿಕೇಶನ್ ಬಗ್ಗೆ ನಡೆಸಿದ ಎರಡು ದಿನಗಳ ಅಂತರರಾಷ್ಟ್ರೀಯ ಸಮಾವೇಶದಲ್ಲಿ. ದೀರ್ಘ ಗೋಷ್ಠಿಗಳನ್ನು ಕೇಳಿ ಬೇಸತ್ತ ಮಂದಿಗೆ ಮನರಂಜನೆ ನೀಡಬೇಕೆಂಬ ಉದ್ದೇಶದಿಂದ ಟಿ.ಸಿ.ವರ್ಲ್ಡ್ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಈ ವಿಶಿಷ್ಟ ಐಟಿ ತಜ್ಞ ಲೇಖಕರ ಟೆಕ್ನೊ ಫ್ಯಾಶನ್ ಶೋನ ಹೆಸರು `ಬ್ಯೂಟಿ ವಿದ್ ಬ್ರೇನ್~.

ಹೊರಗೆ ಕಾಣುವ ಅಂದವನ್ನಷ್ಟೇ ಕಂಡು ಮನಸ್ಸು ತುಂಬಿಕೊಳ್ಳುವುದು ಕ್ಷಣಿಕ ಸುಖ. ಸಹಜವಾದ ಸೌಂದರ್ಯ ಅಡಗಿರುವುದು ಬುದ್ಧಿಯಲ್ಲಿ. ಅದೇ ಕಾರಣಕ್ಕೆ ಈ ರ‌್ಯಾಂಪ್‌ಶೋಗೆ `ಬ್ಯೂಟಿ ವಿದ್ ಬ್ರೇನ್~ ಎಂದು ಹೆಸರಿಡಲಾಗಿದೆ ಎಂಬುದು ಆಯೋಜಕರ ಸ್ಪಷ್ಟನೆ.

ಚೋಲಿ ಸೀರೆ ಧರಿಸಿದ್ದ ಲಲನೆಯರು ರ‌್ಯಾಂಪ್‌ನಿಂದ ಕೆಳಕ್ಕಿಳಿದು ಕುಳಿತವರ ಮಧ್ಯೆ ಬಂದು ಪೋಸ್ ಕೊಟ್ಟರು. ಮೊದಲು ಸಾಂಪ್ರದಾಯಿಕ ವಸ್ತ್ರಗಳಲ್ಲಿ ನಗು ಚೆಲ್ಲಿದ ಇವರು ಬಳಿಕ ಸರಳವಾದ ಆಫೀಸ್‌ವೇರ್ ಹಾಕಿ ವಾಕ್ ಮಾಡಿದರು. ಸಾಧಾರಣ ಉಡುಪುಗಳಲ್ಲೂ ಸೌಂದರ್ಯ ಕಾಣಲು ಸಾಧ್ಯ ಎಂದು ಇವರು ಬಳಸಿದ ಉಡುಪುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಐಟಿ ನಗರ ಎಂದೇ ಕರೆಯಿಸಿಕೊಳ್ಳುವ ಉದ್ಯಾನನಗರಿ ಸಾಫ್ಟ್‌ವೇರಿಗರ ನೆಚ್ಚಿನ ತಾಣವಾಗುತ್ತಿದೆ. ಆದರೆ ಪ್ರತಿ ಸಾಫ್ಟ್‌ವೇರ್ ಪ್ರಯತ್ನದ ಹಿಂದೆಯೂ ತಾಂತ್ರಿಕ ಬರಹಗಾರರ ಶ್ರಮವೂ ಇರುತ್ತದೆ.

ಅವರ ಎಲ್ಲಾ ಪ್ರೋಗ್ರಾಂಗಳನ್ನು ಅಕ್ಷರ ರೂಪಕ್ಕಿಳಿಸುವವರು ಬರಹಗಾರರೇ. ಒಂದು ಮೊಬೈಲ್ ಮಾರುಕಟ್ಟೆಗೆ ಬಂದಾಗ ಅದರ ಹಿಂದಿರುವ ಮಾಹಿತಿ ಪುಸ್ತಕವೂ (ಯೂಸರ್ ಮ್ಯಾನ್ಯುವಲ್) ತಾಂತ್ರಿಕ ಬರಹಗಾರರಿಂದಲೇ ರಚಿತಗೊಂಡಿರುತ್ತದೆ.

ಸಾಫ್ಟ್‌ವೇರ್ ಮಂದಿಯಷ್ಟೇ ಸಂಬಳ ಪಡೆಯುವ ಇವರು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಕಡಿಮೆ. ಇಂತಹವರನ್ನು ಒಂದೆಡೆ ಸೇರಿಸಿ ಸಮಸ್ಯೆ ಸಾಧ್ಯತೆಗಳ ಬಗ್ಗೆ ಚರ್ಚಿಸುವ ಪ್ರಯತ್ನ ಇಲ್ಲಿ ನಡೆಸುವ ಉದ್ದೇಶ ನಮ್ಮದು ಎನ್ನುತ್ತಾರೆ ಸಮಾವೇಶದ ಜವಾಬ್ದಾರಿ ಹೊತ್ತ ಗುರುರಾಜ್.

ಎರಡು ದಿನದ ವಿಚಾರ ಸಂಕಿರಣದಲ್ಲಿ 34 ಗೋಷ್ಠಿಗಳು ನಡೆದಿವೆ. ವಿದೇಶಿ ಸಂಸ್ಥೆಗಳ 24ಕ್ಕೂ ಅಧಿಕ ಮಂದಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತುಕತೆ ನಡೆಸಿದ್ದಾರೆ.

ಹೊರಗುತ್ತಿಗೆ ನೀಡುವ ಸಂದರ್ಭ ಭಾರತವನ್ನೇ ಏಕೆ ಆಯ್ದುಕೊಳ್ಳುತ್ತಾರೆ, ಅವರು ಇಲ್ಲಿಂದ ಏನನ್ನು ಬಯಸುತ್ತಾರೆ ಇವೇ ಮೊದಲಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಇದರಿಂದ ಬೇರೆ ಸಂಸ್ಥೆಗಳ ಉದ್ಯೋಗಿಗಳು ಪರಿಚಯವಾಗುತ್ತಾರೆ ಹಾಗೂ ಹೊಸ ಸಾಧ್ಯತೆಗಳ ಕದ ತೆಗೆದುಕೊಳ್ಳುತ್ತದೆ ಎನ್ನುತ್ತಾರವರು.

ಪ್ರತಿನಿತ್ಯ ನೂರಾರು ಫ್ಯಾಶನ್‌ಶೋಗಳು ನಡೆಯುತ್ತಿರುತ್ತವೆ. ಅಲ್ಲೆಲ್ಲಾ ವೃತ್ತಿಪರರು ಹೆಜ್ಜೆ ಹಾಕುತ್ತಾರೆ. ನಮ್ಮಲ್ಲೇ ಇರುವ ಹಲವಾರು ಪ್ರತಿಭೆಗಳನ್ನು ಹುಡುಕಿ ಅನೌಪಚಾರಿಕ ವೇದಿಕೆ ಮೂಲಕ ಗುರುತಿಸುವ ಪ್ರಯತ್ನ ಮಾಡಿದ್ದೇವಷ್ಟೇ. ನಮ್ಮ ಮಧ್ಯೆಯೇ ಕೆಲಸ ಮಾಡುತ್ತಿರುವ ಐಟಿ ಕ್ಷೇತ್ರದ ಪ್ರತಿಭೆಗಳನ್ನು ಹುಡುಕಿ 12 ಮಂದಿ ಮಾಡೆಲ್‌ಗಳನ್ನು ತಯಾರಿಸಿದ್ದೇನಷ್ಟೇ ಎಂದಾಗ ಕೊರಿಯಾಗ್ರಫರ್ ದೀಪಾ ಶೆಟ್ಟಿ ಅವರ ಮೊಗದಲ್ಲಿ ಸಂತೃಪ್ತಿಯ ನಗು.

ಇದೇ ಸಂದರ್ಭದಲ್ಲಿ ತಾಂತ್ರಿಕ ಬರವಣಿಗೆ ಬಗ್ಗೆ ಬರೆದ ಪುಸ್ತಕ `ಎ ಬುಕ್ ಆನ್ ಟೆಕ್ನಿಕಲ್ ಕಮ್ಯುನಿಕೇಶನ್~ ಬಿಡುಗಡೆಗೊಂಡಿತು. ಎಲ್ಲರಿಗೂ ಹೊಂದಿಕೆಯಾಗುವ, ಈ ರಂಗಕ್ಕೆ ಬರುವ ಹೊಸಬರಿಗೆ ಮಾದರಿಯಾಗುವ ಪುಸ್ತಕ ಹೊರತರುವುದು ಸವಾಲಾಗಿತ್ತು. ಎಲ್ಲಾ ಸಂಸ್ಥೆಗಳ ತಾಂತ್ರಿಕ ಬರಹಗಾರರ ಬರವಣಿಗೆ ಒಂದೇ ತರಹ ಇರುವುದಿಲ್ಲ. ಅವನ್ನೆಲ್ಲಾ ಅಭ್ಯಸಿಸಿ ಸುಲಭ ಓದಿಗೆ ಅರ್ಥವಾಗುವಂತೆ ಈ ಪುಸ್ತಕ ರೂಪಿಸಲಾಗಿದೆ ಎಂಬುದು ಲೇಖಕಿಯೊಬ್ಬರ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.