ADVERTISEMENT

ಭವ್ಯ ಇತಿಹಾಸದ ಮಲ್ಲೇಶ್ವರಂ ರಾಮಮಂದಿರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಬೆಂಗಳೂರಿನ ಹಳೆಯ ರಾಮಮಂದಿರಗಳಲ್ಲಿ ಮಲ್ಲೇಶ್ವರದ ಶ್ರೀರಾಮಮಂದಿರವು ಮುಖ್ಯವಾದುದು.

1922ರಲ್ಲಿ ಸ್ಥಾಪನೆಯಾದ ಮಲ್ಲೇಶ್ವರಂ ರಾಮಮಂದಿರ, ಪ್ರಾರಂಭದ ದಿನಗಳಲ್ಲಿ ಪ್ರತಿ ಶನಿವಾರ ಭಜನೆ, ಮಹಾ ಶಿವರಾತ್ರಿ, ಕೃಷ್ಣ ಜಯಂತಿ ಮುಂತಾದವುಗಳನ್ನು ಸಂಗೀತ, ಹರಿಕಥೆ, ಪ್ರವಚನಗಳ ಮೂಲಕ ನಡೆಸುವ ಗುರಿ ಹೊಂದಿತ್ತು.

ಮಂದಿರದ ಮೊದಮೊದಲಲ್ಲಿ ಕಾಂಪೌಂಡರ್ ಸುಬ್ಬರಾವ್, ಚ. ವಾಸುದೇವಯ್ಯ, ಬಿ. ನಾರಾಯಣ ಅಯ್ಯಂಗಾರ್ ಮತ್ತು ಟಿ.ಎಸ್. ರಾಘವಾಚಾರ್ ಸಲ್ಲಿಸಿದ ಸೇವೆ ಸ್ಮರಣಾರ್ಹ. ಬಹಳ ವರ್ಷಗಳು ಗರ್ಭಗುಡಿಯಲ್ಲಿ ಸೀತಾರಾಮರ ಪಟವಿದ್ದ ಸ್ಥಳದಲ್ಲಿ ಕೆಲ ವರ್ಷಗಳ ಹಿಂದೆ ಸುಂದರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಎತ್ತರದ ಗರುಡಗಂಭವೂ ತಲೆ ಎತ್ತಿದೆ.

ಐತಿಹಾಸಿಕ ಸಭಾಂಗಣ
ರಾಮಮಂದಿರದ ವಿಶಾಲವಾದ ಸಭಾಂಗಣದಲ್ಲಿ ಮೂರು ತಲೆಮಾರಿನ ಕಲಾವಿದರುಗಳು ಕಛೇರಿ ಮಾಡಿದ್ದಾರೆ. ಎಂ.ಎಸ್. ಸುಬ್ಬಲಕ್ಷ್ಮಿ, ಚೌಡಯ್ಯ, ಚೆಂಬೈ, ದೊರೆಸ್ವಾಮಿ ಅಯ್ಯಂಗಾರ್, ಕುಮಾರ್ ಗಂಧರ್ವ, ಮಾಲಿ, ಬಾಲಮುರಳೀಕೃಷ್ಣ, ಆರ್.ಕೆ. ಶ್ರೀಕಂಠನ್ ಮುಂತಾದವರ ಸಂಗೀತ ಕಾರ್ಯಕ್ರಮಗಳು ಈ ಮಂದಿರದಲ್ಲಿ ನಡೆದಿದೆ.

ಕಲಾವಿದರು, ಕೇಳುಗರು ಇಬ್ಬರಿಗೂ ಈ ಸಭಾಂಗಣ ಪ್ರಿಯವಾಗಿತ್ತು. ಮಲ್ಲೆೀಶ್ವರಂ ಸಂಗೀತ ಸಭೆಯ ಕಚೇರಿಯೂ ಇದೇ ಕಟ್ಟಡದಲ್ಲಿದೆ. ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರು, ದಿವಾನ್ ಮಿರ್ಜಾ ಇಸ್ಮಾಯಿಲ್, ಮಂತ್ರಿಗಳು, ರಾಜ ಪ್ರಮುಖರು, ವಿವಿಧ ಮಠಾಧೀಶರುಗಳು ರಾಮಮಂದಿರಕ್ಕೆ ಭೇಟಿ ಕೊಟ್ಟಿದ್ದಾರೆ.

ಸಹಜವಾಗಿಯೇ ವರ್ಷದಲ್ಲಿ ರಾಮೋತ್ಸವವೇ ಪ್ರಧಾನ ಕಾರ್ಯಕ್ರಮ. ಉಗಾದಿಯಿಂದ ರಾಮನವಮಿಯವರೆಗೆ ನಡೆಸುವ ಗರ್ಭನವಮಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ, ಶ್ರದ್ಧೆಯಿಂದ ನಡೆಯುವುದು.
 
ಈ ವರ್ಷದ ರಾಮೋತ್ಸವದಲ್ಲಿ ಗಮಕ ರೂಪಕ, ಕೊಳಲು, ಭಕ್ತಿಗೀತೆ, ಭರತನಾಟ್ಯ, ಯಕ್ಷಗಾನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವಲ್ಲದೆ ಬೆಳಗಿನ ವೇಳೆ ಸೂರ್ಯ ನಮಸ್ಕಾರ, ರಾಮಾಯಣ ಪಾರಾಯಣ, ನವಗ್ರಹ ಜಪ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಪುಷ್ಪಾಲಂಕೃತ ರಥೋತ್ಸವವೂ ನಡೆಯಿತು. ಈಗ ಎನ್. ದಕ್ಷಣಾಮೂರ್ತಿ ಅಧ್ಯಕ್ಷರು. ಬಿ.ಎನ್. ಸತ್ಯನಾರಾಯಣ ಮತ್ತು ಕೆ.ಆರ್. ಶ್ರೀಧರಮೂರ್ತಿ ಕಾರ್ಯದರ್ಶಿಗಳು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.