ADVERTISEMENT

ಭಾಷೆಯ ಹಂಗೆನಗಿಲ್ಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

`ಕನ್ನಡ ಭಾರತದ ಪುರಾತನ ಭಾಷೆಗಳಲ್ಲೊಂದು. ಅಲ್ಲದೆ ಅದು ನನ್ನ ಭಾಷೆಗೆ ತೀರಾ ಹತ್ತಿರವಾದದ್ದು. ಮಿಗಿಲಾಗಿ ಈ ಭಾಷೆಯನ್ನು ನಾನು ಪ್ರೀತಿಸುತ್ತೇನೆ. ಹೀಗಾಗಿ ಕನ್ನಡದಲ್ಲಿ ಮಾತನಾಡುವುದು ಕಷ್ಟವಾಗಲಿಲ್ಲ...~

`ಶಿಕಾರಿ~ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಮಲಯಾಳಂನ ಖ್ಯಾತ ನಟ ಮಮ್ಮುಟಿ ಮಾತಿನ ಲಹರಿಯಲ್ಲಿ ಹೊರಬಂದ ಮೊದಲ ನುಡಿಗಳಿವು. ಅಭಯಸಿಂಹ ನಿರ್ದೇಶನದ `ಶಿಕಾರಿ~ ಚಿತ್ರದ ಮೂಲಕ ಮಮ್ಮುಟಿ ಕನ್ನಡ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ.

ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ತಯಾರಾದ ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಸ್ವತಃ ಮಮ್ಮುಟಿ ಅವರೇ ಕನ್ನಡದಲ್ಲಿ ಧ್ವನಿ ನೀಡಿರುವುದು ವಿಶೇಷ. ಕನ್ನಡದ ಸಂಭಾಷಣೆಯನ್ನು ಮಲಯಾಳಂನಲ್ಲಿ ತಮ್ಮ ಕೈಬರಹದಲ್ಲಿ ಬರೆದುಕೊಂಡು ಡಬ್ಬಿಂಗ್ ನಡೆಸಿರುವುದನ್ನು ಮಮ್ಮುಟಿ ಹೆಮ್ಮೆಯಿಂದಲೇ ಹೇಳಿಕೊಂಡರು. ಕನ್ನಡ ಬರುವುದಿಲ್ಲ.

ಆದರೆ ಕನ್ನಡ ಭಾಷೆಯ ಆಂತರ್ಯ, ಅದರ ಸೊಗಡು ನನಗೆ ಅರ್ಥವಾಗುತ್ತದೆ. ಹೀಗಾಗಿ ಇಲ್ಲಿನ  ನಟರೊಂದಿಗೆ ನಟಿಸುವುದು ನನಗೆ ಕಷ್ಟವಾಗಲಿಲ್ಲ. ಇಲ್ಲಿನ ಜನ, ಊರು, ಭಾಷೆ ಯಾವುದೂ ಅಪರಿಚಿತ ಎಂದು ಅನಿಸಲೇ ಇಲ್ಲ ಎನ್ನುವುದು ಅವರ ಮನದಾಳದ ಮಾತು. ಶೇಕಡಾ 90ರಷ್ಟು ಚೆನ್ನಾಗಿ ಧ್ವನಿ ನೀಡಿದ್ದೇನೆ ಎಂಬ ಭಾವನೆ ಇದೆ. ತಪ್ಪುಗಳಿದ್ದರೆ ಮನ್ನಿಸಿ ಎನ್ನುವುದು ಅವರ ಕೋರಿಕೆ.

ಚಿತ್ರದಲ್ಲಿ ಮಮ್ಮುಟಿ ಎರಡು ಕಾಲಘಟ್ಟದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾಣಿಸಿಕೊಳ್ಳುವ ಮಮ್ಮುಟಿ, ಸ್ವಾತಂತ್ರ್ಯಪೂರ್ವದ ಕಾದಂಬರಿಯೊಂದನ್ನು ಓದುತ್ತಾ ಅದರ ಕಥಾ ನಾಯಕ ತಾನೇ ಎಂದು ಭಾವಿಸಿಕೊಳ್ಳುತ್ತಾರೆ. ಹೀಗೆ ಆಧುನಿಕ ಯುಗದ ಕಥೆಯೊಂದಿಗೆ ಸ್ವಾತಂತ್ರ್ಯಯುಗದ ಕಥೆಯೂ ಚಿತ್ರದಲ್ಲಿ ಬೆರೆತಿದೆ. ಕರ್ನಾಟಿಕ್ ಸಂಗೀತವನ್ನು ಬಹುವಾಗಿ ಮೆಚ್ಚುವ ಅವರಿಗೆ ಕನ್ನಡ ಚಿತ್ರಗಳಲ್ಲಿ ಆ ಸಂಗೀತದ ಬಳಕೆ ಹೆಚ್ಚು ಎಂಬ ಕಾರಣಕ್ಕೆ ಕನ್ನಡ ಚಿತ್ರಗೀತೆಗಳು ಅಚ್ಚುಮೆಚ್ಚಂತೆ.

ವೃತ್ತಿಜೀವನಕ್ಕೆ ಬಂದು 30 ವರ್ಷವಾಯಿತು. ಇಷ್ಟು ತಡವಾಗಿ ಕನ್ನಡಕ್ಕೆ ಬಂದಿದ್ದೀರಲ್ಲಾ? ಎಂಬ ಪ್ರಶ್ನೆ ಮುಂದಿಟ್ಟರೆ `ಇದುವರೆಗೂ ಯಾರೂ ಕನ್ನಡದಲ್ಲಿ ನಟಿಸುವಂತೆ ಕರೆದಿರಲಿಲ್ಲ. `ಶಿಕಾರಿ~ ತಂಡವೇ ಮೊದಲನೆಯದು. ಚಿತ್ರದ ವಿಷಯ ವಸ್ತು ತುಂಬಾ ಇಷ್ಟವಾಯಿತು. ತಕ್ಷಣ ಒಪ್ಪಿಕೊಂಡೆ~ ಎಂಬ ನೇರ ಉತ್ತರ ಅವರದು.

`ನಾನು ಇಂತಹದೇ ಪಾತ್ರಗಳನ್ನು ಮಾಡಬೇಕು ಎಂದು ಪಾತ್ರದ ಬೆನ್ನತ್ತುವವನಲ್ಲ. ಮುಖ್ಯವಾಗಿ ಚಿತ್ರಕಥೆ ಚೆನ್ನಾಗಿರಬೇಕು. ನನ್ನ ಮನಕ್ಕೆ ಒಪ್ಪಿಗೆಯಾಗಬೇಕು. ಅಂತಹ ಪಾತ್ರಗಳನ್ನಷ್ಟೇ ಮಾಡುತ್ತೇನೆ~ ಎನ್ನುವ ಮಮ್ಮುಟಿ, ನಾನು ನಟ ಮಾತ್ರ.

ಮಲಯಾಳಂನಂತೆ ಇಲ್ಲಿಯೂ ಅದೇ ಕ್ಯಾಮರಾ, ಅದೇ ಬೆಳಕು, ಅದೇ ಸ್ಕ್ರಿಪ್ಟ್. ಭಾಷೆ ಮಾತ್ರ ಬೇರೆ. ಕಲಾವಿದನಿಗೆ ಭಾಷೆಯ ಹಂಗ್ಯಾಕೆ ಎಂದು ನಗೆ ಬೀರಿದರು. ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸುವಿರಾ ಎಂದು ಕೇಳಿದಾಗ, `ಈ ಚಿತ್ರದಲ್ಲಿ ನಾನು ಕ್ಲಿಕ್ ಆಗದಿದ್ದರೆ ಯಾರೂ ಮತ್ತೆ ನನ್ನ ಬಳಿ ಬರುವುದಿಲ್ಲ ಎಂಬುದು ನನ್ನ ಭಾವನೆ. ಚಿತ್ರ ಗೆಲ್ಲಲಿ ನೋಡೋಣ~ ಎಂಬ ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.