ADVERTISEMENT

ಮತ್ತೆ ವಾಲಿ–ಸುಗ್ರೀವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ವಾಲಿಯ ಸತಿ ತಾರೆಯ ಹುಟ್ಟು ಸಮುದ್ರಮಥನದಲ್ಲಾದುದು. ಸೂರ್ಯನ ಮಗ ಸುಗ್ರೀವ ಹಾಗೂ ಇಂದ್ರಜಾತ ವಾಲಿಯ ನಡುವಿನ ಒಂದು ಸಣ್ಣ, ಪರಸ್ಪರ ತಪ್ಪು ಕಲ್ಪನೆಯಲ್ಲಿ ಆರಂಭಗೊಂಡ ಜಗಳ ಅದು. ಇಂದಿಗೂ ಅಣ್ಣ– ತಮ್ಮನ ಜಗಳವನ್ನು ವಾಲಿ–ಸುಗ್ರೀವರ ಕಾದಾಟಕ್ಕೆ ಹೋಲಿಸಿ ಹೇಳುವ, ಅಣಕ ಆಡುವ ಪರಿಪಾಠವಿದೆ.
ರಾಮಾಯಣದ ಈ ಪ್ರಸಂಗ ಯಕ್ಷಗಾನ ತಾಳಮದ್ದಳೆಯಲ್ಲಿ ನುರಿತ ಕಲಾವಿದರ ಉಪಸ್ಥಿತಿಯಲ್ಲಿ ಕಾಡುವಂತೆ ಮೂಡಿಬರುತ್ತದೆ. ನಗರದ ಜನರಿಗೆ ಆ ಪ್ರಸಂಗದ ರುಚಿಯನ್ನು ಉಣಬಡಿಸಿದ್ದು ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆ.

ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯು ರಾಧಾಕೃಷ್ಣ ಉರಾಳರ ಪರಿಕಲ್ಪನೆ-, ನಿರ್ದೇಶನದಲ್ಲಿ ಪ್ರತಿ ತಿಂಗಳೂ ನೀಡುತ್ತಿರುವ ‘ಮಾಸದ ಮೆಲುಕು‘ ಸರಣಿಯ ೩೫ನೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಬರೀಷ್ ಭಟ್ ಅವರ ಪ್ರಸಂಗ ಸಂಯೋಜನೆಯಲ್ಲಿ ಪಾರ್ತಿಸುಬ್ಬ ಕವಿಯ ‘ವಾಲಿವಧೆ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿತು.

ಮನೋರಂಜಿನಿ ಸಭಾಂಗಣದಲ್ಲಿ ನಡೆದ ಈ ಪ್ರದರ್ಶನದಲ್ಲಿ ಸುಧೀಂದ್ರ ಹೊಳ್ಳ, ವಾಲಿಯ ಪಾತ್ರವಹಿಸಿ ತಮ್ಮ ಅಮೋಘ ಅಭಿನಯ, ವಾಕ್ ಚಾತುರ್ಯದಿಂದ ಪ್ರೇಕ್ಷಕರನ್ನು ರಂಜಿಸಿದರು. ವಿನಯ ಭಟ್ ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ರೂಪ, ನರ್ತನಗಳು ಅವರ ಪಾತ್ರಪೋಷಣೆಗೆ ಹೆಚ್ಚು ಮಹತ್ವ ತಂದವು. ಸುಗ್ರೀವನ ಪಾತ್ರ ವಹಿಸಿದ ಅಂಬರೀಷ್ ಭಟ್ ತಮ್ಮ ಕುಣಿತದ ಜೊತೆಗೆ ಮಾತುಗಾರಿಕೆಯ ಚಮತ್ಕಾರ ತೋರಿ, ಪ್ರಸಂಗದ ಒಟ್ಟಂದವನ್ನು ಹೆಚ್ಚಿಸಿದರು. ಸುರೇಶ್ ತಂತ್ರಾಡಿ ಹನುಮಂತನ ಪಾತ್ರವನ್ನು ಸಾಂಧರ್ಬಿಕವಾಗಿ ನಿರೂಪಿಸಿದ್ದರೂ ಆಹಾರ್ಯದಲ್ಲಿ  (ವೇಷಗಾರಿಕೆ) ಕೊಂಚ ಕೊರತೆ ಕಂಡಿತು. ಹನುಮಂತ ಬಾಲವಟುವಾಗಿ ಹೋಗುವ ಪಾತ್ರದಲ್ಲಿ ಕಿರಿಯ ನಟಿ ಹಿತ, ಲಕ್ಷ್ಮಣನ ಪಾತ್ರದಲ್ಲಿ ಉಲ್ಲಾಸ್ ಪ್ರಥಮ ಬಾರಿಗೆ ಯಕ್ಷರಂಗ ಪ್ರವೇಶಿಸಿದರು.

ರಾಧಾಕೃಷ್ಣ ಉರಾಳ ತಾರೆಯ ಪಾತ್ರ ವಹಿಸಿ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದರು. ಆದರೆ ಹಿಮ್ಮೇಳದಲ್ಲಿ ಮುಮ್ಮೇಳಕ್ಕೆ ಸಿಗಬೇಕಾದ ಹುರುಪು, ಹೊಂದಾಣಿಕೆಯ ಸಾನಿಧ್ಯದ ಕೊರತೆ ಉದಯೋನ್ಮುಖ ಕಲಾವಿದ ಶಂಕರ್ ಬಾಳಕುದ್ರು ಅವರ ಸೊರಗಿದ ಸ್ವರಕ್ಕೆ ಮದ್ದಲೆ ವಾದಕರಾದ ರಾಘವೇಂದ್ರ ಬಿಡುವಾಳರು ಭಾಗವತಿಕೆಯನ್ನೂ ಮಾಡಿ ಸಂದರ್ಭವನ್ನು ತೂಗಿಸಿದರು. ಕಾರ್ತಿಕ್ ಧಾರೇಶ್ವರ್ ಅವರ ಚಂಡೆ, ಯಕ್ಷಗಾನದಲ್ಲಿ ಅಪರೂಪವಾಗಿ ಬಳಸಿರುವ  ಜಮ್ಮಟಿಕೆ ನಾಗರಾಜ್ ಅವರ ಮೋರ್ಚಿಂಗ್ ಕಲಾಕದಂಬದ ಹೊಸ ಪ್ರಯೋಗಕ್ಕೆ ಸಾಕ್ಷಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.