ADVERTISEMENT

ಮತ್ತೊಂದು ಕಡಲೆಕಾಯಿ ಪರಿಷೆ

ಚಿಕ್ಕ ರಾಮು
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ಮತ್ತೊಂದು ಕಡಲೆಕಾಯಿ ಪರಿಷೆ
ಮತ್ತೊಂದು ಕಡಲೆಕಾಯಿ ಪರಿಷೆ   

ಕೆಂಗೇರಿ ಸಮೀಪದ ನೈಸ್ ಕಾರಿಡಾರ್ ಸರ್ಕಲ್ ಬಳಿ ಚನ್ನವೀರಯ್ಯನಪಾಳ್ಯದ ಚೋಳರ ಕಾಲದ ಇತಿಹಾಸ ಪ್ರಸಿದ್ಧ ನಂದಿಬಸವೇಶ್ವರ ದೇವಸ್ಥಾನದ ಅವರಣದಲ್ಲಿ 2013ನೇ ಜನವರಿ 14ರ ಸೋಮವಾರ ಸಂಕ್ರಾಂತಿ ಹಬ್ಬದಂದು ನಾಲ್ಕನೇ ವರ್ಷದ ಕಡಲೇಕಾಯಿ ಪರಿಷೆ ನಡೆಯುತ್ತಿದೆ. 4 ್ಙಗೆ ಒಂದು ಸೇರು ಕಡಲೇಕಾಯಿ ಜತೆಗೆ ಒಂದು ಜೊಲ್ಲೆ ಕಬ್ಬನ್ನು ಉಚಿತವಾಗಿ ನೀಡಲಾಗುವುದು.

ಪರಿಷೆಯ ಅಂಗವಾಗಿ ಬರುವ ಭಕ್ತಾದಿಗಳಿಗೆ ಉಚಿತವಾಗಿ ತಿನ್ನಲು ಬೇಯಿಸಿದ ಕಡಲೇಕಾಯಿ, ಕಬ್ಬು, ಗೆಣಸು, ಗಿಣ್ಣು, ಅವರೆಕಾಯಿ ವಿತರಿಸಲಾಗುವುದು. ಜೊತೆಗೆ ಮೂವತ್ತು ಸಾವಿರ ಭಕ್ತಾದಿಗಳಿಗೆ ಅನ್ನದಾಸೋಹ ನಡೆಯುತ್ತಿದೆ. ವಿಶೇಷ ಕಳೆ ನೀಡಲು ಮಂಗಳೂರು ಮಹಿಳಾ ತಂಡದಿಂದ ಜನಪದ ಕಲಾ ಪ್ರದರ್ಶನ, ಪಟ್ಟದ ಕುಣಿತ, ಪೂಜಾ ಕುಣಿತ, ಕರಡಿ ಕುಣಿತ, ವೀರಭದ್ರನ ಕುಣಿತ, ವೀರಗಾಸೆ, ಕಂಸಾಳೆ, ಗೊರವನ ಕುಣಿತ, ಚಾಮರಾಜನಗರ ಜಲ್ಲೆಯ ಮಲೇಮಾದೇಶ್ವರ ಯುವಕ ಮಂಡಳಿ ವೃಂದದಿಂದ ಭಕ್ತಿಗೀತೆ, ಜಾನಪದ ಗೀತೆಗಳ ಕಾರ್ಯಕ್ರಮ, ಸುಧಾ ಬರಗೂರು ತಂಡದಿಂದ ನಗೆಹಬ್ಬ, ತಬಲ ನಾಣಿ ತಂಡದಿಂದ ಹಾಸ್ಯೋತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಪರಿಷೆ ಅಂಗವಾಗಿ ಸೋಂಪುರ, ಚೆನ್ನವೀರಯ್ಯನಪಾಳ್ಯ, ವರಾಹಸಂದ್ರ, ಗಟ್ಟಿಗೆರೆಪಾಳ್ಯ, ದೊಡ್ಡಬೆಲೆ, ಎಚ್.ಗೊಲ್ಲಹಳ್ಳಿ, ಹೆಮ್ಮಿಗೆಪುರ ಗ್ರಾಮಗಳ ದೇವರುಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ಆಗ ಪೂಜಾಕುಣಿತ, ಪಟ್ಟದ ಕುಣಿತ ನಡೆಯಲಿದೆ. ಸಂಜೆ 6 ಗಂಟೆಯ ನಂತರ ರೈತರು ಸಾಕಿದ ದನ, ಕರುಗಳನ್ನು ದೇವಸ್ಥಾನದ ಸಮೀಪ ಮೆರವಣಿಗೆ ನಡೆಸಿ ಕಿಚ್ಚು ಹಾಯಿಸಲಾಗುತ್ತದೆ.

`ತಮಿಳುನಾಡಿನ ಹೊಸೂರು, ತಳಿ, ಧರ್ಮಪುರಿಯಿಂದ ನೂರಾರು ಟನ್ ಕಡಲೆಕಾಯಿ ಖರೀದಿಸಿ ತಂದು ಜಾತ್ರೆಗೆ ಹಾಕಲು ಎಲ್ಲಾ ಭಕ್ತಾದಿಗಳು ಸಂಪೂರ್ಣ ಸಹಕಾರವನ್ನು ನೀಡುತ್ತಾರೆ' ಎಂದು ಕಾರ್ಯಕ್ರಮದ ರೂವಾರಿ, ಸಂಘಟಕ ಎಂ.ರುದ್ರೇಶ್ ಹೇಳುತ್ತಾರೆ. ನಮ್ಮ ಸಂಸ್ಕೃತಿ ಮತ್ತು ಜಾನಪದ ಸೊಗಡನ್ನು ಉಳಿಸುವ ಜೊತೆಗೆ ಯುವ ಜನಾಂಗಕ್ಕೆ ಪರಿಚಯಿಸುವ ದೃಷ್ಟಿಯಿಂದ ಪ್ರತಿವರ್ಷ ಕಡಲೆ ಕಾಯಿ ಪರಿಷೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. `ನೈಸ್' ಮುಖ್ಯಸ್ಥ ಅಶೋಕ್ ಖೇಣಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ಮಾಣ ಸ್ವಾಮೀಜಿ,  ಶ್ರೀನಗರ ಕಿಟ್ಟಿ, ಸುದೀಪ್, ದರ್ಶನ್ ಸೇರಿದಂತೆ ಹಲವು ಚಿತ್ರನಟ-ನಟಿಯರು ಭಾಗವಹಿಸಲಿದ್ದಾರೆ.

ದನ ಕರುಗಳಿಗೆ ಕಾಯಿಲೆ ಬಂದಾಗ ಸುತ್ತಮುತ್ತಲ ಗ್ರಾಮಸ್ಥರು ಹರಕೆ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿದರೆ ಎಂತಹ ರೋಗವೂ ವಾಸಿಯಾಗುತ್ತಿತ್ತು. ಹಸುವು ಕರು ಹಾಕಿದರೆ ಮೊದಲ ಹಾಲನ್ನು ನಂದಿ ಬಸವಣ್ಣನಿಗೆ ನೈವೇದ್ಯ ಮಾಡಿ, ಆ ಹಾಲಿನಿಂದ ಗಿಣ್ಣನ್ನು ಮಾಡಿಕೊಂಡು ತಿಂದರೆ ಮನುಷ್ಯರು ಮತ್ತು ದನ ಕರುಗಳು ಆರೋಗ್ಯವಾಗಿರುತ್ತಿದ್ದವು ಎಂಬುದು ನಂಬಿಕೆ.

ಸಾವಿರಾರು ವರ್ಷಗಳಷ್ಟು ಹಳೆಯ ದೇವಾಲಯ ಶಿಥಿಲಗೊಂಡಿದ್ದರಿಂದ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಮತ್ತು ಅವರ ಸ್ನೇಹಿತರ ಬಳಗ ನಾಲ್ಕು ವರ್ಷಗಳ ಹಿಂದೆ ನಂದಿ ಬಸವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ ನಂತರ ಪ್ರತಿವರ್ಷ ಅದ್ದೂರಿ ಕಡಲೇಕಾಯಿ ಪರಿಷೆ ನಡೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.