
‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ...’ ಎಂಬ ಚಿತ್ರಗೀತೆಯ ಹಲೋ ಟ್ಯೂನ್ ಮೊಬೈಲ್ ಫೋನ್‌ಗಳಲ್ಲಿ ಕರೆ ಮಾಡಿದವರಿಗೆ ಕಿವಿಗೆ ಇಂಪು ಕೊಡುತ್ತವೆ. ಆದರೆ ಮಳೆ ಹನಿಯ ಬಗ್ಗೆ ಚಿಂತಿಸಬೇಕಾದದ್ದು ಮಳೆ ನಿಂತುಹೋದ ಮೇಲೆ ಅಲ್ಲ. ಮೊದಲ ಹನಿ ಬೀಳುವಾಗಲೇ ಬೊಗಸೆಯೊಡ್ಡಬೇಕು. ಮಳೆ ನೀರನ್ನು ಹಾಗೆ ಹಿಡಿದಿಟ್ಟರೇ ನಾಳಿನ ನೀರಡಿಕೆಯನ್ನು ನೀಗಬಹುದು’.
ಜಲ ತಜ್ಞ ಎಸ್. ವಿಶ್ವನಾಥ್ ಅವರು ಮಳೆ ಹಾಡಿನ ನೆಪದಲ್ಲಿ ವಾಸ್ತವವನ್ನು ಹೀಗೆ ವಿಶ್ಲೇಷಿದರು. 1994ರಲ್ಲಿ ಭಯಂಕರವಾದ ನೀರಿನ ಕೊರತೆಯನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಮಳೆ ನೀರಿನ ಬಗ್ಗೆ ತಲಸ್ಪರ್ಶಿಯಾಗಿ ಅಧ್ಯಯನ ನಡೆಸಲು ಮುಂದಾದ ವಿಶ್ವನಾಥ್ ಅವರು ಜಲ ಸಾಕ್ಷರತೆಗಾಗಿಯೇ ‘ಮಳೆ ನೀರು ಕ್ಲಬ್’ ಶುರು ಮಾಡಿದರು. ಅಲ್ಲಿಂದೀಚೆಗೆ ಹಳೆ ಬೆಂಗಳೂರು ಮತ್ತು ಈಗಿನ ಮಹಾನಗರದಲ್ಲಿ ಬಿದ್ದ ಹನಿ ಹನಿ ಮಳೆಯ ಲೆಕ್ಕಾಚಾರವೂ ಈ ಕ್ಲಬ್‌ನಲ್ಲಿ ದಾಖಲಾಗುವಂತೆ ಎಚ್ಚರ ವಹಿಸಿದ್ದಾರೆ. ಅವರೊಂದಿಗೆ ನೂರಾರು ಮಂದಿ ಸ್ವಯಂ ಸೇವಕರು, ಒಂದಷ್ಟು ಎನ್‌ಜಿಒಗಳ ಆಸಕ್ತರು ಜಲ ಸಂರಕ್ಷಣೆಯ ಕಾಯಕದಲ್ಲಿ ತೊಡಗಿದ್ದಾರೆ.
‘ಇಪ್ಪತ್ತು ವರ್ಷ ಎನ್ನುವುದು ನಮಗೆ ಮುಖ್ಯ ಅನಿಸುವುದಿಲ್ಲ. ಬೆಂಗಳೂರಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಮೂಲಕ ಕಿಂಚಿತ್ತಾದರೂ ಸಾಧ್ಯವಾಗಿದೆ ಎಂಬ ತೃಪ್ತಿ, ಗುರಿಯತ್ತ ಸಾಗುತ್ತಿರುವ ನೆಮ್ಮದಿ ನಮ್ಮಲ್ಲಿದೆ. ನಗರದಲ್ಲಿ ಮಳೆಯ ಇತಿಹಾಸವನ್ನು ದಾಖಲಿಸುವ ಪ್ರಯತ್ನ ಹಿಂದೆಂದೂ ಆಗಿರಲಿಲ್ಲ. ನಂದಿನಿ ಬಡಾವಣೆಯಲ್ಲಿ ನಾವು ಕಂಡ ಸಮಸ್ಯೆ ನಮಗೆ ಪಾಠವಾಯಿತು. ಅಲ್ಲಿಂದೀಚೆಗೆ ನಾವು ನಗರದ ಪ್ರತಿ ಪ್ರದೇಶದಲ್ಲಿಯೂ ಬಿದ್ದ ಮಳೆಯ ವಿವರ, ಮಳೆ ನೀರು ಸಂಗ್ರಹ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ಅನುಷ್ಠಾನ ಮಾಡುವುದನ್ನು ನಮ್ಮ ಪ್ರಮುಖ ಉದ್ದೇಶವನ್ನಾಗಿ ಕೈಗೆತ್ತಿಕೊಂಡೆವು. ಈಗ ನಗರದಲ್ಲಿ ಮಳೆ ಕೊಯ್ಲು ಮಾಡಿ ಗೆದ್ದವರ 10 ಸಾವಿರ ಯಶಸ್ವಿ ಕತೆಗಳಿವೆ’ ಎಂದು ಅವರು ರೇನ್ ವಾಟರ್ ಕ್ಲಬ್‌ನ ಗುರಿ ಮತ್ತು ಸಾಧನೆಯನ್ನು ವಿವರಿಸಿದರು.
ಕಡ್ಡಾಯದ ಮೂಗುದಾರ ಬೇಡ
ಮನೆ ಮನೆಯಲ್ಲಿಯೂ, ಪ್ರತಿ ವ್ಯಕ್ತಿಯಲ್ಲಿಯೂ ಮಳೆ ನೀರನ್ನು ಹಿಡಿದಿಡುವ, ಸಂಸ್ಕರಿಸಿ ಮರುಬಳಕೆ ಮಾಡುವ ಇಚ್ಛಾಶಕ್ತಿ ಮೂಡಬೇಕು. ಅದೊಂದು ಕ್ರಾಂತಿ. ಜಲ ಮಂಡಳಿಯ ನೀರನ್ನು ನಂಬಿ ಬದುಕುತ್ತಿರುವವರಿಗೆ ಸುತರಾಂ ನೀರಿನ ಬೆಲೆ ಗೊತ್ತಾಗುವುದಿಲ್ಲ. ಟ್ಯಾಂಕರ್‌ಗೆ ದುಬಾರಿ ಹಣ ತೆತ್ತು ಖರೀದಿ ಮಾಡಿದ ನೀರನ್ನು ಬಳಸುವ ಮಂದಿಗೆ ಮಾತ್ರ ನೀರಿನ ಬೆಲೆ ಗೊತ್ತಾಗುತ್ತದೆ. ಆದರೂ ಮಳೆ ನೀರನ್ನು ಹಿಡಿದಿಡುವ ವಿಚಾರದಲ್ಲಿ ಅವರು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ನಾವು ಪ್ರತಿಯೊಂದಕ್ಕೂ ಸರ್ಕಾರದ ಆದೇಶಕ್ಕೆ ಕಾಯಬಾರದು ಎನ್ನುವುದು ವಿಶ್ವನಾಥ್ ಅವರ ಕಿವಿಮಾತು.
ಎರಡು ದಿನಗಳಿಂದೀಚೆಗೆ ಸಂಜೆ ಬೀಳುತ್ತಿರುವ ಮಳೆಯನ್ನೇ ಗಮನಿಸಿ. ಸೋಮವಾರ ಗಿರಿನಗರದಲ್ಲಿ 45 ಮಿಲಿ ಮೀಟರ್ ಮಳೆಯಾಗಿದ್ದರೆ ಮಂಗಳವಾರ ರಾಜಾಜಿನಗರದಲ್ಲಿ 30ರಿಂದ 40 ಮಿಲಿಮೀಟರ್ ಮಳೆ ಬಿದ್ದಿದೆ. ಇದರಲ್ಲಿ ಎಷ್ಟು ನೀರನ್ನು ಎಷ್ಟು ಮನೆಗಳವರು ಸಂಗ್ರಹಿಸಿರಬಹುದು? ಈ ಬಾರಿ ಮುಂಗಾರು ತಡವಾಗುತ್ತದೆ ಎಂಬ ಸೂಚನೆ ಈಗಾಗಲೇ ಸಿಕ್ಕಿದೆ. ಅಂದರೆ ಆಗೊಮ್ಮೆ ಈಗೊಮ್ಮೆ ಬಿದ್ದ ಮಳೆಯನ್ನೇ ನಾವು ಜೋಪಾನ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಇದನ್ನೆಲ್ಲ ಜಲ ಮಂಡಳಿ ಹೇಳಬೇಕೇ? ನಾವೇ ಚಿಂತಿಸಬೇಕಾದದ್ದು ಅಲ್ವೇ?’ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.
ಮಗ್ಗಿಗಷ್ಟೇ ಸೀಮಿತವಾದ ಪಠ್ಯ
ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವೇ ಇದೆ. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಆ ಪಾಠವೂ ಇನ್ನಿತರ ಪಾಠಗಳಂತೆಯೇ ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಬರೆಯುವುದಕ್ಕಷ್ಟೇ ಸೀಮಿತವಾಗಿದೆ ಎನ್ನುವುದು ವಿಶ್ವನಾಥ್ ಅವರ ಆಕ್ಷೇಪ.
ಮಕ್ಕಳಲ್ಲಿ ಜಲ ಸಾಕ್ಷರತೆ ಸಾಧ್ಯವಾದರೆ ಕುಟುಂಬವೊಂದು ಜಲ ಸಾಕ್ಷರತೆ ಪಡೆದುಕೊಂಡಂತೆ ಎಂಬ ದೂರದೃಷ್ಟಿ ಶಿಕ್ಷಣ ಇಲಾಖೆಗೆ ಇದ್ದಿರಬಹುದು. ಆದರೆ ಅದು ಯೋಜನೆಯಾಗಿ ರೂಪುಗೊಳ್ಳಬೇಕು, ಅನುಷ್ಠಾನಗೊಳ್ಳಬೇಕಲ್ಲವೇ ಎಂಬ ಅವರ ಪ್ರಶ್ನೆಗೆ ಪ್ರತಿ ಶಾಲೆಯೂ ಉತ್ತರ ಕಂಡುಕೊಳ್ಳಬೇಕಾಗಿದೆ.
ಮಳೆ ನೀರು ಕ್ಲಬ್ ಒಂದೇ ಅಲ್ಲ ಜಲ ಸಾಕ್ಷರತೆಗಾಗಿ ದುಡಿಯುತ್ತಿರುವ ಇನ್ನೂ ಕೆಲವು ಪ್ರಮುಖ ಎನ್‌ಜಿಒ ಮತ್ತು ವ್ಯಕ್ತಿಗಳ ಗಮ್ಯವೂ ಒಂದೇ. ಅದೇನೆಂದರೆ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯನ್ನು ಹತೋಟಿ ತರುವಲ್ಲಿ ಮಳೆ ನೀರು ಸಂಗ್ರಹ ಯೋಜನೆ ಪರಿಣಾಮಕಾರಿ ಮತ್ತು ಪರ್ಯಾಯ ಮಾರ್ಗ ಎಂಬ ಪ್ರಜ್ಞೆಯನ್ನು ನಾಗರಿಕರಲ್ಲಿ ಮೂಡಿಸಿ ಅನುಷ್ಠಾನಗೊಳ್ಳುವಂತೆ ಮಾಡುವುದು. ಪ್ರತಿ ನಾಗರಿಕನೂ ಇದಕ್ಕೆ ಕೈಜೋಡಿಸಿದಲ್ಲಿ ಈ ಮಳೆಗಾಲದಲ್ಲಿ ಬೆಂಗಳೂರು ಮಹಾನಗರದಲ್ಲಿ ನೀರಿಗಾಗಿ ಹಾಹಾಕಾರಕ್ಕೆ ಕಡಿವಾಣ ಬೀಳುವುದರಲ್ಲಿ ಸಂಶಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.