ADVERTISEMENT

ಮಾವು ಬಂತು ಮಾವು

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST
ಮಾವು ಬಂತು ಮಾವು
ಮಾವು ಬಂತು ಮಾವು   

ಮಾವು ಅಂದರೆ ಎಲ್ಲರ ಮನಸ್ಸು ಅರಳುತ್ತದೆ. ಊರಿನಾಚೆ ಇರುವ ತೋಪಿನಲ್ಲೆಲ್ಲಾ ಈಗ ಮಾವು ನಳನಳಿಸುತ್ತಿದೆ. ಮುಂಗಾರಿನಲ್ಲಿ ಬೀಸೋ ತಂಗಾಳಿಗೆ ಕಾಯಿಗಳು ತೊನೆದಾಡುತ್ತಿವೆ. ಮರದಲ್ಲಿ ಕಾಯಿ ಕಟ್ಟಿರುವುದನ್ನು ನೋಡಿದರೆ ಮನಸ್ಸಲ್ಲಿ ಮಾವಿನ ಹಣ್ಣು ತಿನ್ನಬೇಕೆನ್ನುವ ತುಡಿತ ಮೇರೆ ಮೀರುತ್ತದೆ. ತೋಪಿನಿಂದ ಮಾರುಕಟ್ಟೆಗೆ ಮಾವು ಕಾಲಿಟ್ಟಿತೆಂದರೆ ಇತರೆ ಹಣ್ಣುಗಳು ಅಲ್ಲಿ ನಗಣ್ಯ. ಪುಟ್ಟ ಮಗುವಿನಿಂದ ಹಿಡಿದು ಹಲ್ಲುದುರಿದ ಅಜ್ಜ ಅಜ್ಜಿಯರೂ ಈ ಹಣ್ಣಿನ ರುಚಿಗೆ ಮನಸೋಲುತ್ತಾರೆ. ಬಸುರಿ ಬಯಕೆಯನ್ನು ಈಡೇರಿಸುವ ಮಾವಿನ ರುಚಿಯನ್ನು ಕೆಲವು ಕವಿಗಳು ಹೆಣ್ಣಿನ ಪ್ರೀತಿಗೂ ತಾಳೆ ಹಾಕಿದ್ದಾರೆ. ಹಣ್ಣುಗಳ ರಾಜ ಮಾವಿನ `ಖದರ್~ ಅಂಥದ್ದು.

ನಗರದಲ್ಲಿರುವ ಎಲ್ಲ ಹಣ್ಣಿನ ಅಂಗಡಿಗಳಲ್ಲೂ ಈಗ ಮಾವಿನದ್ದೇ ಕಾರುಬಾರು. ಹಣ್ಣು ಮಾರಾಟಗಾರರು ಮಾವಿನ ಹಣ್ಣುಗಳನ್ನು ಒಂದರ ಮೇಲೊಂದರಂತೆ ಅಚ್ಚುಕಟ್ಟಾಗಿ ಜೋಡಿಸಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಕೆಲವರು ಮಾವಿನ ಹಣ್ಣು ಹೊರಸೂಸುವ ಪರಿಮಳದ ಜಾಡನ್ನು ಹಿಡಿದು ಮಾವಿನ ಹಣ್ಣಿನ ಅಂಗಡಿಯ ಬಳಿಗೆ ಎಡತಾಕುತ್ತಿದ್ದಾರೆ. ಮಾವು ಈಗ ಎಲ್ಲರ ಮನಸ್ಸಿನಲ್ಲೂ ತಿನ್ನಬೇಕು ಎಂಬ ಆಸೆಯ ಬೀಜ ಬಿತ್ತುತ್ತಿದೆ. ಅಂದಹಾಗೆ, ಮಾರುಕಟ್ಟೆಯಲ್ಲಿ ಈಗ ಆಲ್ಫೋನ್ಸಾ, ಮಲ್‌ಗೋವಾ, ರಸಪುರಿ, ಬಂಗನಪಲ್ಲಿ, ಮಲ್ಲಿಕಾ, ಹಿಮಾಯತ್, ಸೇಂದ್ರಾ, ಬಾದಾಮಿ, ತೋತಾಪುರಿ, ಪಾಲಂ ಹಣ್ಣುಗಳದ್ದೇ ಕಾರುಬಾರು. ಲಭ್ಯವಿರುವ ಒಂದೊಂದು ಮಾವಿನ ಹಣ್ಣಿನದ್ದೂ ಒಂದೊಂದು ರುಚಿ.

ಬೇಸಿಗೆ ಕಳೆದು ಮುಂಗಾರು ಹಿಡಿಯುವುದರೊಳಗೆ ಮಾವು ಮಾರುಕಟ್ಟೆ ಪ್ರವೇಶಿಸಿದೆ. ಆದರೆ, ಈ ಬಾರಿ `ಹಣ್ಣಿನ ರಾಜ~ನನ್ನು ಸಾಮಾನ್ಯ ಜನ ಮಾತನಾಡಿಸುವುದು ಕಷ್ಟ. ಯಾಕೆಂದರೆ, ಬೆಲೆ ಬಲು ತುಟ್ಟಿ. ಈ ವರ್ಷದಲ್ಲಿ ಎದುರಾದ ಇಳಿ ಹಂಗಾಮು, ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಸಲು ಕೂಡ ಕಮ್ಮಿ ಇದೆ. ಹಾಗಾಗಿ ಬೆಲೆ ದುಬಾರಿ. ಮೇ ತಿಂಗಳಾರಂಭಕ್ಕೆ ಕಾಲಿಡಬೇಕಿದ್ದ ಸ್ಥಳೀಯ ಮಾವು ಎರಡು ಮೂರು ವಾರ ತಡವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಬೆಲೆ ತುಟ್ಟಿಯಾಗಲು ಇನ್ನೊಂದು ಕಾರಣ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲೆಗ ಆಂಧ್ರ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಬಂದ ಮಾವಿನ ಹಣ್ಣುಗಳದ್ದೇ ಕಾರುಬಾರು.

ನಗರದ ಹಣ್ಣಿನ ಅಂಗಡಿ ತುಂಬೆಲ್ಲಾ ಈಗ `ಆಲ್ಫೋನ್ಸಾ~ ಮಾವಿನ ಪರಿಮಳವೇ ಜಾಸ್ತಿ. ಜನರು ಇದರ ರುಚಿಗೆ ಮನಸೋತಿದ್ದಾರೆ. ಹಾಗಾಗಿ ಇದರ ರುಚಿಯಂತೆ ಬೆಲೆಯೂ ಅಧಿಕ. ಬಾಯಿಗಿಟ್ಟ ಕ್ಷಣ ಮನಸ್ಸು ಅರಳುವಂತೆ ಮಾಡುವ ಈ ಹಣ್ಣಿನ ಬೆಲೆ ಕೇಜಿಗೆ ನೂರೈವತ್ತರಿಂದ ಇನ್ನೂರು ರೂಪಾಯಿವರೆಗೆ ಇದೆ. ಡಜನ್‌ಗೆ ಆರುನೂರರವರೆಗೆ ಬೆಲೆ ಇದೆ. ಇನ್ನುಳಿದಂತೆ ಕೇಜಿ ಮಲ್‌ಗೋವಾ ಹಣ್ಣಿಗೆ ರೂ.100, ಮಲ್ಲಿಕಾ ರೂ.90, ರಸಪುರಿ ರೂ.95, ಬಾದಾಮ್ ರೂ.95, ಹಿಮಾಯತ್ ರೂ.120, ಬಂಗನಪಲ್ಲಿ ರೂ.70, ಸೇಂದ್ರಾ ರೂ.50, ತೋತಾಪುರಿ ರೂ.30ಕ್ಕೆ ಲಭ್ಯ.

ಮಾವಿನ ಋತುವಿನಲ್ಲಿ ಮಾವಿನ ಹಣ್ಣಿನಿಂದ ಮನೆಯ್ಲ್ಲಲಿ ನೂರೆಂಟು ನಮೂನೆಯ ತಿನಿಸುಗಳನ್ನು ಮಾಡಬಹುದು. ಮಾವಿನಿಂದ ತಯಾರಿಸಿದ ತಿನಿಸುಗಳು ತಿನ್ನಲು ಸ್ವಾದಿಷ್ಟ ಹಾಗೂ ರುಚಿಕರ. ಈ ಸೀಸನ್‌ನಲ್ಲಿ ಮಾವಿನ ಕಾಯಿಯಿಂದ ನಾಲ್ಕೈದು ಬಗೆಯ ಉಪ್ಪಿನಕಾಯಿ ಮಾಡಿಟ್ಟುಕೊಳ್ಳಬಹುದು. ಮಾವಿನ ಹಣ್ಣಿನಿಂದ ರಸಾಯನ, ಅಡಂಗಾಯ್, ಪಾಯಸ, ಬರ್ಫಿ, ಮಿಲ್ಕ್‌ಶೇಕ್, ಸ್ವ್ಕ್ಯಾಶ್, ಐಸ್‌ಕ್ರೀಂ ಹೀಗೆ ನಾನಾ ವಿಧದ ತಿನಿಸು ಹಾಗೂ ಪೇಯಗಳನ್ನು ಮಾಡಬಹುದು. ಮಾವಿನಿಂದ ತಯಾರಿಸಿದ ಈ ತಿನಿಸುಗಳು ಮಕ್ಕಳಿಗಂತೂ ತುಂಬಾ ಇಷ್ಟ. ಊಟಕ್ಕೆ ಉಪ್ಪಿನಕಾಯಿ ಇದ್ದರೆ ಮಜಾ ಬರುತ್ತದೆ. ಹಾಗೆಯೇ ಊಟದ ಜತೆಗೆ ಮಾವಿನ ಸ್ಟೈಸ್ ಇದ್ದರೆ ಅದರ ಗಮ್ಮತ್ತೇ ಬೇರೆ.

ಈಗಷ್ಟೇ ಮಾರುಕಟ್ಟೆಗೆ ಕಾಲಿಟ್ಟಿರುವ ಮಾವಿನ ಹಣ್ಣುಗಳಿಗೆ ಬೇಡಿಕೆ ಅಷ್ಟೊಂದು ಕುದುರಿಲ್ಲ ಎಂಬುದು ಚಿಲ್ಲರೆ ವ್ಯಾಪಾರಿಗಳ ಅಂಬೋಣ. ಮಕ್ಕಳಿಗೆಲ್ಲಾ ಬೇಸಿಗೆ ರಜೆ ಇರುವುದರಿಂದ ಬಹುತೇಕರು ಪ್ರವಾಸ ಕೈಗೊಂಡಿರುತ್ತಾರೆ. ಹಾಗಾಗಿ ಚಿಲ್ಲರೆ ಹಣ್ಣಿನ ವಹಿವಾಟು ಸ್ವಲ್ಪ ಕುಗ್ಗಿದೆ ಎಂಬುದು ಅವರು ನೀಡುವ ಕಾರಣ. `ಪ್ರಸ್ತುತ ಒಂದು ಅಂಗಡಿಯಲ್ಲಿ ನಿತ್ಯ ಸರಾಸರಿ 10ರಿಂದ 20ಕೇಜಿ ಮಾವಿನ ಹಣ್ಣು ಮಾರಾಟವಾಗುತ್ತಿದೆ. ಮಾವಿನ ಫಸಲು ಕಡಿಮೆಯಾಗಿರುವುದರಿಂದ ಬೆಲೆ ಕೂಡ ಹೆಚ್ಚಾಗಿದೆ. ಕೆಲವು ಜನರು ಹಣ್ಣಿನ ರೇಟ್ ಕೇಳಿಯೇ ಹಿಂತಿರುಗುತ್ತಾರೆ. ಮತ್ತೆ ಕೆಲವರು ಬೆಲೆ ಹೆಚ್ಚು ಎಂದು ಮಾವಿನ ಹಣ್ಣು ತಿನ್ನುವುದನ್ನು ಬಿಡುವುದಿಲ್ಲ. ಹಾಗಾಗಿ ಅವರು ಒಂದು ಡಜನ್ ಕೊಳ್ಳುವ ಜಾಗದಲ್ಲಿ ಅರ್ಧ ಡಜನ್ ಕೊಂಡು ಬಾಯಿ ರುಚಿ ತಣಿಸಿಕೊಳ್ಳುತ್ತಿದ್ದಾರೆ. ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸ್ಥಳೀಯ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೇ ಬೆಲೆ ಸ್ವಲ್ಪ ಕಮ್ಮಿ ಆಗುತ್ತದೆ. ಜತೆಗೆ ಬೇಡಿಕೆ ಕೂಡ ಹೆಚ್ಚುತ್ತದೆ~ ಎನ್ನುತ್ತಾರೆ ಹಾಪ್‌ಕಾಮ್ಸ ಅಂಗಡಿಯ ವ್ಯಾಪಾರಿ ಜಬೀವುಲ್ಲಾ.

ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಪ್ರಕಾರ ಈ ವರ್ಷ ಇಳುವರಿ ಕಡಿಮೆ ಇರುವುದರಿಂದ `ಮಾಫಲ~ ದುಬಾರಿಯೇ. ಸೀಕರಣಿ ಮಾಡಿ ಮೆಲ್ಲುವವರು ಕೂಡ ಅದಕ್ಕೇ ಯೋಚಿಸಬೇಕು.

ಮಾವಿನ ಬೆಲೆ ಹೆಚ್ಚಿಗೆ ಇರುವುದರಿಂದ ಜನ ಸಾಮಾನ್ಯರ ಬಾಯಿ ಚಪಲಕ್ಕೆ ಬೀಗ ಬಿದ್ದಿದೆ ಎಂಬುದು ನಿಜ. ಹಾಗಂತ  ಸಾಮಾನ್ಯರು ಕೊರಗಬೇಕಿಲ್ಲ. ಏಕೆಂದರೆ ನಗರದಲ್ಲಿ ನಡೆವ ಮಾವು ಮೇಳ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ರುಚಿಕರ ಮಾವಿನ ಹಣ್ಣು ಸವಿಯುವ ಅವಕಾಶ ಕಲ್ಪಿಸುತ್ತದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾವು ಪೂರೈಸಲು ಹಾಗೂ ಮಾವಿನ ವೈವಿಧ್ಯವನ್ನು ಪರಿಚಯಿಸಲು ಮಾವು ಮೇಳ ನಡೆಸಲಾಗುತ್ತಿದೆ. ನಗರದಲ್ಲಿ ಮಾವು ಮೇಳ ತಿಂಗಳಾಂತ್ಯದಲ್ಲಿ ನಡೆಯುವುದರಿಂದ ಮಾವು ಪ್ರಿಯರು ಅಲ್ಲಿಗೆ ದಾಂಗುಡಿ ಇಟ್ಟು ಮಾವಿನ ಹಣ್ಣನ್ನು ತಿಂದು ತೇಗಬಹುದು. ಅದುವರೆಗೆ ಎಷ್ಟು ಸಾಧ್ಯವೋ ಅಷ್ಟು ಚೌಕಾಸಿ ಮಾಡಿ ತಿನ್ನದೇ ಬೇರೆ ವಿಧಿಯಿಲ್ಲ.

ಕೊಳ್ಳುವ ಮುನ್ನ
ಈಗ ಮಾವಿನ ಹಣ್ಣಿಗೆ ಒಂದೊಂದು ಕಡೆ ಒಂದೊಂದು ದರವಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಬೆಲೆಯಾದರೆ, ಚಿಲ್ಲರೆ ಮಾರಾಟ ಮಾಡುವ ಹಣ್ಣಿನ ಅಂಗಡಿಯಲ್ಲಿ ಮತ್ತೊಂದು ಬೆಲೆ. ಇನ್ನು ರಿಲಾಯನ್ಸ್ ಫ್ರೆಶ್, ಬಿಗ್‌ಬಜಾರ್, ಫುಡ್ ಬಜಾರ್‌ಗಳಲ್ಲಿ ಇವೆರಡೂ ಸ್ಥಳಕ್ಕಿಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟ ಹಾಗೂ ರುಚಿ ಎರಡರಲ್ಲೂ ಉತ್ತಮವಿರುವ ಮಾವಿನ ಹಣ್ಣುಗಳು ದೊರಕುತ್ತವೆ. ಹಣ್ಣಿನ ರುಚಿ ಹಾಗೂ ಬ್ರ್ಯಾಂಡ್ ಹೆಸರು ಹೇಳಿಕೊಂಡು ಒಬ್ಬೊಬ್ಬ ವ್ಯಾಪಾರಿ ಒಂದೊಂದು ಬೆಲೆಯನ್ನಿಟ್ಟು ಮಾರಾಟ ಮಾಡುತ್ತಿದ್ದಾರೆ. ಅವಸರಕ್ಕೆ ಬಿದ್ದು ಒಂದೇ ಅಂಗಡಿಯಲ್ಲಿ ಹೆಚ್ಚಿಗೆ ಹಣ ಕೊಟ್ಟು ಮಾವಿನ ಹಣ್ಣುಗಳನ್ನು ಖರೀದಿಸಿ ಕೊರಗುವ ಬದಲು ನಾಲ್ಕೈದು ಅಂಗಡಿಗಳನ್ನು ಸುತ್ತಿ ಹಣ್ಣು ಖರೀಸುವುದು ಉತ್ತಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT