ಕೇವಲ ಮನರಂಜನೆ ಹಾಗೂ ರಕ್ಷಣೆಗಾಗಿ ಮನೆಗಳಲ್ಲಿ ಬೆಕ್ಕು ಹಾಗೂ ನಾಯಿಗಳನ್ನು ಸಾಕುವ ಕಾಲವೊಂದಿತ್ತು. ಆದರೆ ಈಗ ಜನರ ಮನಸ್ಥಿತಿ ಬದಲಾಗಿದೆ. ಜನರ ಹಾಗೂ ಸಾಕು ಪ್ರಾಣಿಗಳ ನಡುವೆ ಒಂದು ರೀತಿಯ ಆತ್ಮೀಯತೆ ಬೆಳೆಯುತ್ತಿದೆ. ಇದರಿಂದಾಗಿ ಸಾಕು ಪ್ರಾಣಿಗಳು ಮನೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿವೆ.
ಒಂಟಿಯಾಗಿ ವಾಸಿಸುವವರು ಒಂಟಿತನವನ್ನು ಹೋಗಲಾಡಿಸಲು ಸಾಕು ಪ್ರಾಣಿಗಳ ಮೊರೆಹೋಗುತ್ತಾರೆ. ಮೆಟ್ರೊ ನಗರಗಳಲ್ಲಿ ಒಂಟಿಯಾಗಿ ಜೀವಿಸುವವರು ಮನೆಗಳಲ್ಲಿ ಬೆಕ್ಕು, ನಾಯಿಗಳನ್ನು ಸಾಕುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಸಾಕಿದ ಪ್ರಾಣಿಗಳಿಗೆ ಒಳ್ಳೆಯ ತರಬೇತಿ ಕೊಡಿಸಿ ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಕೆಲಸದ ಒತ್ತಡ, ಬದಲಾದ ಜೀವನ ಶೈಲಿಗಳಿಂದ ಪ್ರಾಣಿಗಳ ಶುಚಿತ್ವದತ್ತ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹವರಿಗೆಂದೇ ನಗರದಲ್ಲಿ ನೂರಾರು ಸ್ಪಾಗಳು ತಲೆ ಎತ್ತಿವೆ.
ಈ ಸ್ಪಾಗಳಲ್ಲಿ ನಾಯಿ ಹಾಗೂ ಬೆಕ್ಕುಗಳಿಗೆ ಹೇರ್ ಗ್ರೂಮಿಂಗ್(ಹೇರ್ ಕಟ್), ಹೇರ್ ಸ್ಟೈಲಿಂಗ್, ಮೆಡಿಕೇಟೆಡ್ ಬಾತ್, ನಾನಾ ರೀತಿಯ ಆಯಿಲ್ ಮಸಾಜ್, ನೇಲ್ ಕಟಿಂಗ್, ಟ್ರಿಮ್ಮಿಂಗ್ ಹಾಗೂ ಪಾಲಿಷಿಂಗ್, ಹೇರ್ ಕಲರಿಂಗ್, ಆ್ಯಂಟಿ ಡ್ಯಾಂಡ್ರಫ್ ಟ್ರೀಟ್‌ಮೆಂಟ್, ಹೇರ್ ಫಾಲ್ ಕಂಟ್ರೋಲಿಂಗ್ ಟ್ರೀಟ್‌ಮೆಂಟ್ ಹೀಗೆ ನಾನಾ ರೀತಿಯ ಸೇವೆಗಳನ್ನು ನೀಡುತ್ತಿವೆ. ಇವರಲ್ಲಿ ಕೆಲವರು ಪಿಕ್‌ಅಪ್ ಹಾಗೂ ಡ್ರಾಪ್ ಸೇವೆಗಳನ್ನೂ ನೀಡುತ್ತಾರೆ.
ಸ್ಯಾನಿಟರಿ ಟ್ರಿಮ್ಮಿಂಗ್: ನಾಯಿಗಳ ಶುಚಿತ್ವ ಕಾಪಾಡಲು ಸ್ಯಾನಿಟರಿ ಟ್ರಿಮ್ಮಿಂಗ್ ಮಾಡಲಾಗುತ್ತದೆ. ಇದರಲ್ಲಿ ಬೆಕ್ಕು ಮತ್ತು ನಾಯಿಗಳ ಕಿವಿಯನ್ನು ಸ್ವಚ್ಛಗೊಳಿಸಿ, ಕಿವಿಯೊಳಗೆ ಅನವಶ್ಯಕವಾಗಿ ಬೆಳೆದಿರುವ ಕೂದಲು, ಪಾದಗಳ ನಡುವೆ ಇರುವ ಕೂದಲನ್ನೂ ತೆಗೆಯುತ್ತಾರೆ. ಜತೆಗೆ ಕೈ ಹಾಗೂ ಕಾಲುಗಳಲ್ಲಿರುವ ಉಗುರನ್ನು ಕತ್ತರಿಸಿ, ಅದನ್ನು ಅಂದವಾಗಿ ಕಾಣುವಂತೆ ಟ್ರಿಮ್ ಮಾಡುತ್ತಾರೆ. ನಂತರ ಅವುಗಳ ಮಾಲೀಕರ ಬೇಡಿಕೆ ಮೇರೆಗೆ ಅವುಗಳಿಗೆ ಬಣ್ಣವನ್ನೂ ಹಚ್ಚುತ್ತಾರೆ. ಇನ್ನು ಅವುಗಳ ಹಿಂಭಾಗ, ಮಲ ಮತ್ತು ಮೂತ್ರ ಮಾಡುವ ಸ್ಥಳದಲ್ಲಿ ಬೆಳೆದಿರುವ ಕೂದಲನ್ನು ತೆಗೆಯುತ್ತಾರೆ. ನಂತರ ಅವುಗಳಿಗೆ ಸ್ನಾನ ಮಾಡಿಸಲಾಗುತ್ತದೆ.
ಬೇಸಿಕ್ ಗ್ರೂಮಿಂಗ್: ಇಲ್ಲಿ ಬೆಕ್ಕು ಮತ್ತು ನಾಯಿಗಳ ಕೂದಲನ್ನು ಚೆನ್ನಾಗಿ ಬ್ರಷ್ ಮಾಡುತ್ತಾರೆ. ನಂತರ ಹೇರ್ ಟ್ರಿಮ್ಮಿಂಗ್ ಹಾಗೂ ಅವುಗಳ ದೇಹ ಹಾಗೂ ಬ್ರೀಡ್‌ಗೆ ತಕ್ಕಂತೆ ಹೇರ್ ಕಟ್ ಮಾಡಲಾಗುತ್ತದೆ.
ಪ್ರಾಣಿಗಳ ಟೂತ್ ಬ್ರಷಿಂಗ್: ನಾಯಿ ಹಾಗೂ ಬೆಕ್ಕುಗಳಿಗೆ ಯಾರೂ ಹಲ್ಲು ಉಜ್ಜಿಸುವುದಿಲ್ಲ. ಆದರೆ ಅವುಗಳ ಮೇಲಿನ ಪ್ರೀತಿಯಿಂದ ಕೊಡುವ ಸಿಹಿ ಹಾಗೂ ಎಣ್ಣೆ ಪದಾರ್ಥಗಳಿಂದ ಅವುಗಳ ಹಲ್ಲುಗಳ ಮೇಲೆ ಕೊಳೆ ಕಟ್ಟುತ್ತದೆ. ಇದರಿಂದ ಭವಿಷ್ಯದಲ್ಲಿ ಹಲ್ಲಿನ ಹುಳುಕು ಹಾಗೂ ವಸಡಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಅವುಗಳ ಹಲ್ಲು ಉಜ್ಜುವುದು ಅತ್ಯಗತ್ಯ. ಹೀಗಾಗಿ ಈ ಸ್ಪಾಗಳಲ್ಲಿ ನಿಮ್ಮ ಮುದ್ದಿನ ಪ್ರಾಣಿಗಳ ಹಲ್ಲುಗಳನ್ನು ಸಹ ಸ್ವಚ್ಛಗೊಳಿಸುತ್ತಾರೆ. ಇದರಿಂದ ಅವುಗಳ ಬಾಯಿ ವಾಸನೆ ಹೋಗುತ್ತದೆ.
ಮೆಡಿಕೇಟೆಡ್ ಬಾತ್: ಮನೆಗಳಲ್ಲಿ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಬೆಕ್ಕು ಹಾಗೂ ನಾಯಿಗಳಲ್ಲಿ ಉಣ್ಣೆ ಮತ್ತು ಚಿಗಟಗಳು ಇದ್ದೇ ಇರುತ್ತವೆ. ಇವುಗಳನ್ನು ಹೋಗಲಾಡಿಸಲು ಸ್ಪಾಗಳಲ್ಲಿ ನಾನಾ ರೀತಿಯ ಮೆಡಿಕೇಟೆಡ್ ಟ್ರೀಟ್‌ಮೆಂಟ್ ನೀಡಲಾಗುತ್ತದೆ. ಅದಕ್ಕಾಗಿ ವಿದೇಶಗಳಿಂದ ತರಿಸಲಾಗುವ ಶ್ಯಾಂಪೂ ಹಾಗೂ ಎಣ್ಣೆಗಳನ್ನು ಬಳಸಿ ಮೆಡಿಕೇಟೆಡ್ ಸ್ನಾನ ಮಾಡಿಸಲಾಗುತ್ತದೆ. ಅದರಲ್ಲೂ ಉಣ್ಣೆ ಹಾಗೂ ಚಿಗಟಗಳ ನಾಶಕ್ಕಾಗಿ ವಿಶೇಷ ಸ್ನಾನ ಮಾಡಿಸುತ್ತಾರೆ.
ನ್ಯೂ ಲುಕ್: ಬೆಕ್ಕು ಮತ್ತು ನಾಯಿಗಳ ಜಾತಿಗಳಿಗೆ ತಕ್ಕಂತೆ ಹೇರ್ ಕಟ್ ಮಾಡಲಾಗುತ್ತದೆ. ಅದರಲ್ಲೂ ಕೆಲವೊಮ್ಮೆ ಪ್ರಾಣಿಗಳ ಮಾಲೀಕರ ಆಯ್ಕೆಯಂತೆ ಹೇರ್ ಕಟ್ ಹಾಗೂ ಹೇರ್ ಸ್ಟೈಲ್ ಮಾಡಲಾಗುತ್ತದೆ. ಬಾಕ್ಸರ್, ಸೇಂಟ್‌ಬರ್ನಾಡ್, ಗೋಲ್ಡನ್ ರಿಟ್ರೀವರ್, ಸ್ಪ್ಲಿಟ್ಸ್, ಶ್ನೌಜರ್ ಸೇರಿದಂತೆ ಉದ್ದ ಕೂದಲಿರುವ ಜಾತಿಯ ನಾಯಿಗಳಿಗೆ ಹೇರ್ ಕಟ್ ಮಾಡಿ, ಹೇರ್ ಸ್ಟೈಲ್ ಮಾಡುವುದು ಸುಲಭ.
ಉದ್ದ ಕೂದಲಿರುವ ನಾಯಿ ಹಾಗೂ ಬೆಕ್ಕುಗಳ ಹೇರ್ ಕಟ್‌ಗೆ ಯಾವುದೇ ಹೆಸರುಗಳಿಲ್ಲ. ಅವುಗಳ ದೇಹದ ಗಾತ್ರ ಹಾಗೂ ಅದು ಹೆಣ್ಣೊ, ಗಂಡೊ ಎಂದು ನೋಡಿ ನಂತರ ಅದಕ್ಕೆ ಹೇರ್ ಕಟ್ ಮಾಡುತ್ತಾರೆ. ಹೆಣ್ಣು ನಾಯಿ ಹಾಗೂ ಬೆಕ್ಕುಗಳಿಗೆ ಹುಡುಗಿಯರಂತೆ ಪೋನಿ ಹಾಕುವಂತೆ ಕಟಿಂಗ್ ಮಾಡಿ ಕ್ಲಿಪ್‌ಗಳನ್ನು ಹಾಕುತ್ತಾರೆ. ಗಂಡು ನಾಯಿಗಳಾದರೆ ಕಾಲುಗಳಿಗೆ ಸಾಕ್ಸ್ ಹಾಕಿದಂತೆ ಕೂದಲಿನಲ್ಲೇ ಸಿಂಗಾರ ಮಾಡುತ್ತಾರೆ. ಬೆನ್ನು ಕತ್ತಿನ ಸುತ್ತ ಉದ್ದ ಕೂದಲನ್ನು ಬಿಟ್ಟು ಉಳಿದಂತೆ ಸಣ್ಣದಾಗಿ ಕೂದಲನ್ನು ಟ್ರಿಮ್ ಮಾಡುತ್ತಾರೆ. ಹೀಗೆ ಮಾಡುವ ಮೂಲಕ ದೊಡ್ಡ ಗಾತ್ರದ ನಾಯಿಗಳಿಗೆ ಸಿಂಹದ ಲುಕ್ ನೀಡುತ್ತಾರೆ.
ಕೂದಲಿಗೆ ಬಣ್ಣ(ಸ್ಟ್ರೀಕ್ಸ್): ಒಂದೇ ಬಣ್ಣ ಹೊಂದಿರುವ ಬೆಕ್ಕು ಹಾಗೂ ನಾಯಿಗಳ ಕೂದಲಿಗೆ ಕಲರಿಂಗ್ ಮಾಡುತ್ತಾರೆ. ಅದರಲ್ಲೂ ಅವುಗಳಿಗೆ ಮಾಡಿರುವ ಹೇರ್‌ಕಟ್‌ಗೆ ತಕ್ಕಂತೆ ಕಲರಿಂಗ್ ಮಾಡಲಾಗುತ್ತದೆ. ಅದಕ್ಕಾಗಿ ವಿದೇಶಗಳಿಂದ ತರಿಸಲಾಗುವ ಪ್ರಾಣಿ ಸ್ನೇಹಿ ಬಣ್ಣಗಳನ್ನು ಬಳಸುತ್ತಾರೆ.
ರಿಲ್ಯಾಕ್ಸಿಯೇಷನ್ ಆಯಿಲ್ ಮಸಾಜ್: ಬೆಕ್ಕು ಮತ್ತು ನಾಯಿಗಳ ರಿಲ್ಯಾಕ್ಸಿಯೇಷನ್‌ಗಾಗಿ 45 ನಿಮಿಷ ಆಯಿಲ್ ಮಸಾಜ್ ಮಾಡುತ್ತಾರೆ. ಇಲ್ಲಿ ಸ್ವಲ್ಪ ಬಿಸಿ ಮಾಡಿದ ಎಣ್ಣೆಯಿಂದ 45 ನಿಮಿಷ ಫುಲ್ ಬಾಡಿ ಮಸಾಜ್ ನೀಡುತ್ತಾರೆ. ಇದರಿಂದ ಸ್ನಾಯುಗಳಲ್ಲಿನ ನೋವು ನಿವಾರಣೆಯಾಗುತ್ತದೆ.
ಹೇರ್ ಫಾಲ್ ಕಂಟ್ರೋಲಿಂಗ್ ಟ್ರೀಟ್‌ಮೆಂಟ್: ಉದ್ದ ಕೂದಲಿನ ಪ್ರಾಣಿಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ. ಇಂತಹ ಪ್ರಾಣಿಗಳಲ್ಲಿ ನಿತ್ಯ ಡೆಡ್ ಹೇರ್ ಉದುರುತ್ತವೆ. ಅದಕ್ಕಾಗಿ ಅವುಗಳನ್ನು ತೆಗೆಯಲು ನಿತ್ಯ ಬ್ರಷ್ ಮಾಡಬೇಕು. ಇದರ ಜತೆಗೆ ಕೂದಲಿನಲ್ಲಿ ತೇವಾಂಶ ಉಳಿದುಕೊಂಡು ಕೂದಲು ಉದುರಲು ಪ್ರಾರಂಭವಾಗುತ್ತದೆ. ಇದನ್ನು ನಿಯಂತ್ರಿಸಲು ಸ್ಪಾಗಳು ಹೇರ್ ಫಾಲ್ ಕಂಟ್ರೋಲಿಂಗ್ ಟ್ರೀಟ್‌ಮೆಂಟ್ ನೀಡುತ್ತಿವೆ.
ತಮ್ಮ ಸಾಕುಪ್ರಾಣಿಗಳ ಶುಚಿತ್ವ ಕಾಪಾಡಿಕೊಳ್ಳಲು ಸಮಯವಿಲ್ಲದವರ ಪ್ರಾಣಿಗಳಿಗಾಗಿ ಪ್ರತಿ 20 ದಿನಕ್ಕೊಮ್ಮೆ ಸ್ನಾನ ಮಾಡಿಸುವ ಸೇವೆಯನ್ನೂ ಈ ಸ್ಪಾಗಳು ನೀಡುತ್ತಿವೆ. ಇದರೊಂದಿಗೆ ಉದ್ದ ಕೂದಲಿನ ನಾಯಿಗಳ ಕೂದಲನ್ನು ಸ್ವಚ್ಛ ಹಾಗೂ ಸುಂದರವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗದವರಿಗಾಗಿ ಹೇರ್ ಬ್ರಷಿಂಗ್ ಹಾಗೂ ಹೇರ್ ಸ್ಮೂಥನಿಂಗ್ ಮಾಡುವ ಸೇವೆಯನ್ನೂ ನೀಡುತ್ತಿವೆ.
ನಗರದಲ್ಲಿ ಆಯೋಜಿಸುವ ಕೆಲ ಪಾರ್ಟಿಗಳಿಗೆ, ಐಟಿ ಕಂಪನಿಗಳಿಗೆ ಹಾಗೂ ಕೆಲವೊಂದು ಶಾಲೆಗಳಿಗೆ ಸೌಮ್ಯ ಸ್ವಭಾವದ ನಾಯಿಗಳನ್ನು ಕರೆದೊಯ್ಯಲಾಗುತ್ತದೆ. ಐಟಿ ಹಾಗೂ ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸದೊತ್ತಡ ಹೆಚ್ಚಿರುವುದರಿಂದ ಒತ್ತಡ ನಿವಾರಣೆಗೆ ಇಂತಹ ಶ್ವಾನಗಳು ಸಹಾಯಕವಂತೆ. ಮುದ್ದು ಮನಸ್ಸಿನ ನಾಯಿಗಳೊಂದಿಗೆ ಕೆಲ ಕಾಲ ಕಳೆದರೆ ಮನಸ್ಸು ಪ್ರಪುಲ್ಲಗೊಳ್ಳುವುದರಿಂದ ಕೆಲ ಕಂಪೆನಿಗಳು ಇಂತಹ ಸೇವೆಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗೆಯೇ ಮಕ್ಕಳಿಗೆ ಪ್ರಾಣಿಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಫ್ರೆಂಡ್ಲಿ ನಾಯಿಗಳನ್ನು ಶಾಲೆಗೂ ಕರೆಸಿ ಮಕ್ಕಳಿಗೆ ಅದರೊಂದಿಗೆ ಆಡಲು ಬಿಡುತ್ತಾರೆ. ‘ಸ್ಕೂಬಿ ಸ್ಕ್ರಬ್’ ಸಂಸ್ಥೆ ಇಂತಹ ಸೇವೆಗಳನ್ನು ವಿದೇಶ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ನೀಡುತ್ತಾ ಬಂದಿದೆ. ಇಂತಹ ಸೇವೆಗಳನ್ನು ದೇಶದಲ್ಲಿ ಅತಿ ಹೆಚ್ಚು ಪಡೆಯುತ್ತಿರುವ ನಗರಗಳೆಂದರೆ ದೆಹಲಿ ಹಾಗೂ ಪುಣೆ. ನಗರದ ಯಾವುದೇ ಐಟಿ, ಕಾರ್ಪೊರೇಟ್ ಸಂಸ್ಥೆಗಳು ಅಥವಾ ಶಾಲೆಗಳು ಇಂತಹ ಸೇವೆಗಳನ್ನು ಬಯಸಿದಲ್ಲಿ ‘ಸ್ಕೂಬಿ ಸ್ಕ್ರಬ್’ ಸಂಸ್ಥೆ ಈ ಸೇವೆಯನ್ನು ಒದಗಿಸಲು ಸಿದ್ಧ.
ಮನೆಗಳಲ್ಲಿ ನಾಯಿ ಮತ್ತು ಬೆಕ್ಕುಗಳಿಗೆ ಸಮಯ ನೀಡಲಾಗದವರು ಈಗ ಸ್ಪಾಗಳ ಮೊರೆ ಹೋಗುತ್ತಿದ್ದಾರೆ. ಇದರೊಂದಿಗೆ ಅವುಗಳ ಶುಚಿತ್ವ ಕಾಪಾಡಲು ಸ್ಯಾನಿಟರಿ ಟ್ರಿಮ್ಮಿಂಗ್ ಅತ್ಯಗತ್ಯ. ನಾಯಿ ಮತ್ತು ಬೆಕ್ಕುಗಳನ್ನು ವಾಕಿಂಗ್ ಕರೆದುಕೊಂಡು ಹೋದಾಗ ಅವುಗಳ ಪಾದಗಳಲ್ಲಿರುವ ಕೂದಲುಗಳಲ್ಲಿ ದೂಳು, ತೇವಾಂಶ ಹಾಗೂ ಉಣ್ಣೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ನಂತರ ದೇಹದ ಮೇಲಿರುವ ಕೂದಲನ್ನು ಬ್ರಷ್ ಮಾಡದೇ ಹೋಗುವುದರಿಂದ ಕೂದಲು ಒಂದಕ್ಕೊಂದು ಅಂಟಿಕೊಂಡು ಚರ್ಮದ ಉಸಿರಾಟಕ್ಕೆ ಅಡ್ಡಿ ಮಾಡುತ್ತವೆ. ಇದರಿಂದ ಪ್ರಾಣಿಗಳಿಗೆ ಸ್ಯಾನಿಟರಿ ಟ್ರಿಮ್ಮಿಂಗ್, ಬೇಸಿಕ್ ಗ್ರೂಮಿಂಗ್ ಅತ್ಯಗತ್ಯ.
ಆದರೆ ಬೇಸಿಗೆಯಲ್ಲಿ ನಾಯಿಗಳಿಗೆ ಸೆಕೆ ಹೆಚ್ಚಾಗುತ್ತದೆ ಎಂದು ಅವುಗಳ ಸಂಪೂರ್ಣವಾಗಿ ಕೂದಲನ್ನು ಶೇವ್ ಮಾಡಿಸುತ್ತಾರೆ. ಅದು ತಪ್ಪು. ಕಾರಣ ನಾಯಿಗಳ ದೇಹದ ಉಷ್ಣಾಂಶವನ್ನು ನಿಯಂತ್ರಿಸುವುದೇ ಅದರ ಕೂದಲು. ಇದರಿಂದ ಅವುಗಳ ಅಗತ್ಯಕ್ಕೆ ತಕ್ಕಷ್ಟು ಕೂದಲನ್ನು ಬಿಟ್ಟು ಅವುಗಳನ್ನು ಟ್ರಿಮ್ ಮಾಡಿದರೆ ಸಾಕು. ಅವುಗಳ ಆರೋಗ್ಯ ಹಾಗೂ ಕೂದಲು ಉದುರುವ ಮಿತಿಯನ್ನು ಗಮನಿಸಿ ಹೇರ್ ಕಟ್ ಮಾಡಿಸಬೇಕು. ಮನೆಗಳಲ್ಲಿ ನಿತ್ಯ ಪ್ರಾಣಿಗಳ ಕೂದಲನ್ನು ಬ್ರಷ್ ಮಾಡದವರು ತಿಂಗಳಿಗೊಮ್ಮೆ ಹೇರ್ ಗ್ರೂಮಿಂಗ್ ಮಾಡಿಸುವುದು ಉತ್ತಮ.
– ಕಾವೇರಿ, ಸ್ಕೂಬಿ ಸ್ಕ್ರಬ್‌ನ ಮಾಲೀಕರು,
ದೂರವಾಣಿ: 99809 32454
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.