ಇದು ಸುಮಾರು 40 ವರ್ಷಗಳ ಹಿಂದೆ ನಮ್ಮ ಪದವಿ ಕಾಲೇಜಿನಲ್ಲಿ ನಡೆದ ಘಟನೆ. ನಮಗೆ ಪಾಠ ಮಾಡುತ್ತಿದ್ದ ಇಂಗ್ಲಿಷ್ ಲೆಕ್ಚರರ್ ಒಬ್ಬರು ಅತ್ಯಂತ ಮೇಧಾವಿ. ಒಳ್ಳೆ ಮಾತುಗಾರರು, ಶಿಸ್ತಾಗಿ ಟ್ರಿಮ್ ಆಗಿ ಉಡುಪು ಧರಿಸಿ ಬರುತ್ತಿದ್ದರು. ಅವರ ವಾಗ್ವೈಖರಿಯೂ ಹಾಗೆಯೇ ಇತ್ತು. ಹಸನ್ಮುಖಿ, ಚೆಲುವ, ಯುವಕ. ಅಷ್ಟೇ ಗರ್ವವೂ ಇತ್ತು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆಲ್ಲಾ ಅವರೆಂದರೆ ಅಚ್ಚುಮೆಚ್ಚು.
ನಮ್ಮೂರಿನ ಆಚೆಯಲ್ಲಿ ವರ್ಷಕ್ಕೊಮ್ಮೆ ವಸ್ತುಪ್ರದರ್ಶನ ನಡೆಯುತ್ತಿತ್ತು. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಹೆಸರಾಂತ ನಟರ ನಾಟಕಗಳೂ, ವಿದುಷಿಗಳ ಸಂಗೀತವೂ, ಸಾಹಿತಿಗಳ ಭಾಷಣಗಳೂ ಏರ್ಪಾಡಾಗಿರುತ್ತಿದ್ದವು. ಕಾಲೇಜು ಹುಡುಗ–ಹುಡುಗಿಯರು ಅಲ್ಲಿಗೆ ತಪ್ಪದೇ ಹಾಜರಾಗುತ್ತಿದ್ದುದು ಅಂದಿನ ಪರಿಪಾಠ.
ನಮ್ಮ ಲೆಕ್ಚರರ್ ಇನ್ನೂ ವಿವಾಹವಾಗಿರಲಿಲ್ಲ. ಹೀಗಾಗಿ ಚಿಕ್ಕಮನೆಯಲ್ಲಿ ಅವರ ತಾಯಿಯೊಡನೆ ವಾಸಮಾಡುತ್ತಿದ್ದರು. ಮಗ ಕಾಲೇಜಿಗೆ ಹೋದಾಗಿನಿಂದ ಮರಳುವ ತನಕ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಇದು ಆ ತಾಯಿ ಮನಸ್ಸಿಗೂ ಬೇಸರ ತಂದಿತ್ತು. ಒಂದು ದಿನ ಸಾಯಂಕಾಲ ಆಕೆ ಮಗನನ್ನು ತನ್ನನ್ನೂ ವಸ್ತುಪ್ರದರ್ಶನಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದರು. ಅದಕ್ಕೆ ಲೆಕ್ಚರರ್ ತಮಗೆಲ್ಲೋ ಬೇರೆ ಕಡೆ ಮೀಟಿಂಗ್ ಇರುವುದಾಗಿ ಹೇಳಿ ನೀಟಾಗಿ ಅಲಂಕರಿಸಿಕೊಂಡು ಮನೆಯಿಂದ ಹೊರಟರು. ಅವರು ಹೊರಟಿದ್ದು ವಸ್ತುಪ್ರದರ್ಶನಕ್ಕೇ ಆಗಿತ್ತು. ಆದರೆ ವಯಸ್ಸಾದ ತಾಯಿಯ ಜೊತೆಯಲ್ಲಿ ಹೋಗುವುದು ಅವರಿಗೆ ಇಷ್ಟವಿರಲಿಲ್ಲ.
ದಾರಿಯಲ್ಲಿ ಹೋಗುತ್ತಿದ್ದಾಗ ಕಾಲೇಜಿನ ಪ್ರಿನ್ಸಿಪಾಲರು ಸಿಕ್ಕರು. ತಮ್ಮ ಕಾರನ್ನು ನಿಲ್ಲಿಸಿ ಲೆಕ್ಚರರ್ ಅನ್ನು ಎಲ್ಲಿಗೆ ಹೋಗುತ್ತಿರುವಿರಿ ಎಂದು ಕೇಳಿದರು. ಅದಕ್ಕೆ ಅವರು ವಸ್ತುಪ್ರದರ್ಶನಕ್ಕೆ ಎಂದರು. ‘ಸರಿ, ನಾನೂ ಅಲ್ಲಿಗೇ ಹೋಗುತ್ತಿರುವುದು. ಬನ್ನಿ ಕುಳಿತುಕೊಳ್ಳಿ ’ ಎಂದು ಕಾರಿನ ಮುಂಬಾಗಿಲನ್ನು ತೆರೆದರು. ಪ್ರಿನ್ಸಿಪಾಲರ ಜೊತೆಯಲ್ಲೇ ಕುಳಿತುಕೊಂಡು ವಸ್ತುಪ್ರದರ್ಶನದ ಮಹಾದ್ವಾರದಲ್ಲಿ ಬಂದಿಳಿದಾಗ ಲೆಕ್ಚರರ್ ಬೀಗುತ್ತಿದ್ದರು. ಸ್ವರ್ಗ ಮೂರೇ ಗೇಣು ಎನ್ನುವಷ್ಟು ಸಂತೋಷ ಅವರ ಮುಖದಲ್ಲಿ ಕಾಣುತ್ತಿತ್ತು.
ಗುಂಪು ಗುಂಪಾಗಿ ನಾವೆಲ್ಲಾ ಕಾಲೇಜು ಹುಡುಗರೂ ಹೋಗುತ್ತಿದ್ದೆವು. ಹಾಗೆಯೇ ಇವರತ್ತಲೂ ದೃಷ್ಟಿ ಹಾಯಿಸುತ್ತಾ ನಡೆದೆವು. ಕಾಲೇಜು ವಿದ್ಯಾರ್ಥಿಗಳೆಲ್ಲಾ ತನ್ನತ್ತಲೇ ನೋಡುತ್ತಿರುವುದನ್ನು ಗಮನಿಸಿ ಅವರು ಕಾರಿನಿಂದ ನಿಧಾನವಾಗಿ ಇಳಿದರು. ಇಂತಹ ಸಂದರ್ಭವನ್ನು ಒದಗಿಸಿಕೊಟ್ಟ ಪ್ರಿನ್ಸಿಪಾಲರಿಗೆ ಮನಸ್ಸಿನಲ್ಲೇ ವಂದನೆ ಅರ್ಪಿಸಿದರು.
ವಸ್ತುಪ್ರದರ್ಶನದೊಳಗೆ ಪ್ರಿನ್ಸಿಪಾಲರನ್ನು ಒಂದು ಘಳಿಗೆಯೂ ಬಿಟ್ಟಿರದೆ ಅವರೊಂದಿಗೇ ಸುತ್ತಾಡಬೇಕು ಎಂದು ಮನಸ್ಸಿನಲ್ಲೇ ಆಸೆ ಮಾಡಿಕೊಂಡಿದ್ದರು ಎನಿಸುತ್ತದೆ. ಆದರೆ ಅವರ ಲೆಕ್ಕಾಚಾರ ಮರುಕ್ಷಣವೇ ತಲೆಕೆಳಗಾಗಿತ್ತು.
ತಕ್ಷಣವೇ ಪ್ರಿನ್ಸಿಪಾಲರು ಕಾರಿನಿಂದಿಳಿಯದೆ, ‘ನೋಡಿ ಮಿ. ರಘು, ನಿಮ್ಮಿಂದ ಒಂದು ಸಹಾಯವಾಗಬೇಕಲ್ಲಾ’ ಎಂದರು. ಅದಕ್ಕೆ ಲೆಕ್ಚರರ್ ‘ಹೇಳಿ ಸರ್, ಖಂಡಿತಾ ಮಾಡುತ್ತೇನೆ’ ಎಂದರು. ಪ್ರಿನ್ಸಿಪಾಲರು ‘ನೋಡಿ ನೀವು ನನ್ನ ತಮ್ಮ ಇದ್ದಹಾಗೆ. ನಮ್ಮ ತಾಯಿಗೆ ಮನೆಯಲ್ಲಿ ಒಬ್ಬರೇ ಇದ್ದು ಬೇಸರವಾಗಿದೆ. ಅವರು ವಸ್ತುಪ್ರದರ್ಶನ ನೋಡಬೇಕಂತೆ. ಸ್ವಲ್ಪ ಅವರನ್ನು ಸುತ್ತಾಡಿಸಿ ಇಲ್ಲಿಯೇ ನಿಂತಿರಿ. ನಾನು ಕ್ಲಬ್ಬಿಗೆ ಟೆನ್ನಿಸ್ ಆಡಲು ಹೋಗಬೇಕು. ನನಗೆ ವಸ್ತುಪ್ರದರ್ಶನದಲ್ಲಿ ಸಮಯ ಕಳೆಯಲು ಇಷ್ಟವಿಲ್ಲ. ನಾನು 8 ಗಂಟೆ ಸುಮಾರಿಗೆ ಬಂದು ವಾಪಸ್ಸು ಕರೆದುಕೊಂಡು ಹೋಗುತ್ತೇನೆ. ಏನೂ ತಿಳಿದುಕೊಳ್ಳಬೇಡಿ ರಘು’ ಎಂದು ಹೇಳಿದರು.
ಹಿಂದಿನ ಸೀಟಿನಲ್ಲಿದ್ದ ವೃದ್ಧ ತಾಯಿಯನ್ನು ಇವರ ವಶಕ್ಕೆ ಬಿಟ್ಟು ಪ್ರಿನ್ಸಿಪಾಲರು ಕಾರು ಓಡಿಸಿಕೊಂಡು ಹೊರಟೇ ಹೋದರು. ಅಂದದ ಲೆಕ್ಚರರ್ ಮುಖದಲ್ಲಿದ್ದ ನಗು ಥಟ್ಟನೆ ಮಾಯವಾದದ್ದನ್ನು ನಾವುಗಳೂ ನೋಡಿ ನಕ್ಕಿದ್ದೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.