ADVERTISEMENT

ಮೈಸೂರು ಬಾನಿಯ ಪರಿಮಳ

ಪ್ರೊ.ಮೈ.ವಿ.ಸು
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಭಾರತೀಯ ಸಂಗೀತ ವಾದ್ಯಗಳಲ್ಲಿ ವೀಣೆಗೆ ಗಣ್ಯ ಸ್ಥಾನವಿದೆ. ವಿದ್ಯಾಧಿದೇವತೆ ಸರಸ್ವತಿಯೇ ವೀಣಾಪಾಣಿ. ವೇದಗಳ ಕಾಲದಿಂದಲೂ ಬಳಕೆಯಲ್ಲಿರುವ ವೀಣೆ, ಪ್ರಾಚೀನ ಕಾಲದಿಂದಲೂ ಯಜ್ಞ ಯಾಗಾದಿಗಳಲ್ಲೂ ನುಡಿಸುತ್ತಿದ್ದರು.

ರಾಮಾಯಣದಲ್ಲೂ ಬೌದ್ಧ ಜಾತಕದಲ್ಲೂ ವೀಣೆಯ ಪ್ರಸ್ತಾಪವಿದೆ. ಕಾಳಿದಾಸ, ಭಾಸ, ಬಸವಣ್ಣ, ಶಾಙ್ಞದೇವ, ನಿಜಗುಣ ಶಿವಯೋಗಿ, ರಾಮಾಮಾತ್ಯ, ರತ್ನಾಕರವರ್ಣಿ, ಲಕ್ಷ್ಮೀಶ, ಅಹೋಬಲ ಮುಂತಾದವರ ಬರಹಗಳಲ್ಲಿನ ಉಲ್ಲೇಖ ವೀಣೆಯ ವಿಕಾಸವನ್ನು ಬಿಂಬಿಸುತ್ತದೆ. ಗೋವಿಂದ ದೀಕ್ಷಿತರು ಮತ್ತು ಅವರ ಮಗ ವೆಂಕಟಮುಖಿ ಅವರ ಪ್ರತಿಭಾ ಮೂಸೆಯಿಂದ ಆವಿರ್ಭವಿಸಿದುದೇ ಇಂದಿನ ವೀಣೆ.

ಸರ್ವರಾಗ ಮೇಳ ವಾದ್ಯವಾದ ವೀಣೆ ಪ್ರಾದೇಶಿಕ ಸ್ವಾದವನ್ನು ಮೇಳೈಸಿಕೊಂಡು ಭಿನ್ನ ಬಾನಿಗಳು ರೂಪುಗೊಂಡಿವೆ. ಆ ನಾಲ್ಕು ಬಾನಿಗಳಲ್ಲಿ `ಮೈಸೂರು ಬಾನಿ~ ಪ್ರಮುಖವಾದುದು. `ವೀಣೆಯ ಬೆಡಗದು ಮೈಸೂರು~ ಎಂದು ಬಿ.ಎಂ.ಶ್ರೀ. ಕರೆದ ಮೈಸೂರು ರಾಜ್ಯ ಹಿಂದಿನಿಂದಲೂ ವೀಣಾ ವಾದನಕ್ಕೆ ಪ್ರಸಿದ್ಧವಾದುದು.

ಮೈಸೂರು ಬಾನಿಯ ಪ್ರಮುಖ ವೈಣಿಕರಲ್ಲಿ ವೆಂಕಟಗಿರಿಯಪ್ಪನವರೂ ಒಬ್ಬರು. ಪ್ರಾರಂಭದಲ್ಲಿ ಶಿಷ್ಯರೂ ಮುಂದೆ ಅವರ ಪ್ರಶಿಷ್ಯರೂ ಆದ ರಾಜಲಕ್ಷ್ಮೀ ತಿರುನಾರಾಯಣನ್ ಇಂದಿನ ಹಿರಿಯ ವೈಣಿಕರು. ಪ್ರೊ.ಆರ್.ಎನ್. ದೊರೆಸ್ವಾಮಿ ಅವರಲ್ಲಿ ಶಿಕ್ಷಣ ಪಡೆದು, ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾದ ರಾಜಲಕ್ಷ್ಮಿಯವರು ಅನೇಕರಿಗೆ ಶಿಕ್ಷಣ ನೀಡಿ, `ಮೈಸೂರು ಬಾನಿ~ ಅವ್ಯಾಹತವಾಗಿ ಮುಂದುವರೆಯುವಂತೆ ಶ್ರಮಿಸಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಕರ್ನಾಟಕ ಗಾನಕಲಾ ಪರಿಷತ್ತಿನಿಂದ `ಗಾನಕಲಾಭೂಷಣ~ ಬಿರುದಿಗೂ ಭಾಜನರಾಗಿದ್ದಾರೆ.

ಮೊನ್ನೆ ಭಾನುವಾರ ತ್ಯಾಗರಾಜ ಗಾನಸಭೆಯ ಆಶ್ರಯದಲ್ಲಿ ನಡೆದ ರಾಜಲಕ್ಷ್ಮೀ ತಿರುನಾರಾಯಣನ್ ಅವರ ವೀಣಾವಾದನ ಕಛೇರಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಗದಿತ ಅನುದಾನ ಯೋಜನೆಯ ಅಡಿ ಹಾಗೂ ವಿಮಲಾ ಕೆ. ಮೂರ್ತಿ ಅವರ ಪ್ರಾಯೋಜಕತ್ವದಲ್ಲಿ ನಡೆಯಿತು.
 
ಪ್ರಾರಂಭದಿಂದ ಮಂಗಳದವರಿಗೂ ಉತ್ತಮ ರಾಗ ಕೃತಿಗಳನ್ನು ಆಯ್ದ ರಾಜಲಕ್ಷ್ಮೀ, ಭಿನ್ನ ವಾಗ್ಗೇಯಕಾರರ 12 ರಚನೆಗಳನ್ನು ಸಾದರ ಪಡಿಸಿದರು. ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು, ಪುರಂದರದಾಸರು, ಕಮಲೇಶ ವಿಠಲ ಹಾಗೂ ವೀಣೆ ಶೇಷಣ್ಣನವರ ರಚನೆಗಳನ್ನು ಭಿನ್ನ ರಾಗಗಳಲ್ಲಿ ನುಡಿಸಿದರು.

ಆದರೆ ವಿಸ್ತಾರಕ್ಕೆ ಕಾಂಬೋಧಿ ರಾಗವನ್ನೇ ಆಯ್ದರು. ನಾಲ್ಕಾರು ಕೃತಿಗಳಿಂದ ಕಛೇರಿಗೆ ಕಾವು ಬಂದಾಗ, ಪ್ರಧಾನ ರಾಗಕ್ಕೆ ಸರಿದುದು ಉಚಿತವಾಗಿತ್ತು. ಪ್ರಾಚೀನ ರಾಗವಾದ ಕಾಂಬೋಧಿಯನ್ನು ಆಲಾಪನೆ-ತಾನಗಳಿಂದ ವಿಸ್ತಾರಕ್ಕೆ ಆರಿಸುವುದು ಹಳೆ ಪದ್ಧತಿಯೇ. ಕರ್ನಾಟಕ ಸಂಗೀತದ ಘನವಾದ ರಾಗಗಳಲ್ಲಿ ಒಂದಾದ ಕಾಂಬೋಧಿಯು, ಕಲಾವಿದ-ಕೇಳುಗರು ಇಬ್ಬರಿಗೂ ಪ್ರಿಯವಾದ ರಾಗ.

ರಾಜಲಕ್ಷ್ಮಿಯವರು ಈ ರಾಗದ ಆಲಾಪನೆಯಲ್ಲಿ ಜೀವ ಸ್ವರಗಳನ್ನು ಸ್ಪರ್ಶಿಸುತ್ತಾ, ಕ್ರಮೇಣ ತಾರಸ್ಥಾಯಿಗೆ ತಲುಪಿ, ರಾಗದ ಉತ್ತಮ ಚಿತ್ರ ಬಿಡಿಸಿದರು.
ವೀಣೆಯಲ್ಲಿ `ತಾನ~ವು ಪ್ರಸಿದ್ಧವಾದುದು. ಭಿನ್ನ ಸ್ವರಪುಂಜಗಳಿಂದ, ತಾಳದ ತಂತಿಗಳನ್ನು ನಿಯತವಾಗಿ ಮೀಟುತ್ತಾ, ಒಂದು ಆಹ್ಲಾದಕರ ನಾದಗುಚ್ಛವನ್ನು ವೈಣಿಕರು ಸಷ್ಟಿಸುತ್ತಾರೆ. ನಾರದೀಯ ಶಿಕ್ಷಾ, ನಾಟ್ಯಶಾಸ್ತ್ರ, ದತ್ತಿಲಂ, ಬಹದ್ದೇಶಿ, ಸಂಗೀತ ರತ್ನಾಕರ, ಸಂಗೀತ ಸುಧಾ, ಚತುರ್ದಂಡಿ ಪ್ರಕಾಶಿಕೆ ಮುಂತಾದ ಗ್ರಂಥಗಳಲ್ಲಿ ತಾನವನ್ನು ವಿವರವಾಗಿ ವಿಶ್ಲೇಷಿಸಲಾಗಿದೆ.
 
ಭ್ರಮರ ತಾನ, ಮಯೂರ ತಾನ, ಅಶ್ವತಾನ, ಗಜತಾನ, ಹಂಸ ತಾನಗಳನ್ನು ಮೀಟಿನ ವೈವಿಧ್ಯತೆಗಳಿಂದ ಮೂಡಿಸಬಹುದು. ಹಿಂದೆ ಚಿಟ್ಟೆತಾನಗಳನ್ನು ತ್ರಿಕಾಲದಲ್ಲಿ ಅಭ್ಯಾಸ ಮಾಡಿ ಕರಗತ ಮಾಡಿಕೊಳ್ಳುತ್ತಿದ್ದರು. ತಿಶ್ರ, ಚತುಶ್ರ, ಖಂಡ, ಮಿಶ್ರ, ಸಂಕೀರ್ಣ ನಡೆಗಳಲ್ಲಿ ಕರ್ತರಿ, ಒಟ್ಟು, ಸಾದಾ, ಝಲರಾ ಮೀಟುಗಳ ಮೂಲಕ ತಾನದ ವರ್ಣರಂಜಿತ ಲೋಕವನ್ನೇ ವೈಣಿಕರು ಸೃಷ್ಟಿಸುತ್ತಿದ್ದರು.
 
ರಾಜಲಕ್ಷ್ಮೀ ತಿರುನಾರಾಯಣನ್ ಅವರು ತಮ್ಮ ಹದವಾದ ಮೀಟುಗಳಿಂದ ತಾನವನ್ನು ಪ್ರಖರವಾಗಿ ನುಡಿಸಿ, ಕೀರ್ತನೆಗೆ ಭದ್ರ ಹಿನ್ನೆಲೆಯನ್ನು ಸೃಷ್ಟಿಸಿದರು. ರಾಗಮಾಲಿಕೆಯ ಮೇಲೋಗರವನ್ನೂ ಬಡಿಸಿದರು. ಪಂಚರಾಗಗಳ ವರ್ಣರಂಜಿತ ನಾದ ಸೌರಭ ವಿಶೇಷ ಸ್ವಾದವನ್ನು ಉಣಬಡಿಸಿತು. ರಂಜನಿ, ಜಯಂತಶ್ರೀ, ಕನ್ನಡ, ಹಂಸನಾದ, ದೇಶ್ ರಾಗಗಳು ತಾನದ ವೈಶಿಷ್ಟ್ಯಪೂರ್ಣ ಮೀಟುಗಳಿಂದ ಹೊಮ್ಮುತ್ತಾ ಸಾಗಿದ ಬಗೆಯಲ್ಲೇ ಒಂದು ಗಾಂಭೀರ್ಯ ಇತ್ತು.

ತ್ಯಾಗರಾಜರ `ಓರಂಗಶಾಯಿ~ ಶ್ರೀರಂಗ ಪಂಚರತ್ನದಲ್ಲಿ ಒಂದು. ತ್ಯಾಗರಾಜರು ಶ್ರೀರಂಗಕ್ಕೆ ಭೇಟಿ ಇತ್ತಾಗ ರಚಿಸಿದ ರಚನೆ ಇದು. ಕರ್ನಾಟಕ ಸಂಗೀತದ ಪಕ್ವವಾದ, ಪ್ರೌಢ ರಚನೆಯೂ ಹೌದು. ವಿಳಂಬದಲ್ಲಿ ಪ್ರಾರಂಭಿಸಿದ ಸ್ವರಪ್ರಸ್ತಾರ ಕ್ರಮೇಣ ವೇಗ ಪಡೆದು, ರಾಗಕ್ಕೆ ಪೂರಕವಾಗಿ ನಿರೂಪಿಸಿದರು. ಆ ಮೊದಲು `ಶ್ರೀಮದಾದಿ ತ್ಯಾಗರಾಜ ಗುರುವರಂ~ ಸಹ ಆಹ್ಲಾದಕರವಾಗಿ ಹೊಮ್ಮಿತು.

ಪ್ರಸಿದ್ಧ ದೇವರನಾಮ `ಜಗದೋದ್ಧಾರನಾ ಆಡಿಸಿದಳೆಶೋದೆ~ ವಿನಿಕೆ ಮಾಡುತ್ತಿದ್ದಾಗ `ವೀಣೆ ಹಾಡುತ್ತಿದೆಯೇನೋ~ ಎನ್ನಿಸುತ್ತಿತ್ತು! ಇನ್ನೊಂದು ದೇವರನಾಮ `ತುಂಗಾ ತೀರವಿಹಾರಂ~ ರಾಘವೇಂದ್ರ ಸ್ವಾಮಿಗಳ ಮೇಲಿನ ಜನಪ್ರಿಯ ರಚನೆ. ವೀಣೆ ಶೇಷಣ್ಣನವರ ದರ್ಬಾರಿ ಕಾನಡ ತಿಲ್ಲಾನವು ಕಛೇರಿಗೆ ಆಹ್ಲಾದಕರ ಮುಕ್ತಾಯ ದೊರಕುವಂತೆ ಮಾಡಿತು.

ಸುನಾದ, ಸದಭಿರುಚಿಯ ನಿರೂಪಣೆಯ ಮೈಸೂರು ಬಾನಿಯ ಉತ್ತಮಾಂಶಗಳನ್ನು ಒಳಗೊಂಡ ಒಂದು ದಿವಿನಾದ ವೀಣೆ ಕೇಳಿದ ಸಂತೃಪ್ತಿ ಕೇಳುಗರಿಗೆ ಉಂಟಾಯಿತು.
ಹಿರಿಯ ಲಯವಾದ್ಯಗಾರ ಎಂ.ಎ. ಕೃಷ್ಣಮೂರ್ತಿ ಮೃದಂಗವನ್ನು ಹಿತಮಿತವಾಗಿ ನುಡಿಸುತ್ತಾ, ವೀಣೆಗೆ ಒಳ್ಳೆಯ ಪೋಷಣೆ ನೀಡಿದರು. ಜಿ.ಎಸ್. ರಾಮಾನುಜಂ ಘಟದಲ್ಲಿ ಮೃದಂಗವನ್ನು ಅನುಸರಿಸುತ್ತಾ, ಕಛೇರಿಯ ಯಶಸ್ಸಿನಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.