ADVERTISEMENT

‘ಯಾಕಮ್ಮಿ’ ಹಾಡು ವೈರಲ್ ಆಯ್ತು

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST
‘ಯಾಕಮ್ಮಿ’ ಹಾಡು ವೈರಲ್ ಆಯ್ತು
‘ಯಾಕಮ್ಮಿ’ ಹಾಡು ವೈರಲ್ ಆಯ್ತು   

‘ಕನ್ನಡಕ್ಕಾಗಿ ಒಂದನ್ನು ಒತ್ತು’ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲವಾದರೂ ಅದರಲ್ಲಿ ಹಾಸ್ಯನಟ ಚಿಕ್ಕಣ್ಣ ಅವರ ಮೇಲೆ ಚಿತ್ರಿಸಲಾಗಿರುವ ‘ಯಾಕಮ್ಮಿ’ ಹಾಡು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರ ಮಾಡಿರುವ ನಟ ಅವಿನಾಶ್‌ ಮತ್ತು ಅವರ ಪತ್ನಿ ಪ್ರಿಯಾ ಇಬ್ಬರೂ ಜತೆಗೂಡಿ ಹಾಡಿರುವ ‘ಎಲ್ಲಾ ಹಳ್ಳಿ ಲವ್ ಸ್ಟೋರಿಲೂ ಹಿಂಗೆ ಯಾಕಮ್ಮಿ’ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ‘ಸಿನಿಮಾದ ಪ್ರಮೋಷನ್‌ಗಾಗಿ ಇಬ್ಬರೂ ಜತೆಗೂಡಿ ಹಾಡಿರುವ ಈ ಹಾಡು ಇಷ್ಟೊಂದು ಜನಪ್ರಿಯವಾಗುತ್ತಿದೆ ಎಂದೆಣಿಸಿರಲಿಲ್ಲ’ ಎನ್ನುತ್ತಾರೆ ಅವಿನಾಶ್.

‘ಹಾಡು ಕೇಳಲು ಚೆನ್ನಾಗಿದೆ. ಜಾಸ್ ಸಂಗೀತದಂತಿದೆ. ಹಾಗಾಗಿ, ಈ ಹಾಡನ್ನು ಹಾಡಬೇಕೆನಿಸಿತು. ಇಬ್ಬರಿಗೂ ಇದು ಇಷ್ಟದ ಹಾಡು. ತುಂಬಾ ದಿನಗಳಿಂದ ಹಾಡಬೇಕು ಅಂತ ಅಂದುಕೊಳ್ಳುತ್ತಿದ್ದೆವು. ಈಗ ‘ಯಾಕಮ್ಮಿ’ ಮೂಲಕ ಇಬ್ಬರ ಆಸೆಯೂ ನೆರವೇರಿತು. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಂತೂ ತುಂಬಾ ಚೆನ್ನಾಗಿದೆ. ಈಗ ಹುಡುಗರಷ್ಟೇ ಅಲ್ಲ ಹುಡುಗಿಯರೂ ಭಗ್ನಪ್ರೇಮಿಗಳೇ. ಅವರಿಗೆಲ್ಲಾ ಇದು ತುಂಬಾ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಮಾಮೂಲಿ ಸಿನಿಮಾ ಹಾಡುಗಳಂತೆ ಈ ಹಾಡು ಇಲ್ಲ. ವಿಭಿನ್ನ ಪ್ರಯೋಗದಲ್ಲಿ ಈ ಹಾಡು ಮೂಡಿ ಬಂದಿದೆ. ಚಿಕ್ಕಣ್ಣನ ಮೇಲೆ ಈ ಹಾಡು ಚಿತ್ರೀಕರಣವಾಗಿದ್ದು, ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಗಾಯಕ ವಿಜಯಪ್ರಕಾಶ್ ಹಾಡಿದ್ದಾರೆ. ಅವರಷ್ಟು ಚೆನ್ನಾಗಿ ನಾನು ಹಾಡಿಲ್ಲ. ಆದರೂ ಪ್ರಯತ್ನಿಸಿದ್ದೇನೆ’ ಎಂದು ವಿವರಿಸುತ್ತಾರೆ ಅವರು.

ADVERTISEMENT

ನಾನು ಪದವಿಯಲ್ಲಿ ಓದಿದ್ದು ಪತ್ರಿಕೋದ್ಯಮ ಆದರೆ, ಪತ್ರಕರ್ತ ಆಗಿರಲಿಲ್ಲ. ಆದರೆ, ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾದಲ್ಲಿ ಪತ್ರಕರ್ತನಾಗುವ ನನ್ನ ಆಸೆ ಈಡೇರಿದೆ. ಜನಸಾಮಾನ್ಯರು ತುಂಬಾ ಸುಲಭವಾಗಿ ಕನೆಕ್ಟ್ ಆಗುವಂತಹ ಪಾತ್ರಗಳೇ ಇಲ್ಲಿವೆ.  ಓದುವಾಗಲೇ ರಂಗಭೂಮಿಯ ಮೋಹಕ್ಕೆ ಬಿದ್ದವನು ನಾನು. ಮುಂದೆ ಈ ಮೋಹವೇ ನನ್ನನ್ನು ಪ್ರಿಯಾಳನ್ನು ಒಂದುಗೂಡಿಸಿತು. ತಮಾಷೆಯೆಂದರೆ ನಿಜಜೀವನದಲ್ಲಿ ಸನ್ಯಾಸಿ ಆಗಬೇಕೆಂದುಕೊಂಡಿದ್ದೆ. ಆದರೆ,‘ದಯವಿಟ್ಟು ಗಮನಿಸಿ’ ಸಿನಿಮಾದಲ್ಲಿ ಸನ್ಯಾಸಿ ಪಾತ್ರ ಮಾಡಿ ಆಸೆ ತೀರಿಸಿಕೊಂಡೆ. ನಾನು ನಿರ್ದೇಶಿಸುತ್ತಿದ್ದ ‘ನನ್ನೊಳು ನೀ, ನಿನ್ನೊಳು ನಾ’ ನಾಟಕ ಮುಗಿಯುವುದರೊಳಗೆ ನಾನು ಪ್ರಿಯಾ ಮದುವೆಯಾದೆವು! ಇದು ಸಿಂಪಲ್ ಆಗಿ ನಮ್ಮ ಒನ್ ಲೈನ್ ಲವ್ ಸ್ಟೋರಿ! ಎನ್ನುತ್ತಾರೆ ಅವರು.

‘ಸೈಡ್‌ವಿಂಗ್’ ಅನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಅದರಲ್ಲಿ ನನ್ನ ಹೆಂಡತಿ ಪ್ರಿಯಾ ನಾಯಕಿ. ಹೆಂಡತಿ ಅಂತ ನಾಯಕಿ ಮಾಡಿದ್ದಲ್ಲ. ಪಾತ್ರಕ್ಕೆ ತಕ್ಕಂತೆ ಅವಳಿದ್ದಳು ಅದಕ್ಕೆ. ಅವಳಿಗೂ ನನಗೂ ಅರ್ಥೈಸುವಿಕೆ ಚೆನ್ನಾಗಿರುವುದರಿಂದ ಸಿನಿಮಾ ನಿರ್ದೇಶಿಸಲು ಏನೂ ಸಮಸ್ಯೆಯಿಲ್ಲ. ಇನ್ನೂ ಬಿಡುಗಡೆಯಾಗಬೇಕಿರುವ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇದೆ. ನಿರ್ದೇಶಕ ಕುಶಾಲ ಗೌಡ ಅವರಿಂದ ಹಿಡಿದು ಬಹುತೇಕರು ಈ ಸಿನಿಮಾದಲ್ಲಿ ಹೊಸಬರೇ ಇದ್ದಾರೆ. ಕೃಷಿ ತಾಪಂಡ ಈ ಸಿನಿಮಾ ನಾಯಕಿ. ಇದು ಯಾವ ರೀತಿಯ ಸಿನಿಮಾ ಎಂಬುದನ್ನು ಪ್ರೇಕ್ಷಕರೇ ನೋಡಿ ತೀರ್ಮಾನಿಸಬೇಕು. ಒಟ್ಟಿನಲ್ಲಿ ಸಿನಿಮಾ ನೋಡಿ ಪ್ರೇಕ್ಷಕರು ಖುಷಿ ಪಡಬೇಕು ಎನ್ನುವುದಷ್ಟೇ ನಮ್ಮ ತಂಡದ ಆಶಯ’ ಎಂದು ಹೇಳುತ್ತಾರೆ ಅವಿನಾಶ್.

‘ಯಾಕಮ್ಮಿ’ ಹಾಡನ್ನು ಯುಟ್ಯೂಬ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.