ರಂಗಭೂಮಿಗೆ ಬರದಿದ್ದರೆ ಏನಾಗುತ್ತಿದ್ದೆನೋ ಗೊತ್ತಿಲ್ಲ. ನನ್ನ ಬದುಕು–ವ್ಯಕ್ತಿತ್ವಗಳನ್ನು ರೂಪಿಸಿದ್ದು ರಂಗಭೂಮಿ. ವೇದಿಕೆ, ನಟನೆ ಎಲ್ಲ ಬಿಡಿ, ಇಂದು ನಾನು ನಾಲ್ಕು ಜನರ ಮುಂದೆ ನಿಂತು ವಿಶ್ವಾಸದಿಂದ ಮಾತನಾಡುತ್ತೇನೆ ಎಂದರೆ ಅದಕ್ಕೆ ಕಾರಣ ರಂಗಭೂಮಿ’ ಹೀಗೆ ತಮ್ಮ ಬದುಕಿನ ಎಲ್ಲ ಯಶಸ್ಸುಗಳನ್ನೂ ರಂಗಭೂಮಿಗೆ ಅರ್ಪಿಸುತ್ತಾರೆ ನಟ ಕೀರ್ತಿಭಾನು.
ಕೀರ್ತಿಭಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಅವರ ಅಮ್ಮನೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಬಾಲ್ಯದಲ್ಲಿಯೇ ರಂಗಮಂಚದತ್ತ ಕುತೂಹಲದ ಎಳೆಯನ್ನು ಬೆಳೆಸಿಕೊಂಡಿದ್ದ ಅವರಿಗೆ ಮೂರನೇ ತರಗತಿಯಲ್ಲಿಯದ್ದಾಗ ನಟಿಸುವ ಅವಕಾಶವೂ ಸಿಕ್ಕಿತು.
ಅಲ್ಲಿಂದ ಶುರುವಾದ ನಟನೆಯ ನಂಟು ಕಡಿತಗೊಳ್ಳುವ ಪ್ರಸಂಗ ಮತ್ತೆಂದೂ ಎದುರಾಗಲಿಲ್ಲ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಕೀರ್ತಿಭಾನು ಅವರ ರಂಗಾಸಕ್ತಿಗೆ ನೀರೆರೆದಿದ್ದು ಚಿತ್ರಾಶೇಖರ್‌್ ಆರಂಭಿಸಿದ ‘ಅಭಿನವ ಕಲಾವೃಂದ’. ನಂತರ ಜಯನಗರದ ಎಂಇಎಸ್ ಹೈಸ್ಕೂಲ್‌ನಲ್ಲಿ ಕೂಡ ಅವರಿಗೆ ಪೂರಕವಾದ ವಾತಾವರಣ ಇತ್ತು.
‘ಎಂಇಎಸ್ ಹೈಸ್ಕೂಲಿನಲ್ಲಿ ನಮಗೆ ಸಿಕ್ಕ ಪ್ರೋತ್ಸಾಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿ ಮಾಧವರಾವ್ ಮತ್ತು ಜಿ.ಎಸ್.ರಾಮರಾವ್ ನಮಗೆ ಮೇಷ್ಟ್ರಾಗಿದ್ದರು. ತುಂಬಾ ಪ್ರೋತ್ಸಾಹ ಕೊಟ್ಟರು’ ಎಂದು ಕೀರ್ತಿ ಸ್ಮರಿಸಿಕೊಳ್ಳುತ್ತಾರೆ.
ಮುಂದೆ ಪಿಯುಸಿಯಲ್ಲಿದ್ದಾಗ ಎಂಇಎಸ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ 1988ರಲ್ಲಿ ‘ಸಂಚಯ’ ಎಂಬ ರಂಗತಂಡ ಕಟ್ಟಿಕೊಂಡರು. ಈ ತಂಡ ಕೀರ್ತಿ ಭಾನು ಅವರ ರಂಗಪ್ರೀತಿಗೊಂದು ನಿರ್ದಿಷ್ಟ ದೆಸೆ ನೀಡಿತು.
ಕಳೆದ ಇಪ್ಪತ್ತೆಂಟು ವರ್ಷಗಳಲ್ಲಿ ಸಂಚಯದಲ್ಲಿ ಮುನ್ನೂರಕ್ಕೂ ಅಧಿಕ ಕಲಾವಿದರು ‘ಸಂಚಯ’ ಭಾಗವಾಗಿದ್ದಾರೆ. ‘ಮಳೆ ನಿಲ್ಲುವವರೆಗೆ’ ಸಂಚಯದ ಮೊದಲ ನಾಟಕ. ಇದರಲ್ಲಿಯೂ ಕೀರ್ತಿ ನಟಿಸಿದ್ದರು.
ಸಂಚಯ ತಂಡದ ಸದಸ್ಯರಾದರೂ ಅವರು ‘ವೇದಿಕೆ’ ತಂಡದ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಅವರು ಅಭಿನಯಿಸಿದ ನಾಟಕ ಐವತ್ತರ ಗಡಿ ದಾಟಿದೆ. ನಲ್ವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಕಾಡೆಮಿಕ್ ಆಗಿ ರಂಗ ತರಬೇತಿ ಪಡೆದುಕೊಂಡಿಲ್ಲ. ಆದರೆ ರಂಗಭೂಮಿ ಕುರಿತ ಹಲವು ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಹಲವಾರು ಸಮರ್ಥ ನಿರ್ದೇಶಕರ ಜತೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದರಿಂದ ನನಗೆ ರಂಗಭೂಮಿಯ ಕುರಿತು ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬುದು ಅವರ ವಿನಯದ ಮಾತು.
‘ಇದು ನನ್ನ ಸೌಭಾಗ್ಯ. ಸುರೇಶ ಆನಗಳ್ಳಿ, ಆರ್.ನಾಗೇಶ್, ಇಕ್ಬಾಲ್ ಅಹ್ಮದ್, ಜೋಸೆಫ್, ಸಿ.ಆರ್. ಸಿಂಹ, ಗಣೇಶ ಶೆಣೈ ಹೀಗೆ ಹಲವಾರು ಘಟಾನುಘಟಿ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ರಂಗಭೂಮಿಯ ಬಗ್ಗೆ ಅಕಾಡೆಮಿಕ್ ಕಲಿಕೆಗಿಂತ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು’ ಎಂದು ಅವರು ತಮ್ಮ ರಂಗ ಗುರುಗಳನ್ನು ನೆನಪಿಸಿಕೊಳ್ಳುತ್ತಾರೆ.
ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಕಂಪೆನಿಯೊಂದರ ಸಿಇಓ ಆಗಿರುವ ಕೀರ್ತಿಭಾನು ಅವರಿಗೆ ತಮ್ಮ ವ್ಯವಹಾರದಲ್ಲಿಯೂ ರಂಗಭೂಮಿಯ ಅನುಭವಗಳ ಸಾಕಷ್ಟು ನೆರವಾಗಿವೆ.
ಹಲವಾರು ಪಾತ್ರಗಳಲ್ಲಿ ರಂಗದ ಮೇಲೆ ಮಿಂಚಿದ್ದರೂ ಸ್ವತಃ ಅವರಿಗೆ ಸವಾಲು ಅನಿಸಿದ ಮತ್ತು ನಿರ್ವಹಿಸಿದ ಮೇಲೂ ಸಾಕಷ್ಟು ಖುಷಿ ನೀಡಿದ ಪಾತ್ರ ಪ್ರಸನ್ನ ಅವರ ‘ತದ್ರೂಪಿ’ಯಲ್ಲಿನ ಜನರಲ್ ಪೊಪಟ್ ಪಾತ್ರ.
‘ಆ ನಾಟಕ ತುರ್ತುಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬರೆದಿರುವುದು. ಆದರೆ ಇಂದಿಗೂ ಅದು ತುಂಬ ಪ್ರಸ್ತುತ ಎನಿಸುತ್ತದೆ. ಸರ್ವಾಧಿಕಾರಿ ಧೋರಣೆಯ ಅಪಾಯಗಳು, ಕುರ್ಚಿಗಾಗಿ ನಡೆಯುವ ಕಾದಾಟ ಎಲ್ಲವೂ ಆ ನಾಟಕದಲ್ಲಿವೆ. ಅದನ್ನು ಜೋಸೆಫ್ ನಿರ್ದೇಶಿಸಿದ್ದರು. ಈ ನಾಟಕದ ಪಾತ್ರದಲ್ಲಿ ಅರ್ಧ ನಾಟಕವನ್ನು ನನ್ನ ನೈಜ ಧ್ವನಿಗಿಂತ ಬೇರೆ ಧ್ವನಿಯಲ್ಲಿ ಮಾತನಾಡಬೇಕಿತ್ತು. ಅದು ನನಗೆ ಸವಾಲು ಅನಿಸಿತ್ತು’ ಎಂದು ಅವರು ವಿವರಿಸುತ್ತಾರೆ.
ಅಲ್ಲದೇ ಕಿರಣ್ ವಟಿ ನಿರ್ದೇಶನದ ‘ಶ್ರದ್ಧಾ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು’ ನಾಟಕದ ಪಾತ್ರವೂ ಅವರಿಗೆ ಸಾಕಷ್ಟು ತೃಪ್ತಿ ನೀಡಿದೆ. ಈ ನಾಟಕದ ಎರಡನೇ ಭಾಗ ‘ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು’ದಲ್ಲಿ ಐದು ಪಾತ್ರಗಳನ್ನು ಅವರೊಬ್ಬರೇ ನಿರ್ವಹಿಸಿದ್ದಾರೆ.
ರಂಗಭೂಮಿಯನ್ನು ಇನ್ನಿಲ್ಲದಂತೆ ಪ್ರೀತಿಸುವ ಕೀರ್ತಿ ಅಪರೂಪಕ್ಕೆ ಕಿರುತೆರೆ, ಸಿನಿಮಾ ಲೋಕದಲ್ಲಿ ಇಣುಕು ಹಾಕಿದ್ದೂ ಉಂಟು. ಅವರು ಮೊದಲು ಕಿರುತೆರೆ ಲೋಕವನ್ನು ಪ್ರವೇಶಿಸಿದ್ದು ‘ಗೋಧೂಳಿ’ ಧಾರಾವಾಹಿಯ ಮೂಲಕ. ನಂತರ ಸಿ.ಆರ್.ಸಿಂಹ ಅಭಿನಯದ ‘ಕುವೆಂಪು’ ಸಿನಿಮಾದಲ್ಲಿಯೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪವನ್ ಕುಮಾರ್ ನಿರ್ದೇಶನದ ‘ಯೂ ಟರ್ನ್’ನಲ್ಲಿಯೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ‘ಹರಹರ ಮಹಾದೇವ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಸಾಧಾರಣ ಧಾರಾವಾಹಿಗಳ ‘ಚರ್ವಿತ ಚರ್ವಣ’ (ಸವಕಲು) ಪಾತ್ರಗಳಲ್ಲಿ ನಟಿಸಲು ಅವರಿಗೆ ಕಿಂಚಿತ್ತೂ ಇಷ್ಟವಿಲ್ಲ. ಇದೇ ಕಾರಣಕ್ಕೆ ಹಲವು ಅವಕಾಶಗಳನ್ನು ಅವರು ತಿರಸ್ಕರಿಸಿದ್ದಾರೆ. ‘ಹರಹರ ಮಹಾದೇವ’ ಐತಿಹಾಸಿಕ ಕಥನ ಧಾರಾವಾಹಿ ಎಂಬ ಕಾರಣಕ್ಕೆ ಅವರು ಇದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ಈ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳನ್ನು ಸೃಷ್ಟಿಸಲಿದೆ ಎಂಬ ನಂಬಿಕೆ ಅವರದು. ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ‘ಪ್ರಜಾಪತಿ ದಕ್ಷ’ನ ಪಾತ್ರ ಅವರ ಕನಸಿನ ಪಾತ್ರವೂ ಆಗಿತ್ತಂತೆ.
ಭಿನ್ನ ಪಾತ್ರಗಳೆಡೆಗೆ ಒಲವು
ಇನ್ನು ಮುಂದೆ ಕಿರುತೆರೆ–ಸಿನಿಮಾಗಳಲ್ಲಿ ಮುಂದುವರಿಯುವ ಆಲೋಚನೆ ಇದೆಯೇ? ಎಂದು ಪ್ರಶ್ನಿಸಿದರೆ ಇಲ್ಲ ಎಂದು ತಲೆಯಾಡಿಸುತ್ತಾರೆ.
ಅವರ ಗಮನ, ಗುರಿ ಎಲ್ಲವೂ ಇರುವುದು ರಂಗಭೂಮಿ ಮೇಲೆ. ಹಾಗೆಂದು ‘ತಮ್ಮ ಅಭಿರುಚಿಗೆ ಹೊಂದುವಂಥ ಅವಕಾಶಗಳು ಬಂದರೆ ನಟಿಸುವುದಿಲ್ಲ ಎಂದೂ ಹೇಳಲಾರೆ’ ಎಂದು ಭಿನ್ನ ಪಾತ್ರಗಳಲ್ಲಿ ಮಾತ್ರ ಅಭಿನಯಿಸುವ ಸೂಚನೆ ನೀಡುತ್ತಾರೆ.
ತಾವು ಇಷ್ಟು ವರ್ಷಗಳ ಕಾಲ ರಂಗಭೂಮಿಯಲ್ಲಿ ಮುಂದುವರಿಯಲು ಮನೆಯವರ, ಸ್ನೇಹಿತರ ಬೆಂಬಲವೇ ಕಾರಣ ಎನ್ನಲು ಅವರು ಮರೆಯುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.