ADVERTISEMENT

ರೂಪದರ್ಶಿಯ ನಿರ್ದೇಶನದ ಕನಸು

ರಮೇಶ ಕೆ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ರೂಪದರ್ಶಿಯ ನಿರ್ದೇಶನದ ಕನಸು
ರೂಪದರ್ಶಿಯ ನಿರ್ದೇಶನದ ಕನಸು   

ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್ ಎಂಜಿನಿಯರಿಂಗ್‌ ಪೂರ್ಣಗೊಳಿಸಿರುವ ಮತ್ತಿಕೆರೆಯ ನಾಗಶ್ರೀ ರಾಮಮೂರ್ತಿ ಅವರು, ಎರಡು ವರ್ಷಗಳಿಂದ ಮಾಡೆಲಿಂಗ್‌ ಮಾಡುತ್ತಿದ್ದಾರೆ. ರ‍್ಯಾಂಪ್‌ ಮೇಲೆ ಕಾಣಿಸಿಕೊಳ್ಳುವುದಷ್ಟೇ ಅಲ್ಲದೇ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡುತ್ತಾರೆ.

ರಿಲಯನ್ಸ್‌ ಜುವೆಲ್ಸ್‌ ಮಿಸ್ಟರ್‌ ಅಂಡ್‌ ಮಿಸ್‌ ಇಂಡಿಯಾ, ಮಿಸ್‌ ಫ್ರೆಶ್‌ ಫೇಸ್‌, ಮಿಸ್‌ ಇಂಡಿಯಾ ಕರ್ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ನಾಗಶ್ರೀ ಅವರು ಕ್ಯಾಟ್‌ಲಾಗ್‌, ಮುದ್ರಣ ಜಾಹೀರಾತುಗಳಲ್ಲಿಯೂ ರೂಪದರ್ಶಿ ಯಾಗಿದ್ದಾರೆ.

‘ಯಲಹಂಕದಲ್ಲಿರುವ ಸಂಭ್ರಮ್‌ ತಾಂತ್ರಿಕ ವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಮಾಡುವಾಗ ರ‍್ಯಾಂಪ್‌ ಷೋಗಳಲ್ಲಿ ವಾಕ್‌ ಮಾಡುತ್ತಿದ್ದೆ. ಕಾಲೇಜು ಮುಗಿದ ಮೇಲೂ ಮಾಡೆಲಿಂಗ್‌ ಮೋಹ ಮುಂದುವರೆಯಿತು. ಮಂಜುನಾಥ ಗೌಡ, ಭವ್ಯಾ ಶೆಟ್ಟಿ ಅವರ ವಿನ್ಯಾಸಗಳಿಗೆ ವಾಕ್‌ ಮಾಡಿದ್ದೇನೆ.  ಮಾಡೆಲಿಂಗ್‌ಗಾಗಿ ಎಲ್ಲಿಯೂ ತರಬೇತಿ ಪಡೆದಿಲ್ಲ. ಯುಟ್ಯೂಬ್‌ನಲ್ಲಿ ಷೋಗಳನ್ನು ನೋಡಿ ವಾಕ್‌ ಮಾಡುವುದನ್ನು ಕಲಿತೆ. 5.9 ಅಡಿ ಎತ್ತರ ಇದ್ದೇನೆ. ಇನ್ನೂ ಎತ್ತರ ಕಾಣಲು ಷೋಗಳಲ್ಲಿ ಹೈಹೀಲ್ಡ್‌ ಚಪ್ಪಲಿ ಹಾಕುತ್ತೇನೆ’ ಎನ್ನುತ್ತಾರೆ ನಾಗಶ್ರೀ.

ADVERTISEMENT

ವೆಂಕಟ್‌ ಇಂಟರ್‌ನ್ಯಾಷನಲ್ ಪಬ್ಲಿಕ್‌ ಶಾಲೆಯ 5 ಸಾವಿರ ಮಕ್ಕಳು ಕಂಠೀರವ ಕ್ರೀಡಾಂಗಣದಲ್ಲಿ ಗಾಂಧಿ ವೇಷ ಧರಿಸಿ ಗಿನ್ನೆಸ್‌ ವಿಶ್ವ ದಾಖಲೆ ಮಾಡಿದ ಸನ್ನಿವೇಶವನ್ನು ನಾಗಶ್ರೀ ಅವರು ಸಾಕ್ಷ್ಯಚಿತ್ರವನ್ನಾಗಿಸಿದ್ದಾರೆ.

‘ಸದ್ಯ ಕಂಪೆನಿ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ  ಸಾಕ್ಷ್ಯಚಿತ್ರಗಳಿಗೆ ಸ್ಕ್ರಿಪ್ಟ್‌ ಬರೆಯುತ್ತೇನೆ. ಕೆಲವು ವರ್ಷ ರೇಡಿಯೊ ಜಾಕಿಯಾಗಿಯೂ ಕೆಲಸ ಮಾಡಿದೆ. ವರಂ ಗ್ಲೋಬಲ್‌ ಪಿಕ್ಚರ್ಸ್‌ ಹೆಸರಿನ ಕಂಪೆನಿ ಆರಂಭಿಸಿದ್ದು, ಸಾಕ್ಷ್ಯಚಿತ್ರಗಳ ನಿರ್ಮಾಣ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ನಾಗಶ್ರೀ.

ಚಿಕ್ಕವಯಸ್ಸಿನಲ್ಲೇ ಭರತನಾಟ್ಯ ಕಲಿತಿರುವ ನಾಗಶ್ರೀ ಅವರು, ದೇಹದ ಫಿಟ್‌ನೆಸ್‌ಗೆ ಬೆಳಿಗ್ಗೆ ಒಂದು ಗಂಟೆ ಯೋಗದ ಮೊರೆ ಹೋಗುತ್ತಾರೆ. ಕಟ್ಟುನಿಟ್ಟಿನ ಡಯೆಟ್‌ ಮಾಡದ ಇವರಿಗೆ, ಬಿರಿಯಾನಿ, ಚಿಕನ್‌, ಸಸ್ಯಾಹಾರಿಯಲ್ಲಿ ಮಾವಿನಕಾಯಿ ಗೊಜ್ಜಿನೊಂದಿಗೆ ರೊಟ್ಟಿ ತಿನ್ನುವುದೆಂದರೆ ಇಷ್ಟವಂತೆ.

‘ಮಾಡೆಲಿಂಗ್‌ನಿಂದ ಸಿನಿಮಾಗೆ ಬರಬೇಕೆಂಬ ಬಯಕೆ ಬಹಳಷ್ಟು ಮಂದಿ ರೂಪದರ್ಶಿಯರದ್ದಾಗಿರುತ್ತದೆ. ಆದರೆ ನನಗೆ ಹೊಸತನ್ನು ಕಲಿಯುವ ಹಂಬಲ, ಕುತೂಹಲ ಹೆಚ್ಚು’ ಎನ್ನುತ್ತಾರೆ ನಾಗಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.