ADVERTISEMENT

ರೊಟ್ಟಿ ವ್ಯಾಪಾರದ ಬದುಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ನನ್ನ ಹೆಸರು ಶ್ರೀಮತಿ ಜಿ. ವಯಸ್ಸು 50 ವರ್ಷ, ನನ್ನೂರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ. ಗಂಡನಿಗೆ ಆರೋಗ್ಯ ಸರಿ ಇಲ್ಲದ್ದಕ್ಕೆ ಚಿಕಿತ್ಸೆಗೆಂದು ಬಂದವರು ಅನಿವಾರ್ಯ ಕಾರಣಗಳಿಂದ ಏಳು ವರ್ಷದಿಂದ ಬೆಂಗಳೂರಿನಲ್ಲೇ ಬದುಕು ಸಾಗಿಸುತ್ತಿದ್ದೇನೆ.

ಬೆಂಗಳೂರಿನಲ್ಲಿ ಹೇಗಪ್ಪಾ ಜೀವನ ನಡೆಸುವುದು ಎನ್ನುವುದು ಆರಂಭದಲ್ಲಿ ತಿಳಿದಿರಲಿಲ್ಲ. ಆಗ ಕೈಹಿಡಿದದ್ದು ರೊಟ್ಟಿ ಮಾಡುವ ಕಲೆ. ಮನೆಯಲ್ಲಿ ರೊಟ್ಟಿ ಮಾಡಿ ಅಭ್ಯಾಸವಿದ್ದ ನಾನು ರೊಟ್ಟಿ ವ್ಯಾಪಾರ ಶುರು ಮಾಡಿದೆ. ಚಿಕ್ಕ ರಟ್ಟಿನ ಬೋರ್ಡ್‌ ಹಾಕಿಕೊಂಡು ಶ್ರೀರಾಮಪುರ ಮೆಟ್ರೋ ಸ್ಟೇಷನ್‌ ಬಳಿಯ ನಾಗಪ್ಪ ಬ್ಲಾಕ್‌ 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆಯಲ್ಲಿ ವ್ಯಾಪಾರ ಶುರು ಮಾಡಿದೆ.

15 ವರ್ಷದ ಹಿಂದೆ ಹಗರಿಬೊಮ್ಮನಹಳ್ಳಿಯಲ್ಲಿ ರೊಟ್ಟಿ ವ್ಯಾಪಾರ, ಬ್ಯಾಗ್‌ ಹೊಲಿಯುವುದು ಮಾಡುತ್ತಿದ್ದೆ. ಈಗ ಮತ್ತೆ ಬೆಂಗಳೂರಿನಲ್ಲಿ ಬಳ್ಳಾರಿಯ ಜನರಿಗೆ ರೊಟ್ಟಿ ರುಚಿ ತೋರಿಸಬೇಕು, ಜೊತೆಗೆ ಜೀವನವನ್ನು ನಡೆಸೋಕೆ ಆಗುತ್ತೆ ಎಂದು ಮತ್ತೆ ರೊಟ್ಟಿ ವ್ಯಾಪಾರ ಶುರು ಮಾಡಿದ್ದೇನೆ. ಇದರಲ್ಲಿ ಬರುವ ಹಣದಲ್ಲೇ ಜೀವನ ನಡೆಸಿಕೊಂಡು ಹೋಗುತ್ತಿದ್ದೇನೆ.

ADVERTISEMENT

ಈ ನಗರದಲ್ಲಿ ಪಿಜ್ಜಾ, ಬರ್ಗರ್‌ ಮಾಡುವ ದೊಡ್ಡದೊಡ್ಡ ಹೋಟೆಲ್ ನಡುವೆ ನನ್ನ ಅಂಗಡಿ ತುಂಬಾ ಸಣ್ಣದು. ಇಲ್ಲಿ ವ್ಯಾಪಾರವೂ ಅಷ್ಟಕಷ್ಟೇ. ಹಾಗಂತ ಸುಮ್ಮನೆ ಕೂತರೆ ಹೊಟ್ಟೆ ತುಂಬುತ್ತದೆಯೇ? ಸುಮ್ಮನೆ ಕೂಡುವ ಬದಲು ರೊಟ್ಟಿ ವ್ಯಾಪಾರ ಪ್ರಾರಂಭಿಸಿದ್ದೇನೆ. ರೊಟ್ಟಿ ಜತೆಗೆ ಥರೇವಾರಿ ಚಟ್ನಿಪುಡಿ, ಉಪ್ಪಿನಕಾಯಿ, ಅವಲಕ್ಕಿ, ಪುಳಿಯೋಗರೆ ಪೌಡರ್‌ ಇವುಗಳನ್ನೂ ಮಾರಾಟ ಮಾಡುತ್ತೇನಮ್ಮ.

ಖಡಕ್‌ ರೊಟ್ಟಿಯನ್ನು ಹಗರಿಬೊಮ್ಮನಹಳ್ಳಿಯಿಂದ ತರಿಸುತ್ತೇನೆ. ಬಿಸಿ ರೊಟ್ಟಿಯನ್ನು ನಾನೇ ಬೆಳಿಗ್ಗೆ ಎದ್ದು ತಯಾರಿ ಮಾಡಿಕೊಂಡು ಬಂದು ಮಾರಾಟ ಮಾಡುತ್ತೇನೆ. ದಿನಕ್ಕೆ ಮಿದು ರೊಟ್ಟಿ 20, ಖಡಕ್‌ ರೊಟ್ಟಿ 20 ಮಾರಾಟವಾಗುತ್ತೆ.

ಮನೆಯ ಎಲ್ಲಾ ದಿನಚರಿಯನ್ನು ಮುಗಿಸಿ ಮುಂಜಾನೆ 9 ಗಂಟೆಗೆ ಬಿಸಿ ರೊಟ್ಟಿ ಮಾಡಿಕೊಂಡು 12ರ ಹೊತ್ತಿಗೆ ಅಂಗಡಿ ಬಾಗಿಲು ತೆರೆಯುತ್ತೇನೆ. ಒಂದು ಬಿಸಿ ರೊಟ್ಟಿ 6 ರೂಪಾಯಿ, ಖಡಕ್‌ ರೊಟ್ಟಿ 7 ರೂಪಾಯಿ,  100 ಗ್ರಾಂ ಚಟ್ನಿ ಪುಡಿ 40 ರೂಪಾಯಿ, 150 ಗ್ರಾಂ ಅವಲಕ್ಕಿ 30 ರೂಪಾಯಿ ಹೀಗೆ ಮಾರಾಟವಾಗುತ್ತೆ. ರೊಟ್ಟಿ, ಚಟ್ನಿಪುಡಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹರಿಬೊಮ್ಮನಹಳ್ಳಿ, ಬೂದನೂರಿನಿಂದ ತರಿಸಿಕೊಂಡು ಚಟ್ನಿ ಪುಡಿ ತಯಾರಿಸುತ್ತೇನೆ. ಇಲ್ಲೇ ಪದಾರ್ಥಗಳನ್ನು ತೆಗೆದುಕೊಳ್ಳಲು ಹೋದರೆ ಎಲ್ಲವು ದುಬಾರಿ.

ಒಂದು ದಿನಕ್ಕೆ ಗರಿಷ್ಠ ₹ 800 ರೂಪಾಯಿ ತನಕ ವ್ಯಾಪಾರ ಆಗುತ್ತೆ. ಹಾಕಿದ ಬಂಡವಾಳದ ಖರ್ಚು ಕಳೆದು ತಿಂಗಳಿಗೆ ₹ 3 ಸಾವಿರ ಮಾತ್ರ ಉಳಿಯುತ್ತದೆ. ಕೈಯಲ್ಲಿ ಏನೂ ಇಲ್ಲದ ಹೊತ್ತಿನಲ್ಲಿ ರೊಟ್ಟಿ ವ್ಯಾಪಾರ ಬದುಕು ನೀಡಿತು. ಕಷ್ಟವೋ, ಸುಖವೋ ಇದರಲ್ಲೇ ಜೀವನ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.