ADVERTISEMENT

ವಿದ್ಯಾರ್ಥಿಗಳಿಂದ ಜಾಗೃತಿ ನಡಿಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST
ವಿದ್ಯಾರ್ಥಿಗಳಿಂದ ಜಾಗೃತಿ ನಡಿಗೆ
ವಿದ್ಯಾರ್ಥಿಗಳಿಂದ ಜಾಗೃತಿ ನಡಿಗೆ   

ಇತ್ತೀಚೆಗೆ, ದೇಶದ ನಾನಾ ಭಾಗಗಳಲ್ಲಿ ಮಹಿಳೆಯರ ವಿರುದ್ಧ ಅತ್ಯಾಚಾರ ಹಾಗೂ ದೌರ್ಜನ್ಯಗಳು ಹೆಚ್ಚುತ್ತಿವೆ. ದೆಹಲಿ, ಬೆಂಗಳೂರು, ಜಮ್ಮು- ನಗರ ಹೀಗೆ ಊರು ಯಾವುದೇ ಇರಲಿ, ಒಟ್ಟಿನಲ್ಲಿ  ಮಹಿಳೆಯರ  ಮೇಲಿನ ಅತ್ಯಾಚಾರ ಸಂಗತಿಗಳು ಹೆಚ್ಚಾಗುತ್ತಿರುವುದು ಸತ್ಯ. ಹೀಗಾಗಿ ಮಹಿಳೆಯರ  ಸುರಕ್ಷತೆ ಬಗ್ಗೆ ಎಲ್ಲರಿಗೂ ಕಾಳಿಜಿ ಶುರುವಾಗಿದೆ.

ಈ ಕಾಳಜಿ ಕೋಪದ ರೂಪ ತಳೆದು ಮಹಿಳೆಯರ ವಿರುದ್ಧ  ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಆಕ್ರೋಶವಾಗಿ ಜಾತಿ, ಧರ್ಮ, ಸಮುದಾಯ ಎಲ್ಲವನ್ನೂ ಮೀರಿ ಒಕ್ಕೊರಲಿನ ಪ್ರತಿಭಟನೆ ಆರಂಭವಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಎಸ್‌ಆರ್‌ಎನ್ ಆದರ್ಶ್ ಕಾಲೇಜಿನ ಎಮ್‌ಬಿಎ ವಿದ್ಯಾರ್ಥಿಗಳು ಈಚೆಗೆ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು. 

ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಇಂತಹ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರ ಗಮನ  ಸೆಳೆಯುವುದು ಈ ಮೆರವಣಿಗೆಯ ಉದ್ದೇಶವಾಗಿತ್ತು. ಮೆರವಣಿಗೆಯಲ್ಲಿ ಎಸ್‌ಆರ್‌ಎನ್ ಆದರ್ಶ್  ಕಾಲೇಜಿನ ಮ್ಯೋನೇಜ್‌ಮೆಂಟ್ ಸ್ಟಡೀಸ್ ವಿಭಾಗದ  ಸ್ನಾತಕೋತ್ತರ ವಿದ್ಯಾರ್ಥಿಗಳ ಜತೆಗೆ ಎಂ.ಸಿ.ಎ ಮತ್ತು  ಎಂ.ಕಾಂ  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾರ್ವಜನಿಕರು ವಿದ್ಯಾರ್ಥಿಗಳ ಪ್ರತಿಭಟನೆಗೆ ತಮ್ಮ  ಧ್ವನಿಗೂಡಿಸಿದ್ದು ಸಂತಸದ ಸಂಗತಿಯಾಗಿತ್ತು.

ADVERTISEMENT

ಚಾಮರಾಜಪೇಟೆಯಿಂದ ಆರಂಭಗೊಂಡ ಮೆರವಣಿಗೆ ರಾಮಕೃಷ್ಣ ಆಶ್ರಮ, ಗಾಂಧಿ ಬಜಾರ್ ಮಾರ್ಗದ ಮೂಲಕ ಸಾಗಿತು. ಒಟ್ಟು 5 ಕಿಲೋ ಮೀಟರ್ ಪ್ರಯಾಣಿಸಿ ಮಾರ್ಗದುದ್ದಕ್ಕೂ ಘೋಷವಾಕ್ಯಗಳನ್ನು ಕೂಗುತ್ತಾ ಸಾಗಿದರು. ಇದೇ ವೇಳೆ ನಮ್ಮ ಪ್ರತಿಭಟನೆಗೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ  ಮಾಡಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.