ನಗರದಲ್ಲಿ ನಿರ್ದಿಷ್ಟ ವಿಷಯಗಳ ಅಧ್ಯಯನಕ್ಕೆ ಮಾಹಿತಿ ಒದಗಿಸುವ ಅಪರೂಪದ ಗ್ರಂಥಾಲಯಗಳು ಇವೆ. ವಾರಕ್ಕೊಮ್ಮೆ ಅಂಥ ಗ್ರಂಥಾಲಯವನ್ನು ಪರಿಚಯ ಮಾಡಿಕೊಡುವ ಲೇಖನ ಮಾಲೆ ಇದು.
ಬೆಂಗಳೂರಿನ ಸಾಂಸ್ಕೃತಿಕ ಜಾಗೃತ ಸ್ಥಳಗಳಲ್ಲಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ ಪ್ರಮುಖವಾದದ್ದು. 1945ರ ಆಗಸ್ಟ್ 11ರಂದು ಬಿ.ಪಿ.ವಾಡಿಯಾ ಮತ್ತು ಅವರ ಪತ್ನಿ ಸೋಫಿಯಾ ವಾಡಿಯಾ ಅವರಿಂದ ಆರಂಭಗೊಂಡು ಇಂದಿನವರೆಗೂ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತ ಬಂದಿರುವ ಈ ಸಂಸ್ಥೆಯ ಇನ್ನೊಂದು ಆಸ್ತಿ ಇಲ್ಲಿನ ಗ್ರಂಥಾಲಯ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಎನ್ನುವುದು ಇನ್ನೊಂದು ವಿಶೇಷ.
‘ನಮ್ಮದು ಯಾವುದೇ ಒಂದು ಸಂಸ್ಕೃತಿ–ಒಂದು ಧರ್ಮ– ಒಂದು ಸಮುದಾಯಕ್ಕೆ ಸೀಮಿತವಾದ ಸಂಸ್ಥೆಯಲ್ಲ. ಇದು ವಿಶ್ವ ಸಂಸ್ಕೃತಿ. ಇಲ್ಲಿ ಜಗತ್ತಿನ ಎಲ್ಲ ಧರ್ಮ, ದೇಶ, ಭಾಷೆಗಳಿಗೂ ಸ್ಥಾನವಿದೆ’ ಎನ್ನುವ ವರ್ಲ್ಡ್ ಕಲ್ಚರ್‌ನ ಜಂಟಿ ಕಾರ್ಯದರ್ಶಿ ಟಿ.ಎಸ್. ವೇಣುಗೋಪಾಲ್ ಅವರ ಮಾತು ಸಂಸ್ಥೆಯ ಭಾಗವಾಗಿರುವ ಗ್ರಂಥಾಲಯಕ್ಕೂ ಸೂಕ್ತವಾಗಿ ಹೊಂದುತ್ತದೆ. ವಾಡಿಯಾ ಸಭಾಂಗಣದ ಮೇಲುಮಾಳಿಗೆಯಲ್ಲಿರುವ ಈ ಗ್ರಂಥಾಲಯ ಅಮೂಲ್ಯ ಗ್ರಂಥಗಳಿಂದಷ್ಟೇ ಅಲ್ಲದೇ ಆರಾಮವಾಗಿ ಕುಳಿತುಕೊಂಡು ಓದಬಹುದಾದ ವಿಶಾಲ ಸ್ಥಳದ ಕಾರಣಕ್ಕೂ ಆಪ್ತವಾಗುತ್ತದೆ.
ಇತಿಹಾಸ, ಸಂಸ್ಕೃತಿ, ಸಾಹಿತ್ಯ, ನಿಘಂಟು, ವಿಜ್ಞಾನ, ಮಕ್ಕಳ ಪುಸ್ತಕ, ತತ್ವಶಾಸ್ತ್ರ, ಅಧ್ಯಾತ್ಮ, ಧಾರ್ಮಿಕ ಗ್ರಂಥಗಳು, ವಾಣಿಜ್ಯ ಹೀಗೆ ವಿವಿಧ ಪ್ರಕಾರದ 80,000ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಈ ಗ್ರಂಥಾಲಯದಲ್ಲಿದೆ. ಹಾಗೆಯೇ ಜಗತ್ತಿನ ವಿವಿಧ ದೇಶಗಳ ಸುಮಾರು 200 ನಿಯತಕಾಲಿಕೆಗಳು ಈ ಗ್ರಂಥಾಲಯಕ್ಕೆ ಬರುತ್ತವೆ. ಗ್ರಂಥಾಲಯ ಪ್ರಾರಂಭವಾದ ಕೆಲವು ವರ್ಷಗಳ ನಂತರ ಮಕ್ಕಳು ಮತ್ತು ಯುವ ಓದುಗರನ್ನು ಆಕರ್ಷಿಸುವುದಕ್ಕಾಗಿ ಮಕ್ಕಳ ಗ್ರಂಥಗಳ ಸಂಗ್ರಹಕ್ಕೆ ಪ್ರತ್ಯೇಕ ವಿಭಾಗವನ್ನು ಆರಂಭಿಸಲಾಯಿತು. ಇಲ್ಲಿಯೇ ವಿಜ್ಞಾನ ಪುಸ್ತಕಗಳನ್ನೂ ಇರಿಸಲಾಗಿದೆ. ಮಕ್ಕಳ ಚಿತ್ರಕಥೆ, ಚಂದಮಾಮ ಪುಸ್ತಕಗಳಿಂದ ಹಿಡಿದು ಎಂ.ಎಸ್.ಸಿ.ವರೆಗಿನ ವಿಜ್ಞಾನ ಪಠ್ಯ ಪುಸ್ತಕಗಳೂ ಇಲ್ಲಿ ಇವೆ.
ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿ ಇಲ್ಲಿನ ಗ್ರಂಥಗಳನ್ನು ವಿಂಗಡಿಸಲಾಗಿದೆ. 1) ಮುಖ್ಯ ಗ್ರಂಥ ವಿಭಾಗ 2) ವಿಜ್ಞಾನ ಮತ್ತು ಮಕ್ಕಳ ಗ್ರಂಥ ವಿಭಾಗ 3)ನಿಯತಕಾಲಿಕೆಗಳ ವಿಭಾಗ ಹಾಗೂ 4)ರೆಫರೆನ್ಸ್ ವಿಭಾಗ. ಇವನ್ನು ಹೊರತುಪಡಿಸಿ ‘ಬೆಹೆನಾನ್ಸ್ ಲೈಬ್ರರಿ’ ಎಂಬ ಮತ್ತೊಂದು ವಿಭಾಗವೂ ಇದೆ. ಬೆಹೆನಾನ್ಸ್ ಈ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿದ್ದವರು. ನಿವೃತ್ತರಾದ ಮೇಲೆ ತಮ್ಮ ಸಂಗ್ರಹದ ಪುಸ್ತಕಗಳನ್ನೆಲ್ಲ ಈ ಗ್ರಂಥಾಲಯಕ್ಕೆ ದೇಣಿಗೆ ನೀಡಿದರು. ಆ ಗ್ರಂಥಗಳನ್ನು ಪ್ರತ್ಯೇಕ ವಿಭಾಗ ಮಾಡಿ ಇರಿಸಲಾಗಿದೆ.
ಸದಸ್ಯತ್ವದ ವಿವರಗಳು
ಈ ಗ್ರಂಥಾಲಯ ಸಾರ್ವಜನಿಕರಿಗೆ ಮುಕ್ತವಾಗಿದೆ. ಯಾರು ಬೇಕಾದರೂ ಬಂದು ಇಲ್ಲಿನ ಗ್ರಂಥಗಳನ್ನು ಓದಲು ಅವಕಾಶವಿದೆ. ಆದರೆ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ ಮರಳಿಸುವ ಅವಕಾಶ ಇರುವುದು ಗ್ರಂಥಾಲಯದ ಸದಸ್ಯರಿಗೆ ಮಾತ್ರ. ವರ್ಲ್ಡ್ ಕಲ್ಚರ್ ಗ್ರಂಥಾಲಯಕ್ಕೆ 8000ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅವರಲ್ಲಿ 4000ಕ್ಕೂ ಹೆಚ್ಚಿನವರು ಆಜೀವ ಸದಸ್ಯರು.
ಈ ಗ್ರಂಥಾಲಯಕ್ಕೆ ಮೂರು ವಿಧದಲ್ಲಿ ಸದಸ್ಯರಾಗಬಹುದು. ಮೊದಲನೆಯದು ಆಜೀವ ಸದಸ್ಯತ್ವ. ಎರಡನೆಯದು ಸಾಮಾನ್ಯ ಸದಸ್ಯತ್ವ ಮತ್ತು ಇನ್ನೊಂದು ವಿದ್ಯಾರ್ಥಿ ಸದಸ್ಯತ್ವ. ಇಲ್ಲಿ ವಿದ್ಯಾರ್ಥಿ ಸದಸ್ಯತ್ವಕ್ಕೆ ವಿಶೇಷ ರಿಯಾಯಿತಿ ಇದೆ. ಎಲ್ಲ ಸದಸ್ಯತ್ವದ ಶುಲ್ಕಗಳೂ ಎರಡು ಮೂರು ವರ್ಷಗಳಿಗೊಮ್ಮೆ ನವೀಕೃತವಾಗುತ್ತಿರುತ್ತವೆ. 2012ರಲ್ಲಿ ಇಲ್ಲಿನ ಬಹುತೇಕ ಪುಸ್ತಕಗಳ ವಿವರಗಳನ್ನು ಗಣಕೀಕೃತಗೊಳಿಸಲಾಗಿದೆ. ಆದ್ದರಿಂದ ಕಂಪ್ಯೂಟರ್‌ನಲ್ಲಿಯೇ ಇಲ್ಲಿರುವ ಪುಸ್ತಕಗಳ ಕುರಿತ ಮಾಹಿತಿಯನ್ನು ಪಡೆಯಬಹುದು.
ಅಪರೂಪದ ಅಪಾರ ಗ್ರಂಥಗಳು
ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಗಳ ಪುಸ್ತಕಗಳು ಈ ಗ್ರಂಥಾಲಯದಲ್ಲಿವೆ. ಮಾರುಕಟ್ಟೆಯಲ್ಲಿ, ಸಾಮಾನ್ಯ ಗ್ರಂಥಾಲಯಗಳಲ್ಲಿ ದುರ್ಲಭವಾದ ಅಪರೂಪದ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ‘ತೊರವೇ ರಾಮಾಯಣ’, ಚಾಣಕ್ಯನ ಪುಸ್ತಕಗಳು, ‘ಧರ್ಮಶಾಸ್ತ್ರ’, ‘ಋಗ್ವೇದ ಸಂಹಿತೆ’, ‘ಯೋಗವಾಶಿಷ್ಠ್ಯ’ ಹೀಗೆ ಸಂಸ್ಕೃತದ ಅಪರೂಪದ ಗ್ರಂಥಗಳ ಸಂಗ್ರಹವೇ ಇದೆ.
ಕುರಾನ್, ಬೈಬಲ್, ಭಗವದ್ಗೀತೆಗಳ ಹಳೆಯ ಪ್ರತಿಗಳು, ಅರವಿಂದ, ಮಹಾತ್ಮ ಗಾಂಧಿ, ಚಾರ್ಲ್ಸ್ ಡಾರ್ವಿನ್, ಡೇವಿಡ್ ಕಾಫರ್ ಫೀಲ್ಡ್, ಬರ್ನಾಡ್ ಷಾ ಅವರಂತಹ ಶ್ರೇಷ್ಠ ಬರಹಗಾರರ ಸಮಗ್ರ ಕೃತಿಗಳು, ಕಾಳಿದಾಸ, ಶೇಕ್ಸ್‌ಪಿಯರ್‌ನ ನಾಟಕಗಳು, ಮೈಸೂರು ಗೆಜೆಟಿಯರ್, ವಿವಿಧ ನಿಘಂಟುಗಳು ಹೀಗೆ ಮೌಲ್ಯಯುತ ಪುಸ್ತಕಗಳ ಪಟ್ಟಿ ಬೆಳಯುತ್ತಲೇ ಹೋಗುತ್ತದೆ. ಕಲಾ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪತ್ಯೇಕವಾಗಿ ಜೋಡಿಸಿಡಲಾಗಿದೆ. ಪರ್ಷಿಯನ್ ಕಲೆಗೆ ಸಂಬಂಧಿಸಿದ ಬೃಹತ್ ಪುಸ್ತಕ ಸರಣಿ ಈ ವಿಭಾಗದಲ್ಲಿ ಎದ್ದು ಕಾಣುತ್ತದೆ.
ಪ್ರತಿವರ್ಷ ಹೊಸ ಸೇರ್ಪಡೆ
ಈ ಗ್ರಂಥಾಲಯಕ್ಕೆ ಪ್ರತಿವರ್ಷವೂ ಹೊಸ ಹೊಸ ಗ್ರಂಥಗಳ ಸೇರ್ಪಡೆಯಾಗುತ್ತವೆ. ‘ನಮಗೆ ತುಂಬ ಪುಸ್ತಕಗಳು ದೇಣಿಗೆ ರೂಪದಲ್ಲಿ ಬರುತ್ತವೆ. ಅವುಗಳಲ್ಲಿ ನಮಗೆ ಬೇಕಾಗಿರುವ ಪುಸ್ತಕಗಳನ್ನು ಆಯ್ದುಕೊಂಡು ಗ್ರಂಥಾಲಯದಲ್ಲಿ ಇರಿಸುತ್ತೇವೆ. ಹಾಗೆಯೇ ನಾವೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಹೊಸ ಪುಸ್ತಕಗಳ ವಿವರಗಳನ್ನು ಓದಿ ಪಟ್ಟಿ ತಯಾರಿಸಿ ಇಟ್ಟುಕೊಂಡಿರುತ್ತೇವೆ. ಜನರ ಬೇಡಿಕೆಗೆ ಅನುಗುಣವಾಗಿ ಪ್ರತಿವರ್ಷ ಎರಡು ಸಲ ಹೊಸ ಪುಸ್ತಕಗಳನ್ನು ಕೊಂಡುಕೊಳ್ಳುತ್ತೇವೆ’ ಎನ್ನುತ್ತಾರೆ ಕಳೆದ ಹದಿನೆಂಟು ವರ್ಷಗಳಿಂದ ಈ ಗ್ರಂಥಾಲಯದ ಗ್ರಂಥಪಾಲಕರಾಗಿರುವ ನಾಗಮಣಿ. ಹೀಗೆ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಈ ಗ್ರಂಥಾಲಯಕ್ಕೆ ಸೇರಿಕೊಳ್ಳುತ್ತವೆ.
ಓದುಗ ವರ್ಗ
‘ಈ ಗ್ರಂಥಾಲಯಕ್ಕೆ ಎಲ್ಲ ವಯೋಮಾನದ ಓದುಗರೂ ಬರುತ್ತಾರೆ’ ಎನ್ನುತ್ತಾರೆ ಗ್ರಂಥಪಾಲಕಿ ನಾಗಮಣಿ. ‘ಶೇ 85ರಷ್ಟು ಜನ ಸುಮ್ಮನೆ ಏನು ಸಿಗುತ್ತದೋ ಓದೋಣ ಎಂದು ಬರುತ್ತಾರೆ. ಉಳಿದ ಶೇ ಹದಿನೈದರಷ್ಟು ಜನ ಇಂಥದ್ದೇ ಪುಸ್ತಕ ಬೇಕು ಎಂದು ಕೇಳಿಕೊಂಡು ಬರುತ್ತಾರೆ. ತತ್ವಶಾಸ್ತ್ರದ ಪುಸ್ತಕಗಳನ್ನು ಅರಸಿ ಬರುವವರೇ ಹೆಚ್ಚು, ಹಾಗೆಯೇ ಇಂಗ್ಲಿಷ್ ಸಾಹಿತ್ಯದ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಕಲಾ ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಾರೆ’ ಎಂಬುದು ಅವರ ವಿವರಣೆ. ಈ ಗ್ರಂಥಾಲಯವು ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.
ಗಣ್ಯರ ಭೇಟಿ
ಈ ಗ್ರಂಥಾಲಯಕ್ಕೆ ಇದುವರೆಗೆ ದೇಶ ವಿದೇಶಗಳ ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಸಿ.ಪಿ. ರಾಮಸ್ವಾಮಿ ಅಯ್ಯರ್, ಜ್ಯೂಲಿಯನ್ ಹುಕ್ಸ್‌ಲೇಯ್, ಅರ್ನಾರ್ಡ್ ಟೈನಬೀ, ಸಿ. ರಾಜಗೋಪಾಲಾಚಾರಿ, ಲಾರ್ಡ್ ಬಾಯ್ಡ್ ಒರ್ರ್, ಪಂಚೆನ್ ಲಾಮಾ, ಜೆ.ವಿ. ನರ್ಲಿಕರ್, ಕೆ.ಜಿ. ಸೈಯಿದೇನ್, ಕರಣ್ ಸಿಂಗ್, ಎಚ್. ಎಚ್. ಜಯಚಾಮರಾಜೇಂದ್ರ ಒಡೆಯರ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸೇರಿದಂತೆ ಅನೇಕ ಗಣ್ಯರು ಇಲ್ಲಿ ಭೇಟಿ ನೀಡಿ ಗ್ರಂಥ ಸಂಗ್ರಹವನ್ನು ಮೆಚ್ಚಿಕೊಂಡಿದ್ದಾರೆ.
ಗ್ರಂಥಾಲಯದ ವಿಳಾಸ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ.
ದೂರವಾಣಿ: 080–2667 8581.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.