ADVERTISEMENT

ಶೂ ಕೊಳೆ ಇಲ್ಲಿ ತೊಳೆ

ಮೇರಿ ಜೋಸೆಫ್
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬಟ್ಟೆ ಒಗೆದುಕೊಡುವ ಸಣ್ಣ ಉದ್ದಿಮೆಗಳು ನಗರದಲ್ಲಿವೆ. ಈಗ ಶೂ ತೊಳೆದುಕೊಡುವ ಅದರ ಕವಲು ಉದ್ದಿಮೆಯೂ ತಲೆಎತ್ತಿದೆ. ಶಶಾಂಕ್ ಭಾರದ್ವಾಜ್ ಈ ಸಾಹಸಕ್ಕೆ ಕೈಹಾಕಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.

ಬಟ್ಟೆ ಒಗೆದು ಇಸ್ತ್ರಿ ಹಾಕಿಕೊಡುವವರು ಇದ್ದಾರೆ. ಮನೆಗೇ ಬಂದು ಗಾಡಿ ತೊಳೆದು ಕೊಡುವವರೂ ಇದ್ದಾರೆ. ಈಗ ದುಬಾರಿ ಬೆಲೆ ತೆತ್ತು ಕೊಂಡ ಶೂಗಳನ್ನು ತೊಳೆದುಕೊಡುವ ವ್ಯವಸ್ಥೆಯೂ ಇಲ್ಲುಂಟು. ಶೂಗಳಿಗೆಂದೇ ಲಾಂಡ್ರಿ ನಗರದಲ್ಲಿದೆ.

ಇಟಲಿಯ ಬ್ಯುಸಿನೆಸ್‌ಮೆನ್ ಕುರಿತು ಒಂದು ಮಾತಿದೆ. ಅವರು ಇನ್ನೊಬ್ಬರ ಕೈಕುಲುಕುವಾಗ ಅವರ ಶೂಗಳತ್ತ ದೃಷ್ಟಿ ಹರಿಸುತ್ತಾರಂತೆ. ಅಷ್ಟರಮಟ್ಟಿಗೆ ಶೂ ಅಲ್ಲಿ ವ್ಯಕ್ತಿತ್ವದ ಭಾಗವೇ ಆಗಿದೆ.

ಇದಕ್ಕೆ ವೈರುಧ್ಯವೋ ಎನ್ನುವಂತೆ ಮೈಮೇಲೆ ಬ್ರಾಂಡೆಡ್ ಶರ್ಟ್, ಪ್ಯಾಂಟು ಧರಿಸಿ ಕಾಲಲ್ಲಿ ಮಾತ್ರ ಕೊಳಕು ಶೂ ಹಾಕಿ ಗತ್ತಿನಲ್ಲಿ ನಡೆಯುವವರು ನಮ್ಮಲ್ಲೇನೂ ಕಡಿಮೆ ಇಲ್ಲ. ಸಾವಿರಗಟ್ಟಲೆ ರೂಪಾಯಿ ಕೊಟ್ಟು ಖರೀದಿಸುವ ಬ್ರಾಂಡೆಡ್ ಶೂಗಳು ಒಂದೆರಡು ತಿಂಗಳುಗಳಲ್ಲಿಯೇ ಕೊಳೆ ತುಂಬಿ ದುರ್ಗಂಧ ಬೀರಿದರೂ ತೊಳೆಯುವ ಗೋಜಿಗೇ ಹೋಗದೆ ಮತ್ತೆ ಮತ್ತೆ ಹಾಕಿಕೊಂಡು ಸಾಗುವ ಯುವಕರ ಸಂಖ್ಯೆ ದೊಡ್ಡದಿದೆ.

ಅದಕ್ಕೆಲ್ಲಾ ವಿರಾಮ ಹಾಕಲೆಂದೇ `ಶೂ ವೈವಲ್ ಶೂ ಲಾಂಡ್ರಿ~ ಆರಂಭಗೊಂಡು ಏಳು ತಿಂಗಳುಗಳೇ ಕಳೆದಿವೆ. ಇನ್ನು ಮುಂದೆ ಶೂ ತೊಳೆಯುವ, ಬಿಸಿಲಲ್ಲಿ ಒಣಗಿಸುವ ತೊಂದರೆಯೇ ಇಲ್ಲ. ಲಾಂಡ್ರಿಗೆ ಬಟ್ಟೆ ಕೊಡುವಂತೆಯೇ ಶೂಗಳನ್ನೂ ಕೊಟ್ಟರೆ ಸಾಕು, ಶುಭ್ರವಾದ ಶೂಗಳನ್ನು ಮನೆಗೆ ಕೊಂಡೊಯ್ಯಬಹುದು ಎನ್ನುತ್ತಾರೆ ಇದರ ಮಾಲೀಕ ಶಶಾಂಕ್ ಭಾರದ್ವಾಜ್. 

ಏನಾದರೂ ಉದ್ದಿಮೆ ಆರಂಭಿಸಬೇಕೆಂಬ ಬೆಂಗಳೂರಿನ ಯುವಕ ಶಶಾಂಕ್ ಮುಂದೆ ಹಲವಾರು ಆಯ್ಕೆಗಳಿದ್ದವು. `ಇದೊಂದು ಹೊಸ ಕಾನ್‌ಸೆಪ್ಟ್. ಆದ್ದರಿಂದ ಇದನ್ನೇ ಆಯ್ದುಕೊಂಡೆ~ ಎನ್ನುತ್ತಾರೆ ಅವರು.

ಮುಂಬೈಯಲ್ಲಿ ಸಿಎನ್‌ಬಿಸಿಯಲ್ಲಿ ಐದು ವರ್ಷ ಕಾರ್ಯ ನಿರ್ವಹಿಸಿದ್ದ ಶಶಾಂಕ್ ಬಳಿಕ ನ್ಯೂಜಿಲೆಂಡ್‌ಗೆ ಹೋದರು. ಅಲ್ಲಿ ಪಿ.ಜಿ. ಡಿಪ್ಲೊಮಾ ಇನ್ ಕಮ್ಯುನಿಕೇಶನ್ ಮತ್ತು ಪಬ್ಲಿಕ್ ರಿಲೇಷನ್ಸ್‌ನಲ್ಲಿ ಪದವಿ ಪಡೆದು ಮತ್ತೆ ಬೆಂಗಳೂರಿಗೆ ವಾಪಸ್ಸಾಗಿ ಸ್ವಂತ ಉದ್ದಿಮೆ ಆರಂಭಿಸಲು ಮನಸ್ಸು ಮಾಡಿದರು. ಆ ಯೋಚನೆಯೇ ಇಂದು ಶೂ ಲಾಂಡ್ರಿ ರೂಪದಲ್ಲಿ ಸಾಕಾರಗೊಂಡಿದೆ.

`ಯಾವ್ಯಾವುದೋ ಕೆಮಿಕಲ್ ಹಾಕಿ ನಾವು ಶೂಗಳನ್ನು ತೊಳೆಯುವುದಿಲ್ಲ. ಇದಕ್ಕೆಂದೇ ತಯಾರಿಸಲಾದ ಹಾನಿಕಾರಕವಲ್ಲದ ವಿಶೇಷ ರಾಸಾಯನಿಕಗಳನ್ನು ಬಳಸಿ ಪ್ರೊಫೆಷನಲ್ ರೀತಿಯಲ್ಲೇ ಸ್ವಚ್ಛಗೊಳಿಸಲಾಗುತ್ತದೆ~ ಎನ್ನುತ್ತಾರೆ ಅವರು.

ಶೂಗಳ ಮೇಲೆ ಕಲೆಗಳಾಗಿರಲಿ, ಶೂಗಳಿಂದ ದುರ್ವಾಸನೆ ಹೊಮ್ಮುತ್ತಿರಲಿ ಅಥವಾ ಇನ್ನಾವುದೇ ಸಮಸ್ಯೆ ಇರಲಿ, ಈ ಶೂ ಲಾಂಡ್ರಿಯಲ್ಲಿ ಪರಿಹಾರ ದೊರೆಯುತ್ತದೆ. ಎಲ್ಲಾ ರೀತಿಯ ಶೂಗಳನ್ನೂ ಇಲ್ಲಿ ಸ್ವಚ್ಛಗೊಳಿಸಿಕೊಡುವುದರೊಂದಿಗೆ ಶೂಗಳ ರಿಪೇರಿಯನ್ನೂ ಮಾಡಿಕೊಡಲಾಗುತ್ತದೆ. ಶಾಲಾಮಕ್ಕಳ ಬ್ಯಾಗ್‌ಗಳನ್ನೂ ಇಲ್ಲಿ ಶುಚಿಗೊಳಿಸಿ ಕೊಡುತ್ತಾರೆಂಬುದು `ಶೂ ವೈವಲ್~ ಲಾಂಡ್ರಿಯ ವಿಶೇಷತೆ.

ವ್ಯವಹಾರದ ಆರಂಭಿಕ ಹಂತವಾಗಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದ ಮನೆಮನೆಗಳಿಂದ ಶೂಗಳನ್ನು ಸಂಗ್ರಹಿಸುತ್ತಿದ್ದ ಇವರು, `ಪ್ಯೂಮಾ~ ಶೂ ಮಳಿಗೆಯೊಂದಿಗೂ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಗರದ ಬ್ಯಾಂಡ್‌ಬಾಕ್ಸ್ ಲಾಂಡ್ರಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಇನ್ನು ಮುಂದೆ ಗ್ರಾಹಕರು ತಮ್ಮ ಶೂಗಳನ್ನು ಯಾವುದೇ ಬ್ಯಾಂಡ್‌ಬಾಕ್ಸ್ ಮಳಿಗೆಗೆ ನೀಡಿದರೆ ಸಾಕು, ಎರಡು ಮೂರು ದಿನಗಳಲ್ಲಿ ಸ್ವಚ್ಛಗೊಂಡ ಶೂಗಳನ್ನು ಅಲ್ಲಿಂದಲೇ ಮರಳಿ ಪಡೆಯಬಹುದು. ಅಂದಹಾಗೆ ಶುಚಿಗೊಳಿಸಿ ಕೊಡಲು ದರ ಮಾತ್ರ 150 ರೂ.

`ಉತ್ತಮ ಉಡುಪು ಮಾತ್ರವಲ್ಲ, ನೀಟಾದ ಶೂ ಧರಿಸುವುದು ಕೂಡ ಪರ್ಸನಲ್ ಗ್ರೂಮಿಂಗ್‌ನ ಭಾಗ ಎಂದು ಜನ ಅರ್ಥಮಾಡಿಕೊಳ್ಳಬೇಕಿದೆ. ಇದೊಂದು ಹೊಸ ಐಡಿಯಾ ಆದ್ದರಿಂದ ಜನರೂ ಇದಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ~ ಎನ್ನುತ್ತಾರವರು.

ಮುಂಬೈನಲ್ಲಿ ಶೂಗಳ ಲಾಂಡ್ರಿ ಹೊಂದಿದ್ದ ವ್ಯಕ್ತಿಯೊಬ್ಬರ ಬಳಿ ತರಬೇತಿ ಪಡೆದ ಬಳಿಕ ತಾವು ಈ ವ್ಯವಹಾರ ಆರಂಭಿಸಿದ್ದಾಗಿ ಹೇಳುವ ಅವರು ಮುಂದೆ ತಮ್ಮದೇ ಸಂಗ್ರಹ ಕೇಂದ್ರಗಳನ್ನು ತೆರೆಯುವ ಯೋಚನೆಯನ್ನೂ ಮಾಡಿದ್ದಾರೆ.

ಸುಮಾರು ಎರಡು ಸಾವಿರದಷ್ಟು ಗ್ರಾಹಕರು ಈಗಾಗಲೇ ತಮ್ಮ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಶಶಾಂಕ್ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಸತತ ಪ್ರಯತ್ನದಲ್ಲಿದ್ದಾರೆ.

ಸಂಪರ್ಕ ಸಂಖ್ಯೆ: 9916484295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.